ದೇಶದ ಮೊದಲ ಬುಲೆಟ್ ರೈಲು ಯೋಜನೆಗೆ ಚಾಲನೆ, ಈ ಯೋಜನೆ ಮಹತ್ವವನ್ನು ಮೋದಿ ವಿವರಿಸಿದ್ದು ಹೇಗೆ?

ಡಿಜಿಟಲ್ ಕನ್ನಡ ಟೀಮ್:

ಬಹುನಿರೀಕ್ಷಿತ ಮುಂಬೈ ಅಹ್ಮದಬಾದ್ ಹೈಸ್ಪೀಡ್ (ಬುಲೆಟ್) ರೈಲು ಯೋಜನೆಗೆ ಇಂದು ಚಾಲನೆ ಸಿಕ್ಕಿದೆ. ದೇಶದ ಮೊದಲ ಹೈ ಸ್ಪೀಡ್ ರೈಲು ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೊ ಅಬೆ ಉದ್ಘಾಟಿಸಿದ್ದಾರೆ.

ಬುಲೆಟ್ ರೈಲು ಕೇವಲ ಶ್ರೀಮಂತರಿಗೆ ಮಾತ್ರ, ಭಾರತಕ್ಕೆ ಅದರ ಅಗತ್ಯವಾದರೂ ಏನು ಎಂದು ಕೆಲವರು ಈ ಯೋಜನೆಯನ್ನು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗಳಿಗೆ ಮೋದಿ ಅವರು ಉತ್ತರ ನೀಡಿದ್ದಾರೆ. ಈ ಯೋಜನೆಗೆ ಜಪಾನಿ ನಿಂದ ಭಾರತಕ್ಕೆ ಯಾವ ರೀತಿ ನೆರವು ಸಿಗುತ್ತಿದೆ, ಈ ಯೋಜನೆಯ ವಿಶೇಷತೆಗಳು ಹಾಗೂ ಅಗತ್ಯತೆ ಬಗ್ಗೆ ಡಿಜಿಟಲ್ ಕನ್ನಡ ವಿಶೇಷ ವರದಿ ಪ್ರಕಟಿಸಿತ್ತು. ಈ ಯೋಜನೆ ಉದ್ಘಾಟಿಸಿದ ನಂತರ ಮಾತನಾಡಿದ ಮೋದಿ ನವ ಭಾರತದ ಪ್ರಗತಿಗೆ ಈ ಬುಲೆಟ್ ರೈಲು ಸಂಪರ್ಕ ಹೇಗೆ ಪ್ರಮುಖವಾಗಲಿದೆ ಎಂಬುದನ್ನು ವಿವರಿಸುತ್ತಾ, ಈ ಯೋಜನೆ ಪ್ರಶ್ನಿಸಿದವರಿಗೆ ಉತ್ತರಿಸಿದರು. ಮೋದಿ ಅವರ ಮಾತುಗಳು ಹೀಗಿವೆ ನೋಡಿ…

‘ಈ ಯೋಜನೆ ದೇಶದ ಪ್ರಗತಿ ಸಾಧನೆಗೆ ಸಂಗ್ರಹವಾದ ಕನಸು. ಭಾರತದ ಹಲವು ವರ್ಷಗಳ ಕನಸನ್ನು ನನಸಾಗಿಸಲು ಇಂದು ಪ್ರಮುಖ ಹೆಜ್ಜೆ ಇಡಲಾಗಿದೆ. ಈ ಯೋಜನೆ ದೇಶಕ್ಕೆ ಅತ್ಯುತ್ತಮ ವೇಗ, ಅಭಿವೃದ್ಧಿ ಹಾಗೂ ತಂತ್ರಜ್ಞಾನವನ್ನು ನೀಡಲಿದೆ. ಮಾನವ ಸ್ನೇಹಿ ಪರಿಸರ ಸ್ನೇಹಿಯಾಗಿರುವ ಈ ಯೋಜನೆ ತನ್ನ ವೇಗದ ಜತೆಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಲಿದೆ.

