ಭಾರತದ ಅತಿದೊಡ್ಡ ಸರ್ದಾರ್ ಸರೋವರ ಅಣೆಕಟ್ಟು ಲೋಕಾರ್ಪಣೆ, ಏನಿದರ ವಿಶೇಷ?

ಡಿಜಿಟಲ್ ಕನ್ನಡ ಟೀಮ್:

ಶಂಕುಸ್ಥಾಪನೆಯಾಗಿ ಸುದೀರ್ಘ 56 ವರ್ಷಗಳ ನಂತರ ಸರ್ದಾರ್ ಸರೋವರ ಅಣೆಕಟ್ಟು ಲೋಕಾರ್ಪಣೆಗೊಂಡಿದೆ. ತಮ್ಮ 67ನೇ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ, ಭಾರತದ ಅತಿದೊಡ್ಡ ಹಾಗೂ ವಿಶ್ವದ ಎರಡನೇ ಅತಿದೊಡ್ಡ ಅಣೆಕಟ್ಟನ್ನು ಉದ್ಘಾಟಿಸಿದ್ದಾರೆ.

ಗುಜರಾತಿನ ಜೀವನದಿ ಎಂದೇ ಬಿಂಬಿತವಾಗಿರುವ ನರ್ಮದಾ ನದಿಗೆ ಈ ಅಣೆಕಟ್ಟನ್ನು ಕಟ್ಟಲಾಗಿದ್ದು, 1961ರ ಏಪ್ರಿಲ್ 5ರಂದು ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರುರವರು ಶಂಕುಸ್ಥಾಪನೆ ಮಾಡಿದ್ದರು. ಈ ಅಣೆಕಟ್ಟಿನಿಂದ ತೊಂದರೆ ಅನುಭವಿಸುವ ಹಳ್ಳಿಗಳ ಗ್ರಾಮಸ್ಥರು ಹಾಗೂ ಇತರೆ ಕೋರ್ಟ್ ಕೇಸುಗಳ ಸಮಸ್ಯೆಗಳನ್ನು ಮೆಟ್ಟಿನಿಂತು ಈಗ ಅಣೆಕಟ್ಟು ಪೂರ್ಣಗೊಂಡಿದೆ. ಈ ಅಣೆಕಟ್ಟು ಕಾಮಗಾರಿ ತಡವಾಗಿ ಪೂರ್ಣಗೊಂಡಿದ್ದರೂ ಇದರ ವಿಶೇಷತೆಗಳು ಸಾಕಷ್ಟಿವೆ. ಅವುಗಳೆಂದರೆ…

  • ಸರ್ದಾರ್ ಸರೋವರ ಡ್ಯಾಮ್ ಸಾಂದ್ರತೆ ಹಾಗೂ ಗ್ರಾತದಲ್ಲಿ ವಿಶ್ವದ ಎರಡನೇ ಅತಿದೊಡ್ಡ ಅಣೆಕಟ್ಟು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಅಮೆರಿಕದ ಗ್ರಾಂಡ್ ಕೌಲೀ ಡ್ಯಾಮ್ ನಂತರದ ಸ್ಥಾನ ಪಡೆದಿದೆ. ಇತ್ತೀಚೆಗಷ್ಟೇ ಈ ಸರ್ದಾರ್ ಸರೋವರ ಡ್ಯಾಮಿನ ಎತ್ತರವನ್ನು 138.68 ಮೀಟರ್ ಗಳಿಗೆ ಏರಿಸಲಾಯಿತು. ಇದರಲ್ಲಿನ ನೀರಿನ ಸಾಮರ್ಥ್ಯ 4.73 ಮಿಲಿಯನ್ ಎಕರೆ ಅಡಿಗಳಷ್ಟಿದ್ದು, ಇದರಿಂದ ಸುತ್ತಮುತ್ತಲ 9 ಸಾವಿರ ಹಳ್ಳಿಗಳಿಗೆ ನೀರು ಪೂರೈಸಬಹುದಾಗಿದೆ.
  • ಗುಜರಾತಿನ ಕೆವಾಡಿಯಾ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಈ ಅಣೆಕಟ್ಟು 1.2 ಕಿ.ಮೀ ಉದ್ದವಿದ್ದು, ಇಲ್ಲಿ ನಿರ್ಮಿಸಲಾಗಿರುವ ಎರಡು ವಿದ್ಯುತ್ ಉತ್ಪಾದಕ ಘಟಕಗಳಿಂದ 4141 ಕೋಟಿ ಯುನಿಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ. ನದಿ ಪಾತ್ರದ ವಿದ್ಯುತ್ ಘಟಕದಿಂದ 1200 ಮೇಘಾ ವ್ಯಾಟ್ ಹಾಗೂ ನಾಲೆಗಳ ವಿದ್ಯುತ್ ಘಟಕದಿಂದ 250 ಮೇಘಾವ್ಯಾಟ್ ಉತ್ಪಾದನೆಯಾಗಲಿದೆ. ಇಲ್ಲಿ ಉತ್ಪಾದನೆಯಾಗುವ ವಿದ್ಯುತ್ ಪ್ರಮಾಣದಲ್ಲಿ ಶೇ.57ರಷ್ಟು ವಿದ್ಯುತ್ ಅನ್ನು ಮಹಾರಾಷ್ಟ್ರ, ಶೇ.27 ರಷ್ಟು ಮಧ್ಯಪ್ರದೇಶ ಹಾಗೂ ಉಳಿದ ವಿದ್ಯುತ್ ಗುಜರಾತಿಗೆ ಬಳಕೆಯಾಗಲಿದೆ. ಇನ್ನು ಈ ಅಣೆಕಟ್ಟಿನಿಂದ ರಾಜಸ್ಥಾನದ ಕೆಲವು ಭಾಗಗಳೂ ನೀರಾವರಿ ಸೌಲಭ್ಯ ದೊರೆಯುವ ನಿರೀಕ್ಷೆ ಇದೆ.
  • ಈ ಅಣೆಕಟ್ಟಿನಲ್ಲಿ ನೀರು ಹರಿಸಲು 30 ಗೇಟ್ ಗಳನ್ನು ಹೊಂದಿದ್ದು, ಪ್ರತಿ ಗೇಟ್ ಗಳು 450 ಟನ್ ತೂಕವಿದೆ. ಈ ಎಲ್ಲ ಗೇಟ್ ಗಳನ್ನು ಮುಚ್ಚಲು ಸುಮಾರು ಒಂದು ಗಂಟೆ ಕಾಲಾವಕಾಶ ಬೇಕಾಗುತ್ತದೆ.

