ಮತ್ತೆ ಬಣ್ಣ ಹಚ್ಚುತ್ತಿರುವ ಗಣೇಶನ ಹಿಂದಿನ ವ್ಯಥೆ ಏನು?

ದಶಕದ ಹಿಂದೆ ಗಣೇಶ್ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸುತ್ತ ನಟನೆಯ ಒಂದೊಂದೇ ಹೆಜ್ಜೆಯನ್ನು ಮುಂದಿಡುತ್ತಾ ಬೆಳೆಯುತ್ತಿದ್ದ ಯುವನಟ. ನಂತರ ಇದ್ದಕ್ಕಿದ್ದ ಹಾಗೆ ಮತಿಭ್ರಮಣೆಗೊಂಡು ಅಲೆಯತೊಡಗಿದ್ದ, ಹಾಗಾಗೋದಿಕ್ಕೆ ಕಾರಣ ಮಾತ್ರ ನಿಗೂಢ.

ಚಿಟ್ಟೆ, ಪಾಂಚಾಲಿ, ಬಲಗಾಲಿಟ್ಟು ಒಳಗೆ ಬಾ, ಚಿತ್ರ, ಅಪ್ಪು, ಶಬ್ದವೇದಿ, ಇನ್ನೂ ಕೆಲವು ಚಿತ್ರಗಳಲ್ಲಿ ಗಮನಾರ್ಹ ಪಾತ್ರ ಮಾಡುತ್ತಾ ಚಿತ್ರರಂಗದಲ್ಲಿ ತನ್ನ ಗುರುತನ್ನು ಮೂಡಿಸುತ್ತಿದ್ದ ಎಲ್ಲಾ ಸರಿ ಇದ್ದಿದ್ದರೆ ಬಹುಶಃ ಇವತ್ತು ಆತ ಪ್ರಮುಖ ನಟನಾಗಿ ನಿಲ್ಲುತ್ತಿದ. ಆದ್ರೆ ಅದೇನು ಸಮಸ್ಯೆಯೂ ಅದೇನು ಘಟನೆಯೊ ಆತನನ್ನು ಮಾನಸಿಕ ಸ್ಥಿಮಿತ ಕಳೆದುಕೊಳ್ಳುವಂತೆ ಮಾಡಿತು. ಸಾಗರದ ಹತ್ತಿರದ ಪುಟ್ಟ ಊರು ಶಿರವಂತೆಯ ಮಧ್ಯಮವರ್ಗದ ಕುಟುಂಬದಿಂದ ಕಣ್ ತುಂಬಾ ಬಣ್ಣದ ಕನಸು ತುಂಬಿಕೊಂಡು ಬಂದ ಈತ ಇಂದು ಭಿಕ್ಷೆ ಬೇಡುತ್ತ ಬೀದಿ ಬೀದಿ ಅಲೆಯುವಂತಾಗಿದ್ದು ದುರಂತ.

ಸಾಗರದ ಕೆಲವು ಸಹೃದಯ ಸ್ನೇಹಿತರು ಮತ್ತು ಚಿತ್ರರಂಗದ ಹಲವರು ಇವನನ್ನು ಮೊದಲಿನಂತೆ ಮಾಡಲು ಸಾಕಷ್ಟು ಪ್ರಯತ್ನಿಸಿ ಸೋತಿದ್ದಾರೆ. ಹಾಗಂತ ಇವ್ನು ಪೂರ ಹುಚ್ಚನಂತೆ ವರ್ತಿಸೋದಿಲ್ಲ, ಪ್ರತಿಯೊಬ್ಬರ ಗುರುತು ಹಿಡಿದು ಸಭ್ಯವಾಗಿಯೇ ಮಾತನಾಡುತ್ತಾನೆ. ಕೆಲವೊಮ್ಮೆ ಅತಿಯಾಗಿ ಬಡಬಡಿಸುತ್ತ ಇರ್ತಾನೆ. ಒಂದು ಕಡೆ ಇದ್ದಲ್ಲಿ ಇರೋದಿಲ್ಲ ಅದ್ಯಾರು ಮಾಹಿತಿ ಕೊಡ್ತಾರೋ ಹೇಗೆ ಅವನು ಮಾಹಿತಿ ಸಂಪಾದಿಸುತ್ತಾನೋ ಗೊತ್ತಿಲ್ಲ ಹಲವು ಸಿನೆಮಾಗಳ ಮುಹೂರ್ತಗಳಲ್ಲಿ ಪ್ರತ್ಯಕ್ಷನಾಗುತ್ತಾನೆ. ಒಟ್ಟಿನಲ್ಲಿ ಗಣೇಶನಿಗೆ ಸಿನೆಮಾ ಬಿಡಿಸಲಾರದ ಬಂಧ.

