ಮೋದಿ ಆಡಳಿತ ಹಾಗೂ ಬಿಜೆಪಿಯ ಹಿಂದುತ್ವವಾದ ವಿರುದ್ಧ ಗುಡುಗಿದ ದೇವೇಗೌಡ್ರು, ಇದರ ಹಿಂದಿರುವ ಮರ್ಮವೇನು?

ಡಿಜಿಟಲ್ ಕನ್ನಡ ಟೀಮ್:

ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಪಕ್ಷದ ಕಾರ್ಯಕರ್ತರನ್ನು ಸಂಘಟಿಸುವಲ್ಲಿ ನಿರತರಾಗಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು, ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಕಲಬುರಗಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಗೌಡರು, ‘ಹಿಂದುತ್ವದ ಸಿದ್ಧಾಂತ ಹೊಂದಿರುವ ಬಿಜೆಪಿಯನ್ನು ಮುಂದಿನ ಚುನಾವಣೆಯಲ್ಲಿ ಎದುರಿಸಲು ಜಾತ್ಯಾತೀತ ಶಕ್ತಿಗಳು ಒಂದಾಗಬೇಕು’ ಎಂಬ ಕರೆ ನೀಡಿ ಗಮನ ಸೆಳೆದಿದ್ದಾರೆ.

ಸದ್ಯ ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ದೇವೇಗೌಡರ ಒಂದೊಂದು ನಡೆಯೂ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಒಂದುವೇಳೆ ಮುಂದಿನ ಚುನಾವಣೆಯಲ್ಲಿ ಯಾವುದೇ ಪಕ್ಷ ಬಹುಮತ ಗಳಿಸದಿದ್ದರೆ, ಸಹಜವಾಗಿಯೇ ಜೆಡಿಎಸ್ ಕಿಂಗ್ ಮೇಕರ್ ಆಗಲಿದೆ. ಹೀಗಾಗಿ ಯಾವುದೇ ಸಂದರ್ಭದಲ್ಲೂ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಗೌಡರನ್ನು ಎದುರುಹಾಕಿಕೊಳ್ಳುವ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿಲ್ಲ. ಇದಕ್ಕೆ ತಕ್ಕಂತೆ ದೇವೇಗೌಡರೂ ಸಹ ಬಿಬಿಎಂಪಿ ಅಧಿಕಾರ ಹಿಡಿಯುವಲ್ಲಿ ಕಾಂಗ್ರೆಸ್ ಜತೆ ಕೈಜೋಡಿಸಿದರೆ, ವಿಧಾನ ಪರಿಷತ್ ಸಭಾಪತಿ ವಿಚಾರದಲ್ಲಿ ಬಿಜೆಪಿಯ ಶಂಕರಮೂರ್ತಿ ಅವರ ಸ್ಥಾನ ಭದ್ರವಾಗಿರುವಂತೆ ನೋಡಿಕೊಂಡು ಕಾಂಗ್ರೆಸಿಗರಿಗೆ ಶಾಕ್ ಕೊಟ್ಟಿದ್ದಾರೆ. ಇನ್ನು ದಿಲ್ಲಿಯ ವಿಚಾರದಲ್ಲೂ ಅಷ್ಟೇ, ಅನೇಕ ಸಮಾರಂಭಗಳಲ್ಲಿ ಮೋದಿ ಅವರ ಜತೆ ವೇದಿಕೆ ಹಂಚಿಕೊಂಡಿರುವ ಗೌಡರು, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರನ್ನು ಬಿಟ್ಟುಕೊಡದೇ ಎರಡು ರಾಷ್ಟ್ರೀಯ ಪಕ್ಷಗಳನ್ನು ಸಮತೋಲನವಾಗಿ ನಿಭಾಯಿಸುತ್ತಾ ತಮ್ಮ ರಾಜಕೀಯ ಚಾಣಕ್ಷತೆ ಮೆರೆಯುತ್ತಿದ್ದಾರೆ.

ಈಗ ದಿಢೀರನೆ ಬಿಜೆಪಿ ಹಾಗೂ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿರುವುದು ಗಮನಸೆಳೆದಿದೆ. ಕಲಬುರಗಿಯಲ್ಲಿ ದೇವೇಗೌಡರು ಮೋದಿ ಹಾಗೂ ಬಿಜೆಪಿ ನಾಯಕರ ಬಗ್ಗೆ ಹೇಳಿದಿಷ್ಟು…

‘ಇತ್ತೀಚೆಗೆ ಕಾರಾವಾರದ ವ್ಯಕ್ತಿಯೊಬ್ಬರು ಮಾಧ್ಯಮದ ಮುಂದೆ ನೀಡಿದ ಸಂದರ್ಶನದಲ್ಲಿ ದ್ವೇಷದ ಮಾತುಗಳನ್ನು ಆಡಿದ್ದಾರೆ. ಅವರ ಆ ಮಾತುಗಳು ಏನು ಸಾರುತ್ತದೆ? ಮೋದಿ ಅವರು ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹೋರಟಿದ್ದಾರೆಯೇ? ನರೇಂದ್ರ ಮೋದಿ ಅವರ ಈ ಪ್ರಯತ್ನಕ್ಕೆ ನಾನು ಅವಕಾಶ ನೀಡುವುದಿಲ್ಲ. ನನ್ನ ಜನ್ಮ ಇರುವವರೆಗೂ ಕರ್ನಾಟಕವನ್ನು ಹಿಂದೂ ರಾಜ್ಯವನ್ನಾಗಿ ಮಾಡಲು ಬಿಡುವುದಿಲ್ಲ. ಇಲ್ಲಿ ಪ್ರತಿಯೊಬ್ಬರೂ ಶಾಂತಿ, ಸೌದಾರ್ದತೆಯಿಂದ ಬಾಳಬೇಕು.

ಮುಂದಿನ ಚುನಾವಣೆ ಸಮೀಪಿಸುತ್ತಿದ್ದು, ಅದನ್ನು ಎದುರಿಸಲು ಕಾರ್ಯಕರ್ತರು ಈಗಲೇ ಸಿದ್ಧರಾಗಬೇಕು. ಈ ಚುನಾವಣೆಯಲ್ಲಿ ಜಾತ್ಯಾತೀತ ಶಕ್ತಿಗಳು ಒಂದಾಗಬೇಕು.’

ಸದ್ಯ ರಾಜ್ಯದಲ್ಲಿ ಬಿಜೆಪಿ ಹಾಗೂ ಹಿಂದುತ್ವವಾದಿಗಳ ವಿರುದ್ಧ ಕಾಂಗ್ರೆಸ್ ಟೀಕಾ ಪ್ರಹಾರ ನಡೆಸುತ್ತಿದ್ದು, ಅಲ್ಪಸಂಖ್ಯಾತರು ದಲಿತರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ದೇವೇಗೌಡರು ಸಹ ಕಾಂಗ್ರೆಸ್ ಗೆ ಪೈಪೋಟಿ ನೀಡಲು ಮುಂದಾಗಿದ್ದಾರೆ. ಇನ್ನು ಸೆ.28ರಂದು ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಗೌಡರ ಈ ಹೇಳಿಕೆ ಹೇಗೆ ಕೆಲಸ ಮಾಡಲಿದೆ ಎಂಬ ಕುತೂಹಲ ಹೆಚ್ಚಿದೆ.

Leave a Reply