ಗಾಂಧಿ, ಅಂಬೇಡ್ಕರ್, ನೆಹರು ಹೆಸರೇಳುತ್ತಾ ಅನಿವಾಸಿ ಭಾರತೀಯರ ಮನ ಓಲೈಸುತ್ತಿದ್ದಾರೆ ರಾಹುಲ್ ಗಾಂಧಿ

ಡಿಜಿಟಲ್ ಕನ್ನಡ ಟೀಮ್:

ಸದ್ಯ ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತಮ್ಮ ಮಾತುಗಳಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಭಾರತದಲ್ಲಿನ ವಂಶಪಾರಂಪರಿಕ ಅಧಿಕಾರ ಕುರಿತು ಸಮರ್ಥನೆ ಮಾಡಿಕೊಂಡು, ಮೋದಿ ಸರ್ಕಾರವನ್ನು ಟೀಕಿಸಿದ್ದರು. ಆದರೆ ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವೇರ್ ನ ಸಮಾರಂಭದಲ್ಲಿ ಮಾತನಾಡಿರುವ ರಾಹುಲ್ ಗಾಂಧಿ ಅನಿವಾಸಿ ಭಾರತೀಯರ ಮನ ಗೆಲ್ಲುವ ಪ್ರಯತ್ನ ನಡೆಸಿದ್ದಾರೆ.

ಭಾರತದ ದಿಕ್ಕನ್ನು ಬದಲಿಸಿದ ಮಹಾತ್ಮ ಗಾಂಧಿ, ಜವಹಾರ್ ಲಾಲ್ ನೆಹರು ಹಾಗೂ ಅಂಬೇಡ್ಕರ್ ಅವರು ಸಹ ಅನಿವಾಸಿ ಭಾರತೀಯರೇ ಎಂದು ಉದಾಹರಿಸುವ ಮೂಲಕ ದೇಶದ ಅಭಿವೃದ್ಧಿಗೆ ಅನಿವಾಸಿ ಭಾರತೀಯರ ಕೊಡುಗೆ ಪ್ರಮುಖವಾಗಲಿದೆ ಎಂದು ಕರೆ ನೀಡಿದ್ದಾರೆ. ತಮ್ಮ ಎರಡು ವಾರಗಳ ಅಮೆರಿಕ ಪ್ರವಾಸದಲ್ಲಿ ರಾಹುಲ್ ಗಾಂಧಿ ವಿವಿದ ಕಡೆಗಳಲ್ಲಿ ತಮ್ಮ ಭಾಷಣ ಮಾಡಿದ್ದು, ಬುಧವಾರ ಈ ಪ್ರವಾಸ ಅಂತಿಮ ಘಟ್ಟಕ್ಕೆ ತಲುಪಿತು. ಈ ವೇಳೆ ಮಾತನಾಡಿದ ಅವರು ಹೇಳಿದಿಷ್ಟು….

‘ಭಾರತದಲ್ಲಿ ಆರಂಭವಾದ ಮೊದಲ ಕಾಂಗ್ರೆಸ್ ಚಳುವಳಿಯು ಅನಿವಾಸಿ ಭಾರತೀಯರ ಚಳುವಳಿಯಾಗಿತ್ತು. ಮಹಾತ್ಮ ಗಾಂಧಿ ಅವರು ಅನಿವಾಸಿ ಭಾರತೀಯರಾಗಿದ್ದರು. ಜವಹಾರ್ ಲಾಲ್ ನೆಹರು ಇಂಗ್ಲೆಂಡ್ ನಿಂದ ವಾಪಸ್ಸಾಗಿದ್ದರು. ಬಿ.ಆರ್ ಅಂಬೇಡ್ಕರ್, ಎಕೆ ಅಜಾದ್, ಸರ್ದಾರ್ ಪಟೇಲ್ ಎಲ್ಲರೂ ಅನಿವಾಸಿ ಭಾರತೀಯರಾಗಿದ್ದರು.

