ಬುಲೆಟ್ ರೈಲು ಶ್ರೀಮಂತರಿಗೆ ಮಾತ್ರ ಎನ್ನುವವರು ತಿಳಿಯಬೇಕಿರುವ ಮಾಹಿತಿಗಳಿವು

ಡಿಜಿಟಲ್ ಕನ್ನಡ ಟೀಮ್:

ಇದೇ ಸೆಪ್ಟೆಂಬರ್ 14ರಂದು ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರು ಬಹುನಿರೀಕ್ಷಿತ ಮುಂಬೈ-ಅಹ್ಮದಾಬಾದ್ ನಡುವಣ ಹೈಸ್ಪೀಡ್ (ಬುಲೆಟ್) ರೈಲು ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ರೈಲ್ವೇ ಅಪಘಾತ ಹಾಗೂ ಹಳಿತಪ್ಪಿದ ಪ್ರಕರಣ ಹೆಚ್ಚುತ್ತಿರುವ ಸಂದರ್ಭದಲ್ಲಿ ಅತ್ಯುನ್ನತ ಹಾಗೂ ಹೆಚ್ಚು ಭದ್ರತೆ ಇರುವ ಬುಲೆಟ್ ರೈಲು ಯೋಜನೆ ಆರಂಭವಾಗುತ್ತಿದೆ.

ಈ ಯೋಜನೆಯಿಂದ ಪ್ರಯಾಣಿಕರ ಸುರಕ್ಷತೆ, ಸಂಚಾರದ ವೇಗ, ಗ್ರಾಹಕರಿಗೆ ಅತ್ಯುತ್ತಮ ಸೇವೆ ಹಾಗೂ ತಂತ್ರಜ್ಞಾನ, ಕೌಶಲ್ಯ ಹಾಗೂ ಮಾನದಂಡಗಳ ವಿಚಾರದಲ್ಲಿ ಭಾರತೀಯ ರೈಲ್ವೆ ವಿಶ್ವದ ಪ್ರಮುಖ ರೈಲ್ವೆಗಳ ಪೈಕಿ ಒಂದಾಗಲು ಸಹಾಯಕಾರಿಯಾಗಲಿದೆ. ಹೀಗಾಗಿ ಈ ಯೋಜನೆ ಭಾರತದ ಸಾರಿಗೆ ಇತಿಹಾಸವನ್ನೇ ಬದಲಿಸುವ ನಿರೀಕ್ಷೆಯೂ ಇದೆ.

ಇಂತಹ ಮಹತ್ವ ಯೋಜನೆ ವಿರುದ್ಧ ಅನೇಕ ಮಾತುಗಳು ಕೇಳಿಬರುತ್ತಿವೆ. ಈ ಯೋಜನೆ ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತವೇ ಹೊರತು ಜನಸಾಮಾನ್ಯನಿಗೆ ಅಲ್ಲ ಎಂಬ ವಾದಗಳನ್ನು ಹರಿಬಿಡಲಾಗಿದೆ. ಸಾಕಷ್ಟು ವಿಶೇಷತೆಗಳನ್ನು ಹೊಂದಿರುವ ಈ ರೈಲ್ವೇ ಯೋಜನೆ ಪ್ರಗತಿಯತ್ತ ಸಾಗುತ್ತಿರುವ ಭಾರತಕ್ಕೆ ಅವಶ್ಯಕ. ಅದನ್ನು ಸಮಾಜದ ಮೇಲ್ವರ್ಗದವರಿಗೆ ಮಾತ್ರ ಸೀಮಿತ ಎಂಬ ವಾದ ಸೂಕ್ತವಲ್ಲ.

