ಮನೆತನದ ಆಡಳಿತವನ್ನು ‘ಸಮಸ್ಯೆ’ ಎನ್ನುತ್ತಲೇ ಗಾಂಧಿ ಕುಟುಂಬವನ್ನು ಸಮರ್ಥಿಸಿಕೊಂಡ ರಾಹುಲ್, ಮೋದಿಯನ್ನು ಹೊಗಳುತ್ತಲೇ ತೆಗಳಿದ್ದು ಹೇಗೆ?

ಡಿಜಿಟಲ್ ಕನ್ನಡ ಟೀಮ್:

ಅಪ್ರಬುದ್ಧ ಹೇಳಿಕೆಗಳನ್ನು ನೀಡುತ್ತಲೇ ಲೇವಡಿಗೆ ಗುರಿಯಾಗುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಈ ಬಾರಿ ತಮ್ಮ ಭಾಷಣದ ವೇಳೆ ಬುದ್ಧಿವಂತಿಕೆಗೆ ಕೆಲಸ ಕೊಟ್ಟು ತನ್ನ ವಿರುದ್ಧದ ಟೀಕಾಕಾರರಿಗೆ ಹಾಗೂ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಸದ್ಯ ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಮಾತನಾಡಿದ್ದು, ನೋಟು ನಿಷೇಧ, ಜಿಎಸ್ಟಿ, ಮೋದಿ ಅವರ ಸಂವಹನ ಕೌಶಲ್ಯ, ಬೇರೆಯವರ ವಿರುದ್ಧ ಟೀಕೆ ಮಾಡುವ ಬಿಜೆಪಿಯ ಯಾಂತ್ರಿಕ ವ್ಯವಸ್ಥೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ತಮ್ಮ ಅಬಿಪ್ರಾಯ ಮಂಡಿಸಿದ್ದಾರೆ. ಆ ಪೈಕಿ ಗಮನ ಸೆಳೆದಿರುವ ಅಂಶ ಎಂದರೆ ಭಾರತದಲ್ಲಿ ಕೆಲವು ಮನೆತನಗಳು ಹೇಗೆ ವಿವಿಧ ಕ್ಷೇತ್ರಗಳಲ್ಲಿ ಅಧಿಕಾರವನ್ನು ಹಿಡಿದಿವೆ ಎಂಬುದರ ಕುರಿತು. ಈ ಪದ್ಧತಿಯನ್ನು ‘ಸಮಸ್ಯೆ’ ಎಂದು ಕರೆದಿರುವ ರಾಹುಲ್ ಗಾಂಧಿ ನಂತರ ಬೇರೆ ಉದಾಹರಣೆಗಳನ್ನು ನೀಡುತ್ತಾ ರಾಜಕೀಯದಲ್ಲಿ ಗಾಂಧಿ ಕುಟುಂಬ ಅಧಿಕಾರ ಹೊಂದಿರುವುದನ್ನು ರಾಹುಲ್ ಬುದ್ಧಿವಂತಿಕೆಯಿಂದಲೇ ಸಮರ್ಥಿಸಿಕೊಂಡಿದ್ದಾರೆ.

ವಂಶಪಾರಂಪರಿಕ ಅಧಿಕಾರ ಅಥವಾ ಮನೆತನಗಳ ಅಧಿಕಾರ ಹಾಗೂ ಅವುಗಳ ವಿರುದ್ಧ ಕೇಳಿಬರುತ್ತಿರುವ ಟೀಕೆಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ರಾಹುಲ್ ಗಾಂಧಿ ಚಾಣಕ್ಷತೆಯಿಂದಲೇ ಉತ್ತರಿಸಿದರು.