  • 1996ರಲ್ಲಿ ಮೇಧಾ ಪಾಟ್ಕರ್ ಅವರು ಈ ಅಣೆಕಟ್ಟಿನಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಅಣೆಕಟ್ಟಿನ ಕಾಮಗಾರಿಗೆ ತಡೆಯಾಜ್ಞೆ ತಂದಿದ್ದರು. ನಂತರ 2000ರಲ್ಲಿ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಹಿಂಪಡೆದು ಕಾಮಗಾರಿ ಮುಂದುವರಿಸಲು ಅವಕಾಶ ನೀಡಿತು.
  • ಈ ಅಣೆಕಟ್ಟಿನಿಂದ ಈಗಾಗಲೇ ₹16000 ಕೋಟಿ ಆದಾಯ ಬಂದಿದ್ದು, ಇದರ ನಿರ್ಮಾಣದ ವೆಚ್ಚಕ್ಕಿಂತ ದುಪ್ಪಟಾಗಿದೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಪ್ರತಿ ವರ್ಷ ಈ ಅಣೆಕಟ್ಟಿನಿಂದ ₹1600  ಮೌಲ್ಯದ ವಿದ್ಯುತ್ ಉತ್ಪಾದನೆ ಜತೆಗೆ, ನೀರು ಪೂರೈಕೆಯಿಂದ ₹ 175 ಕೋಟಿ ಆದಾಯ ಬರಲಿದ್ದು, ವರ್ಷಕ್ಕೆ ಒಟ್ಟಾರೆ ₹2175 ಕೋಟಿ ಬರಲಿದೆ. ಅಲ್ಲಿಗೆ ಪ್ರತಿ ನಿತ್ಯ ₹ 6 ಕೋಟಿಯಷ್ಟಾಗಲಿದೆ.
  • ಈ ಅಣೆಕಟ್ಟಿನಿಂದ ಗುಜರಾತಿನ 15 ಜಿಲ್ಲೆಗಳ 73 ತಾಲೂಕುಗಳ 3112 ಹಳ್ಳಿಗಳ 18.45 ಹೆಕ್ಟೇರ್ ಕೃಷಿ ಭೂಮಿಗೆ ನಿರಾವರಿ ಸೌಲಭ್ಯ ಕಲ್ಪಿಸಲಿದೆ. ಇನ್ನು ರಾಜಸ್ಥಾನದ 2,46,000 ಹೆಕ್ಟೇರ್ ಪ್ರದೇಶ ಹಾಗೂ ಮಹಾರಾಷ್ಟ್ರದ 37,500 ಹೆಕ್ಟೇರ್ ಪ್ರದೇಶಗಳಿಗೆ ನೀರು ಪೂರೈಸಲಿದೆ. ಇದರಿಂದ ಈ ಪ್ರದೇಶಗಳನ್ನು ಬರ ಮುಕ್ತ ಪ್ರದೇಶವಾಗಿ ಮಾಡಲು ನೆರವಾಗಲಿದೆ.
  • ಇನ್ನು ಈ ಅಣೆಕಟ್ಟಿನಿಂದ ಕುಡಿಯುವ ನೀರು ಪೂರೈಕೆಯಲ್ಲಿಯೂ ಮಹತ್ವದ ಪಾತ್ರವಹಿಸಲಿದ್ದು, 131 ನಗರ ಕೇಂದ್ರಗಳು, 9633 ಹಳ್ಳಿಗಳ (ಗುಜರಾತಿನ 18144 ಹಳ್ಳಿಗಳ ಪೈಕಿ ಶೇ.53ರಷ್ಟು) 2.80 ಕೋಟಿ ಜನರಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ. ಇನ್ನು 2021ರ ವೇಳೆಗೆ 4 ಕೋಟಿ ಜನರಿಗೆ ಈ ಅಣೆಕಟ್ಟಿನಿಂದ ಕುಡಿಯುವ ನೀರು ಲಭ್ಯವಾಗುವ ನಿರೀಕ್ಷೆ ಇದೆ.

Leave a Reply