ಇದೇ ರೀತಿ ಈ ಹಿಂದೆ ಅನೇಕ ಅತ್ಯಾಧುನಿಕ ರೈಲು ಸೇವೆಗಳು ಸೇವೆ ಆರಂಭಿಸುವಾಗ ಇಂತಹುದೇ ಕೊಂಕುಗಳು ಕೇಳಿಬಂದಿದ್ದವು. ಉದಾಹರಣೆಗೆ, 1969ರ ಮಾರ್ಚ್ 1ರಂದು ಮೊದಲ ಬಾರಿಗೆ ರಾಜಧಾನಿ ಎಕ್ಸ್ ಪ್ರೆಸ್ ರೈಲು ಸೇವೆ ಆರಂಭಿಸುವಾಗಲು ಇಂತಹುದೇ ವಾದ ಮಂಡನೆಯಾಗಿತ್ತು. ದೆಹಲಿಯಿಂದ ಹೌವ್ರಾ ಕಡೆಗೆ ಪ್ರಯಾಣ ಬೆಳೆಸಿದ ಈ ರೈಲಿನಲ್ಲಿ ಪ್ರಥಮ ದರ್ಜೆ ಎಸಿ ಬೋಗಿಗಳ ಪ್ರಯಾಣಕ್ಕೆ ₹ 280 ಹಾಗೂ ಎಸಿ ಚೇರ್ ವ್ಯವಸ್ಥೆ ಪ್ರಯಾಣಕ್ಕೆ ₹ 90 ಟಿಕೆಟ್ ದರ ನಿಗದಿಪಡಿಸಲಾಗಿತ್ತು. ಕೆಂಪು ಮತ್ತು ಬಿಳಿ ಬಣ್ಣದ ಐಶಾರಾಮಿ ರೈಲು ಹವಾನಿಯಂತ್ರಿತ ವ್ಯವಸ್ಥೆಯೊಂದಿಗೆ 120 ಕಿ.ಮೀ ದೂರದವರೆಗೂ ಯಾವುದೇ ನಿಲುಗಡೆ ಇಲ್ಲದೇ ಸಾಗುತಿತ್ತು. ಆಗ ಅನೇಕ ಪತ್ರಿಕೆಗಳಲ್ಲಿ ‘ಬಡತನದಲ್ಲಿ ನರಳುತ್ತಿರುವ ಭಾರತಕ್ಕೆ ಅತ್ಯುನ್ನತ ಹಾಗೂ ಐಶಾರಾಮಿ ರೈಲು ಸೇವೆ’ ಎಂದು ಲೇವಡಿ ಮಾಡಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಈ ರೈಲು ಸೇವೆಯನ್ನು ಜನರು ಅತ್ಯುತ್ತಮವಾಗಿ ಬಳಸಿಕೊಂಡರು.

ಹೀಗಾಗಿ ಶ್ರೀಮಂತ ವರ್ಗ ಹಾಗೂ ತಂತ್ರಜ್ಞಾನ ಅಭಿವೃದ್ಧಿಯನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ಸಮಂಜಸವಲ್ಲ. ಹೀಗಾಗಿ ಈ ಯೋಜನೆಯ ಬಗ್ಗೆ ತಾತ್ಸಾರ ಮಾಡುವ ಮುನ್ನ ಇದರ ಕುರಿತಾದ ಪ್ರಮುಖ ಅಂಶಗಳನ್ನು ತಿಳಿದುಕೊಳ್ಳುವುದು ಉತ್ತಮ.

