ರಾಜ್ಯದ ಕೈತಪ್ಪಲಿದೆ ಕಾವೇರಿ ಮೇಲಿನ ನಿಯಂತ್ರಣ, ಜಲ ನಿರ್ವಹಣಾ ಮಂಡಳಿ ಆಗಬೇಕೆಂಬ ಸುಪ್ರೀಂ ಕೋರ್ಟ್ ನಿರ್ಧಾರದ ಮಹತ್ವವೇನು?

ಡಿಜಿಟಲ್ ಕನ್ನಡ ಟೀಮ್:

ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಕಾವೇರಿ ನದಿ ಹಾಗೂ ಈ ಪಾತ್ರದ ಅಣೆಕಟ್ಟುಗಳ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತಿದೆ. ನದಿ ನೀರಿನ ವಿಚಾರವಾಗಿ ಕರ್ನಾಟಕ ಹಾಗೂ ತಮಿಳುನಾಡು ನಡುವಣ ವ್ಯಾಜ್ಯದ ತನಿಖೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ‘ಕಾವೇರಿ ಜಲ ನಿರ್ವಹಣಾ ಮಂಡಳಿ ರಚನೆ ಆಗಬೇಕು. ಅದನ್ನು ನ್ಯಾಯಾಲಯವೇ ರಚನೆ ಮಾಡಲಿದೆ’ ಎಂದು ತಿಳಿಸಿದ್ದು, ಇದರಿಂದ ಕಾವೇರಿ ನದಿ ವಿಚಾರದಲ್ಲಿ ಕರ್ನಾಟಕಕ್ಕೆ ತೀವ್ರ ಮುಖಭಂಗವಾಗಿದೆ.

‘ಈಗಾಗಲೇ ನರ್ಮದಾ, ಕೃಷ್ಣಾ ನದಿಗೆ ಸಂಬಂಧಿಸಿದಂತೆ ಜಲ ನಿರ್ವಹಣಾ ಮಂಡಳಿ ರಚನೆಯಾಗಿದ್ದು, ಅದರಂತೆ ಕಾವೇರಿ ನದಿಗೂ ಜಲ ನಿರ್ವಹಣಾ ಮಂಡಳಿ ರಚನೆಯಾಗಬೇಕು. ಮುಂದಿನ ತೀರ್ಪಿನಲ್ಲಿ ಈ ನಿರ್ವಹಣಾ ಮಂಡಳಿ ಹೇಗಿರಬೇಕು ಎಂಬುದನ್ನು ನ್ಯಾಯಾಲಯ ತಿಳಿಸಲಿದೆ’ ಎಂದು ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ತಿಳಿಸಿದೆ.

ಈ ಜಲ ನಿರ್ವಹಣಾ ಮಂಡಳಿ ರಚನೆ ಕುರಿತಂತೆ ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಕೇಂದ್ರ ಸರ್ಕಾರ ಸಹ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವ ಅಧಿಕಾರ ನ್ಯಾಯಾಲಯಕ್ಕೆ ಬರುವುದಿಲ್ಲ ಎಂದು ವಾದಿಸಿತ್ತು. ಆದರೆ ಈ ವಾದವನ್ನು ನಿರಾಕರಿಸಿದ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಾಲಯದ ಆದೇಶವನ್ನು ಕೇಂದ್ರ ಸರ್ಕಾರ ಪಾಲಿಸಲೇಬೇಕು ಎಂದಿದೆ.

ಒಂದು ವೇಳೆ ನ್ಯಾಯಾಲಯದ ಆದೇಶದಂತೆ ನಿರ್ವಹಣಾ ಮಂಡಳಿ ಜಾರಿಯಾಗಿದ್ದೇ ಆದರೆ, ಕಾವೇರಿ ನದಿ ಪಾತ್ರದಲ್ಲಿ ಬರುವ ಜಲಾಶಯಗಳಾದ ಕೆಆರ್ ಎಸ್, ಹಾರಂಗಿ, ಕಬಿನಿ ಹಾಗೂ ಹೇಮಾವತಿ ಜಲಾಶಯಗಳು ಸಂಪೂರ್ಣವಾಗಿ ಈ ನಿರ್ವಹಣಾ ಮಂಡಳಿ ನಿಯಂತ್ರಣಕ್ಕೆ ಒಳಪಡಲಿದ್ದು, ಜಲಾಶಯಗಳಲ್ಲಿ ನೀರು ಹರಿಸುವ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿರುವುದಿಲ್ಲ. ಸಂಕಷ್ಟದ ಸಂದರ್ಭಗಳಲ್ಲಿ ರಾಜ್ಯ ಸರ್ಕಾರ ಹಾಗೂ ಜನತೆ ಈ ನಿರ್ವಹಣಾ ಮಂಡಳಿ ಮುಂದೆ ಕೈಚಾಚಬೇಕಾಗುತ್ತದೆ. ಯಾವ ರಾಜ್ಯಕ್ಕೆ ಎಷ್ಟು ನೀರು ಹರಿಸಬೇಕು ಎಂಬುದನ್ನು ನಿರ್ವಹಣಾ ಮಂಡಳಿ ನಿರ್ಧರಿಸಲಿದೆ.

ಇನ್ನು ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದ ಅಂತಿಮ ತೀರ್ಪನ್ನು ಕಾಯ್ದಿರಿಸಿರುವ ನ್ಯಾಯಾಲಯ, 2 ವಾರಗಳ ಒಳಗಾಗಿ ಮಾಹಿತಿ ನೀಡುವಂತೆ ನಾಲ್ಕು ರಾಜ್ಯಗಳಿಗೂ ಸೂಚನೆ ನೀಡಿದೆ.

Leave a Reply