ಪದ್ಮ ಭೂಷಣ ಪ್ರಶಸ್ತಿಗೆ ಮಹಿ ಹೆಸರು ಶಿಫಾರಸ್ಸು! ಧೋನಿಗಿಂತ ಅರ್ಹ ವ್ಯಕ್ತಿ ಬೇರೊಬ್ಬರಿಲ್ಲ ಎಂದು ಬಿಸಿಸಿಐ ಹೇಳಿದ್ದೇಕೆ?

ಡಿಜಿಟಲ್ ಕನ್ನಡ ಟೀಮ್:

ಅತ್ಯುತ್ತಮ ಪ್ರದರ್ಶನದ ಮೂಲಕ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಯಾಗಿರುವುದೇಕೆ ಎಂಬುದನ್ನು ಪದೇ ಪದೇ ಸಾಬೀತುಪಡಿಸುತ್ತಿರುವ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಹೆಸರನ್ನು ಬಿಸಿಸಿಐ ಪದ್ಮ ಭೂಷಣ ಪ್ರಶಸ್ತಿಗೆ ಶಿಫಾರಸ್ಸು ಮಾಡಿದೆ.

ಟೀಂ ಇಂಡಿಯಾವನ್ನು ಟಿ20 ಹಾಗೂ ಏಕದಿನ ಕ್ರಿಕೆಟ್ ನಲ್ಲಿ ವಿಶ್ವ ಚಾಂಪಿಯನ್ ಪಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಧೋನಿ ಅವರ ಕೊಡುಗೆಯನ್ನು ಪರಿಗಣಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಧೋನಿ ಹೆಸರನ್ನು ಪದ್ಮ ಭೂಷಣ ಪ್ರಶಸ್ತಿಗೆ ಶಿಫಾರಸ್ಸು ಮಾಡಿದೆ. ಈಗಾಗಲೇ 2007-08ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದಿರುವ ಧೋನಿ ಹೆಸರನ್ನು ಈಗ ದೇಶದ ಮೂರನೇ ಅತ್ಯುನ್ನತ ನಾಗರೀಕ ಗೌರವಕ್ಕೆ ಶಿಫಾರಸ್ಸು ಮಾಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಅಧಿಕಾರಿಗಳು, ‘ಬಿಸಿಸಿಐ ಮಹೇಂದ್ರ ಸಿಂಗ್ ಧೋನಿ ಅವರ ಹೆಸರನ್ನು ಪದ್ಮಭೂಷಣ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ. ಧೋನಿ ಅವರ ಕೊಡುಗೆ ಬಗ್ಗೆ ಯಾವುದೇ ಅನುಮಾನವಿಲ್ಲ. ಭಾರತ ತಂಡವನ್ನು ಎರಡು ವಿಶ್ವಕಪ್ ಗೆಲ್ಲುವಂತೆ ಮುನ್ನಡೆಸಿದ್ದು, ಏಕದಿನ ಕ್ರಿಕೆಟ್ ನಲ್ಲಿ 300ಕ್ಕೂ ಹೆಚ್ಚು ಹಾಗೂ ಟೆಸ್ಟ್ ನಲ್ಲಿ 90 ಪಂದ್ಯಗಳನ್ನಾಡಿದ್ದಾರೆ. ಹೀಗಾಗಿ ಈ ಪ್ರಶಸ್ತಿಗೆ ಧೋನಿ ಅವರಿಗಿಂತ ಬೇರೊಬ್ಬ ಅಭ್ಯರ್ಥಿ ಬೇರೆ ಇಲ್ಲ’ ಎಂದಿದ್ದಾರೆ.

ಧೋನಿಯ ಹೆಸರನ್ನು ಹೊರತುಪಡಿಸಿ ಉಳಿದ ಯಾವುದೇ ಆಟಗಾರರ ಹೆಸರನ್ನು ಬಿಸಿಸಿಐ ಪದ್ಮ ಪ್ರಶಸ್ತಿಗೆ ಶಿಫಾರಸ್ಸು ಮಾಡಿಲ್ಲ.

36 ವರ್ಷದ ಧೋನಿ ಈವರೆಗೂ ಏಕದಿನ ಕ್ರಿಕೆಟ್ ನಲ್ಲಿ 302 ಪಂದ್ಯಗಳನ್ನಾಡಿದ್ದು, 9737 ರನ್ ದಾಖಲಿಸಿದ್ದಾರೆ. ಇನ್ನು ಟೆಸ್ಟ್ ನಲ್ಲಿ 90 ಪಂದ್ಯಗಳಿಂದ 4876 ರನ್ ಗಳಿಸಿದರೆ, ಟಿ20ಯಲ್ಲಿ 78 ಪಂದ್ಯಗಳಿಂದ 1212 ರನ್ ಗಳಿಸಿದ್ದಾರೆ. ಐಸಿಸಿಯ ಮೂರು ಪ್ರಮುಖ ಸರಣಿಗಳಾದ ಐಸಿಸಿ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಗೆದ್ದ ವಿಶ್ವದ ಮೊದಲ ನಾಯಕ ಎಂಬ ದಾಖಲೆಯನ್ನು ಹೊಂದಿದ್ದಾರೆ. ಅಲ್ಲದೆ ವಿಶ್ವ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸ್ಟಂಪಿಗ್ ಸೇರಿದಂತೆ ಅನೇಕ ದಾಖಲೆಗಳು ಧೋನಿ ಕೊರಳಲ್ಲಿ ರಾರಾಜಿಸುತ್ತಿವೆ. ಈ ಕಾರಣಕ್ಕಾಗಿಯೇ ಬಿಸಿಸಿಐ ಈ ಪ್ರತಿಷ್ಠಿತ ಪುರಸ್ಕಾರಕ್ಕೆ ಧೋನಿಗಿಂತ ಅರ್ಹ ವ್ಯಕ್ತಿ ಬೇರೊಬ್ಬರಿಲ್ಲ ಎಂದಿದೆ.

Leave a Reply