ರಾಜಕೀಯಕ್ಕೆ ಕಮಲ್ ಹಾಸನ್ ಎಂಟ್ರಿ! ‘ತಮಿಳುನಾಡು ರಾಜಕೀಯ ಬದಲಿಸ್ತೇನೆ’ ಎಂಬ ಅವರ ಮಾತಿನ ಮರ್ಮವೇನು?

ಡಿಜಿಟಲ್ ಕನ್ನಡ ಟೀಮ್:

‘ತಮಿಳುನಾಡು ರಾಜಕೀಯವನ್ನು ಬದಲಾಯಿಸುವ ಪ್ರಕ್ರಿಯೆ ಆರಂಭಿಸುತ್ತೇನೆ. ಶೀಘ್ರದಲ್ಲೇ ಈ ಬದಲಾವಣೆ ತರುತ್ತೇನೆ ಎಂಬ ಭರವಸೆ ನೀಡಲಾರೆ. ಆದರೆ ನಿಧಾನವಾದರೂ ಬದಲಾವಣೆ ತರುವುದಂತೂ ಖಂಡಿತ’ ಈ ಹೇಳಿಕೆ ನೀಡಿರುವ ಖ್ಯಾತ ನಟ ಕಮಲ್ ಹಾಸನ್ ತಾವು ರಾಜಕೀಯಕ್ಕೆ ಪ್ರವೇಶಿಸುತ್ತಿರುವುದನ್ನು ಖಚಿತಪಡಿಸಿದ್ದಾರೆ.

ಖ್ಯಾತ ನಟನ ಈ ಹೇಳಿಕೆ ಈಗ ದೇಶದ ಗಮನವನ್ನೇ ಸೆಳೆದಿದೆ. ಇತ್ತೀಚಿನ ದಿನಗಳಲ್ಲಿ ರಾಜಕೀಯ ಸೇರಿದಂತೆ ಸಾಮಾಜಿಕ ವಿಚಾರಗಳಲ್ಲಿ ತಮ್ಮ ವಾದವನ್ನು ಸ್ಪಷ್ಟವಾಗಿ ಮಂಡಿಸುತ್ತಲೇ ಬಂದಿರುವ ಕಮಲ್ ಹಾಸನ್, ರಾಜಕೀಯಕ್ಕೆ ಬರುತ್ತಾರಾ ಎಂಬ ಅನುಮಾನ ಹುಟ್ಟುಹಾಕಿತ್ತು. ಈಗ ಈ ಹೇಳಿಕೆ ನೀಡಿರುವ ಕಮಲ್ ಈ ಎಲ್ಲ ಅನುಮಾನಗಳಿಗೆ ತೆರೆ ಎಳೆದಿದ್ದಾರೆ. ತಮಿಳುನಾಡು ರಾಜಕೀಯಕ್ಕೆ ಪ್ರವೇಶಿಸುವ ಕುರಿತು ಕಮಲ್ ಹಾಸನ್ ನೀಡಿರುವ ಭರವಸೆ ಹೀಗಿದೆ…

