‘ರೊಹಿಂಗ್ಯ ನಿರಾಶ್ರಿತರು ಭಾರತಕ್ಕೆ ಅಪಾಯ…’ ಸುಪ್ರೀಂಗೆ ಸಲ್ಲಿಸಿದ ಅಫಿಡೆವಿಟ್ ನಲ್ಲಿ ಕೇಂದ್ರದ ಆತಂಕ, ಇದಕ್ಕೆ ಕಾರಣವೇನು?

ಡಿಜಿಟಲ್ ಕನ್ನಡ ಟೀಮ್:

‘ರೊಹಿಂಗ್ಯ ನಿರಾಶ್ರಿತರು ಭಾರತದ ಭದ್ರತೆಗೆ ಅಪಾಯಕಾರಿ…’ ಇದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಅಫಿಡೆವಿಟ್ ನಲ್ಲಿ ವ್ಯಕ್ತಪಡಿಸಿರುವ ಆತಂಕ.

ಸದ್ಯ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ವಿಷಯಗಳಲ್ಲಿ ರೊಹಿಂಗ್ಯ ನಿರಾಶ್ರಿತರ ಸಮಸ್ಯೆಯೂ ಒಂದು. ಅಕ್ರಮ ನಿವಾಸಿ ಎಂಬ ಕಾರಣಕ್ಕೆ ಮ್ಯಾನ್ಮಾರಿನಿಂದ ಲಕ್ಷಾಂತರ ರೊಹಿಂಗ್ಯ ಮುಸಲ್ಮಾನರನ್ನು ಹೊರದಬ್ಬಲಾಗುತ್ತಿದ್ದು, ನಿರಾಶ್ರಿತರಾಗಿರುವ ಇವರು ಭಾರತ ಸೇರಿದಂತೆ ಇತರೆ ರಾಷ್ಟ್ರಗಳತ್ತ ವಲಸೆ ಹೋಗುತ್ತಿದ್ದಾರೆ.

ಈ ಸಂದರ್ಭದಲ್ಲಿ ಭಾರತದ ವಿವಿಧ ಪ್ರದೇಶಗಳಲ್ಲಿ ಅಕ್ರಮವಾಗಿ ನೆಲೆಸಿರುವ ರೊಹಿಂಗ್ಯ ಮುಸಲ್ಮಾನರನ್ನು ಮತ್ತೆ ಮ್ಯಾನ್ಮಾರಿಗೆ ಕಳುಹಿಸಲು ಕೇಂದ್ರ ಸರ್ಕಾರ ನಿರ್ಧಾರರಿಸಿದ್ದು, ಇದನ್ನು ಪ್ರಶ್ನಿಸಿ ರಾಷ್ಟ್ರೀಯ ಮಾನವ ಹಕ್ಕು ಸಮಿತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತನ್ನ ಅಫಿಡೆವಿಟ್ ಸಲ್ಲಿಸಿದ್ದು, ‘ರೊಹಿಂಗ್ಯ ನಿರಾಶ್ರಿತರಿಂದ ಭಾರತದ ಭದ್ರತೆಗೆ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚಾಗಿದ್ದು, ತೀವ್ರವಾದಿ ರೊಹಿಂಗ್ಯದವರಿಂದ ಭಾರತದಲ್ಲಿರುವ ಬೌದ್ಧ ಧರ್ಮದವರ ಮೇಲೆ ಹಿಂಸಾಚಾರ ನಡೆಯುವ ಸಾಧ್ಯತೆ ಹೆಚ್ಚಾಗಿದೆ’ ಎಂದು ತಿಳಿಸಿದೆ.

ಕೇಂದ್ರ ಸರ್ಕಾರ ಕೋರ್ಟಿಗೆ ಸಲ್ಲಿಸಿರುವ 16 ಪುಟಗಳ ಅಫಿಡೆವಿಟ್ ನಲ್ಲಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡು ಮಂಡಿಸಿರುವ ವಾದದ ಪ್ರಮುಖ ಅಂಶಗಳು ಹೀಗಿವೆ…