  • ಕಡಿಮೆ ವೆಚ್ಚದ ಸುದೀರ್ಘ ಅವಧಿಯ ಆರ್ಥಿಕ ನೆರವು: ಈ ಯೋಜನೆ ಭಾರತದಲ್ಲಿ ಕಾಲಿಡಲು ಪ್ರಮುಖ ಕಾರಣ ಎಂದರೆ ಅದು ಭಾರತ ಹಾಗೂ ಜಪಾನ್ ನಡುವಣ ಸ್ನೇಹ ಸಂಬಂಧ. ಈ ಎರಡು ದೇಶಗಳ ಸಹಕಾರದ ಭಾಗವಾಗಿ ಜಪಾನ್ ಸರ್ಕಾರ ಸುಮಾರು ₹ 90 ಸಾವಿರ ಕೋಟಿಯಷ್ಟು ಹಣವನ್ನು 50 ವರ್ಷಗಳ ಅವಧಿಗೆ ಶೇ.0.1 ರಷ್ಟು ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ. ಇನ್ನು ಮತ್ತೊಂದು ಪ್ರಮುಖ ಅಂಶ ಎಂದರೆ ಈ ಸಾಲವನ್ನು ಪಡೆದ 15 ವರ್ಷಗಳ ನಂತರವೂ ಸಾಲ ಮರುಪಾವತಿ ಮಾಡಬೇಕಿದೆ. ಉಭಯ ದೇಶಗಳ ಅಥವಾ ವಿವಿಧ ದೇಶಗಳ ನಡುವಣ ಆರ್ಥಿಕ ಸಹಕಾರದಲ್ಲಿ ಸಾಲವನ್ನು ನೀಡುವಾಗ ಕನಿಷ್ಠ ಪಕ್ಷ ಶೇ.3 ರಿಂದ 7ರಷ್ಟು ಬಡ್ಡಿ ದರ ನಿಗದಿಯಾಗಿರುತ್ತದೆ. ಇನ್ನು ಸಾಲದ ಅವಧಿ ಕೇವಲ 20-30 ವರ್ಷ ಮಾತ್ರವಿರುತ್ತದೆ. ಆದರೆ ಈ ಎಲ್ಲದಕ್ಕಿಂತ ಕಡಿಮೆ ಬಡ್ಡಿದರ ಹಾಗೂ ಸುದೀರ್ಘ ಅವಧಿಗೆ ಜಪಾನ್ ಸರ್ಕಾರ ಸಾಲ ನೀಡುತ್ತಿದೆ. ಈ ಯೋಜನೆಯ ಶೇ.80ರಷ್ಟು ವೆಚ್ಚವನ್ನು ಜಪಾನ್ ಸರ್ಕಾರ ಭಾರತಕ್ಕೆ ನೀಡುತ್ತಿದೆ. ಆ ಮೂಲಕ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಯೋಜನೆಯಲ್ಲಿ ಈ ರೀತಿಯಾದ ನೆರವಿನ ಹಸ್ತ ಸಿಗುತ್ತಿದೆ.
  • ಭಾರತದಲ್ಲಿ ಅತ್ಯುನ್ನತ ಭಾಗಗಳ ಉತ್ಪನ್ನ ಹಾಗೂ ನಿರ್ಮಾಣ: ಈ ಯೋಜನೆಯ ಮತ್ತೊಂದು ಪ್ರಮುಖ ಅಂಶ, ಈ ಯೋಜನೆಗೆ ಅಗತ್ಯವಿರುವ ಎಲ್ಲಾ ಭಾಗಗಳ ನಿರ್ಮಾಣ ಭಾರತದಲ್ಲೇ ಆಗಲಿದೆ. ಎರಡು ದೇಶಗಳ ನಡುವಣ ಒಪ್ಪಂದದಲ್ಲಿ ‘ಸ್ಥಳೀಯವಾಗಿ ನಿರ್ಮಾಣ’ ಹಾಗೂ ‘ತಂತ್ರಜ್ಞಾನ ವಿನಿಮಯ’ ಎಂಬ ಉದ್ದೇಶಗಳನ್ನು ಸೇರಿಸಲಾಗಿದ್ದು, ಈ ನಿಯಮಾವಳಿಯ ಪ್ರಕಾರ ಈ ಯೋಜನೆಯನ್ನು ಜಾರಿಗೆ ತರಲು ಕಾರ್ಯಯೋಜನಾ ತಂಡ ರಚಿಸಲಾಗಿದೆ. ಇದರಲ್ಲಿ ಕೈಗಾರಿಕಾ ಯೋಜನೆ ಮತ್ತು ಉತ್ತೇಜನ ವಿಭಾಗ (ಡಿಐಪಿಪಿ) ಮತ್ತು ಜಪಾನ್ ವಿದೇಶ ವ್ಯಾಪಾರ ಸಂಸ್ಥೆ (ಜೆಇಟಿಆರ್ ಒ) ಅನ್ನು ನೇಮಿಸಲಾಗಿದೆ. ಈ ತಂಡದಲ್ಲಿ ಭಾರತೀಯ ಕೈಗಾರಿಕೆ, ಜಪಾನ್ ಕೈಗಾರಿಕೆ, ಡಿಐಪಿಪಿ ಮತ್ತು ಜೆಇಟಿಆರ್ ಒ ಎಂಬ ನಾಲ್ಕು ಉಪ ವಿಭಾಗಗಳು ಭಾರತದಲ್ಲಿ ನಿರ್ಮಾಣವಾಗಲಿರುವ ಉಪಕರಣಗಳ ಕ್ಷಮತೆಯನ್ನು ಪರೀಕ್ಷಿಸಲಿವೆ.
