ಕಾಂಗ್ರೆಸ್ ಟೀಕಿಸಿದ ಶಾಸಕ ರಾಜಣ್ಣನ ಬೆಂಬಲಕ್ಕೆ ನಿಂತ ಸಚಿವ ರಮೇಶ್ ಕುಮಾರ್, ಕೈ ಪಾಳೆಯದಲ್ಲಿ ಎಲ್ಲವೂ ಸರಿಯಿಲ್ಲ!

ಡಿಜಿಟಲ್ ಕನ್ನಡ ಟೀಮ್:

ಸದ್ಯ ರಾಜ್ಯ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಅನುಮಾನ ದಿನೇ ದಿನೇ ದಟ್ಟವಾಗುತ್ತಿದೆ. ಇದಕ್ಕೆ ಕಳೆದ ಕೆಲ ದಿನಗಳಲ್ಲಿ ನಡೆದ ಅನೇಕ ಬೆಳವಣಿಗೆಗಳು ಸಾಕ್ಷಿಯಾಗಿವೆ. ಬಿಬಿಎಂಪಿ ಮೇಯರ್ ವಿಚಾರದಲ್ಲಿ ಪಕ್ಷದ ನಾಯಕರನ್ನು ಸಂಸದ ಡಿ.ಕೆ ಸುರೇಶ್ ಸುದ್ದಿಗೋಷ್ಠಿ ಮೂಲಕ ಟೀಕಿಸಿದ್ದು, ನಂತರ ಶಾಸಕ ರಾಜಣ್ಣ ಕಾಂಗ್ರೆಸ್ ಪಕ್ಷ ಕಳ್ಳರ ಪಕ್ಷ ಎಂದು ಟೀಕಿಸಿದ್ದರು. ಈಗ ರಾಜಣ್ಣ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಆರೋಗ್ಯ ಸಚಿವ ರಮೇಶ್ ಕುಮಾರ್ ಬಿಜೆಪಿ ಸೇರಿರುವ ಎಸ್.ಎಂ ಕೃಷ್ಣ ಅವರ ಪರ ಬ್ಯಾಟಿಂಗ್ ಮಾಡಿದ್ದಾರೆ.

ರಾಜಣ್ಣ ಅವರ ಟೀಕೆ ವಿಚಾರವಾಗಿ ಕೊಪ್ಪಳದಲ್ಲಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ‘ಅವರು ಯಾವ ವಿಚಾರದಲ್ಲಿ ಆ ರೀತಿ ಹೇಳಿದ್ದಾರೆ ಗೊತ್ತಿಲ್ಲ. ಈ ವಿಚಾರವಾಗಿ ಅವರೊಂದಿಗೆ ಮಾತನಾಡುತ್ತೇನೆ’ ಎಂಬ ಜಾರಿಕೆಯ ಉತ್ತರ ನೀಡಿದ್ದಾರೆ. ಆದರೆ ಸಚಿವ ರಮೇಶ್ ಕುಮಾರ್ ಮಾತ್ರ ಬಹಿರಂಗವಾಗಿಯೇ ರಾಜಣ್ಣ ಅವರ ಹೇಳಿಕೆ ಸಮರ್ಥಿಸಿಕೊಂಡಿದ್ದು, ‘ಕೈ ಪಾಳೆಯದ ಲೋಪದ ಬಗ್ಗೆ ಮಾತನಾಡಲು ಧೈರ್ಯ ಬೇಕು. ಅದು ರಾಜಣ್ಣ ಅವರಿಗಿದೆ. ರಾಜಣ್ಣ ಕಾಂಗ್ರೆಸ್ ಪಕ್ಷ ಕಳ್ಳರ ಪಕ್ಷವಾಗಿದೆ ಎಂದು ಹೇಳಿಕೆ ನೀಡಿರುವುದು ಸರಿಯಾಗಿದೆ. ಅವರು ಕೆಲವರನ್ನು ಮನಸ್ಸಿನಲ್ಲಿಟ್ಟುಕೊಂಡು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಇಂತಹ ಹೇಳಿಕೆಯನ್ನು ನೀಡಿರುವುದಕ್ಕೆ ಅವರ ಧೈರ್ಯವನ್ನು ಮೆಚ್ಚುತ್ತೇನೆ. ಕೆಲವೊಂದು ಬಾರಿ ಅವರ ಭಾಷೆ ಹಾಗೇ ಇರುತ್ತದೆ. ಕಾಂಗ್ರೆಸ್ ಪಕ್ಷ ಸರಿಯಿಲ್ಲ ಎನ್ನುವುದು ಅವರ ಅರ್ಥವಲ್ಲ. ನಾನೂ ಸದನದಲ್ಲಿ ನಮ್ಮ ಪಕ್ಷ ವಿರುದ್ಧವೇ ಹಲವಾರು ಬಾರಿ ಮಾತನಾಡಿದ್ದೇನೆ. ರಾಜಕೀಯದಲ್ಲಿ ಯಾರೂ ಯಾವ ಪಕ್ಷವೂ ಪರಿಪೂರ್ಣವಲ್ಲ. ವ್ಯವಸ್ಥೆ ಹಾಳಾಗಿದೆ ಎನ್ನುವುದೇ ಅವರ ಹೇಳಿಕೆ’ ಎಂದಿದ್ದಾರೆ.

