ಕಾಶ್ಮೀರದ ವಿಚಾರದಲ್ಲಿ ಮೂಗು ತೂರಿಸುತ್ತಿರುವ ಇಸ್ಲಾಮಿಕ್ ದೇಶಗಳ ಒಕ್ಕೂಟಕ್ಕೆ ಭಾರತ ಖಡಕ್ ಎಚ್ಚರಿಕೆ, ವಿಶ್ವಸಂಸ್ಥೆಯಲ್ಲಿ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಭಾರತದ ಅವಿಭಾಜ್ಯ ಅಂಗವಾಗಿರುವ ಕಾಶ್ಮೀರದ ವಿಚಾರವಾಗಿ ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋಆಪರೇಷನ್ (ಇಸ್ಲಾಮಿಕ್ ರಾಷ್ಟ್ರಗಳ ಒಕ್ಕೂಟ) ವಿನಾಕಾರಣ ಹಸ್ತಕ್ಷೇಪ ಮಾಡುತ್ತಿರುವುದನ್ನು ಭಾರತ ವಿಶ್ವಸಂಸ್ಥೆಯಲ್ಲಿ ಖಂಡಿಸಿದೆ.

ಇತ್ತೀಚೆಗೆ ಒಐಸಿ ಸದಸ್ಯ ರಾಷ್ಟ್ರವಾಗಿರುವ ಪಾಕಿಸ್ತಾನವು ಈ ಸಂಸ್ಥೆಯನ್ನು ಮುಂದಿಟ್ಟುಕೊಂಡು ಕಾಶ್ಮೀರದ ಕುರಿತಾಗಿ ಅದರ ಅಭಿಪ್ರಾಯವನ್ನು ವಿಶ್ವಸಂಸ್ಥೆಯಲ್ಲಿ ಮಂಡಿಸಿತ್ತು. ಅಲ್ಲದೆ ಕಾಶ್ಮೀರದ ವಿಚಾರವಾಗಿ ಅನೇಕ ಪ್ರಶ್ನೆಗಳನ್ನು ಎತ್ತಿತ್ತು. ಇದಕ್ಕೆ ಪ್ರತ್ಯುತ್ತರ ನೀಡಿರುವ ಭಾರತ, ‘ತನ್ನದಲ್ಲದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು’ ಎಂದು ಒಐಸಿಗೆ ಎಚ್ಚರಿಸಿದೆ. ವಿಶ್ವಸಂಸ್ಥೆಯಲ್ಲಿ ಈ ವಿಚಾರವಾಗಿ ಭಾರತ ವಾದ ಮಂಡಿಸಿದ ಸುಮಿತ್ ಸೇತ್ ಹೇಳಿದಿಷ್ಟು…

‘ಭಾರತದ ಆಂತರಿಕ ವಿಚಾರವಾಗಿರುವ ಕಾಶ್ಮೀರದ ವಿಷಯದಲ್ಲಿ ಒಐಸಿ ಯಾವುದೇ ಪ್ರಾದೇಶಿಕ ಹಕ್ಕನ್ನು ಹೊಂದಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಒಐಸಿ ಇಂತಹ ಹೇಳಿಕೆ ಹಾಗೂ ಪ್ರಯತ್ನಗಳನ್ನು ಮಾಡದಂತೆ ಎಚ್ಚರಿಕೆ ನೀಡಲು ಇಚ್ಛಿಸುತ್ತೇವೆ. ಒಐಸಿಯು ತನ್ನ ಹೇಳಿಕೆಯಲ್ಲಿ ಭಾರತದ ರಾಜ್ಯವಾಗಿರುವ ಜಮ್ಮು ಕಾಶ್ಮೀರದ ಕುರಿತಾಗಿ ತಪ್ಪು ಮಾಹಿತಿಯನ್ನು ನೀಡಿ ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಿದೆ. ಹೀಗಾಗಿ ಒಐಸಿಯ ಎಲ್ಲ ವಾದಗಳನ್ನು ಭಾರತ ನಿರಾಕರಿಸುತ್ತದೆ. ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಅದನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ.’

57 ಮುಸ್ಲಿಂ ರಾಷ್ಟ್ರಗಳ ಒಕ್ಕೂಟವಾಗಿರುವ ಒಐಸಿ ಕಾಶ್ಮೀರದ ವಿಚಾರವಾಗಿ ಹಲವು ಹಾರಿ ಹೇಳಿಕೆ ನೀಡಿದೆ. ಕಳೆದ ಜುಲೈನಲ್ಲೂ ಕಾಶ್ಮೀರದ ವಿಚಾರವಾಗಿ ತನ್ನ ವಾದ ಮಂಡಿಸಿದ್ದು, ‘ಕಾಶ್ಮೀರದಲ್ಲಿ ಮಾನವಹಕ್ಕು ಉಲ್ಲಂಘನೆಯಾಗುತ್ತಿದೆ. ಇದರಿಂದ ಈ ಪ್ರದೇಶದಲ್ಲಿನ ಶಾಂತಿ ಹಾಗೂ ಭದ್ರತೆಗೆ ಅಪಾಯ ಎದುರಾಗಲಿದೆ’ ಎಂದಿತ್ತು. ಈ ಸಂಸ್ಥೆಯ ಅಭಿಪ್ರಾಯವನ್ನು ಮುಂದಿಟ್ಟುಕೊಂಡು ಪಾಕಿಸ್ತಾನ ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರಶ್ನಿಸಿತ್ತು.

Leave a Reply