ಬಿಬಿಎಂಪಿ ಮೇಯರ್ ಆಯ್ಕೆ ವಿಚಾರ: ಕಾಂಗ್ರೆಸ್ ನಾಯಕರ ವಿರುದ್ಧವೇ ಗುಡುಗಿದ ಡಿ.ಕೆ ಸುರೇಶ್

ಡಿಜಿಟಲ್ ಕನ್ನಡ ಟೀಮ್:

ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ನಲ್ಲಿ ಅಪಸ್ವರ ದಟ್ಟವಾಗಿ ಕೇಳಿಬರುತ್ತಿದೆ. ಮೇಯರ್ ಆಯ್ಕೆ ವಿಚಾರವಾಗಿ ತನ್ನನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಆರೋಪಿಸಿರುವ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್, ತಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುವ ಅಭ್ಯರ್ಥಿಯನ್ನೇ ಮೇಯರ್ ಆಗಿ ಆಯ್ಕೆ ಮಾಡಬೇಕು ಎಂದು ತಮ್ಮ ಪಕ್ಷದ ನಾಯಕರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ಇದೇ ತಿಂಗಳು 28ರಂದು ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಚುನಾವಣೆ ನಡೆಯಲಿದ್ದು, ಈ ವಿಚಾರವಾಗಿ ಕಾಂಗ್ರೆಸ್ ನಲ್ಲಿನ ಭಿನ್ನಮತವನ್ನು ಸುರೇಶ್ ಬಹಿರಂಗಗೊಳಿಸಿದ್ದಾರೆ. ಈಗಾಗಲೇ ಈ ಬಾರಿ ಮೇಯರ್ ಪಟ್ಟವನ್ನು ತಮ್ಮ ಅಭ್ಯರ್ಥಿಗೆ ನೀಡಬೇಕು ಎಂದು ಜೆಡಿಎಸ್ ಪಟ್ಟು ಹಿಡಿಯುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಪ್ರಮುಖ ನಾಯಕರು ದೇವೇಗೌಡರನ್ನು ನಿರಂತರ ಸಂಪರ್ಕದಲ್ಲಿಟ್ಟುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ತಮ್ಮದೇ ಪಕ್ಷದ ನಾಯಕ ಡಿ.ಕೆ ಸುರೇಶ್ ಈ ವಿಚಾರವಾಗಿ ಬಹಿರಂಗವಾಗಿ ಆಗ್ರಹ ಮಾಡಿರುವುದು ಕಾಂಗ್ರೆಸ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಈ ವಿಚಾರವಾಗಿ ತಮ್ಮಲ್ಲಿರುವ ಅಸಮಾಧಾನವನ್ನು ಸುದ್ದಿಗೋಷ್ಠಿಯ ಮೂಲಕ ಹೊರ ಹಾಕಿರುವ ಡಿ.ಕೆ ಸುರೇಶ್, ‘ಮೇಯರ್ ಆಯ್ಕೆ ವಿಚಾರವಾಗಿ ಪಕ್ಷದ ನಾಯಕರು ತಮ್ಮನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಈ ಸಂಬಂಧ ನನ್ನ ಜತೆ ಒಂದೇ ಒಂದು ಮಾತನ್ನು ಚರ್ಚಿಸಿಲ್ಲ. ಇದರಿಂದ ತೀವ್ರ ಬೇಸರವಾಗಿದ್ದು, ನನ್ನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳ ಪೈಕಿ ಒಬ್ಬರನ್ನು ಮೇಯರ್ ಸ್ಥಾನದಲ್ಲಿ ಕೂರಿಸಬೇಕು’ ಎಂದು ಆಗ್ರಹಿಸಿದ್ದಾರೆ.

Leave a Reply