ಎಂಜಿಆರ್ ಜನ್ಮ ಶತಮಾನೋತ್ಸವಕ್ಕಾಗಿ ಕೇಂದ್ರದಿಂದ ₹ 100 ಹಾಗೂ ₹ 5 ನಾಣ್ಯ ಬಿಡುಗಡೆ, ಏನಿದರ ವಿಶೇಷತೆ?

ಡಿಜಿಟಲ್ ಕನ್ನಡ ಟೀಮ್:

ಮುಂದಿನದ ದಿನಗಳಲ್ಲಿ ನಿಮ್ಮ ಜೇಬಿನಲ್ಲಿ ₹ 100 ಮೊತ್ತದ ನಾಣ್ಯಗಳು ಸದ್ದು ಮಾಡಲಿವೆ. ತಮಿಳುನಾಡಿನ ಖ್ಯಾತ ಚಿತ್ರನಟ, ಮಾಜಿ ಮುಖ್ಯಮಂತ್ರಿ ಹಾಗೂ ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಎಂ.ಜಿ ರಾಮಚಂದ್ರನ್ ಅವರ ಜನ್ಮ ಶತಮಾನೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಹೊಸ ನಾಣ್ಯದ ಮೂಲಕ ಗೌರವ ಸಲ್ಲಿಸಲು ಮುಂದಾಗಿದೆ.

ಹಿಂದಿ ಭಾಷೆ ಹೇರಿಕೆ ವಿಷಯವಾಗಿ ದಕ್ಷಿಣ ಭಾರತ ರಾಜ್ಯಗಳಿಂದ ಸಾಕಷ್ಟು ವಿರೋಧ ಎದುರಿಸುತ್ತಿರುವ ಕೇಂದ್ರ ಸರ್ಕಾರ ಇತ್ತೀಚಿನ ದಿನಗಳಲ್ಲಿ ಈ ರೀತಿಯ ಪ್ರಯತ್ನಗಳಿಂದ ದಕ್ಣಿಣ ಭಾರತೀಯರ ಮನವೊಲಿಸುವ ಪ್ರಯತ್ನ ನಡೆಸುತ್ತಿದೆ. ಇತ್ತೀಚೆಗೆ ಬಿಡುಗಡೆ ಮಾಡಿದ ಹೊಸ ₹ 50ರ ನೋಟಿನಲ್ಲಿ ಹಂಪಿಯ ಏಕಶಿಲಾ ರಥವನ್ನು ಮುದ್ರಿಸಿತ್ತು. ಈಗ ಎಂಜಿಆರ್ ನೆನಪಿನಲ್ಲಿ ₹ 100 ನಾಣ್ಯ ಬಿಡುಗಡೆ ಮಾಡುತ್ತಿದೆ. ಅಷ್ಟೇ ಅಲ್ಲದೆ ಎಐಎಡಿಎಂಕೆ ಪಕ್ಷದ ಮೂಲಕ ತಮಿಳುನಾಡಿನಲ್ಲಿ ತನ್ನ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುವ ಬಿಜೆಪಿ, ಈ ಮೂಲಕ ತಮಿಳಿಗರ ಮನವೊಲೈಸುವ ಪ್ರಯತ್ನ ನಡೆಸುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಸೆಪ್ಟೆಂಬರ್ 11ರಂದು ಕೇಂದ್ರ ಹಣಕಾಸು ಇಲಾಖೆಯಿಂದ ಹೊರಡಿಸಲಾಗಿರುವ ಸೂಚನೆಯಲ್ಲಿ, ‘ಡಾ.ಎಂ.ಜಿ ರಾಮಚಂದ್ರನ್ ಅವರ ಜನ್ಮ ಶತಮಾನೋತ್ಸವದ ನೆನಪಿನ ಅಂಗವಾಗಿ ಕೇಂದ್ರ ಸರ್ಕಾರ ₹ 100 ಮೊತ್ತದ ಹೊಸ ನಾಣ್ಯ ಮುದ್ರಿಸುತ್ತಿದೆ’ ಎಂದು ಮಾಹಿತಿ ನೀಡಲಾಗಿದೆ.

ಈ ನಾಣ್ಯದ ವಿಶೇಷತೆಗಳನ್ನು ನೋಡುವುದಾದರೆ…

  • ಈ ನಾಣ್ಯದಲ್ಲಿ ಎಂಜಿಆರ್ ಅವರ ಭಾವಚಿತ್ರವನ್ನು ಮುದ್ರಿಸಲಾಗುವುದು. ಅದರ ಕೆಳಗೆ ಎಂಜಿಆರ್ ಅವರ ಜನ್ಮ ವರ್ಷದಿಂದ ಇಲ್ಲಿಯವರೆಗಿನ ಕಾಲಾವಧಿ ಪ್ರತೀಕವಾಗಿ ‘1917- 2017’ ಎಂದು ಮುದ್ರಿಸಲಾಗುವುದು. ಈ ನಾಣ್ಯದ ಮತ್ತೊಂದು ಮುಖದ ಮಧ್ಯಭಾಗದಲ್ಲಿ ಅಶೋಕ ಸ್ತಂಬ ಹಾಗೂ ಸತ್ಯಮೇವ ಜಯತೆ ಸಾಲು ಮುದ್ರಿಸಲಾಗುವುದು.
  • ₹ 100ರ ನಾಣ್ಯದ 35 ಗ್ರಾಂ ನಷ್ಟು ತೂಕ ಇರಲಿದ್ದು, ಇದರಲ್ಲಿ ಶೇ.50ರಷ್ಟು ಬೆಳ್ಳಿ, 40 ರಷ್ಟು ತಾಮ್ರ, 5ರಷ್ಟು ನಿಕೆಲ್ (ಬಿಳಿಲೋಹ), 5 ರಷ್ಟು ಜಿಂಕ್ (ಸತುವು) ಹೊಂದಿರಲಿದೆ.
  • ಇನ್ನು ₹ 5ರ ಹೊಸ ನಾಣ್ಯ 6 ಗ್ರಾಂ ತೂಕದಷ್ಟಿದ್ದು, ಶೇ.75ರಷ್ಟು ತಾಮ್ರ, 20 ರಷ್ಟು ನಿಕೆಲ್ ಹಾಗೂ 5 ರಷ್ಟು ನಿಕೆಲ್ ನಿಂದ ಮಾಡಲಾಗಿದೆ.

Leave a Reply