ಆಸೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಫಲಿತಾಂಶದ ಹೊರತಾಗಿ ಗಮನಿಸಬೇಕಾದ ಅಂಶಗಳೇನು?

ಡಿಜಿಟಲ್ ಕನ್ನಡ ಟೀಮ್:

ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಟೀಂ ಇಂಡಿಯಾ ಆಕರ್ಷಕ ಪ್ರದರ್ಶನ ನೀಡಿ ಡಕ್ವರ್ತ್ ಲೂಯೀಸ್ ನಿಯಮದನ್ವಯ 26 ರನ್ ಗಳ ಜಯ ದಾಖಲಿಸಿದೆ.

ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತಾದರೂ ಅನಿರೀಕ್ಷಿತ ಆಘಾತ ಎದುರಿಸಿತು. ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಆಸೀಸ್ ವೇಗದ ದಾಳಿಗೆ ತರಗೆಲೆಗಳಂತೆ ಉದುರಿದ ಪರಿಣಾಮ ತಂಡ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿತು. ಆದರೂ ಧೋನಿ, ಪಾಂಡ್ಯ, ಭುವನೇಶ್ವರ್ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 50 ಓವರ್ ಗಳಲ್ಲಿ 7 ವಿಕೆಟ್ ಗೆ 281 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾಗೆ ಮಳೆಯ ಅಡಚಣೆ ಎದುರಾಯಿತು. ಉತ್ತಮ ಆರಂಭ ಸಿಕ್ಕರೂ ಸಾಧಾರಣ ಮೊತ್ತವನ್ನು (164 ರನ್) ಬೆನ್ನಟ್ಟುವಲ್ಲಿ ವಿಫಲವಾದ ಕಾಂಗರೂ ಪಡೆ 21 ಓವರ್ ಗಳಲ್ಲಿ 9 ವಿಕೆಟ್ ಗೆ 137 ರನ್ ದಾಖಲಿಸಲಷ್ಟೇ ಶಕ್ತವಾಯಿತು. ಹೀಗಾಗಿ ಟೀಂ ಇಂಡಿಯಾ ಮುಂದೆ ಕಾಂಗರೂ ಪಡೆ ತಲೆಬಾಗಿತು.

ಇವಿಷ್ಟೂ ಪಂದ್ಯದ ಫಲಿತಾಂಶವಾಯಿತು. ಇನ್ನು ಈ ಪಂದ್ಯದಲ್ಲಿ ಗಮನಿಸಬೇಕಿರುವ ಪ್ರಮುಖ ಅಂಶಗಳು ಹೀಗಿವೆ…

