ಸೆಹ್ವಾಗ್ ಗೆ ಸುಳ್ಳು ಹೇಳಿದ್ರಾ ರವಿಶಾಸ್ತ್ರಿ-ಕೊಹ್ಲಿ? ಮತ್ತೆ ಕೋಚ್ ಹುದ್ದೆಗೆ ಅರ್ಜಿ ಹಾಕಲ್ಲ ಎಂದು ವೀರೂ ಹೇಳುತ್ತಿರೋದೇಕೆ?

ಡಿಜಿಟಲ್ ಕನ್ನಡ ಟೀಮ್:

ಟೀಂ ಇಂಡಿಯಾ ಕೋಚ್ ಆಯ್ಕೆ ಸಂದರ್ಭದಲ್ಲಿ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರಿಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ರವಿಶಾಸ್ತ್ರಿ ಸುಳ್ಳು ಹೇಳಿ ದಾರಿ ತಪ್ಪಿಸಿದ್ದರೆ? ಸದ್ಯ ಇಂತಹ ಪ್ರಶ್ನೆ ಉದ್ಭವಿಸಿದೆ. ಇದಕ್ಕೆ ಕಾರಣ, ಕೋಚ್ ಆಯ್ಕೆ ಸಂದರ್ಭದ ಕುರಿತು ವಿರೇಂದ್ರ ಸೆಹ್ವಾಗ್ ಅವರು ನೀಡಿರುವ ಹೇಳಿಕೆ.

ಟೀಂ ಇಂಡಿಯಾ ಮಾಜಿ ಕೋಚ್ ಅನಿಲ್ ಕುಂಬ್ಳೆ ಜತೆ ಭಿನ್ನಾಭಿಪ್ರಾಯ ಹೊಂದಿದ್ದ ವಿರಾಟ್ ಕೊಹ್ಲಿ ನಂತರ ತನ್ನ ಇಚ್ಛೆಯಂತೆ ರವಿಶಾಸ್ತ್ರಿ ಅವರನ್ನು ತಂಡದ ಕೋಚ್ ಆಗಿ ಪಡೆದು ಉತ್ತಮ ಪ್ರದರ್ಶನ ನೀಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕುಂಬ್ಳೆ ರಾಜೀನಾಮೆ ನಂತರ ಕೋಚ್ ತೆರವಾಗಿದ್ದ ಸಂದರ್ಭದಲ್ಲಿ ಈ ಹುದ್ದೆಗೆ ವಿರೇಂದ್ರ ಸೆಹ್ವಾಗ್ ಅರ್ಜಿ ಹಾಕಿದ್ದು, ಆದರೆ ಹಲವು ನಾಟಕೀಯ ಬೆಳವಣಿಗೆಯಿಂದ ಆ ಸ್ಥಾನ ರವಿಶಾಸ್ತ್ರಿ ಪಾಲಾಯಿತು. ಈಗ ಇದೇ ಮೊದಲ ಬಾರಿಗೆ ವಿರೇಂದ್ರ ಸೆಹ್ವಾಗ್ ಈ ಬಗ್ಗೆ ಮಾತನಾಡಿದ್ದು ಅದು ಹೀಗಿದೆ…

‘ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ವೇಳೆ ನಾನು ಇಂಗ್ಲೆಂಡ್ ನಲ್ಲಿದ್ದೆ. ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಅರ್ಜಿ ಆಹ್ವಾನ ಬಂದಾಗ ರವಿಶಾಸ್ತ್ರಿ ಅವರು ಸ್ಪರ್ಧಿಸದಿದ್ದಾಗ, ಆ ಬಗ್ಗೆ ಪ್ರಶ್ನಿಸಿದ್ದೆ. ಅದಕ್ಕೆ ಅವರು ಕಳೆದ ವರ್ಷ ಮಾಡಿದ ತಪ್ಪನ್ನು ಮತ್ತೆ ಮಾಡುವುದಿಲ್ಲ. ನಾನು ಎಂದಿಗೂ ಕೋಚ್ ಹುದ್ದೆಗೆ ಸ್ಪರ್ಧಿಸುವುದಿಲ್ಲ ಎಂದು ಉತ್ತರಿಸಿದ್ದರು.

ಆ ಸಂದರ್ಭದಲ್ಲಿ ಬಿಸಿಸಿಐ ಕಾರ್ಯದರ್ಶಿ ಅಮಿತಾಬ್ ಚೌದರಿ ಹಾಗೂ ಕ್ರೀಡಾಬಿವೃದ್ಧಿ ಅಧಿಕಾರಿಯಾಗಿದ್ದ ಎಂ.ವಿ ಶ್ರೀಧರ್ ಅವರು ನನ್ನ ಬಳಿ ಬಂದು ಈ ಸ್ಥಾನಕ್ಕೆ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿಕೊಂಡರು. ಆ ಬಗ್ಗೆ ಚಿಂತಿಸಲು ಕಾಲವಕಾಶ ತೆಗೆದುಕೊಂಡೆ. ಆಗ ತಂಡದ ನಾಯಕ ವಿರಾಟ್ ಕೊಹ್ಲಿಯ ಜತೆ ಈ ವಿಚಾರವಾಗಿ ಚರ್ಚಿಸಿದಾಗ ಅವರೂ ಸಹ ಈ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದರು.

ಒಂದು ವೇಳೆ ರವಿಶಾಸ್ತ್ರಿ ಕೋಚ್ ಹುದ್ದೆಗೆ ಸ್ಪರ್ಧಿಸುವುದು ಗೊತ್ತಿದ್ದರೆ ನಾನು ಅರ್ಜಿಯನ್ನೇ ಸಲ್ಲಿಸುತ್ತಿರಲಿಲ್ಲ. ಸುಮಾರು 15 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರುವ ನಾನು ನನ್ನ ಕುಟುಂಬದಿಂದ ದೂರ ಉಳಿದಿದ್ದೆ. ಹೀಗಾಗಿ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸುವಾಗಲೂ ಮುಂದೆ ವರ್ಷದಲ್ಲಿ ಕನಿಷ್ಠ 7-8 ತಿಂಗಳ ಕುಟುಂಬದಿಂದ ದೂರವಿರಬೇಕಾಗುತ್ತದೆ ಎಂಬುದು ನನ್ನನ್ನು ಕಾಡಿತ್ತು. ನನ್ನ ಕುಟುಂಬಕ್ಕೆ ಹೆಚ್ಚಿನ ಸಮಯ ನೀಡಬೇಕಿರುವ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಮತ್ತೆ ನಾನು ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ.’

Leave a Reply