ಈ ಯೋಜನೆಗೆ ಇಷ್ಟು ವೇಗವಾಗಿ ಚಾಲನೆ ದೊರೆಯುತ್ತಿದೆ ಎಂದರೆ ಅದರ ಸಂಪೂರ್ಣ ಶ್ರೇಯ ಶಿಂಜೊ ಅಬೆ ಅವರಿಗೆ ಸಲ್ಲಬೇಕು. ಈ ಯೋಜನೆ ಕುರಿತಂತೆ ಸ್ವತಃ ತಾವೇ ಮುತುವರ್ಜಿ ವಹಿಸಿ ಯಾವುದೇ ಅಡೆತಡೆ ಎದುರಾಗದಂತೆ ನೋಡಿಕೊಂಡಿದ್ದಾರೆ. ಈಗಷ್ಟೇ ಅಬೆ ಅವರು ಎರಡನೇ ಮಹಾಯುದ್ಧದ ವೇಳೆ ಜಪಾನ್ ಎಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಿತ್ತು ಎಂದು ವಿವರಿಸಿದರು. 1964ರಲ್ಲಿ ಜಪಾನ್ ಬುಲೆಟ್ ರೈಲು ಸಂಪರ್ಕ ಅಳವಡಿಸಿಕೊಂಡ ನಂತರ ಆ ದೇಶದ ಅಭಿವೃದ್ಧಿ ತೀವ್ರವಾಗಿ ಸಾಗಿತು. ಹೀಗಾಗಿ ಭಾರತ ಹಾಗೂ ಜಪಾನ್ ನಡುವಣ ಸ್ನೇಹಕ್ಕೆ ಇಂದು ಭಾವನಾತ್ಮಕ ದಿನ.

ಈಗ ಮಂದಗತಿಯ ಅಭಿವೃದ್ಧಿ ಸಾಧಿಸುವ ಕಾಲವಲ್ಲ. ಸಮಯ ತನ್ನ ಪಾಡಿಗೆ ತಾನು ಸಾಗುತ್ತಲೇ ಇರುತ್ತದೆ. ಯಾರಿಗೂ ಕಾಯುವುದಿಲ್ಲ. ಹೀಗಾಗಿ ನಾವು ವೇಗದ ಅಭಿವೃದ್ಧಿಯತ್ತ ಗಮನ ಹರಿಸಬೇಕು. ಈ ಹೈಸ್ಪೀಡ್ ರೈಲು ಸೇವೆಯಿಂದ ಹೆಚ್ಚಿನ ಪ್ರಯೋಜನ ಪಡೆಯುವುದು ನಮ್ಮ ಉದ್ದೇಶ. ಪೀಳಿಗೆಯ ಬೆಳವಣಿಗೆಯಲ್ಲಿ ಹೈಸ್ಪೀಡ್ ರೈಲ್ವೇ ಕಾರಿಡಾರ್ ಮಹತ್ವದ ಪಾತ್ರವಹಿಸಲಿದೆ. ದೇಶದ ಅಭಿವೃದ್ಧಿಯಲ್ಲಿ ಪರಿಣಾಮಕಾರಿ ಸಂಚಾರಿ ವ್ಯವಸ್ಥೆ ಪ್ರಮುಖವಾಗಲಿದೆ.

ಭಾರತಕ್ಕೆ ಜಪಾನ್ ಕೇವಲ ಸ್ನೇಹಿತ ರಾಷ್ಟ್ರವಾಗಿಲ್ಲ. ಬದಲಿಗೆ ಉತ್ತಮ ಬ್ಯಾಂಕ್ ಆಗಿಯು ಪರಿಣಮಿಸಿದೆ. ಜನರಿಗೆ ಉತ್ತಮ ಬ್ಯಾಂಕ್ ಗಳು ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜಪಾನ್ ಕೇವಲ ಶೇ.0.1ರ ಬಡ್ಡಿ ದರದಲ್ಲಿ ₹ 88 ಸಾವಿರ ಕೋಟಿ ನೀಡುತ್ತಿದೆ. ಆರಂಭದಲ್ಲಿ ಕೆಲವರು ನಾನು ಬುಲೆಟ್ ರೈಲನ್ನು ಯಾವಾಗ ಭಾರತಕ್ಕೆ ತರುತ್ತೇನೆ ಎಂದು ಪ್ರಶ್ನಿಸುತ್ತಿದ್ದರು. ಈಗ ಅದೇ ಜನರು ಭಾರತಕ್ಕೆ ಯಾಕೆ ಬುಲೆಟ್ ರೈಲು ಎಂದು ಪ್ರಶ್ನಿಸುತ್ತಿದ್ದಾರೆ. ಈ ಹೈಸ್ಪೀಡ್ ರೈಲಿನಿಂದಾಗಿ ಮುಂಬೈನಿಂದ ಅಹ್ಮದಾಬಾದ್ ವರೆಗಿನ ಎಲ್ಲಾ ಪ್ರದೇಶಗಳು ಏಕ ಆರ್ಥಿಕ ವಲಯವಾಗಿ ಪರಿವರ್ತನೆಯಾಗಲಿದೆ. ಇದರಿಂದ ವ್ಯಾಪಾರ ವ್ಯವಹಾರಗಳಿಗೆ ಉತ್ತೇಜನ ಸಿಗಲಿದೆ. ಈ ಪ್ರದೇಶಗಳ ನಡುವಣ ಸಂಪರ್ಕ ಹೆಚ್ಚಾಗಿ ಮಾನವಶಕ್ತಿಯಿಂದ ಸರಕುಗಳವರೆಗೂ ಎಲ್ಲವನ್ನು ಸುಲಭವಾಗಿ ಹಂಚಿಕೊಳ್ಳಬಹುದು.

