ಜಪಾನ್ ಮೇಲೆ ಮತ್ತೊಂದು ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ, ಒಳ್ಳೆಯ ಮಾತಿಗೆ ಬಗ್ಗುವುದಿಲ್ಲ ಈ ಕಿಮ್ ಜೊಂಗ್?

ಡಿಜಿಟಲ್ ಕನ್ನಡ ಟೀಮ್:

ನಿನ್ನೆಯಷ್ಟೇ ಜಪಾನ್ ಮೇಲೆ ಅಣ್ವಸ್ತ್ರ ದಾಳಿ ಮಾಡಿ ಸಮುದ್ರದಲ್ಲಿ ಮುಳುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದ ಉತ್ತರ ಕೊರಿಯಾ, ಇಂದು ಮತ್ತೊಂದು ಕ್ಷಿಪಣಿ ಹಾರಿಸಿ ತನ್ನ ಉದ್ಧಟತನ ಮುಂದುವರಿಸಿದೆ. ಉತ್ತರ ಕೊರಿಯಾದ ಕ್ಷಿಪಣಿ ಜಪಾನ್ ಮೇಲೆ ಹಾದುಹೋಗಿ ಪೆಸಿಫಿಕ್ ಸಮುದ್ರಕ್ಕೆ ಅಪ್ಪಳಿಸಿದೆ.

ಕೆಲ ವಾರಗಳ ಹಿಂದಷ್ಟೇ ಇದೇ ರೀತಿಯ ಕ್ಷಿಪಣಿ ಹಾರಿಸಿದ್ದ ಉತ್ತರ ಕೊರಿಯಾ ಪರೋಕ್ಷವಾಗಿ ಅಮೆರಿಕಕ್ಕೆ ತನ್ನ ಸಾಮರ್ಥ್ಯ ಏನು ಎಂಬ ಸಂದೇಶ ರವಾನಿಸಿತ್ತು. ಈಗ ಮತ್ತೆ ಜಪಾನ್ ಮೇಲೆಯೇ ಕ್ಷಿಪಣಿ ಹಾರಿಸಿರುವ ಉ.ಕೊರಿಯಾ ಈ ಭಾಗದಲ್ಲಿ ತನ್ನನ್ನು ನಿಯಂತ್ರಿಸುವವರೇ ಇಲ್ಲ ಎಂಬಂತೆ ಅಟ್ಟಹಾಸದಿಂದ ಮೆರೆಯುತ್ತಿದೆ. ಅತಿ ಚಿಕ್ಕ ರಾಷ್ಟ್ರಗಳಲ್ಲಿ ಒಂದಾಗಿರುವ ಉತ್ತರ ಕೊರಿಯಾ, ಅಮೆರಿಕ, ವಿಶ್ವಸಂಸ್ಥೆಯ ಎಚ್ಚರಿಕೆಯನ್ನು ಲೆಕ್ಕಿಸದೇ ಈ ರೀತಿ ದರ್ಪ ತೋರುತ್ತಿರುವುದನ್ನು ನೋಡಿದರೆ, ಇದರ ಹಿಂದೆ ಬೇರೆಯವರ ಕುಮ್ಮಕ್ಕು ಇರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಚೀನಾ ಹೊರತುಪಡಿಸಿ ಉಳಿದ ಯಾವುದೇ ರಾಷ್ಟ್ರ ಉತ್ತರ ಕೊರಿಯಾದ ಬೆನ್ನಿಗೆ ನಿಲ್ಲುವ ಸಾಧ್ಯತೆ ಇಲ್ಲ. ಉತ್ತರ ಕೊರಿಯಾದ ಪ್ರತಿಯೊಂದು ನಡೆಯನ್ನು ಜಾಗತಿಕ ಮಟ್ಟದಲ್ಲಿ ವಿರೋಧಿಸುತ್ತಿದ್ದರೂ ಚೀನಾ ಮಾತ್ರ ದಿವ್ಯ ಮೌನಕ್ಕೆ ಶರಣಾಗಿದೆ. ಸದ್ಯ ಭಾರತದ ಪ್ರವಾಸದಲ್ಲಿರುವ ಜಪಾನ್ ಪ್ರಧಾನಿ ಶಿಂಜೊ ಅಬೆ ಇಲ್ಲಿನ ಬಹುನಿರೀಕ್ಷಿತ ಬುಲೆಟ್ ರೈಲು ಯೋಜನೆಗೆ ಚಾಲನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಉತ್ತರ ಕೊರಿಯಾದ ಬೆದರಿಗೆ ಹಾಗೂ ಕ್ಷಿಪಣಿ ಉಡಾವಣೆ ಮಾಡಿರುವುದು ಸಾಕಷ್ಟು ಗಮನ ಸೆಳೆದಿದೆ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಿರುವ ಅಂಶ ಎಂದರೆ ಭಾರತದ ಬುಲೆಟ್ ರೈಲು ಯೋಜನೆಯನ್ನು ಪಡೆದುಕೊಳ್ಳಲು ಚೀನಾ ಸಹ ಜಪಾನ್ ಜತೆಗೆ ಪೈಪೋಟಿ ನಡೆಸಿತ್ತು. ಆದರೆ ಭಾರತ ಜಪಾನ್ ಜತೆ ಕೈಜೋಡಿಸಿರುವುದು ಚೀನಾಗೆ ಭಾರಿ ಮುಖಭಂಗವಾಗುವಂತೆ ಮಾಡಿತ್ತು.

