ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಮೇಲೆ ಹೆಚ್ಚುತ್ತಿದೆ ಒತ್ತಡ, ಭಾರತ ರಣತಂತ್ರ ಹೇಗಿದೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಭಯೋತ್ಪಾದನೆಗೆ ಪರೋಕ್ಷ ಪ್ರೋತ್ಸಾಹ ನೀಡುತ್ತಿರುವ ಪಾಕಿಸ್ತಾನ ವಿರುದ್ಧ ಜಾಗತಿಕ ಮಟ್ಟದಲ್ಲಿ ಒತ್ತಡ ಹೇರಲು ಇರುವ ಎಲ್ಲ ಅವಕಾಶಗಳನ್ನು ಭಾರತ ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದೆ. ಅತ್ತ ಅಮೆರಿಕ ಭಯೋತ್ಪಾದಕರ ವಿಚಾರದಲ್ಲಿ ಮೃದು ಧೋರಣೆ ಅನುಸರಿಸುತ್ತಿರುವ ಪಾಕಿಸ್ತಾನ ವಿರುದ್ಧ ಕಠಿಣ ನಿಲುವು ತಾಳುತ್ತಿದ್ದರೆ, ವಿಶ್ವಸಂಸ್ಥೆಯ ಸಭೆಯಲ್ಲಿ ಭಾರತದ ಪ್ರತಿನಿಧಿಗಳು ಪಾಕಿಸ್ತಾನ ಭಯೋತ್ಪಾದಕರ ಆಶ್ರಯ ತಾಣ ಎಂದು ಮತ್ತೆ ವಾದ ಮಂಡಿಸಿದ್ದಾರೆ. ಇವುಗಳ ಜತೆಗೆ ವಿಶ್ವಸಂಸ್ಥೆ ವಾರ್ಷಿಕ ಮಹಾ ಸಭೆಯಲ್ಲಿ ಭಾಗವಹಿಸಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ‘ಉತ್ತರ ಕೊರಿಯಾದ ಅಣ್ವಸ್ತ್ರ ಪ್ರಸರಣಕ್ಕೂ ಪಾಕಿಸ್ತಾನಕ್ಕೂ ಸಂಬಂಧವಿದ್ದು, ಈ ಬಗ್ಗೆ ತನಿಖೆಯಾಗಬೇಕು’ ಎಂದು ಆಗ್ರಹಿಸಿದ್ದಾರೆ.

ವಿಶ್ವಸಂಸ್ಥೆಯ ವಾರ್ಷಿಕ ಮಹಾಸಭೆಯ ಬೆನ್ನಲ್ಲೇ ನ್ಯೂಯಾರ್ಕ್ ನಲ್ಲಿ ಸುಷ್ಮಾ ಸ್ವರಾಜ್ ಅವರು ಜಪಾನ್ ವಿದೇಶಾಂಗ ಸಚಿವ ತಾರೊ ಕೊನೊ ಹಾಗೂ ಅಮೆರಿಕದ ರಾಜ್ಯ ಕಾರ್ಯದರ್ಶಿ ರೆಕ್ಸ್ ಟಿಲ್ಲೆರ್ಸನ್ ಅವರೊಂದಿಗೆ ನಡೆದ ತ್ರಿಪಕ್ಷಿಯ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಸುಷ್ಮಾ ಸ್ವರಾಜ್ ‘ಉತ್ತರ ಕೊರಿಯಾದ ಇತ್ತೀಚಿನ ನಡೆಗಳಿಗೆ ಆ ದೇಶದ ಜತೆ ಅಣ್ವಸ್ತ್ರ ಪ್ರಸರಣ ಸಂಪರ್ಕ ಹೊಂದಿರುವ ರಾಷ್ಟ್ರಗಳೇ ಜವಾಬ್ದಾರರಾಗುತ್ತವೆ’ ಎಂದು ಪರೋಕ್ಷವಾಗಿ ಪಾಕಿಸ್ತಾನದ ವಿಷಯ ಪ್ರಸ್ತಾಪಿಸಿದ್ದಾರೆ. ಅಲ್ಲದೆ ಪಾಕಿಸ್ತಾನ ಉಗ್ರರಿಗೆ ಆಶ್ರಯ ತಾಣ ಎಂಬುದನ್ನು ಮತ್ತೆ ಸಾರಿದ್ದಾರೆ. ಈ ಸಭೆಯ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಹೇಳಿದಿಷ್ಟು…

‘ನಾವು ನೀಡಿರುವ ದಾಖಲೆಗಳಲ್ಲಿ ಯಾವ ದೇಶದ ಕುರಿತು ಮಾತನಾಡುತ್ತಿದ್ದೇವೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಉತ್ತರ ಕೊರಿಯಾ ಜತೆಗೆ ಅಣ್ವಸ್ತ್ರ ಪ್ರಸರಣ ಸಂಪರ್ಕ ಹೊಂದಿರುವವರೆ ಪ್ರಸ್ತುತ ಪರಿಸ್ಥಿತಿಗೆ ಜವಾಬ್ದಾರರಾಗುತ್ತಾರೆ. ಹೀಗಾಗಿ ಉತ್ತರ ಕೊರಿಯಾಗೆ ಅಣ್ವಸ್ತ್ರ ವಿಷಯದಲ್ಲಿ ನೆರವಾಗುತ್ತಿರುವ ರಾಷ್ಟ್ರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸುಷ್ಮಾ ಸ್ವರಾಜ್ ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.’