  • ಧೋನಿ ಟೀಂ ಇಂಡಿಯಾ ನಾಯಕನಾಗಿದ್ದ ಸಂದರ್ಭದಲ್ಲಿ ವೇಗದ ಬೌಲಿಂಗ್ ಆಲ್ರೌಂಡರ್ ಕೊರತೆಯ ಬಗ್ಗೆ ಅನೇಕ ಬಾರಿ ಪ್ರಸ್ತಾಪಿಸಿದ್ದರು. ಈಗ ಆ ಕೊರತೆ ಹಾರ್ದಿಕ್ ಪಾಂಡ್ಯ ಮೂಲಕ ನೀಗಿದೆ. ತಂಡ ಕಠಿಣ ಪರಿಸ್ಥಿತಿಯಲ್ಲಿದ್ದಾಗ ಧೋನಿ ಜತೆಗೂಡಿದ ಪಾಂಡ್ಯ (83 ರನ್), ಆರಂಭದಲ್ಲಿ ಎಚ್ಚರಕೆಯ ಆಟವಾಡಿದರೂ ನಂತರ ತನ್ನ ಅಬ್ಬರವನ್ನು ತೋರಿಸಿದರು. ಇನ್ನು ಬೌಲಿಂಗ್ ನಲ್ಲೂ ಪರಿಣಾಮಕಾರಿಯಾದ ಪಾಂಡ್ಯ (2 ವಿಕೆಟ್) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮುಂದಿನ ದಿನಗಳಲ್ಲಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾಗೆ ಪಾಂಡ್ಯ ನಂಬಿಕಸ್ತ ಆಲ್ರೌಂಡರ್ ಆಗಿದ್ದಾರೆ.
  • ಟೀಂ ಇಂಡಿಯಾದಲ್ಲಿ ಎಂ.ಎಸ್ ಧೋನಿ ಸ್ಥಾನವನ್ನು ಪ್ರಶ್ನಿಸುತ್ತಿದ್ದ ಟೀಕಾಕಾರರಿಗೆ ಧೋನಿ ತಮ್ಮ ಜವಾಬ್ದಾರಿಯುತ ಬ್ಯಾಟಿಂಗ್ ನಿಂದ ಕೂಲಾಗಿಯೇ ಉತ್ತರಿಸಿದ್ದಾರೆ. ಆಸ್ಟ್ರೇಲಿಯಾ ವೇಗಿಗಳು ಮೇಲುಗೈ ಸಾಧಿಸಿದ್ದ ಸಂದರ್ಭದಲ್ಲಿ ಸಾಕಷ್ಟು ತಾಳ್ಮೆಯ ಆಟದ ಮೂಲಕ ತಂಡದ ಇನಿಂಗ್ಸ್ ಕಟ್ಟಿದ ಧೋನಿ (79 ರನ್) ಎಲ್ಲೂ ಬೇಜವಾಬ್ದಾರಿಯುತ ಹೊಡೆತಕ್ಕೆ ಮುಂದಾಗಲಿಲ್ಲ. ಅಲ್ಲದೆ ಇನಿಂಗ್ಸ್ ಅಂತಿಮದಲ್ಲಿ ಭರ್ಜರಿ ಹೊಡೆತಗಳ ಮೂಲಕ ತಂಡ ಗೌರವ ಮೊತ್ತ ಪೇರಿಸಲು ನೆರವಾದರು. ಕೇವಲ ಬ್ಯಾಟಿಂಗ್ ವೈಫಲ್ಯದಿಂದ ತಂಡದಲ್ಲಿ ತನ್ನ ಸ್ಥಾನವನ್ನು ಪ್ರಶ್ನಿಸುತ್ತಿದ್ದವರಿಗೆ ಧೋನಿ ಉತ್ತರ ಹೇಗಿದೆ ಎಂದರೆ, ಧೋನಿಯ ಕೀಪಿಂಗ್ ಹಾಗೂ ಬ್ಯಾಟಿಂಗ್ ಅನುಭವವನ್ನು ಸರಿದೂಗಿಸಬಲ್ಲ ಬೇರೊಬ್ಬ ಆಟಗಾರನಿದ್ದಾನೆಯೇ ಎಂಬ ಪ್ರಶ್ನೆ ಟೀಕಾಕಾರರಲ್ಲೇ ಮೂಡಿದೆ.
  • ಈ ಪಂದ್ಯದಲ್ಲಿ ಟೀಂ ಇಂಡಿಯಾಗೆ ಸಿಕ್ಕ ಮತ್ತೊಂದು ಪ್ಲಸ್ ಪಾಯಿಂಟ್ ವೇಗದ ಬೌಲರ್ ಗಳು. ಆಸ್ಟ್ರೇಲಿಯಾದ ದೈತ್ಯ ಬ್ಯಾಟಿಂಗ್ ಪಡೆಯನ್ನು ಭಾರತೀಯ ಪಿಚ್ ಗಳಲ್ಲಿ ಕಟ್ಟಿಹಾಕುವುದು ನಿಜಕ್ಕೂ ದೊಡ್ಡ ಸವಾಲೇ ಸರಿ. ಆದರೂ ಭುವನೇಶ್ವರ್, ಬುಮ್ರಾ ಹಾಗೂ ಪಾಂಡ್ಯ ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರು. ಇನ್ನು