ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನಕ್ಕೆ ಕೈ ಕೊಟ್ಟ ಚೀನಾ, ದ್ವಿಪಕ್ಷಿಯವಾಗಿಯೇ ಸಮಸ್ಯೆ ಬಗೆಹರಿಸಿಕೊಳ್ಳಲು ಸಲಹೆ

ಡಿಜಿಟಲ್ ಕನ್ನಡ ಟೀಮ್:

‘ಕಾಶ್ಮೀರ ವಿಚಾರ ಭಾರತ ಹಾಗೂ ಪಾಕಿಸ್ತಾನ ನಡುವಣ ಸಮಸ್ಯೆಯಾಗಿದ್ದು, ಇದರಲ್ಲಿ ಚೀನಾ ಮಧ್ಯಸ್ಥಿಕೆ ವಹಿಸುವುದಿಲ್ಲ. ಈ ಸಮಸ್ಯೆಗೆ ದ್ವಿಪಕ್ಷೀಯ ಮಾತುಕತೆಯಿಂದಲೇ ಪರಿಹಾರ ಕಂಡುಕೊಳ್ಳುವುದು ಸೂಕ್ತ.’ ಇದು ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರವಾಗಿ ಚೀನಾ ತನ್ನ ನಿಲುವನ್ನು ಪ್ರಕಟಿಸಿದ ಪರಿ.

ವಿಶ್ವಸಂಸ್ಥೆಯಲ್ಲಿ ಒಐಸಿಯ ಬೆಂಬಲ ಪಡೆದು ಭಾರತದ ವಿರುದ್ಧ ಒತ್ತಡ ಹೇರುವ ಪ್ರಯತ್ನದಲ್ಲಿದ್ದ ಪಾಕಿಸ್ತಾನ, ಚೀನಾದಿಂದಲೂ ಬೆಂಬಲ ಪಡೆಯುವ ನಿರೀಕ್ಷೆಯಲ್ಲಿತ್ತು. ಆದರೆ, ಚೀನಾ ಈ ವಿಚಾರದಲ್ಲಿ ಯೂಟರ್ನ್ ಹೊಡೆದಿರುವುದು ಪಾಕಿಸ್ತಾನಕ್ಕೆ ಅಚ್ಚರಿ ತಂದಿದೆ. ಅಲ್ಲದೆ ಕಾಶ್ಮೀರದಲ್ಲಿ ವಿಶ್ವಸಂಸ್ಥೆಯ ನಿರ್ಣಯವನ್ನು ಕಾಶ್ಮೀರದಲ್ಲಿ ಜಾರಿಗೊಳಿಸಬೇಕು ಎಂಬ ಒಐಸಿಯ ವಾದವನ್ನು ಪಾಕಿಸ್ತಾನ ಮಂಡಿಸಿತ್ತು. ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಇಲಾಖೆ ತನ್ನ ನಿರ್ಧಾರವನ್ನು ಸ್ಪಷ್ಟಪಡಿಸಿರುವುದು ಹೀಗೆ… ‘ಕಾಶ್ಮೀರ ವಿವಾದ ಸಾಕಷ್ಟು ದಶಕಗಳ ಇತಿಹಾಸವನ್ನು ಹೊಂದಿದೆ. ಹೀಗಾಗಿ ಇದನ್ನು ಉಭಯ ದೇಶಗಳು ಮಾತುಕತೆಯಿಂದ ಬಗೆಹರಿಸಿಕೊಳ್ಳುವುದು ಸೂಕ್ತ. ಈ ನಿಟ್ಟಿನಲ್ಲಿ ಉಭಯ ದೇಶಗಳು ಆಸಕ್ತಿ ವಹಿಸಿ ಹೆಚ್ಚಿನ ಮಾತುಕತೆಗಳನ್ನು ನಡೆಸುವ ಭರವಸೆ ಇದ್ದು, ಇದರಿಂದ ಪ್ರಾದೇಶಿಕ ಶಾಂತಿ ಸ್ಥಾಪನೆ ಸಾಧ್ಯವಾಗಲಿದೆ. ಈ ವಿಚಾರದಲ್ಲಿ ಚೀನಾ ನಿರ್ಧಾರ ಸ್ಪಷ್ಟವಾಗಿದೆ’ ಎಂದು ಹೇಳಿದೆ. ಚೀನಾದ ಈ ಹೇಳಿಕೆ ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ರೂಪಿಸಿದ್ದ ತಂತ್ರಕ್ಕೆ ಹಿನ್ನಡೆಯಾಗಿದೆ.

Leave a Reply