ಇನ್ನು ಅಮೆರಿಕ ಪಾಕಿಸ್ತಾನದ ವಿರುದ್ಧ ಕಠಿಣ ನಿಲುವು ತಾಳುತ್ತಿದ್ದು, ಇದರ ಹಿಂದೆಯೂ ಭಾರತದ ರಾಜತಾಂತ್ರಿಕತೆ ಪರೋಕ್ಷವಾಗಿ ಕೆಲಸ ಮಾಡಿದೆ. ಅಫ್ಘಾನಿಸ್ತಾನ ಹಾಗೂ ಭಾರತ ಸೇರಿದಂತೆ ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಭಯೋತ್ಪಾದಕರ ದಾಳಿಗೆ ಆಶ್ರಯ ತಾಣವಾಗಿರುವ ಪಾಕಿಸ್ತಾನವನ್ನು ಡೊನಾಲ್ಡ್ ಟ್ರಂಪ್ ಟೀಕಿಸಿದ್ದು, ದಕ್ಷಿಣ ಏಷ್ಯಾ ಕುರಿತಾದ ನೂತನ ನೀತಿಯನ್ನು ರೂಪಿಸಿದ್ದಾರೆ. ಇದರಲ್ಲಿ ಅಮೆರಿಕದ ನ್ಯಾಟೊಯೇತ್ತರ ರಾಷ್ಟ್ರವಾಗಿ ಪಾಕಿಸ್ತಾನಕ್ಕೆ ನೀಡಲಾಗುತ್ತಿದ್ದ ಮಿಲಿಟರಿ ಹಾಗೂ ಆರ್ಥಿಕ ನೆರವಿಗೆ ಕತ್ತರಿ ಹಾಕುತ್ತಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಸಹ ಅಮೆರಿಕ ಜತೆಗಿನ ರಾಜತಾಂತ್ರಿಕ ನೀತಿಯಲ್ಲಿ ಕಠಿಣ ನಿಲುವು ತಾಳುವುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ವಿಶ್ವಸಂಸ್ಥೆಯ 36ನೇ ಮಾನವ ಹಕ್ಕು ಸಮಿತಿ ಸಭೆಯಲ್ಲಿ ಮಾತನಾಡಿರುವ ಭಾರತೀಯ ವಿದೇಶಾಂಗ ಅಧಿಕಾರಿ ವಿಷ್ಣು ರೆಡ್ಡಿ, ‘ಭಯೋತ್ಪಾದನಾ ಚಟುವಟಿಕೆಗಳಿಗೆ ಅಂತ್ಯವಾಗಬೇಕಾದರೆ ಭಯೋತ್ಪಾದಕ ಉತ್ಪಾದನಾ ಘಟಕವಾಗಿರುವ ಪಾಕಿಸ್ತಾನವನ್ನು ನಿಯಂತ್ರಿಸಬೇಕು.  ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಷೇಧಕ್ಕೊಳಗಾಗಿರುವ ಲಷ್ಕರ್, ಜೈಶ್ ಎ ಮೊಹಮದ್ ನಂತಹ ಸಂಘಟನೆಗಳು ತಮ್ಮ ನೆಲದಿಂದಲೇ ಕಾರ್ಯಾಚರಣೆ ನಡೆಸುತ್ತಿರುವುದನ್ನು, ಪಾಕಿಸ್ತಾನದ ವಿದೇಶಾಂಗ ಸಚಿವರೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ಪಾಕಿಸ್ತಾನ ತನ್ನ ನೆಲದಲ್ಲಿರುವ ಉಗ್ರ ಸಂಘಟನೆಗಳ ವಿರುದ್ಧ ಹೋರಾಡಿ ವಿಶ್ವಕ್ಕೆ ನ್ಯಾಯ ಒದಗಿಸಬೇಕು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಈ ಪ್ರದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಉತ್ತೇಜನ ನೀಡುವುದನ್ನು ಪಾಕಿಸ್ತಾನ ನಿಲ್ಲಿಸಬೇಕು’ ಎಂದು ಟೀಕೆ ಮಾಡಿದ್ದಾರೆ.

ಈ ಮಧ್ಯೆ ಪಾಕಿಸ್ತಾನ ಹಾಗೂ ಭಾರತಕ್ಕೆ ಸಂಬಂಧಿಸಿದ ಮತ್ತೊಂದು ಬೆಳವಣಿಗೆಯಲ್ಲಿ ಭಾರತೀಯ ಮಹಿಳಾ ಸೇನಾಧಿಕಾರಿಗೆ ಬೆದರಿಕೆ ಹಾಕಿ ರಹಸ್ಯ ದಾಖಲೆಗಳನ್ನು ನೀಡುವಂತೆ ಆಗ್ರಹಿಸಿದ್ದ ಪಾಕಿಸ್ತಾನ ಬೇಹುಗಾರಿಕಾ ಸಂಸ್ಥೆ ಐಎಸ್ಐ ಏಜೆಂಟನನ್ನು ನವದೆಹಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಮೊಹಮದ್ ಪರ್ವೇಜ್ ಎಂಬಾತ ಮಹಿಳಾ ಕರ್ನಲ್ ಅವರಿಗೆ ಭಾರತಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನು ನೀಡುವಂತೆ ಪೀಡಿಸುತ್ತಿದ್ದ. ಒಂದು ವೇಳೆ ಆ ದಾಖಲೆ ನೀಡದಿದ್ದರೆ ಅವರ ಚಿತ್ರವನ್ನು ತಿರುಚಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸಿದ್ದ ಎಂದು ಆರೋಪಿಸಲಾಗಿದೆ. ಈ ಬೇದರಿಕೆ ಕುರಿತಾಗಿ ಸೆ.13ರಂದು ಮಹಿಳಾ ಕರ್ನಲ್ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸ್ ವಿಶೇಷ ದಳ ಶಂಕಿತ ಏಜೆಂಟನನ್ನು ಬಂಧಿಸಿದ್ದಾರೆ.

Leave a Reply