ದೀದಿಯ ನಿರ್ಧಾರ ತಳ್ಳಿಹಾಕಿದ ಕೊಲ್ಕತಾ ಹೈಕೋರ್ಟ್, ಸೆ.30ರಂದು ದುರ್ಗಾ ಮೆರವಣಿಗೆಗೆ ಅವಕಾಶ

ಡಿಜಿಟಲ್ ಕನ್ನಡ ಟೀಮ್:

ಅಕ್ಟೋಬರ್ 01 ರಂದು ಮೊಹರಂ ಆಚರಣೆ ಹಿನ್ನೆಲೆಯಲ್ಲಿ ನವರಾತ್ರಿಯ ಅಂಗವಾಗಿ ಸೆ.30ರಂದು ನಡೆಯುವ ದುರ್ಗಾ ದೇವಿ ಪ್ರತಿಮೆ ಮೆರವಣಿಗೆಯನ್ನು ರಾತ್ರಿ 10ರ ನಂತರ ನಡೆಸುವಂತಿಲ್ಲ ಎಂದು ನಿಷೇಧ ಹೇರಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ತೀವ್ರ ಮುಖಭಂಗವಾಗಿದೆ. ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿರುವ ಕೊಲ್ಕತಾ ಹೈಕೋರ್ಟ್ ಗುರುವಾರ ಈ ನಿರ್ಧಾರವನ್ನು ತೆರವುಗೊಳಿಸಿ ಎಂದಿನಂತೆ ಸೆ.30ರಂದು ಸಹ ದುರ್ಗಾ ಮೆರವಣಿಗೆಗೆ ಅವಕಾಶ ಮಾಡಿಕೊಟ್ಟಿದೆ.

ಹೈಕೋರ್ಟ್ ದುರ್ಗಾ ಮೆರವಣಿಗೆಗೆ ಅವಕಾಶ ಮಾಡಿಕೊಡುವುದರ ಜತೆಗೆ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ‘ರಾಜ್ಯ ಸರ್ಕಾರ ಅಧಿಕಾರದ ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ನೇರವಾಗಿ ಎಚ್ಚರಿಸಿದೆ. ಈ ವಿಚಾರವಾಗಿ ತೀರ್ಪು ನೀಡಿರುವ ಹೈಕೋರ್ಟ್, ‘ನವರಾತ್ರಿಯ ಪ್ರತಿನಿತ್ಯ ಮಧ್ಯರಾತ್ರಿ 12ರವರೆಗೂ ದುರ್ಗಾ ಮೆರವಣಿಗೆಯನ್ನು ಮಾಡಬಹುದು. ಮೊಹರಂ ದಿನವೂ ಸಹ ಈ ಮೆರವಣಿಗೆ ನಡೆಸಲು ಅವಕಾಶವಿದೆ. ಮೊಹರಂ ಆಚರಣೆಯ ದಿನ ದುರ್ಗಾ ಮೆರವಣಿಗೆ ಹಾಗೂ ಮೊಹರಂ ಮೆರವಣಿಗೆಯ ಹಾದಿಯ ಹಾಗೂ ಅಲ್ಲಿನ ಭದ್ರತೆಯನ್ನು ಪೊಲೀಸ್ ಇಲಾಖೆ ನೋಡಿಕೊಳ್ಳಬೇಕು’ ಎಂದು ಸೂಚನೆ ನೀಡಿದೆ. ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ರಾಕೇಶ್ ತಿವಾರಿ ನೇತೃತ್ವದ ಪೀಠ ಹೇಳಿದಿಷ್ಟು…

‘ಅನಗತ್ಯವಾಗಿ ರಾಜ್ಯ ಸರ್ಕಾರ ತನ್ನ ಅಧಿಕಾರವಾನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅಧಿಕಾರ ನಿಮ್ಮ ಕೈಯಲ್ಲಿದೆ ಎಂಬ ಮಾತ್ರಕ್ಕೆ ಮನಬಂದಂತೆ ಆದೇಶ ನೀಡಬಹುದೇ? ಅಚಾತುರ್ಯ ನಡೆಯುವ ಬಗ್ಗೆ ನಿಮಗೆ ಕನಸು ಬಿದ್ದರೆ ಈ ರೀತಿ ನಿಷೇಧದ ನಿರ್ಧಾರವನ್ನು ತೆಗೆದುಕೊಳ್ಳುತ್ತೀರಾ? ಹಿಂದು ಮತ್ತು ಮುಸಲ್ಮಾನರು ಸಮಾಜದಲ್ಲಿ ಸಾಮರಸ್ಯದಿಂದ ಬಾಳಲು ಅವಕಾಶ ಮಾಡಿಕೊಡಿ. ಅದನ್ನು ಬಿಟ್ಟು ಎರಡು ಧರ್ಮದ ನಡುವೆ ಅಂತರದ ಗೋಡೆ ನಿರ್ಮಿಸಬೇಡಿ.’

Leave a Reply