ಪಾಕಿಸ್ತಾನ ಅಲ್ಲ ‘ಟೆರರಿಸ್ತಾನ’, ವಿಶ್ವಸಂಸ್ಥೆಯಲ್ಲಿ ಪಾಕ್ ವಿರುದ್ಧ ಭಾರತದ ಗುಡುಗು

ಡಿಜಿಟಲ್ ಕನ್ನಡ ಟೀಮ್:

ವಿಶ್ವಸಂಸ್ಥೆ ವಾರ್ಷಿಕ ಮಹಾ ಸಭೆಯಲ್ಲಿ ಸದ್ಯ ಭಾರತ ಹಾಗೂ ಪಾಕಿಸ್ತಾನ ನಡುವಣ ವಾಕ್ಸಮರ ತೀವ್ರವಾಗಿಯೇ ಸಾಗುತ್ತಿದೆ. ನಿನ್ನೆಯಷ್ಟೇ ಕಾಶ್ಮೀರ ಹಾಗೂ ಅಫ್ಘಾನಿಸ್ತಾನದ ವಿಚಾರವಾಗಿ ಪಾಕಿಸ್ತಾನ ಪ್ರಧಾನಿ ಶಾಹೀದ್ ಖಾನ್ ಅಬ್ಬಾಸಿ ಭಾರತದ ವಿರುದ್ಧ ಕಿಡಿಕಾರಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತದ ಅಧಿಕಾರಿಗಳು, ಪಾಕಿಸ್ತಾನ ಮೊದಲು ತನ್ನ ನೆಲದಲ್ಲಿರುವ ಉಗ್ರರ ದಮನದ ಬಗ್ಗೆ ಗಮನ ಹರಿಸಬೇಕು. ಪಾಕಿಸ್ತಾನ ಈಗ ಟೆರರಿಸ್ತಾನವಾಗಿ ಬದಲಾಗಿದೆ ಎಂದು ಚುರುಕು ಮುಟ್ಟಿಸಿದ್ದಾರೆ.

ಕಾಶ್ಮೀರ ವಿಷಯದಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯವನ್ನು ಕೂಡಲೇ ಜಾರಿಗೊಳಿಸಬೇಕು. ಈ ತೀರ್ಮಾನವನ್ನು ಅನುಷ್ಠಾನಗೊಳಿಸಿದರೆ ಈ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಲಿದೆ. ಅಲ್ಲದೆ ಭಾರತ ಮತ್ತು ಪಾಕಿಸ್ತಾನ ನಡುವೆ ಶಾಂತಿ ನೆಲೆಸುವಂತೆ ಮಾಡುತ್ತದೆ ಎಂದು ಅಬ್ಬಾಸ್ ಹೇಳಿಕೆ ನೀಡಿದ್ದರು.

ಇದಕ್ಕೆ ಶುಕ್ರವಾರ ಪ್ರತ್ಯುತ್ತರ ನೀಡಿರುವ ಭಾರತದ ಪ್ರತಿನಿಧಿ ಈನಮ್ ಗಂಭೀರ್ ಹೇಳಿದಿಷ್ಟು…

‘ಉಗ್ರ ಒಸಾಮಾ ಬಿನ್ ಲಾಡೆನ್, ಮುಲ್ಲಾ ಒಮರ್ ರಂತಹ ಉಗ್ರಗಾಮಿಗಳಿಗೆ ಆಶ್ರಯ ನೀಡಿರುವ ಪಾಕಿಸ್ತಾನ ಈಗ ಶಾಂತಿಯ ಬಗ್ಗೆ ಮಾತನಾಡುತ್ತಿದೆ. ಪಾಕಿಸ್ತಾನದ ಈ ರೀತಿಯಾದ ವಕೃತ, ಮೋಸ ಹಾಗೂ ಕಪಟ ಮಾತುಗಳನ್ನು ಕೇಳಿ ಕೇಳಿ ಪಾಕಿಸ್ತಾನದ ಎಲ್ಲಾ ನೆರೆಯ ರಾಷ್ಟ್ರಗಳಿಗೆ ಸಾಕಾಗಿಹೋಗಿದೆ.