ಉತ್ತರ ಕೊರಿಯಾದ ಇತ್ತೀಚಿನ ನಡೆಗಳನ್ನು ಖಂಡಿಸುತ್ತಲೇ ಬಂದಿರುವ ಅಮೆರಿಕ, ತನ್ನ ಸ್ನೇಹ ರಾಷ್ಟ್ರ ಜಪಾನ್ ಮೇಲೆ ಕ್ಷಿಪಣಿ ಹಾರಿಸಿರುವ ನಡೆಯನ್ನು ‘ದುಸ್ಸಾಹಸ’ ಎಂದು ಖಂಡಿಸಿದೆ. ಇನ್ನು ಜಪಾನ್ ಸಹ ತನ್ನ ಮೇಲಿನ ಕ್ಷಿಪಣಿ ಹಾರಾಟವನ್ನು ತೀವ್ರವಾಗಿ ವಿರೋಧಿಸಿದ್ದು, ‘ಉತ್ತರ ಕೊರಿಯಾದ ಈ ಪ್ರಚೋದನಕಾರಿ ನಡೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಕಿಡಿಕಾರಿದೆ. ಇನ್ನು ಅಮೆರಿಕದ ಬೆಂಬಲ ಹೊಂದಿರುವ ದಕ್ಷಿಣ ಕೊರಿಯಾ ಸಹ ಉತ್ತರ ಕೊರಿಯಾದ ಈ ಕ್ರಮವನ್ನು ವಿರೋಧಿಸಿದ್ದು, ಇದಕ್ಕೆ ಪ್ರತಿಯಾಗಿ ಕ್ಷಿಪಣಿ ಸಮರಭ್ಯಾಸ ನಡೆಸಲು ಮುಂದಾಗಿದೆ.

ಉತ್ತರ ಕೊರಿಯಾದ ಈ ನಡೆ ಏಷ್ಯಾ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿದ್ದು, ಏಷ್ಯಾದ ಜತೆಗೆ ಅಮೆರಿಕ ಮಾರುಕಟ್ಟೆಯಲ್ಲಿನ ಷೇರುಗಳು ಕುಸಿತ ಕಂಡಿವೆ. ಹೀಗಾಗಿ ಆಸ್ಟ್ರೇಲಿಯಾ ಸಹ ತನ್ನ ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ ಉತ್ತರ ಕೊರಿಯಾದ ಕ್ಷಿಪಣಿ ಹಾರಿಸಿದ್ದರಿಂದ ವಿಶ್ವಸಂಸ್ಥೆ ಭದ್ರತಾ ಸಮಿತಿಯ ತುರ್ತುಸಭೆಯನ್ನು ಕರೆಯಲಾಗಿದೆ.

Leave a Reply