ಈಗ ಬರ್ತಿರೋ ಹೊಸ ಸುದ್ದಿ ಏನಪ್ಪಾ ಅಂದ್ರೆ ಸಾಗರದ ಹಲವು ಯುವಕರೇ ಸೇರಿ ನಿರ್ಮಿಸುತ್ತಿರುವ, ಪವನ್ ಸಾಗರ್ ನಿರ್ದೇಶನದ “ಎಕ್ಕ ರಾಜ ರಾಣಿ” ಎನ್ನುವ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಾ ಇದ್ದಾನೆ ಈ ಗಣೇಶ. ಈಗಾಗಲೇ ಒಂದು ಹಂತದ ಶೂಟ್ ಮುಗಿಸಿರುವ ತಂಡ ಸಿನೆಮಾ ನವೆಂಬರ್ ನಲ್ಲಿ ಮತ್ತೆ ಶೂಟಿಂಗ್ ಆರಂಭಿಸುತ್ತಿದ್ದಾರೆ. ಈಗಾಗಲೇ ಶೂಟಿಂಗ್ ನಲ್ಲಿ ಆತನ ಕೆಲಸ ನೋಡಿದ ನಿರ್ದೇಶಕ ಪವನ್ ಸಾಗರ್ ಒಂದಿಷ್ಟು ವಿಷಯ ಹಂಚಿಕೊಂಡಿದ್ದಾರೆ.

ಅವನೊಬ್ಬ ಅದ್ಬುತ ನಟ, ಯಾವುದೇ ಮುಜುಗರ, ಅಡೆ ತಡೆಗಳಿಲ್ಲದೆ ನಿರಾಳವಾಗಿ ನಟಿಸಬಲ್ಲ. ಅದೆಂಥ ಸಂಭಾಷಣೆ ಕೊಟ್ಟಿರಲಿ ಅದೆಷ್ಟೇ ಕ್ಲಿಷ್ಟವಾಗಿರಲಿ ಆತ ಒಬ್ಬ ಪ್ರೊಫೆಷನಲ್ ನಟನಾಗಿಯೇ ನಟಿಸಿಬಿಟ್ಟ. ಮನಸ್ಸು ಮಾಡಿದರೆ ಆತನಲ್ಲಿನ ನಟನನ್ನು ಮತ್ತೆ ಜಾಗೃತಗೊಳಿಸಿ ಚಿತ್ರರಂಗದವರು ಅವನಿಗೆ ಒಂದೊಂದೇ ಪಾತ್ರಗಳನ್ನು ಕೊಟ್ಟು ಆತನ ಖಿನ್ನತೆಯನ್ನು ದೂರ ಮಾಡಿ ಸರಿ ಹೋಗುವಂತೆ ಮಾಡಬಹುದು. ಆದ್ರೆ ಸಿನೆಮಾ ಮಾಡುವವರು ಮನಸ್ಸು ಮಾಡಬೇಕಷ್ಟೇ. ಅವನನ್ನು ಒಂದು ಜಾಗದಲ್ಲಿ ಹಿಡಿದಿಟ್ಟುಕೊಳ್ಳೋದೇ ದೊಡ್ಡ ಸಮಸ್ಯೆ ಹೊರತುಪಡಿಸಿದ್ರೆ ಮಿಕ್ಕೆಲ್ಲ ವಿಷಯದಲ್ಲಿ ಆತ ಒಳ್ಳೆಯ ನಟ. ಅವನನ್ನು ಮನೋವೈದ್ಯರ ಬಳಿ ಕರೆದೊಯ್ದು ಚಿಕಿತ್ಸೆ ಕೊಡಿಸುವ ಪ್ರಯತ್ನದಲ್ಲಿದ್ದೇವೆ ಎನ್ನುತ್ತಾರೆ ಪವನ್ ಸಾಗರ್.

ಒಟ್ಟಿನಲ್ಲಿ ಗಣೇಶ ಮತ್ತೆ ಮೊದಲಿನಂತಾಗಿ ಮತ್ತೆ ಚಿತ್ರರಂಗದಲ್ಲಿ ಉತ್ತಮ ಭವಿಷ್ಯ ಕಂಡರೆ ಸಾರ್ಥಕ ಅನ್ನಿಸತ್ತೆ. ಒಂದು ಮಾನವೀಯ ಕಾಳಜಿಯೊಂದಿಗೆ ಚಿತ್ರರಂಗದ ನಿರ್ದೇಶಕರುಗಳು ಆತನಿಗೆ ಒಂದೊಂದೇ ಸಣ್ಣ ಸಣ್ಣ ಪಾತ್ರ ಕೊಟ್ಟರೆ ನಿಧಾನವಾಗಿ ಗಣೇಶನ ಖಿನ್ನತೆಯನ್ನು ದೂರ ಮಾಡಬಹುದು ಅನ್ನೋದು ಪವನ್ ಸಾಗರ್ ರ ಅಭಿಪ್ರಾಯ. ಯಾರಾದರೂ ಇಂತಹ ಮನಸು ಮಾಡಿದಲ್ಲಿ ಅವನನ್ನು ಕರೆದುಕೊಂಡು ಬರುತ್ತೇವೆ ಅನ್ನೋ ಮಾತನ್ನು ಕೂಡ ಹೇಳುತ್ತಾರೆ.

– ವಿನಯ್ ಕಸ್ವೆ

Leave a Reply