  • ವೃತ್ತಿಪರತೆ ಹಾಗೂ ಸಾಮರ್ಥ್ಯ: ಈ ಮಹತ್ವದ ಯೋಜನೆಯ ಹೈಸ್ಪೀಡ್ ರೈಲಿನ ತರಬೇತಿ ಕೇಂದ್ರವನ್ನು ವಡೋದರಾದಲ್ಲಿ ಸ್ಥಾಪಿಸಲಾಗಿದ್ದು, ಇದು ಸುಸಜ್ಜಿತ ಕೇಂದ್ರವಾಗಿದೆ. ಜಪಾನ್ ನಲ್ಲಿರುವ ತರಬೇತಿ ಕೇಂದ್ರದಂತೆ ಇಲ್ಲೂ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. 2020ರ ವೇಳೆಗೆ ಈ ಕೇಂದ್ರ ತನ್ನ ಕಾರ್ಯ ಆರಂಭಿಸಲಿದ್ದು, ಮುಂದಿನ ಮೂರು ವರ್ಷಗಳಲ್ಲಿ 4 ಸಾವಿರ ಸಿಬ್ಬಂದಿಗೆ ತರಬೇತಿ ನೀಡಲಿದೆ. ಇಲ್ಲಿ ತರಬೇತಿ ಪಡೆದವರು ನಂತರ ಈ ಯೋಜನೆಯ ಕಾರ್ಯಾಚರಣೆಯನ್ನು ನಿಭಾಯಿಸಲಿದ್ದಾರೆ. ಇದರ ಜತೆಗೆ ಭಾರತೀಯ ರೈಲ್ವೆಯ 300 ಯುವ ಅಧಿಕಾರಿಗಳಿಗೆ ಜಪಾನಿನಲ್ಲಿ ಹೈಸ್ಪೀಡ್ ರೈಲಿನ ತಂತ್ರಜ್ಞಾನದ ಬಗ್ಗೆ ತರಬೇತಿ ನೀಡಲಾಗಿದೆ.
  • ಅತ್ಯುತ್ತಮ ವೇಗ ಹಾಗೂ ಸೇವೆ: ಮುಂಬೈನಿಂದ ಅಹ್ಮದಾಬಾದ್ ವೆರೆಗೂ ನಿರ್ಮಾಣವಾಗಲಿರುವ ಆ ಹೈಸ್ಪೀಡ್ ರೈಲಿನಲ್ಲಿ ಎರಡು ರೀತಿಯ ಸೇವೆಗಳಿವೆ. ಮೊದಲನೆಯದ್ದು ರಾಪಿಡ್ ಟ್ರೈನ್- ಇದರಲ್ಲಿ ಮುಂಬೈನಿಂದ ಅಹ್ಮದಾಬಾದ್ ವರೆಗಿನ ಪ್ರಯಾಣದಲ್ಲಿ ಕೇವಲ 2 ನಿಲ್ದಾಣಗಳಲ್ಲಿ ರೈಲನ್ನು ನಿಲ್ಲಿಸಲಾಗುತ್ತದೆ. ಮತ್ತೊಂದು ಸೇವೆಯಲ್ಲಿ ಒಟ್ಟು 10 ನಿಲ್ದಾಣಗಳನ್ನು ಹೊಂದಲಿದೆ. ರಾಪಿಡ್ ಟ್ರೈನ್ ನಲ್ಲಿ ಮುಂಬೈನಿಂದ ಅಹ್ಮದಾಬಾದಿಗೆ ಕೇವಲ 2 ಗಂಟೆ 7 ನಿಮಿಷದಲ್ಲಿ ತಲುಪಿದರೆ, ಮತ್ತೊಂದು ಸೇವೆಯಲ್ಲಿ 2 ಗಂಟೆ 58 ನಿಮಿಷದಲ್ಲಿ ತಲುಪಬಹುದು. ಪ್ರಮುಖ ಸಮಯದಲ್ಲಿ ಪ್ರತಿ ಗಂಟೆಗೆ 3 ಬಾರಿ ಹಾಗೂ ಇತರೆ ಸಮಯದಲ್ಲಿ ಪ್ರತಿ ಗಂಟೆಗೆ ಎರಡು ರೈಲುಗಳಂತೆ ಒಟ್ಟು ಪ್ರತಿನಿತ್ಯ 35 ಬಾರಿ ರೈಲುಗಳು ಸಂಚಾರ ಮಾಡಲಿವೆ. 2023ರ ವೇಳೆಗೆ ಈ ಬುಲೆಟ್ ರೈಲಿನಲ್ಲಿ ಸಂಚಾರ ಮಾಡುವವರ ಪ್ರಮಾಣ 36 ಸಾವಿರ ದಾಟಲಿದೆ ಎಂದು ಅಂದಾಜಿಸಲಾಗಿದೆ.

1 COMMENT

  1. […] ವಿಶೇಷತೆಗಳು ಹಾಗೂ ಅಗತ್ಯತೆ ಬಗ್ಗೆ ಡಿಜಿಟಲ್ ಕನ್ನಡ ವಿಶೇಷ ವರದಿ ಪ್ರಕಟಿಸಿತ್ತ… ಈ ಯೋಜನೆ ಉದ್ಘಾಟಿಸಿದ ನಂತರ ಮಾತನಾಡಿದ […]

Leave a Reply