‘ಜಾಗತಿಕ ಒತ್ತಡಕ್ಕೆ ದೇಶದ ಭದ್ರತೆ ವಿಷಯದಲ್ಲಿ ರಾಜಿ ಇಲ್ಲ…’ ರೊಹಿಂಗ್ಯ ವಿಚಾರದಲ್ಲಿ ಮ್ಯಾನ್ಮಾರ್ ನಾಯಕಿ ಸೂಕಿ ನಿರ್ಧಾರ ಏನು?

ಡಿಜಿಟಲ್ ಕನ್ನಡ ಟೀಮ್:

‘ರೊಹಿಂಗ್ಯ ಮುಸಲ್ಮಾನರ ಕುರಿತಾಗಿ ಜಗತ್ತಿನ ಯಾವುದೇ ರಾಷ್ಟ್ರ ಏನೇ ಅಭಿಪ್ರಾಯ ಹೊಂದಿರಲಿ, ನಮಗೆ ನಮ್ಮ ದೇಶದ ಭದ್ರತೆಯೇ ಮೊದಲ ಆದ್ಯತೆ…’ ಇದು ಮ್ಯಾನ್ಮಾರಿನ ನಾಯಕಿ ಆಂಗ್ ಸಾನ್ ಸೂಕಿ ಜಗತ್ತಿಗೆ ಸಾರಿರುವ ಸಂದೇಶ.

ದೇಶದ ಭದ್ರತೆಯ ಕಾರಣದಿಂದ ಅಕ್ರಮವಾಗಿ ನೆಲೆಸಿರುವ ಹಾಗೂ ಭಯೋತ್ಪಾದಕರ ಜತೆ ಸಂಪರ್ಕ ಹೊಂದಿರು ರೊಹಿಂಗ್ಯ ಮುಸಲ್ಮಾನರನ್ನು ಮ್ಯಾನ್ಮಾರ್ ಸರ್ಕಾರ ದೇಶದಿಂದ ಹೊರದಬ್ಬಲು ನಿರ್ಧರಿಸಿತು. ಅದರ ಬೆನ್ನಲ್ಲೆ ಕಳೆದ ತಿಂಗಳು ನಡೆದ ಹಿಂಸಾಚಾರದಲ್ಲಿ ನೂರಾರು ಮಂದಿ ಬಲಿಯಾಗಿದ್ದರು. ಪರಿಣಾಮ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚಿನ ರೊಹಿಂಗ್ಯ ಮುಸಲ್ಮಾನರು ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದರು.

ಈ ಎಲ್ಲ ಬೆಳವಣಿಗೆಗಳಿಂದ ಮ್ಯಾನ್ಮಾರ್ ಜನಾಂಗೀಯ ನಿಂದನೆಯ ಕಳಂಕ ಹೊತ್ತುಕೊಂಡು ಜಾಗತಿಕ ಮಟ್ಟದಲ್ಲಿ ಕೆಟ್ಟದಾಗಿ ಬಿಂಬಿತವಾಗಿದೆ. ಮ್ಯಾನ್ಮಾರಿನ ನಿರ್ಧಾರವನ್ನು ವಿಶ್ವ ಅನೇಕ ರಾಷ್ಟ್ರಗಳು ಪ್ರಶ್ನಿಸಿದ್ದು, ಮಾನವ ಹಕ್ಕು ಉಲ್ಲಂಘನೆಯ ಆರೋಪ ಮಾಡುತ್ತಿದೆ. ಅಲ್ಲದೆ ಮ್ಯಾನ್ಮಾರಿನ ಈ ನಿರ್ಧಾರ ಬದಲಿಸಿಕೊಳ್ಳುವಂತೆ ಒತ್ತಡ ಹೇರುವ ಪ್ರಯತ್ನವೂ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಮ್ಯಾನ್ಮಾರ್ ನಾಯಕಿ ಸೂಕಿ ತಮ್ಮ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ವಿಶ್ವಸಂಸ್ಥೆಯಲ್ಲೂ ಈ ವಿಚಾರ ಪ್ರಸ್ತಾಪವಾಗಿದ್ದು, ನಿರಾಶ್ರಿತರ ಸಮಸ್ಯೆಗೆ ಸ್ಪಂದಿಸಿ ದೇಶದಿಂದ ಹೊರದಬ್ಬಲಾಗಿರುವ ರೊಹಿಂಗ್ಯಮುಸಲ್ಮಾನರಿಗೆ ಮತ್ತೆ ದೇಶದೊಳಗೆ ಸೇರಿಸಿಕೊಳ್ಳುವಂತೆ ಒತ್ತಡ ಹೇರಲಾಗಿದೆ. ಅಲ್ಲದೆ ಮ್ಯಾನ್ಮಾರ್ ಸೇನೆ ರೊಹಿಂಗ್ಯ ಮುಸಲ್ಮಾನರ ಹಳ್ಳಿಗಳಿಗೆ ನುಗ್ಗಿ ಅವರ ಮೇಲೆ ದೌರ್ಜನ್ಯ ನಡೆಸಿದೆ ಎಂಬ ಆರೋಪವನ್ನು ಮಾಡಲಾಗಿದೆ. ಈ ಬಗ್ಗೆ ಮಂಗಳವಾರ ಟಿವಿ ಮಾಧ್ಯಮಗಳ ಸಂದರ್ಶನದಲ್ಲಿ ಮಾತನಾಡಿದ ಸೂಕಿ ಈ ವಿಚಾರದಲ್ಲಿ ಮ್ಯಾನ್ಮಾರ್ ದೇಶವನ್ನು ಟೀಕಿಸುತ್ತಿರುವವರಿಗೆ ಉತ್ತರಿಸಿದ್ದಾರೆ. ಅವರು ಸಂದರ್ಶನದಲ್ಲಿ ಹೇಳಿದಿಷ್ಟು…