ರಮೇಶ್ ಕುಮಾರ್ ಅವರು ಕೇವಲ ರಾಜಣ್ಣ ಅವರ ಸಮರ್ಥನೆಗಷ್ಟೇ ಸುಮ್ಮನಾಗಿಲ್ಲ. ಬದಲಿಗೆ ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರನ್ನು ಬೆಂಬಲಿಸುತ್ತಾ, ಪಕ್ಷದ ಕಾರ್ಯದರ್ಶಿಯಾಗಿರುವ ದಿನೇಶ್ ಗುಂಡುರಾವ್ ಅವರಿಗೆ ಅನುಭವದ ಕೊರತೆ ಇದೆ ಎಂದು ಹೇಳಿರುವುದು ಅಚ್ಚರಿ ಮೂಡಿಸಿದೆ.

ನಿನ್ನೆಯಷ್ಟೇ ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ಅವರ ಮನೆ ಮೇಲೆ ನಡೆದ ಐಟಿ ದಾಳಿ ನಡೆದಿದ್ದು, ದಿನೇಶ್ ಗುಂಡುರಾವ್ ಅವರು ‘ಕೃಷ್ಣ ಅವರನ್ನು ಬ್ಲಾಕ್ ಮೇಲ್ ಮಾಡಿ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ’ ಎಂದು ಆರೋಪ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ರಮೇಶ್ ಕುಮಾರ್ ಹೇಳಿದಿಷ್ಟು…

‘ಸಿದ್ಧಾರ್ಥ್ ಅವರ ಮನೆ ಮೇಲೆ ಐಟಿ ದಾಳಿಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರಿಗೂ ಸಂಬಂಧ ಕಲ್ಪಿಸುವುದು ತಪ್ಪು. ಕೃಷ್ಣ ಅವರು ಒಬ್ಬ ಪರಿಪಕ್ವ ರಾಜಕಾರಣಿ. ಅವರ ಕುರಿತಾಗಿ ದಿನೇಶ್ ಗುಂಡುರಾವ್ ಅವರು ನೀಡಿರುವ ಹೇಳಿಕೆ ಸರಿಯಲ್ಲ. ಅವರಿಗೆ ಅನುಭವದ ಕೊರತೆ ಇದೆ. ನಾನು ಬಿಜೆಪಿ ಸಿದ್ಧಾಂತವನ್ನು ವಿರೋಧಿಸುತ್ತೇನೆ. ಆದರೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಮೆಚ್ಚುತ್ತೇನೆ. ರಾಜಕೀಯದಲ್ಲಿ ಕೆಲವರನ್ನು ಪಕ್ಷಾತೀತವಾಗಿ ಮೆಚ್ಚಬೇಕಾಗುತ್ತದೆ.’

ಕಳೆದ ಮೂರ್ನಾಲ್ಕು ದಿನಗಳ ಅಂತರದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಲ್ಲೇ ಈ ರೀತಿಯ ಭಿನ್ನ ಹೇಳಿಕೆಗಳು ಹಾಗೂ ಭಿನ್ನ ನಿಲುವುಗಳು ಸಾಕಷ್ಟು ಗಮನ ಸೆಳೆದಿದ್ದು, ಹೈಕಮಾಂಡ್ ಅಪ್ಪಣೆಯಂತೆ ನಡೆಯುವ ಪಕ್ಷದಲ್ಲಿ ಇಂತಹ ಬೆಳವಣಿಗೆಗಳು ಪಕ್ಷದ ನಾಯಕರಲ್ಲಿನ ಒಗ್ಗಟ್ಟಿನ ಮೇಲೆ ಅನುಮಾನ ಹೆಚ್ಚುವಂತೆ ಮಾಡಿವೆ.

Leave a Reply