ಈ ಎಲ್ಲ ಮಹಾನ್ ವ್ಯಕ್ತಿಗಳು ಭಾರತದಿಂದ ವಿದೇಶಗಳಿಗೆ ತೆರಳಿ ಅಲ್ಲಿನ ಪರಿಸ್ಥಿತಿಯನ್ನು ಕಂಡು ಮತ್ತೆ ಭಾರತಕ್ಕೆ ಮರಳಿ ತಮ್ಮ ಆಲೋಚನೆಗಳನ್ನು ಜಾರಿಗೊಳಿಸುವ ಮೂಲಕ ಭಾರತವನ್ನು ಬದಲಾಯಿಸಿದರು. ಭಾರತದಲ್ಲಿ ಶ್ವೇತ ಕ್ರಾಂತಿ ಪಿತಾಮಹಾ ವರ್ಗೀಸ್ ಕುರಿಯನ್ ಅವರು ಸಹ ಅನಿವಾಸಿ ಭಾರತೀಯರೇ.

ಇದೇ ಮಾದರಿಯಲ್ಲಿ ಅನಿವಾಸಿ ಭಾರತೀಯರಾಗಿರುವ ನೀವು ಸಹ ಅತ್ಯಂತ ಹಳೇಯ ಪಕ್ಷವಾಗಿರುವ ಕಾಂಗ್ರೆಸ್ ಜತೆ ಕೈಜೋಡಿಸಬೇಕು ಎಂದು ಕರೆ ನೀಡುತ್ತೇನೆ. ನಿಮ್ಮೆಲ್ಲರಿಗೂ ಅಪಾರ ಜ್ಞಾನವಿದೆ. ಹೀಗಾಗಿ ಭಾರತವನ್ನು ಮುನ್ನಡೆಸುವ ವಿಷಯದಲ್ಲಿ ನಮ್ಮೆಲ್ಲರ ಗುರಿಯನ್ನು ಚರ್ಚಿಸಿ ನಿಮ್ಮ ಸಲಹೆಗಳನ್ನು ಪಡೆಯಲು ಇಚ್ಛಿಸುತ್ತೇವೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಜತೆ ನೀವು ಕೈಜೋಡಿಸಬೇಕು ಎಂದು ಆಹ್ವಾನ ನೀಡುತ್ತೇನೆ.

ಎಲ್ಲೆಲ್ಲೂ ಅನಿವಾಸಿ ಭಾರತೀಯರಿದ್ದಾರೆ. ಅಮೆರಿಕದ ಜತೆಗೆ ಭಾರತವನ್ನು ಭಾರತೀಯ ಬೆಳೆಸುತ್ತಿದ್ದಾನೆ. ಒಡೆದು ಆಳುವ ರಾಜಕೀಯ ದೇಶದ ಗೌರವವನ್ನು ಜಾಗತಿಕ ಮಟ್ಟದಲ್ಲಿ ಹರಾಜಾಕುತ್ತಿದೆ. ದೇಶ ಅನೇಕ ವಿಚಾರದಲ್ಲಿ ವಿಭಜನೆಯಾಗುತ್ತಿರುವ ಸಂದರ್ಭದಲ್ಲಿ ಅನಿವಾಸಿ ಭಾರತೀಯರು ಈ ಹಿಂದಿನ ಮಹಾನ್ ನಾಯಕರಂತೆ ಒಟ್ಟಾಗಿ ನಿಲ್ಲಬೇಕು. (ಕೇಂದ್ರ ಸರ್ಕಾರವನ್ನು ಪರೋಕ್ಷವಾಗಿ ಟೀಕಿಸುತ್ತಾ)’

ಇದರೊಂದಿಗೆ ರಾಹುಲ್ ಗಾಂಧಿ ಅನಿವಾಸಿ ಭಾರತೀಯರ ಮನವೊಲೈಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವಂತೆ ಸಂದೇಶ ರವಾನಿಸಿರುವುದು ಸ್ಪಷ್ಟವಾಗಿದೆ.

Leave a Reply