‘ತಮಿಳುನಾಡು ರಾಜಕೀಯ ಪರಿಸ್ಥಿತಿ ಬದಲಾಗಲಿದೆ. ಆ ಬದಲಾವಣೆಯನ್ನು ನಾನು ತರಲು ಇಚ್ಛಿಸುತ್ತೇನೆ. ಈ ಬದಲಾವಣೆ ಅದೆಷ್ಟೇ ನಿದಾನವಾದರೂ ಸರಿಯೇ, ಇದರ ಪ್ರಕ್ರಿಯೆಯನ್ನು ಆರಂಭಿಸುತ್ತೇನೆ. ನನಗೆ ಮತ ನೀಡಿ ಐದು ವರ್ಷಗಳ ಕಾಲ ಕಾಯಿರಿ. ನಾನು ಸರಿಯಾಗಿ ಕೆಲಸ ಮಾಡದಿದ್ದರೆ ನನ್ನನ್ನು ಕಿತ್ತೊಗೆಯಿರಿ. ತಮಿಳುನಾಡು ರಾಜಕೀಯದಲ್ಲಿ ಒಂದು ನಾನಿರಬೇಕು ಅಥವಾ ಭ್ರಷ್ಟಾಚಾರವಿರಬೇಕು. ಎರಡೂ ಒಟ್ಟಿಗೆ ಇರಲು ಅಸಾಧ್ಯ. ರಾಜಕೀಯ ಪಕ್ಷ ಎಂದರೆ ಅದೊಂದು ಸಿದ್ಧಾಂತ. ಈಗಿರುವ ಯಾವುದೇ ಪಕ್ಷಗಳು ನನ್ನ ರಾಜಕೀಯ ಸಿದ್ಧಾಂತಕ್ಕೆ ಸರಿದೂಗುವುದಿಲ್ಲ.’

ಕಮಲ್ ಅವರ ಈ ಮಾತುಗಳು ಅವರು ರಾಜಕೀಯಕ್ಕೆ ಬರುವುದು ಬಹುತೇಕ ಖಚಿತಪಡಿಸುವುದಷ್ಟೇ ಅಲ್ಲದೆ ಅವರು ಪ್ರತ್ಯೇಕ ರಾಜಕೀಯ ಪಕ್ಷ ಸ್ಥಾಪಿಸುವ ಲೆಕ್ಕಾಚಾರದ ಸುಳಿವನ್ನು ನೀಡಿದ್ದಾರೆ. ಅಂದಹಾಗೆ ಇತ್ತೀಚಿನ ದಿನಗಳಲ್ಲಿ ತಮಿಳುನಾಡಿನಲ್ಲಿರುವ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳನ್ನು ಟೀಕಿಸುತ್ತಲೇ ಬಂದಿರುವ ಕಮಲ್, ಎಡಪಂಥೀಯ ಪಕ್ಷದ ನಾಯಕರ ಜತೆ ಗುರುತಿಸಿಕೊಂಡು ಗಮನ ಸೆಳೆದಿದ್ದಾರೆ.

ಇತ್ತೀಚೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿಯಾಗಿದ್ದ ಕಮಲ್ ಹಾಸನ್, ‘ನಾನು ಒಂದು ವಿಷಯ ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ನನ್ನದು ಕೇಸರಿ ಬಣ್ಣವಲ್ಲ. ಬಹುತೇಕ ಎಡಪಂಥಿಯರು ನನ್ನ ನಿಜವಾದ ಹೀರೋಗಳು’ ಎಂದು ಹೇಳಿಕೆ ನೀಡಿದ್ದರು. ಈ ಮಧ್ಯೆ ಕಮಲ್ ಹಾಸನ್ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರ ಜತೆ ಸಂಪರ್ಕದಲ್ಲಿರುವ ಬಗ್ಗೆಯೂ ವರದಿಗಳು ಬಂದಿದೆ.

ಒಟ್ಟಿನಲ್ಲಿ ರಜನಿಕಾಂತ್ ಅವರ ಎಂಟ್ರಿಯನ್ನು ನಿರೀಕ್ಷಿಸುತ್ತಿದ್ದ ತಮಿಳುನಾಡು ರಾಜಕೀಯಕ್ಕೆ ಕಮಲ್ ಹಾಸನ್ ಅಚ್ಚರಿ ನೀಡಿದ್ದು, ತಮಿಳುನಾಡಿನಲ್ಲಿ ಎಡಪಂಥೀಯ ಸಿದ್ಧಾಂತದೊಂದಿಗೆ ರಾಜಕೀಯ ಸಮುದ್ರದಲ್ಲಿ ಈಜಿ ಜಯಿಸುವರೇ ಎಂಬುದು ಸದ್ಯದ ಕುತೂಹಲ.

Leave a Reply