ತಂತ್ರಜ್ಞಾನವನ್ನು ಬಡತನದ ವಿರುದ್ಧ ಬಳಸಿದ್ದೇ ಆದರೆ, ಬಡತನ ನಿರ್ಮೂಲನೆ ಸುಲಭವಾಗಲಿದೆ. ತಂತ್ರಜ್ಞಾನ ಕಡುಬಡವರ ಜೀವನದ ಭಾಗವಾಗಬೇಕು ಆಗ ಇದು ಸಾಧ್ಯ. ಸಾಮಾನ್ಯ ಜನರಿಗೆ ಈ ತಂತ್ರಜ್ಞಾನಗಳನ್ನು ಪರಿಚಯಿಸುವುದೇ ನಮ್ಮ ಗುರಿ. ಕೇವಲ ರೈಲ್ವೇ ಮಾತ್ರವಲ್ಲ, ಭೂಸಾರಿಗೆ, ಜಲಸಾರಿಗೆ ಹಾಗೂ ವಾಯು ಸಾರಿಗೆಯತ್ತಲೂ ನಮ್ಮ ಗಮನಹರಿಯುತ್ತಿದೆ. ಈ ವಿವಿಧ ಸಾರಿಗೆಗಳು ಒಂದಕ್ಕೊಂದು ಬೆಸೆದುಕೊಂಡಾಗ ನವ ಭಾರತದ ಕನಸು ಬೇಗ ನನಸಾಗಲಿದೆ. ಹೀಗಾಗಿ ತೀವ್ರಗತಿಯಲ್ಲಿ ರಸ್ತೆ ನಿರ್ಮಾಣ ಮಾಡಲಲಾಗುತ್ತಿದೆ. ಒಟ್ಟಾರೆ ಆರ್ಥಿಯಕತೆಯಲ್ಲಿ ಶೇ.30ರಷ್ಟು ಅಭಿವೃದ್ಧಿ ಸಾಧಿಸಲು ಜಿಎಸ್ಟಿಯಿಂದ ಸಾಧ್ಯವಾಗಿದೆ. ಕಳೆದ ಮೂರು ವರ್ಷಗಳಲ್ಲಿ 3 ಕೋಟಿಯಷ್ಟು ಹೊಸದಾಗಿ ವಿಮಾನ ಪ್ರಯಾಣಿಕರು ನಾಗರೀಕ ವಿಮಾನಯಾನದ ಸೇವೆ ಪಡೆದುಕೊಂಡಿದ್ದಾರೆ.

ಈ ಸರ್ಕಾರ ರೈಲ್ವೆ ವಲಯಕ್ಕೆ ನೀಡುತ್ತಿರುವ ಒತ್ತನ್ನು ಬೇರೆ ಯಾವುದೇ ಸರ್ಕಾರ ನೀಡಿಲ್ಲ. ಭಾರತೀಯ ರೈಲ್ವೆಯ ಅಭಿವೃದ್ಧಿಗೆ ಈ ಸರ್ಕಾರ ಬದ್ಧವಾಗಿದೆ. ಹೈಸ್ಪೀಡ್ ರೈಲಿನ ತರಬೇತಿ ಸಂಸ್ಥೆಯನ್ನು ವಡೋದರಾದಲ್ಲಿ ಸ್ಥಾಪಿಸಲಾಗುತ್ತಿದೆ. ಈ ರೈಲ್ವೆ ಯೋಜನೆಯ ತಂತ್ರಜ್ಞಾನ ಜಪಾನಿನಲ್ಲಿ ಸಿದ್ಧವಾದರೂ ಅದನ್ನು ಭಾರತದಲ್ಲೇ ತಯಾರಿಸಲಾಗುವುದು. 2022ರ ವೇಳೆಗೆ ನಾನು ಹಾಗೂ ಅಬೆ ಅವರು ಈ ಬುಲೆಟ್ ರೈಲಿನಲ್ಲಿ ಒಟ್ಟಿಗೆ ಪ್ರಯಾಣ ಬೆಳೆಸುವ ಭರವಸೆ ಇದೆ.

ಒಂದು ವಾರದಲ್ಲಿ ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸುವ ಜನರು ಇಡೀ ಜಪಾನ್ ಜನಸಂಖ್ಯೆಯಷ್ಟಿದೆ. ಹೀಗಾಗಿ ಈ ರೈಲ್ವೆ ಸಂಪರ್ಕವನ್ನು ನಾವು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅವಕಾಶಗಳು ಹೆಚ್ಚಾಗಿವೆ.’

Leave a Reply