ಅತ್ಯುತ್ತಮ ಲಯದಲ್ಲಿರುವ ಉಮೇಶ್ ಯಾದವ್ ಹಾಗೂ ಮೊಹಮದ್ ಶಮಿ ಬೆಂಚ್ ಕಾಯುತ್ತಿದ್ದು, ಟೀಂ ಇಂಡಿಯಾದಲ್ಲಿರುವ ಆರೋಗ್ಯಕರ ಸ್ಪರ್ಧೆಗೆ ಸಾಕ್ಷಿಯಾಗಿದೆ. ಭಾರತ ಹಾಗೂ ಉಪಖಂಡಗಳ ಪಿಚ್ ನಲ್ಲಿ ಇಷ್ಟು ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತೀಯ ವೇಗಿಗಳು ವಿದೇಶಿ ಪ್ರವಾಸ ಕೈಗೊಂಡಾಗ ಅಲ್ಲಿನ ವೇಗ ಹಾಗೂ ಪುಟಿತದ ಪಿಚ್ ಗಳಲ್ಲಿ ಹೇಗೆ ಅಬ್ಬರಿಸಬಹುದು ಎಂಬ ಕುತೂಹಲ ಹೆಚ್ಚಿದೆ.
  • ಯುವರಾಜ್ ಹಾಗೂ ರೈನಾ ತಂಡಕ್ಕೆ ಮರಳುವ ಪ್ರಯತ್ನದಲ್ಲಿರುವಾಗ ಅದಕ್ಕೆ ಸಾಧ್ಯವಾಗದಂತೆ ಬ್ಯಾಟಿಂಗ್ ವಿಭಾಗದಲ್ಲಿ ಪೈಪೋಟಿ ನಡೆಯುತ್ತಿದೆ. ಮಧ್ಯಮ ಕ್ರಮಾಂಕದಲ್ಲಿ ಮನೀಷ್ ಪಾಂಡೆ ಹಾಗೂ ಕೇದಾರ್ ಜಾಧವ್ ಪೈಪೋಟಿ ನೀಡುತ್ತಿದ್ದಾರೆ. ಈ ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ಅವಕಾಶವಿದ್ದರೂ ಅದನ್ನು ಕೈಚೆಲ್ಲಿದರು. ಮುಂದಿನ ಪಂದ್ಯಗಳಲ್ಲಿ ತಮಗೆ ಸಿಗುವ ಅವಕಾಶ ಬಳಸಿಕೊಳ್ಳುವ ಒತ್ತಡ ಇವರ ಮೇಲಿದೆ. ಇನ್ನು ಆರಂಭಿಕ ಶಿಖರ್ ಧವನ್ ಗಾಯಗೊಂಡು ಸರಣಿಗೆ ಅಲಭ್ಯರಾದರೂ ಆರಂಭಿಕನಾಗಿ ಕೆ.ಎಲ್ ರಾಹುಲ್ ಕಣಕ್ಕಿಳಿಯಲು ಸಾಧ್ಯವಾಗಲಿಲ್ಲ. ಕಾರಣ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಅಜಿಂಕ್ಯ ರಹಾನೆ ಕಣಕ್ಕಿಳಿದಿದ್ದರು. ಇದು ಬ್ಯಾಟಿಂಗ್ ವಿಭಾಗದಲ್ಲಿ ಸ್ಥಾನಪಡೆಯಲು ಆಟಗಾರರ ನಡುವಣ ಪೈಪೋಟಿಗೆ ಸಾಕ್ಷಿ.
  • ವೇಗದ ಬೌಲಿಂಗ್ ವಿಭಾಗದಂತೆ ಸ್ಪಿನ್ ವಿಭಾಗ ಕೂಡ ಆಸ್ಟ್ರೇಲಿಯನ್ನರಿಗೆ ಕಾಡಿದ್ದು ಗಮನಾರ್ಹ. ಪ್ರಮುಖ ಸ್ಪಿನ್ನರ್ ಗಳಾದ ಅಶ್ವಿನ್, ಜಡೇಜಾ ಅವರ ಅನುಪಸ್ಥಿತಿಯಲ್ಲಿಯೂ ಯುಜ್ವೇಂದ್ರ ಚಹಲ್ ಹಾಗೂ ಯುವ ಆಟಗಾರ ಕುಲ್ದೀಪ್ ಯಾದವ್ ಅವರ ಶಿಸ್ತುಬದ್ಧ ದಾಳಿ ಅದ್ಭುತವಾಗಿತ್ತು. ಹೀಗಾಗಿ ಬ್ಯಾಟಿಂಗ್, ವೇಗ ಹಾಗೂ ಸ್ಪಿನ್ ಎಲ್ಲಾ ವಿಭಾಗಗಳಲ್ಲೂ ಟೀಂ ಇಂಡಿಯಾದಲ್ಲಿ ಆಟಗಾರರ ನಡುವೆ ಪೈಪೋಟಿ ಇರುವುದು ತಂಡ ಈ ರೀತಿ ಅತ್ಯುತ್ತಮ ಪ್ರದರ್ಶನ ನೀಡಲು ಕಾರಣವಾಗಿದೆ.

Leave a Reply