  • ಈಗಾಗಲೇ ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ನೆರೆ ರಾಷ್ಟ್ರಗಳಿದ ಅಕ್ರಮ ವಲಸಿಗರು ವಾಸಿಸುತ್ತಿದ್ದಾರೆ. ಇದರಿಂದ ದೇಶದ ಗಡಿ ಭಾಗಗಳಲ್ಲಿನ ಪ್ರದೇಶಗಳ ಪರಿಸ್ಥಿತಿ ಬದಲಾಗುತ್ತಿದ್ದು, ಇದರಿಂದ ದೇಶದ ಪ್ರಜೆಗಳ ಮೂಲಭೂತ ಹಕ್ಕು ಹಾಗೂ ಮಾನವ ಹಕ್ಕಿಗೆ ಧಕ್ಕೆಯಾಗುತ್ತಿದೆ.
  • ರೊಹಿಂಗ್ಯ ನಿರಾಶ್ರಿತರಿಗೆ ಸಂಬಂಧಿಸಿದಂತೆ ಈಗಾಗಲೇ ದೊಡ್ಡ ಪ್ರಮಾಣದಲ್ಲಿ (ಸೂಕ್ತ ಪ್ರಯಾಣ ದಾಖಲೆ ಹಾಗೂ ಕಾನೂನು ಬಾಹೀರವಾಗಿ ಪ್ರವೇಶಿಸಿರುವುದನ್ನು ಒಪ್ಪಿಕೊಂಡಿರುವವರ ಅಂಕಿ ಅಂಶ ಆಧರಿಸಿ) ರೊಹಿಂಗ್ಯ ಮುಸಲ್ಮಾನರು ಭಾರತ- ಮ್ಯಾನ್ಮಾರ್ ಗಡಿ ಮೂಲಕ ದೇಶದೊಳಗೆ ಅಕ್ರಮವಾಗಿ ಆಗಮಿಸಿದ್ದಾರೆ. ಹೀಗೆ ಅಕ್ರಮವಾಗಿ ಭಾರತದಲ್ಲಿ ನೆಲೆಸಿರುವವರ ಸಂಖ್ಯೆ 40 ಸಾವಿರಕ್ಕೂ ಹೆಚ್ಚಿದೆ.
  • ನಿರಂತರವಾಗಿ ರೊಹಿಂಗ್ಯ ನಿರಾಶ್ರಿತರು ಭಾರತವನ್ನು ಅಕ್ರಮವಾಗಿ ಪ್ರವೇಶಿಸುತ್ತಿರುವುದು ಹಾಗೂ ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವುದರಿಂದ ದೇಶದ ಭದ್ರತೆಗೆ ದೊಡ್ಡ ಮಟ್ಟದ ಅಪಾಯ ಎದುರಾಗಲಿದೆ.
  • 2012-13ರಿಂದ ರೊಹಿಂಗ್ಯ ನಿರಾಶ್ರಿತರು ಭಾರತವನ್ನು ಪ್ರವೇಶಿಸುತ್ತಿದ್ದು, ಆಗಿನಿಂದಲೂ ಕೇಂದ್ರ ಸರ್ಕಾರಕ್ಕೆ ಭದ್ರತಾ ಸಂಸ್ಥೆಗಳು ಅಕ್ರಮ ವಲಸಿಗರ ಬಗ್ಗೆ ಎಚ್ಚರಿಕೆ ನೀಡುತ್ತಿವೆ. ಅಲ್ಲದೆ ಈ ರೊಹಿಂಗ್ಯ ಅಕ್ರಮ ವಲಸಿಗರು ಪಾಕಿಸ್ತಾನದ ಉಗ್ರಸಂಘಟನೆಗಳು ಹಾಗೂ ಇತರೆ ದೇಶಗಳ ತೀವ್ರವಾದಿ ಸಂಘಟನೆಗಳ ಜತೆ ಸಂಪರ್ಕ ಹೊಂದಿರುವ ಬಗ್ಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಬಂದಿವೆ.
  • ದೇಶದ ಭದ್ರತೆಗೆ ಈ ವಲಸಿಗರಿಂದ ತೊಂದರೆ ಇದೆ ಎನ್ನುತ್ತಿರುವ ಸಂದರ್ಭದಲ್ಲೇ ಮತ್ತೊಂದು ಆಘಾತಕಾರಿ ಬೆಳವಣಿಗೆ ಎಂದರೆ, ಮ್ಯಾನ್ಮಾರ್ ನಿಂದ ಪಶ್ಚಿಮ ಬಂಗಾಳದ ಬೆನಪೊಲ್- ಹರಿದಾಸ್ ಪುರ, ಹಿಲ್ಲಿ, ಕೊಲ್ಕತಾ, ತ್ರಿಪುರಾದ ಸೊನಮೊರಾ ಮತ್ತು ಗುವಾಹಟಿಯ ಗಡಿ ಪ್ರದೇಶಗಳಿಂದ ಏಜೆಂಟರುಗಳ ಮೂಲಕ ರೊಹಿಂಗ್ಯ ಮುಸಲ್ಮಾನರನ್ನು ಅಕ್ರಮವಾಗಿ ಭಾರತಕ್ಕೆ ಕರೆತರಲಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳು ದೇಶದ ಭದ್ರತೆಗೆ ಮಾರಕವಾಗಲಿವೆ.
