ಭಾರತದ ಸ್ನೇಹಿತ ಜಪಾನ್ ಮೇಲೆ ಅಣ್ವಸ್ತ್ರ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ ಉತ್ತರ ಕೊರಿಯಾ

ಡಿಜಿಟಲ್ ಕನ್ನಡ ಟೀಮ್:

‘ಇನ್ನು ಮುಂದೆ ಜಪಾನ್ ನಮ್ಮ ಸಮೀಪದಲ್ಲಿ ಇರುವುದು ಬೇಡ. ಅಣ್ವಸ್ತ್ರ ಪ್ರಯೋಗಿಸಿ ಜಪಾನ್ ದೇಶವನ್ನು ಸಮುದ್ರದಲ್ಲಿ ಮುಳುಗಿಸುತ್ತೇವೆ’ ಇದು ಉತ್ತರ ಕೊರಿಯಾದಿಂದ ಜಪಾನಿಗೆ ರವಾನೆಯಾಗಿರುವ ಎಚ್ಚರಿಕೆ.

ಇತ್ತೀಚಿನ ದಿನಗಳಲ್ಲಿ ಭಾರತ ಹಾಗೂ ಜಪಾನ್ ತಮ್ಮ ಸ್ನೇಹ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳುತ್ತಿವೆ. ಇದಕ್ಕೆ ಉದಾಹರಣೆ ಇಂದು ದೇಶದ ಮೋದಲ ಬುಲೆಟ್ ರೈಲು ಯೋಜನೆಗೆ ಸಿಕ್ಕ ಚಾಲನೆ. ಈ ಯೋಜನೆ ಸೇರಿದಂತೆ ಇತರೆ ವಿಷಯಗಳಲ್ಲಿ ಜಪಾನ್ ಭಾರತಕ್ಕೆ ಸಹಾಯ ಮಾಡುತ್ತಿದೆ. ಹೀಗೆ ಭಾರತದ ಅತ್ಯುತ್ತಮ ಸ್ನೇಹಿತನಾಗಿ ಹೊರಹೊಮ್ಮುತ್ತಿರುವ ಜಪಾನಿಗೆ ಅತ್ತ ಉತ್ತರ ಕೊರಿಯಾದಿಂದ ಈ ಬೆದರಿಕೆ ಎದುರಾಗುತ್ತಿದೆ.

ವಿಶ್ವದ ಪ್ರಬಲ ರಾಷ್ಟ್ರಗಳ ವಿರೋಧವನ್ನು ಲೆಕ್ಕಿಸದೇ ಅಣ್ವಸ್ತ್ರ ಕ್ಷಿಪಣಿ ಪ್ರಯೋಗ ಮಾಡಿರುವ ಉತ್ತರ ಕೊರಿಯಾ, ಇತ್ತೀಚೆಗೆ ತನ್ನ ಕ್ಷಿಪಣಿಯನ್ನು ಜಪಾನ್ ಮೇಲೆ ಹಾರಿಸಿತ್ತು. ಜಪಾನ್ ವಿರುದ್ಧ ತನಗಿರುವ ತನ್ನ ಹಳೇ ವೈಷಮ್ಯವನ್ನು ತೀರಿಸಿಕೊಳ್ಳುವತ್ತ ಉತ್ತರ ಕೊರಿಯಾ ಗಮನ ಹರಿಸುತ್ತಿದ್ದು, ಉತ್ತರ ಏಷ್ಯಾಭಾಗದಲ್ಲಿ ಈಗ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡಿದೆ.

ಉತ್ತರ ಕೊರಿಯಾ ಸರ್ಕಾರದ ನಿಯಂತ್ರಣದಲ್ಲಿರುವ ಮಾಧ್ಯಮದಲ್ಲಿ ಪ್ರಕಟವಾಗಿರುವ ವರದಿಯಲ್ಲಿ ಕೊರಿಯಾದ ಏಷ್ಯಾ ಪೆಸಿಫಿಕ್ ಶಾಂತಿ ಸಮಿತಿಯ ವಕ್ತಾರರು ಈ ಬೆದರಿಕೆ ಹಾಕಿರುವುದಾಗಿ ತಿಳಿಸಿದೆ. ‘ನಾಲ್ಕು ದ್ವೀಪಗಳ ರಾಷ್ಟ್ರವಾಗಿರುವ ಜಪಾನ್ ಅನ್ನು ಅಣು ಬಾಂಬ್ ಪ್ರಯೋಗಿಸಿ ಸಮುದ್ರದಲ್ಲಿ ಮುಳುಗಿಸುತ್ತೇವೆ. ನಮ್ಮ ಸಮೀಪದಲ್ಲಿ ಜಪಾನ್ ಅಸ್ತಿತ್ವದಲ್ಲಿರಬಾರದು’ ಎಂದು ವರದಿಯಲ್ಲಿ ತಿಳಿಸಲಾಗಿದೆ. ಉತ್ತರ ಕೊರಿಯಾದ ಈ ಬೆದರಿಕೆಯನ್ನು ಖಂಡಿಸಿರುವ ಜಪಾನ್ ಸರ್ಕಾರದ ವಕ್ತಾರ ಯೊಶಿಹಿದೆ ಸುಗಾ, ‘ಇದೊಂದು ಅತ್ಯಂತ ಕೆಟ್ಟ ಪ್ರಚೋದನಕಾರಿ ಹೇಳಿಕೆ’ ಎಂದು ಟೀಕಿಸಿದ್ದಾರೆ.

ಈವರೆಗೂ ಉತ್ತರ ಕೊರಿಯಾದ ಈ ಉದ್ಧಟತನದ ಕುರಿತಾಗಿ ಭಾರತ ಯಾವುದೇ ರೀತಿಯ ನಿಲುವನ್ನು ಪ್ರಕಟಿಸಿಲ್ಲ. ಜಪಾನ್ ವಿರುದ್ಧ ಉತ್ತರ ಕೊರಿಯಾದ ಈ ಬೆದರಿಕೆಗೆ ಭಾರತದಿಂದ ಪ್ರತಿಕ್ರಿಯೆ ಬರುವುದೇ ಅಥವಾ ಮೌನ ಮುಂದುವರಿಯುವುದೇ ಎಂಬ ಪ್ರಶ್ನೆ ಮೂಡಿದೆ.

Leave a Reply