ಮಹಿಳಾ ಮೀಸಲಾತಿ ಮಸೂದೆ: ಮೋದಿಗೆ ಸೋನಿಯಾ ಪತ್ರ, ಚಳಿಗಾಲದ ಅಧಿವೇಶನದಲ್ಲಿ ಮಂಡನೆ ಸಾಧ್ಯತೆ

ಡಿಜಿಟಲ್ ಕನ್ನಡ ಟೀಮ್:

ಲೋಕಸಭೆಯಲ್ಲಿ ತಮಗಿರುವ ಬಹುಮತವನ್ನು ಬಳಸಿಕೊಂಡು ಸಾಕಷ್ಟು ವರ್ಷಗಳಿಂದ ಧೂಳು ಹಿಡಿದಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದ ಮೂಲಕ ಸಲಹೆ ನೀಡಿದ್ದಾರೆ.

ಸಂಸತ್ತು ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡಬೇಕು ಎಂಬ ಮಸೂದೆಯನ್ನು 2010ರಲ್ಲೇ ರಾಜ್ಯಸಭೆಯಲ್ಲಿ ಮಂಡನೆ ಮಾಡಲಾಗಿತ್ತು. ಆನಂತರ ಲೋಕಸಭೆಯಲ್ಲಿ ಈ ಮಸೂದೆಯ ಪ್ರಸ್ತಾಪ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಹೀಗಾಗಿ ಸದ್ಯ ಎನ್ಡಿಎ ಸರ್ಕಾರ ಬಹುಮತವನ್ನು ಹೊಂದಿದ್ದು, ಈ ಮಸೂದೆ ಜಾರಿಗೊಳಿಸಲು ಸೂಕ್ತ ಸಮಯ ಎಂದು ಸೋನಿಯಾ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ಸೋನಿಯಾ ಗಾಂಧಿ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ಹೇಳಿರುವುದಿಷ್ಟು…

‘ನಿಮ್ಮ ಸರ್ಕಾರದ ಬಳಿ ಇರುವ ಬಹುಮತವನ್ನು ಬಳಸಿಕೊಂಡು ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಬೇಕು ಎಂದು ಈ ಪತ್ರದ ಮೂಲಕ ಮನವಿ ಮಾಡಿಕೊಳ್ಳುತ್ತೇನೆ. ಈ ಮಸೂದೆಯ ಮಂಡನೆಗೆ ಕಾಂಗ್ರೆಸ್ ಸಹ ಸರ್ಕಾರಕ್ಕೆ ಅಗತ್ಯ ಬೆಂಬಲ ನೀಡಲಿದೆ ಎಂಬ ಭರವಸೆಯನ್ನು ನೀಡುತ್ತೇನೆ.’

ಸೋನಿಯಾ ಗಾಂಧಿ ಅವರ ಈ ಪತ್ರದ ನಂತರ ಬಿಜೆಪಿ ಈ ಬಗ್ಗೆ ಚರ್ಚೆ ನಡೆಸಿದ್ದು, ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆ ಮಂಡಿಸಿ ಅನುಮೋದನೆ ನೀಡುವ ಬಗ್ಗೆ ಚಿಂತನೆ ನಡೆಸಿರುವುದಾಗಿ ಮಾಹಿತಿ ಲಭ್ಯವಾಗಿವೆ. ಗುರುವಾರ ಸಂಜೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಕಾಂಗ್ರೆಸ್ ನಾಯಕರಾದ ಗುಲಾಮ್ ನಬಿ ಅಜಾದ್, ಅಹ್ಮದ್ ಪಟೇಲ್ ಹಾಗೂ ಮೊತಿಲಾಲ್ ವೊರಾ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದ್ದಾರೆ.

Leave a Reply