‘ಭಾರತದ ರಾಜಕೀಯ ಪಕ್ಷಗಳಲ್ಲಿ ಇದೊಂದು ದೊಡ್ಡ ಸಮಸ್ಯೆ. ಕೇವಲ ಭಾರತ ಮಾತ್ರವಲ್ಲದೇ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಇದೇ ರೀತಿಯ ವ್ಯವಸ್ಥೆ ಇದೆ. ಹೀಗಾಗಿ ಈ ವಿಚಾರದಲ್ಲಿ ಕೇವಲ ನನ್ನನ್ನು ಮಾತ್ರ ಗುರಿಯಾಗಿಸಬೇಡಿ. ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಸಹ ಇದೇ ಮನತನದ ಪ್ರಭಾವದಿಂದ ಅಧಿಕಾರಕ್ಕೇರಿದರು. ತಮಿಳುನಾಡಿನಲ್ಲಿ ಕರುಣಾನಿಧಿ ಅವರ ಪುತ್ರ ಸ್ಟಾಲಿನ್, ಹಿಮಾಚಲ ಪ್ರದೇಶದಲ್ಲಿ ಪ್ರೇಮ್ ಕುಮಾರ್ ಧುಮಾಲ್ ಪುತ್ರ ಅನುರಾಗ್ ಠಾಕೂರ್ ಇದೇ ರೀತಿ ರಾಜಕೀಯ ಕ್ಷೇತ್ರದಲ್ಲಿ ಅಧಿಕಾರ ಹೊಂದಿದ್ದಾರೆ. ಬಾಲಿವುಡ್ ನಲ್ಲಿ ಅಮಿತಾಬ್ ಬಚ್ಚನ್ ಅವರ ಪುತ್ರ ಅಭಿಶೇಕ್ ಬಚ್ಚನ್, ಉದ್ದಿಮೆ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಧೀರುಭಾಯ್ ಅಂಬಾನಿ ಪುತ್ರರಾದ ಅನಿಲ್ ಮತ್ತು ಮುಖೇಶ್ ಅಂಬಾನಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಂದೆ ಹಾಗೂ ಹಿರಿಯ ತಲೆಮಾಲಿನವರ ಪ್ರಭಾವವನ್ನು ಬಳಸಿಕೊಂಡು ಸಾಕಷ್ಟು ಜನ ಅಧಿಕಾರ ಸಾಧಿಸಿದ್ದಾರೆ. ಹೀಗಾಗಿ ಈ ವಿಚಾರವಾಗಿ ಕೇವಲ ನನ್ನನ್ನು ಮಾತ್ರ ದೂಷಿಸಬೇಡಿ.’

ಗಾಂಧಿ ವಂಶಸ್ಥರೇ ಭಾರತದಲ್ಲಿ ಅಧಿಕಾರವನ್ನು ಅನುಭವಿಸುತ್ತಿದ್ದಾರೆ ಎಂದು ಟೀಕೆ ಮಾಡುವವರಿಗೆ ರಾಹುಲ್ ಗಾಂಧಿ ತಮ್ಮ ಮಾತುಗಳಿಂದಲೇ ಉತ್ತರಿಸಿದ್ದಾರೆ. ಇದರ ಜತೆಗೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಸಂಪೂರ್ಣ ಜವಾಬ್ದಾರಿ ಹೊತ್ತುಕೊಳ್ಳಲು ಸಿದ್ಧರಿರುವುದಾಗಿ ಸಂದೇಶವನ್ನು ರವಾನಿಸಿದರು.

ಇನ್ನು ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಟೀಕಾ ಪ್ರಹಾರ ನಡೆಸಿರುವ ರಾಹುಲ್ ಈ ಬಾರಿ ಇಲ್ಲೂ ಗಮನ ಸೆಳೆದಿದ್ದಾರೆ. ಮೋದಿ ಅವರ ವಾಕ್ಚಾತುರ್ಯ, ಏಕಪಕ್ಷೀಯ ನಿರ್ಧಾರ, ತಮ್ಮ ವಿರುದ್ಧ ಬಿಜೆಪಿಯಿಂದ ನಡೆಯುತ್ತಿರುವ ಸಂಘಟಿತ ಷಡ್ಯಂತ್ರ, ಜಮ್ಮು ಕಾಶ್ಮೀರ, ನೋಟು ಅಮಾನ್ಯ, ಜಿಎಸ್ಟಿ ಕಪರಿತಾಗಿ ರಾಹುಲ್ ಹೇಳಿರುವ ಮಾತುಗಳು ಹೀಗಿವೆ…

‘ಭಾರತದಲ್ಲಿ ನನ್ನನ್ನು ತಿರಸ್ಕೃತ ರಾಜಕಾರಣಿಯನ್ನಾಗಿ ಬಿಂಬಿಸಲು ಬಿಜೆಪಿ ಒಂದು ಯಾಂತ್ರಿಕ ವ್ಯವಸ್ಥೆಯನ್ನೇ ನಿರ್ಮಿಸಿದೆ. ಈ ವ್ಯವಸ್ಥೆಯಲ್ಲಿ ಸುಮಾರು 1000 ಜನರು ಕೆಲಸ ಮಾಡುತ್ತಿದ್ದು, ನನ್ನ ವಿರುದ್ಧ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ರವಾನಿಸುತ್ತಾರೆ. ದೇಶವನ್ನು ಆಳುತ್ತಿರುವ ಅಪ್ರತಿಮ ವ್ಯಕ್ತಿಯೇ (ಪ್ರಧಾನಿ ಮೋದಿ ಅವರನ್ನು ಉದ್ದೇಶಿಸುತ್ತಾ) ಈ ಯಾಂತ್ರಿಕ ವ್ಯವಸ್ಥೆಯನ್ನು ಮುನ್ನಡೆಸುತ್ತಿದ್ದಾನೆ. ಪ್ರಧಾನಿ ಮೋದಿ ಅವರು ಕೇಲವು ಕೌಶಲ್ಯಗಳಲ್ಲಿ ಪರಿಣಿತರು. ಆಪೈಕಿ ಅವರ ಸಂವಹನ ಕೌಶಲ್ಯವೂ ಒಂದು. ಈ ವಿಚಾರದಲ್ಲಿ ನನಗಿಂತ ಅವರು ಒಂದು ಕೈ ಮೇಲಿದ್ದಾರೆ. ಒಂದು ಸಮಾವೇಶ ಅಥವಾ ಸಭೆಯಲ್ಲಿ ಒಂದೇ ಬಾರಿಗೆ ಎರಡರಿಂದ ಮೂರು ಗುಂಪಿನ ಜನರಿಗೆ ಸಂದೇಶ ಸಾರಬಲ್ಲ ಕಲೆ ಅವರಿಗಿದೆ.

ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಾಗಲೂ ಮೋದಿ ಏಕಪಕ್ಷೀಯವಾಗಿ ನಿರ್ಧಾರಕ್ಕೆ ಬರುತ್ತಾರೆ. ಅವರು ತಮ್ಮ ಸಹೊದ್ಯೇಗಿಗಳಿಂದಾಗಲಿ ಅಥವಾ ಸಂಸತ್ತಿನ ಸದಸ್ಯರ ಜತೆಗಾಗಲಿ ಚರ್ಚಿಸುವುದಿಲ್ಲ. ಆದರೆ ಕಾಂಗ್ರೆಸ್ ಆ ರೀತಿ ಕೆಲಸ ಮಾಡುವುದಿಲ್ಲ. ಇದಕ್ಕೆ ಸೂಕ್ತ ಉದಾಹರಣೆ ಎಂದರೆ ಜಮ್ಮು ಕಾಶ್ಮೀರದ ವಿಷಯ.

ಈ ಹಿಂದೆ ಕಾಂಗ್ರೆಸ್ ಅದಿಕಾರದಲ್ಲಿದ್ದ ಸಂದರ್ಭದಲ್ಲಿ 9 ವರ್ಷಗಳ ಕಾಲ ಕಣಿವೆ ರಾಜ್ಯದ ವಿಷಯವಾಗಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ನನ್ನನ್ನು ಸೇರಿದಂತೆ ಪಿ.ಚಿದಂಬರಮ್, ಜೈರಾಮ್ ರಮೇಶ್ ಹಾಗೂ ಇತರೆ ನಾಯಕರ ಜತೆ ಚರ್ಚಿಸುತ್ತಿದ್ದರು. ಆದರೆ ಮೋದಿಯವರು ತಮ್ಮ ಪಕ್ಷದ ನಾಯಕರೊಂದಿಗೇ ಚರ್ಚಿಸುವುದಿಲ್ಲ. ಹೀಗಾಗಿ ಜಮ್ಮು ಕಾಶ್ಮೀರದಲ್ಲಿ ಉಗ್ರರಿಗೆ ಹೆಚ್ಚಿನ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

ಇನ್ನು ದೇಶದಲ್ಲಿ ಧ್ರುವೀಕರಣದ ರಾಜಕೀಯ ವಾತಾವರಣ ಹೆಚ್ಚುತ್ತಿದೆ. ಇದೊಂದು ಅಪಾಯಕಾರಿ ಬೆಳವಣಿಗೆ. ಇದರಿಂದ ದ್ವೇಷ, ಕೋಪ ಹಾಗೂ ಹಿಂಸಾಚಾರ ಹೆಚ್ಚುತ್ತಿದ್ದು ಇದು ನಮ್ಮನ್ನು ನಾಶ ಮಾಡಲಿದೆ. ಉದಾರವಾದಿ ಪತ್ರಕರ್ತರನ್ನು ಹತ್ಯೆ ಮಾಡಲಾಗುತ್ತಿದೆ. ದಲಿತರ ಮೇಲೆ ಗೋಮಾಂಸದ ಕಾರಣಕ್ಕೆ ಥಳಿಸಿ ಹತ್ಯೆ ಮಾಡಲಾಗುತ್ತಿದೆ. ಇವೆಲ್ಲವು ನವ ಭಾರತದ ಭಾಗವಾಗಿವೆ.

ಅಹಿಂಸೆ ಎಂಬ ಪರಿಕಲ್ಪನೆಗೆ ಇಂದು ಜಾಗವಿಲ್ಲದಂತಾಗಿದೆ. ಆದರೆ ಈ ಪರಿಕಲ್ಪನೆಯಿಂದ ಮಾತ್ರ ನಾವೆಲ್ಲರೂ ಮಾನವೀಯತೆ ಕಡೆಗೆ ಸಾಗಲು ಸಾಧ್ಯ. ನೋಟು ನಿಷೇಧದ ನಿರ್ಧಾರವೂ ಏಕಪಕ್ಷೀಯ ನಿರ್ಧಾರ. ಜಿಎಸ್ಟಿ ಜಾರಿಯಿಂದ ದೇಶದ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ.’

Leave a Reply