ಪಾಕ್ ನಲ್ಲಿ ಮತ್ತೆ ಜೀವ ಪಡೆಯುತ್ತಾ ಅಂತಾರಾಷ್ಟ್ರೀಯ ಕ್ರಿಕೆಟ್? ಯಶಸ್ವಿಯಾಗುತ್ತಾ ಭಾರತೀಯರಿಲ್ಲದ ಐಸಿಸಿ ವಿಶ್ವ11 ತಂಡದ ಪ್ರಯತ್ನ?

ಡಿಜಿಟಲ್ ಕನ್ನಡ ಟೀಮ್:

ಸುದೀರ್ಘ ಎಂಟು ವರ್ಷಗಳಿಂದ ಪಾಕಿಸ್ತಾನ ನೆಲದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಎಂಬುದು ಸಮಾಧಿಯಲ್ಲಿ ಮಲಗಿರುವ ಪರಿಸ್ಥಿತಿಯಲ್ಲಿದೆ. ಹೀಗಾಗಿ ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತೆ ಚಿಗುರೊಡೆಯುವಂತೆ ಮಾಡಲು ಈಗ ಹೊಸ ಪ್ರಯತ್ನವೊಂದು ನಡೆಯುತ್ತಿದೆ. ಅದುವೇ ವರ್ಲ್ಡ್ ಇಲೆವೆನ್ ತಂಡ ಹಾಗೂ ಪಾಕಿಸ್ತಾನ ತಂಡದ ವಿರುದ್ಧದ ಮೂರು ಟಿ20 ಪಂದ್ಯಗಳ ಸರಣಿ.

ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನ ಮರುಹುಟ್ಟಿಗಾಗಿ ಈ ಸರಣಿ ನಡೆಯುತ್ತಿರುವುದರಿಂದ ಈ ಸರಣಿ ಐತಿಹಾಸಿಕ ಸರಣಿಯಾಗಿ ಬಿಂಬಿತವಾಗುತ್ತಿದೆ. ಆದರೆ ಈ ಸರಣಿಯಲ್ಲಿ ವಿಶ್ವ ಕ್ರಿಕೆಟ್ ದೊಡ್ಡಣ್ಣ ಎನಿಸಿಕೊಳ್ಳುವ ಭಾರತದಿಂದ ಯಾವುದೇ ಆಟಗಾರರು ಭಾಗವಹಿಸುತ್ತಿಲ್ಲ ಎಂಬುದು ದೊಡ್ಡ ಕೊರತೆಯಾಗಿದೆ.

ಕ್ರಿಕೆಟ್ ನ ಇತಿಹಾಸದ ಪುಟಗಳತ್ತ ಕಣ್ಣಾಡಿಸಿದಾಗ ಈ ಹಿಂದೆ ಅನೇಕ ಬಾರಿ ಇಂತಹ ಪ್ರಯತ್ನಗಳನ್ನು ಭಾರತವೇ ಕೈಗೊಂಡಿತ್ತು. ಆ ಪ್ರಯತ್ನಗಳಿಂದ ಅನೇಕ ರಾಷ್ಟ್ರಗಳು ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ನ ಭಾಗವಾಗಿ ಮುಂದುವರಿಯಲು ಸಾಧ್ಯವಾಗಿದೆ. ಭಾರತದಿಂದ ಈ ಹಿಂದೆ ಆಗಿದ್ದ ಈ ಪ್ರಯತ್ನಗಳು ಹೀಗಿವೆ…

