ಕಾಂಗ್ರೆಸ್ ಮಾಜಿ ಸಚಿವ ಖಮರುಲ್ ಇಸ್ಲಾಂ ನಿಧನ

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕ ಮಾಜಿ ಸಚಿವ ಹಾಗೂ ಮುಸ್ಲಿಂ ಸಮುದಾಯದ ಪ್ರಭಾವಿ ನಾಯಕ ಎಂದೇ ಗುರುತಿಸಿಕೊಂಡಿದ್ದ ಖಮರುಲ್ ಇಸ್ಲಾಂ ಅವರು ಇಂದು ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ.

ಕಲಬುರಗಿಯ ಉತ್ತರ ವಿಭಾಗ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಖಮರುಲ್ ಅವರು ಹಲವು ದಿನಗಳಿಂದ ಆರೋಗ್ಯ ಸಮಸ್ಯೆ ಎದುರಿಸಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು 12ರ ಸುಮಾರಿಗೆ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.

ಸರಿಸುಮಾರು ನಾಲ್ಕು ದಶಕಗಳ ಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಕಮರುಲ್ ಇಸ್ಲಾಂ ಅವರು 6 ಬಾರಿ ವಿಧಾನ ಸಭೆಗೆ ಆಯ್ಕೆಯಾಗಿದ್ದರು. 1978ರಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದರು. ರಾಜಕೀಯದ ಆರಂಭಿಕ ದಿನಗಳಲ್ಲಿ ಮುಸ್ಲಿಂ ಲೀಗ್ ಪಕ್ಷದಿಂದ ಸ್ಪರ್ಧಿಸಿದ್ದ ಖಮರುಲ್ ಅವರು ನಂತರ ಜನತಾ ದಳ ಆನಂತರ ಕಾಂಗ್ರೆಸ್ ಪಕ್ಷ ಸೇರಿಕೊಂಡರು.

ಎಸ್.ಎಂ ಕೃಷ್ಣ ಅವರ ಅವಧಿಯಲ್ಲಿ ವಸತಿ ಮತ್ತು ಕಾರ್ಮಿಕ ಸಚಿವರಾಗಿದ್ದ ಖಮರುಲ್ ಇಸ್ಲಾಂ ಅವರು ಸಿದ್ದರಾಮಯ್ಯನವರ ಅವಧಿಯಲ್ಲಿ ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾಗಿ ಸೇವೆಸಲ್ಲಿಸಿದ್ದರು. ಇತ್ತೀಚೆಗೆ ಸಿದ್ದರಾಮಯ್ಯ ಸರ್ಕಾರದ ಸಚಿವ ಸಂಪುಟ ಬದಲಾವಣೆ ಸಂದರ್ಭದಲ್ಲಿ ಖಮರುಲ್ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಅಷ್ಟೇ ಅಲ್ಲದೆ ಇತ್ತೀಚೆಗೆ ಕಾಂಗ್ರೆಸ್ ಹೈಕಮಾಂಡ್ ಇವರನ್ನು ಕೇರಳದ ಉಸ್ತುವಾರಿ ಜವಾಬ್ದಾರಿಯನ್ನು ವಹಿಸಿತ್ತು.

ಕೆಲ ತಿಂಗಳ ಹಿಂದಷ್ಟೇ ಕಲಬುರಗಿಯ ಮತ್ತೊಬ್ಬ ಹಿರಿಯ ರಾಜಕಾರಣಿ ಧರ್ಮಸಿಂಗ್ ಅವರ ನಿಧನದ ನಂತರ ಈ ಜಿಲ್ಲೆ ಮತ್ತೊಬ್ಬ ಹಿರಿಯ ನಾಯಕನನ್ನು ಕಳೆದುಕೊಂಡಿದೆ.

1 COMMENT

  1. India already sufferng fro Islàmic terrorián for nearly 4 decdades, muslim poàpulaation raising Separatist activities in Assam n NE areas, if rohingya muslims given umbrage end of R country

Leave a Reply