  • ಕೇಂದ್ರ ಸರ್ಕಾರದ ಗಮನಕ್ಕೆ ಬಂದಿರುವ ಮಾಹಿತಿ ಪ್ರಕಾರ ದೇಶದೊಳಗೆ ಅಕ್ರಮವಾಗಿ ನುಸುಳಿರುವ ರೊಹಿಂಗ್ಯ ಮುಸಲ್ಮಾನರ ಪೈಕಿ ಕೆಲವರು ಮಾನವ ಕಳ್ಳಸಾಗಾಣೆ ಸೇರಿದಂತೆ ಅಕ್ರಮ ಚಟುವಟಿಕೆ ಹಾಗೂ ದೇಶವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದಾರೆ. ಇವರಿಗೆ ನಕಲಿ ಗುರುತಿನ ಚೀಟಿ ನೀಡಲಾಗುತ್ತಿದ್ದು, ಹುಂಡಿ ಅಥವಾ ಹವಾಲಾದ ಮೂಲಕ ಹಣ ನೀಡಲಾಗುತ್ತಿದೆ. ಹೀಗೆ ಅಕ್ರಮವಾಗಿ ಬಂದವರು ನಕಲಿ ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿಯನ್ನು ಪಡೆದುಕೊಂಡಿದ್ದಾರೆ.
  • ಈ ರೊಹಿಂಗ್ಯ ನಿರಾಶ್ರಿತರ ಪೈಕಿ ಕೆಲವರು ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಹಾಗೂ ಐಎಸ್ಐಎಸ್ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದು, ದೇಶದ ಸೂಕ್ಷ್ಮ ಪ್ರದೇಶಗಳಲ್ಲಿ ಕೋಮುಗಲಭೆ ಹಾಗೂ ಹಿಂಸಾಚಾರ ನಡೆಸುವ ಉದ್ದೇಶ ಹೊಂದಿರುವ ಬಗ್ಗೆಯೂ ಕೇಂದ್ರಕ್ಕೆ ಮಾಹಿತಿ ಬಂದಿದೆ.
  • ರೊಹಿಂಗ್ಯ ನಿರಾಶ್ರಿತರನ್ನು ತೀವ್ರಗಾಮಿಗಳನ್ನಾಗಿ ಮಾಡಿ ಭಾರತದಲ್ಲಿ ನೆಲೆಸಿರುವ ಬೌದ್ಧ ಧರ್ಮಿಯರ ಮೇಲೆ ಹಿಂಸಾಚಾರ ನಡೆಸುವ ಹುನ್ನಾರ ನಡೆಯುತ್ತಿದೆ.
  • ಜಮ್ಮು ಕಾಶ್ಮೀರ ಮಾತ್ರವಲ್ಲದೆ, ದೆಹಲಿ, ಹೈದರಾಬಾದ್ ಮತ್ತು ಮೆವತ್ ಪ್ರದೇಶಗಳಲ್ಲಿರುವ ಈ ರೊಹಿಂಗ್ಯರು ಭಯೋತ್ಪಾದನೆಯ ಹಿನ್ನಲೆ ಹೊಂದಿದ್ದಾರೆ. ಇದು ದೇಶದ ಆಂತರಿಕ ಭದ್ರತೆಗೆ ದೊಡ್ಡ ಸವಾಲಾಗಲಿದೆ.
  • ಈ ಮೇಲೆ ಹೇಳಲಾದ ಎಲ್ಲಾ ಅಪಾಯಗಳ ಜತೆಗೆ, ವೈವಿಧ್ಯಮಯ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕತೆ ಹೊಂದಿರುವ ಭಾರತದಂತಹ ದೇಶದಲ್ಲಿ ಇಂತಹ ನಿರಾಶ್ರಿತರಿಗೆ ಅವಕಾಶ ನೀಡುವುದು ಸೂಕ್ತ ನಿರ್ಧಾರವಲ್ಲ. ಅಕ್ರಮ ವಲಸಿಗರಿಗೆ ದೇಶದ ಪ್ರಜೆಗಳಿಗೆ ನೀಡುವ ಸೌಲಭ್ಯ ಹಾಗೂ ಅವಕಾಶಗಳನ್ನು ನೀಡುತ್ತಾ ಹೋದರೆ, ನೌಕರಿ, ಮನೆ ನಿರ್ಮಾಣಕ್ಕೆ ನೀಡುವ ಸಬ್ಸಿಡಿ, ವೈದ್ಯಕೀಯ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ನೀಡಲಾಗುತ್ತಿರುವ ಸೌಲಭ್ಯಗಳಿಂದ ನಮ್ಮ ದೇಶದ ಪ್ರಜೇಗಳೇ ಅವಕಾಶ ವಂಚಿತರಾಗುತ್ತಾರೆ. ಇದರಿಂದ ಮತ್ತೆ ಸಾಮಾಜಿಕ ಸಮಸ್ಯೆ ಉದ್ಭವಿಸಿ ಕಾನೂನು ಸುವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಹೀಗೆ ಮುಂದಿನ ದಿನಗಳಲ್ಲಿ ಭಾರತೀಯ ಪ್ರಜೆಗಳಿಗೆ ಅನ್ಯಾಯವಾಗಲಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮವನ್ನು ತೆಗೆದುಕೊಂಡಿದೆ.

Leave a Reply