  • ಜನಾಂಗೀಯ ತಾರತಮ್ಯದ ಹಿನ್ನೆಲೆಯಲ್ಲಿ ಸುಮಾರು ಎರಡು ದಶಕಗಳ ಕಾಲ ದಕ್ಷಿಣ ಆಫ್ರಿಕಾ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಹೊರಗುಳಿಯಬೇಕಾಗಿತ್ತು. ದಕ್ಷಿಣ ಆಫ್ರಿಕಾ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವಂತಾಗಬೇಕು ಎಂದು1991ರಲ್ಲಿ ಮೊದಲ ಬಾರಿಗೆ ಭಾರತ ಈ ಪ್ರಯತ್ನಕ್ಕೆ ಮುಂದಾಯಿತು. 1991ರ ನವೆಂಬರ್ 10ರಂದು ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವನ್ನಾಡಿತ್ತು. ಆ ಮೂಲಕ ದಕ್ಷಿಣ ಆಫ್ರಿಕಾ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳಿತು.
  • 1996ರ ವಿಶ್ವಕಪ್ ಸರಣಿ ಸಮೀಪಿಸುವ ಸಂದರ್ಭದಲ್ಲಿ ಕೊಲಂಬೋದಲ್ಲಿ ಬಾಂಬ್ ಸ್ಫೋಟಗಳು ನಡೆದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಲಂಕಾಗೆ ತೆರಳಲು ಹಿದೇಟು ಹಾಕಿದ್ದವು. ಆಗ ಭಾರತ ಹಾಗೂ ಪಾಕಿಸ್ತಾನದ ಜಂಟಿ ತಂಡವೊಂದು ಶ್ರೀಲಂಕಾಕ್ಕೆ ತೆರಳಿ ಅಲ್ಲಿ ಕ್ರಿಕೆಟ್ ಪಂದ್ಯವನ್ನಾಡಿ ಬೇರೆ ರಾಷ್ಟ್ರಗಳಿಗೆ ಧೈರ್ಯ ತುಂಬಿದ್ದವು.
  • ಇನ್ನು 2005ರಲ್ಲಿ ಸುನಾಮಿ ಸಂತ್ರಸ್ತರರ ಪರಿಹಾರಕ್ಕಾಗಿ ನಿಧಿ ಸಂಗ್ರಹಿಸಲು ಭಾರತ, ಪಾಕಿಸ್ತಾನ ಹಾಗೂ ಶ್ರೀಲಂಕಾ ಒಟ್ಟಿಗೆ ಸೇರಿ ಏಷ್ಯಾ ಇಲೆವೆನ್ ಎಂಬ ತಂಡ ರಚಿಸಿ ವಿಶ್ವ ಇಲೆವೆನ್ ಎಂಬ ಇತರೆ ರಾಷ್ಟ್ರಗಳ ಆಟಗಾರರ ತಂಡದೊಂದಿಗೆ ಮೆಲ್ಬೋರ್ನ್ ನಲ್ಲಿ ಪಂದ್ಯವನ್ನಾಡಿ ದೇಣಿಗೆ ಸಂಗ್ರಹಿಸಲಾಗಿತ್ತು.
  • 2009ರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ವಿಶ್ವಕಪ್ ಟಿ20 ಸರಣಿಯ ಅಭ್ಯಾಸ ಪಂದ್ಯವನ್ನು ನಿಗದಿ ಮಾಡಿ ಅದರಿಂದ ಲಾಹೋರ್ ಬಾಂಬ್ ಸ್ಫೋಟಕ್ಕೆ ಸಿಲುಕಿದವರಿಗೆ ಪರಿಹಾರ ಸಂಗ್ರಹಿಸಲಾಯಿತು.

ಹೀಗೆ ಈ ಹಿಂದೆ ಭಾರತ ಇಂತಹ ಅನೇಕ ಸೌಹಾರ್ದ ಪಂದ್ಯಗಳನ್ನು ಆಡಿ ಕ್ರೀಡೆಯ ಮಹತ್ವವನ್ನು ಹೆಚ್ಚಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈ ಬಾರಿ ಭಾರತ ಹಾಗೂ ಭಾರತೀಯ ಆಟಗಾರರು ಈ ಪ್ರಯತ್ನದ ಭಾಗವಾಗಲು ಸಾಧ್ಯವಾಗುತ್ತಿಲ್ಲ. ಆದರೆ ಈ ತಂಡದಲ್ಲಿ ಭಾರತೀಯ ಆಟಗಾರರು ಭಾಗವಹಿಸದೇ ಇರುವುದಕ್ಕೆ ಐಸಿಸಿ ಬೇರೆಯದೇ ಕಾರಣ ನೀಡುತ್ತಿದೆ. ‘ಸದ್ಯ ಭಾರತ ತಂಡದ ಕ್ರಿಕೆಟ್ ವೇಳಾಪಟ್ಟಿ ಹೆಚ್ಚಾಗಿದ್ದು, ಭಾರತೀಯ ಆಟಗಾರರಿಗೆ ಸಮಯಾವಕಾಶದ ಕೊರತೆ ಇದೆ’ ಎಂದು ಹೇಳಲಾಗಿದೆ.