ಪಾಕಿಸ್ತಾನ ತನ್ನ ಅಲ್ಪಾವಧಿಯ ಇತಿಹಾಸದಲ್ಲೇ ಪಾಕಿಸ್ತಾನ ಬೌಗೋಳಿಕವಾಗಿ ಭಯೋತ್ಪಾದಕರ ತಾಣವಾಗಿ ಗುರುತಿಸಿಕೊಂಡಿದೆ. ಅಲ್ಲದೆ ಭಯೋತ್ಪಾದಕರನ್ನು ಹುಟ್ಟುಹಾಕುವ ನೆಲವಾಗಿದ್ದು, ಜಾಗತಿಕ ಭಯೋತ್ಪಾದನೆಗೆ ಉಗ್ರರನ್ನು ತಯಾರಿಸುವ ಕೈಗಾರಿಕೆಯಾಗಿ ಬೆಳೆಯುತ್ತಿದೆ. ಹೀಗಾಗಿ ಪಾಕಿಸ್ತಾನ ಈಗ ಟೆರರಿಸ್ತಾನವಾಗಿ ಬದಲಾಗಿದೆ.

ಇದೇ ಪಾಕಿಸ್ತಾನದಲ್ಲಿ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಷೇಧಿತ ಭಯೋತ್ಪಾದನಾ ಸಂಘಟನೆ ಲಷ್ಕರ್ ನ ಮುಖ್ಯಸ್ಥ ಹಫೀಜ್ ಮೊಹಮದ್ ಸೈಯೀದ್ ರಾಜಕೀಯ ಪಕ್ಷದ ನಾಯಕನಾಗಿ ಹೊರಹೊಮ್ಮುತ್ತಿದ್ದಾನೆ. ಭಯೋತ್ಪಾದನೆ ವಿರುದ್ಧ ಕ್ರಮಕೈಗೊಳ್ಳುವುದಾಗಿ ಹೇಳಿಕೊಳ್ಳುತ್ತಿರುವ ಪಾಕಿಸ್ತಾನ ತೆರೆಯ ಹಿಂದೆ ಅದೇ ಭಯೋತ್ಪಾದರಕರಿಗೆ ರಕ್ಷಣೆ ನೀಡುತ್ತಿದೆ. ತನ್ನ ಮಿಲಿಟರಿ ನಗರಗಳಲ್ಲೇ ಉಗ್ರರಿಗೆ ಸುರಕ್ಷಿತ ಸೂರು ಕಲ್ಪಿಸಿಕೊಟ್ಟು, ರಾಜಕೀಯ ರಂಗದಲ್ಲಿ ಅವಕಾಶ ಕಲ್ಪಿಸಿ ಅವರ ಸ್ಥಾನವನ್ನು ಭದ್ರಗೊಳಿಸುತ್ತಿದೆ.

ಈ ಎಲ್ಲಾ ಕ್ರಮಗಳಿಂದ ಪಾಕಿಸ್ತಾನ ಭಯೋತ್ಪಾದಕರ ವಿರುದ್ಧ ಸಮರ ಸಾರುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ. ಇನ್ನು ಜಮ್ಮು ಕಾಶ್ಮೀರ ರಾಜ್ಯ ಎಂದಿಗೂ ಭಾರತದ ಅವಿಭಾಜ್ಯ ಅಂಗವಾಗಿಯೇ ಉಳಿಯಲಿದ್ದು, ಪಾಕಿಸ್ತಾನ ಎಷ್ಟೇ ಕದನ ವಿರಾಮ ಉಲ್ಲಂಘನೆ ಹಾಗೂ ಗಡಿಯಾಚೆಗಿನ ಭಯೋತ್ಪಾದಕ ಕೃತ್ಯಗಳನ್ನು ನಡೆಸಿದರೂ ಭಾರತದ ಆಂತರಿಕ ಒಗ್ಗಟ್ಟನ್ನು ಮುರಿಯಲು ಸಾಧ್ಯವಿಲ್ಲ. ‘

Leave a Reply