‘ಭಯ ಹಾಗೂ ದ್ವೇಷ ಸದ್ಯ ಜಗತ್ತನೇ ಕಾಡುತ್ತಿರುವ ಸಮಸ್ಯೆ. ನಮ್ಮ ಮ್ಯಾನ್ಮಾರ್ ದೇಶಕ್ಕೆ ಅದರದೇ ಆದ ವೈವಿದ್ಯತೆಯ ಗುರುತಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶ ಧಾರ್ಮಿಕ ನಂಬಿಕೆಯ ವಿಚಾರದಿಂದ ಒಡೆಯುವುದು ಬೇಡ. 4 ಲಕ್ಷ ರೊಹಿಂಗ್ಯ ಮುಸಲ್ಮಾನರು ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದಾರೆ. ಜನಾಂಗೀಯ ಸಮಸ್ಯೆಯಿಂದ ನಮ್ಮ ರಾಷ್ಟ್ರಕ್ಕೆ ಕೆಟ್ಟ ಹೆಸರು ತಂದಿದ್ದಾರೆ.

ರಾಖೈನ್ ರಾಜ್ಯದಲ್ಲಿ ನಡೆದ ಹಿಂಸಾಚಾರದಲ್ಲಿ ತೊಂದರೆ ಅನುಭವಿಸಿದವರ ಬಗ್ಗೆ ನನಗೆ ದುಃಖವಿದೆ. ಕಳೆದ ತಿಂಗಳು ಸಂಭವಿಸಿದ ಹಿಂಸಾಚಾರದಿಂದ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ 4.10 ಲಕ್ಷ ರೊಹಿಂಗ್ಯ ಮುಸಲ್ಮಾನರ ಸ್ಥಿತಿಗತಿ ಪರಿಶೀಲಿಸಲು ಮ್ಯಾನ್ಮಾರ್ ಸದಾ ಸಿದ್ಧವಿದೆ. ನಮ್ಮ ದೇಶ ಜನಾಂಗೀಯ ದ್ವೇಷ ಹಾಗೂ ಧಾರ್ಮಿಕ ನಂಬಿಕೆ ಗಳ ವಿಷಯವಾಗಿ ದೇಶದ ಭದ್ರತೆಗೆ ಮಾರಕವಾಗುವುದನ್ನು ನಾವು ಸಹಿಸುವುದಿಲ್ಲ.

ನಮ್ಮ ಸೇನೆಯು ಭಯೋತ್ಪಾದಕ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದ ರೊಹಿಂಗ್ಯ ಮುಸಲ್ಮಾನರನ್ನು ದೇಶದಿಂದ ಹೊರದಬ್ಬುವುದಾಗಿ ಹೇಳಲಾಗಿತ್ತೇ ಹೊರತು, ಇಡೀ ರೊಹಿಂಗ್ಯ ಸಮುದಾಯವನ್ನೇ ಹೊರದಬ್ಬುತ್ತೇವೆ ಎಂದು ಹೇಳಿರಲಿಲ್ಲ. ರೊಹಿಂಗ್ಯ ಮುಸಲ್ಮಾನರು ಲಕ್ಷಾಂತರ ಸಂಖ್ಯೆಯಲ್ಲಿ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿ ದೇಶಕ್ಕೆ ಕೆಟ್ಟ ಹೆಸರು ತಂದಿದ್ದಾರೆ.’

ಅಂದಹಾಗೆ ಈ ಹಿಂಸಾಚಾರದಿಂದ ಕೇವಲ ರೊಹಿಂಗ್ಯ ಮುಸಲ್ಮಾನರು ಮಾತ್ರ ದೇಶ ಬಿಟ್ಟು ಪಲಾಯನ ಮಾಡಿಲ್ಲ. ಅವರ ಜತೆಗೆ 30 ಸಾವಿರಕ್ಕೂ ಹೆಚ್ಚು ಮಂದಿ ರಾಖೈನ್ ಬೌದ್ಧರು ಹಾಗೂ ಹಿಂದೂಗಳು ಕೂಡ ಪಲಾಯನ ಮಾಡಿದ್ದಾರೆ. ಆದರೆ ವಿಶ್ವಮಟ್ಟದಲ್ಲಿ ಕೇವಲ ರೊಹಿಂಗ್ಯ ಮುಸಲ್ಮಾನರ ಪಲಾಯನವಷ್ಟೇ ಹೆಚ್ಚು ಪ್ರಚಾರ ಪಡೆಯುತ್ತಿದೆ.

Leave a Reply