2009ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಉಗ್ರರ ದಾಳಿ ಸಂಭವಿಸಿದ ನಂತರ ಜಿಂಬಾಬ್ವೆ ಹೊರತುಪಡಿಸಿ ಯಾವುದೇ ಇತರೆ ದೇಶಗಳ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸ ಮಾಡಿಲ್ಲ. ಅದರೊಂದಿಗೆ ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮರೆಯಾಗಿದೆ. ಹೀಗಾಗಿ ವಿಶ್ವದ ಇತರೆ ದೇಶಗಳ ಆಟಗಾರರನ್ನು ಒಟ್ಟುಗೂಡಿಸಿ ಪಾಕಿಸ್ತಾನದಲ್ಲಿ ಸರಣಿಯನ್ನಾಡಿ ಆ ಮೂಲಕ ಮತ್ತೆ ಪಾಕ್ ನೆಲದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರುಜನ್ಮ ನೀಡಲು ಈ ಪ್ರಯತ್ನವಾಗುತ್ತಿದೆ.

ಈ ಸರಣಿಯ ವಿಶ್ವ ಇಲೆವೆನ್ ತಂಡದಲ್ಲಿ ಐವರು ದಕ್ಷಿಣ ಆಫ್ರಿಕಾ, ಮೂವರು ಆಸ್ಟ್ರೇಲಿಯಾ, ಇಬ್ಬರು ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ, ನ್ಯೂಜಿಲೆಂಡ್, ಇಂಗ್ಲೆಂಡ್ ಹಾಗೂ ಶ್ರೀಲಂಕಾದಿಂದ ತಲಾ 1 ಆಟಗಾರರಿದ್ದಾರೆ. ಜಿಂಬಾಬ್ವೆಯ ಮಾಜಿ ಆಟಗಾರ ಆ್ಯಂಡಿ ಫ್ಲವರ್ ಈ ತಂಡದ ಕೋಚ್ ಆಗಿದ್ದಾರೆ.

ಲಾಹೋರಿನ ಗಡಾಫಿ ಕ್ರೀಡಾಂಗಣದಲ್ಲಿ ಸೆ.12, 13 ಹಾಗೂ 15ರಂದು ಮೂರು ಟಿ20 ಪಂದ್ಯ ನಡೆಯಲಿದ್ದು, ವಿಶ್ವ ಇಲೆವೆನ್ ತಂಡ ಹೀಗಿದೆ…

ಫಫ್ ಡುಪ್ಲೆಸಿಸ್ (ನಾಯಕ), ಹಶೀಮ್ ಆಮ್ಲಾ, ಸಾಮುಯೆಲ್ಸ್ ಬದ್ರಿ, ಜಾರ್ಜ್ ಬೇಯ್ಲಿ, ಪೌಲ್ ಕಾಲಿಂಗ್ವುಡ್, ಬೆನ್ ಕಟ್ಟಿಂಗ್, ಗ್ರ್ಯಾಂಟ್ ಎಲಿಯೊಟ್, ಇರ್ಮಾನ್ ತಾಹೀರ್, ಡೇವಿಡ್ ಮಿಲ್ಲರ್, ಮಾರ್ನ್ ಮಾರ್ಕೆಲ್, ಟಿಮ್ ಪೇನ್, ತಿಸಾರ ಪೆರೇರಾ, ಡಾರೆನ್ ಸಾಮಿ, ತಮೀಮ್ ಇಕ್ಬಾಲ್.

Leave a Reply