ಸುಲಿಗೆ ಪ್ರಕರಣದಲ್ಲಿ ದಾವುದ್ ಸಹೋದರ ಇಕ್ಬಾಲ್ ಬಂಧನ, ಇದರಲ್ಲೂ ಇದೆಯೇ ಭೂಗತ ಪಾತಕಿಯ ಕೈವಾಡ?

ಡಿಜಿಟಲ್ ಕನ್ನಡ ಟೀಮ್:

ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ದಾವುದ್ ಇಬ್ರಾಹಿಂನ ಸಹೋದರ ಇಕ್ಬಾಲ್ ಕಸ್ಕರ್ ನನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಮುಂಬೈನ ಥಾಣೆ ಪ್ರದೇಶ ಮೂಲದ ಉದ್ಯಮಿಯೊಬ್ಬರಿಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡುವ ಪ್ರಯತ್ನ ನಡೆಸಿರುವುದಾಗಿ ಇಕ್ಬಾಲ್ ವಿರುದ್ಧ ಆರೋಪ ಕೇಳಿಬಂದಿದೆ. ಬೆದರಿಕೆ ವಿಚಾರವಾಗಿ ಉದ್ಯಮಿ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಎನ್ ಕೌಂಟರ್ ಸ್ಪೆಷಲಿಸ್ಟ್ ಮತ್ತು ಸುಲಿಗೆ ನಿಗ್ರಹ ದಳದ ಹಿರಿಯ ಅಧಿಕಾರಿ ಪ್ರದೀಪ್ ಶರ್ಮಾ ಅವರ ನೇತೃತ್ವದ ತಂಡ ನಿನ್ನೆ ತಡರಾತ್ರಿ ನಾಗಪಾದ್ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಿತು. ಈ ವೇಳೆ ಇಕ್ಬಾಲ್ ಕಸ್ಕರ್ ನನ್ನು ಆತನ ನಿವಾಸದಲ್ಲೇ ಬಂಧಿಸಿದ್ದು, ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಇಕ್ಬಾಲ್ ಕಸ್ಕರ್ 2003ರಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಎಇ ದೇಶದಿಂದ ಗಡಿಪಾರಾಗಿದ್ದ. ನಂತರ ಮುಂಬೈಗೆ ಆಗಮಿಸಿದ್ದ ಕಸ್ಕರ್ ಕಾನೂನು ಹೋರಾಟದ ಮೂಲಕ 2007ರಲ್ಲಿ ತನ್ನ ವಿರುದ್ಧದ ಆರೋಪಗಳಿಂದ ಹೊರಬಂದಿದ್ದ.

ಅಲ್ಲದೆ ಈ ಪ್ರಕರಣದಲ್ಲಿ ಭೂಗತ ಪಾತಕಿ ದಾವುದ್ ಇಬ್ರಾಹಿಂ ಕೈವಾಡವಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave a Reply