ಸುಳ್ಳು ಹೇಳೋದ್ರಲ್ಲಿ ಯಡಿಯೂರಪ್ಪ ನಿಸ್ಸೀಮ, ಬಿಎಸ್ ವೈ ವಿರುದ್ಧ ಸಿಎಂ ಟೀಕೆ

ಡಿಜಿಟಲ್ ಕನ್ನಡ ಟೀಮ್:

ಪ್ರಸ್ತುತ ಕಾಂಗ್ರೆಸ್ ಸರ್ಕಾರದಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಯಡಿಯೂರಪ್ಪ ಸುಳ್ಳು ಹೇಳೋದ್ರಲ್ಲಿ ನಿಸ್ಸೀಮ ಎಂದು ಪ್ರತಿದಾಳಿ ನಡೆಸಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಸಾಕಷ್ಟು ದಿನಗಳಿಂದ ರಾಜ್ಯ ಸರ್ಕಾರದಿಂದ ನಡೆದಿದೆ ಎಂದು ಹೇಳಲಾಗುತ್ತಿರುವ ಅವ್ಯವಹಾರಗಲ ಬಗ್ಗೆ ಬಹಿರಂಗ ಚರ್ಚೆ ಮಾಡಲು ಕರೆದರೂ ಯಾವ ಬಿಜೆಪಿ ನಾಯಕನೂ ಮುಂದೆ ಬರುತ್ತಿಲ್ಲ. ಇನ್ನು ಯಡಿಯೂರಪ್ಪನವರು ಮಾತ್ರ ಮಾಧ್ಯಮಗಳ ಮುಂದೆ ಆರೋಪ ಮಾಡುತ್ತಿದ್ದಾರೆಯೋ ಹೊರತು ಅದಕ್ಕೆ ಯಾವುದೇ ಸಾಕ್ಷ್ಯಗಳನ್ನು ಬಿಡುಗಡೆ ಮಾಡಿಲ್ಲ. ಹೀಗಾಗಿ ಯಡಿಯೂರಪ್ಪ ಸುಳ್ಳು ಹೇಳುವುದರಲ್ಲಿ ನಿಸ್ಸೀಮ’ ಎಂದು ಹರಿಹಾಯ್ದರು.

ಇನ್ನು  ಕಾಂಗ್ರೆಸ್ ಸುಳ್ಳು ಹೇಳುವವರ ತವರು ಮನೆ ಎಂದು ಲಕ್ಷ್ಮಣ ಸವದಿ ಟೀಕೆಗೆ ಪ್ರತಿಕ್ರಿಯಿಸಿರುವ ಸಿಎಂ, ‘ಸದನದಲ್ಲಿ ಬ್ಲೂಫಿಲಂ ನೋಡಿದವರಿಂದ ನಾವು ಬುದ್ಧಿ ಹೇಳಿಸಿಕೊಳ್ಳಬೇಕಾಗಿಲ್ಲ’ ಎಂದು ಪ್ರತ್ಯುತ್ತರ ನೀಡಿದ್ದಾರೆ. ನಾನು ಮಂಡಿಸಿರೋ ಬಜೆಟ್ ತೆಗೆದು ನೋಡಿ ಕೃಷ್ಣಾ ಬಿ ಸ್ಕೀಂ ಸೇರಿ ವಿವಿಧ ನೀರಾವರಿ ಯೋಜನೆಗಳಿಗೆ ನಮ್ಮ ಸರ್ಕಾರ ₹ 60 ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಕಾಂಗ್ರೆಸ್ ನಡೆ ಕೃಷ್ಣೆ ಕಡೆ ಪಾದಯಾತ್ರೆಯಲ್ಲಿ ಹೇಳಿದಂತೆ ನಾವು ನುಡಿದಂತೆ ನಡೆದಿದ್ದೇವೆ.

ಇನ್ನು ಶಾಸಕ ರಾಜಣ್ಣ ಅವರ ಹೇಳಿಕೆ ವಿಚಾರವಾಗಿ ಉತ್ತರಿಸಿದ ಸಿಎಂ, ‘ಕೆ.ಎನ್ ರಾಜಣ್ಣ ಅವರು ಯಾವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ವಿಚಾರದಲ್ಲಿ ಆ ರೀತಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಈ ಸಂಬಂಧ ಅವರೊಂದಿಗೆ ಮಾತನಾಡುತ್ತೇನೆ’ ಎಂದರು.

Leave a Reply