2022ರ ವೇಳೆಗೆ ದೇಶದ ಪ್ರತಿಯೊಬ್ಬರಿಗೂ ಸೂರು ಕೊಡ್ತಾರಂತೆ ಮೊದಿ, ಜನತೆಗೆ ಹೊಸ ಭರವಸೆ ಕೊಟ್ಟ ಪ್ರಧಾನಿ

ಡಿಜಿಟಲ್ ಕನ್ನಡ ಟೀಮ್:

‘2022ರ ವೇಳೆಗೆ ದೇಶದ ಪ್ರತಿಯೊಬ್ಬರು ಮನೆಯನ್ನು ಹೊಂದಲಿದ್ದಾರೆ…’ ಇದು ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ ಪಶು ಆರೋಗ್ಯ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುವಾಗ ದೇಶದ ಜನತೆಗೆ ಕೊಟ್ಟ ಭರವಸೆ.

ಈ ಪಶು ಆರೋಗ್ಯ ಮೇಳೆ ಕಾರ್ಯಕ್ರಮದ ಜತೆಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಿಗೆ ಪ್ರಮಾಣಪತ್ರ ನೀಡಿದ ಮೋದಿ ಈ ಘೋಷಣೆಯನ್ನು ಮಾಡಿದ್ದಾರೆ. ಅಲ್ಲದೆ ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ಕಿಡಿಕಾರಿದ್ದು, ಅವರ ಮಾತುಗಳ ಪ್ರಮುಖ ಅಂಶಗಳು ಹೀಗಿವೆ…

‘2022ರ ವೇಳೆಗೆ ರೈತರ ಆದಾಯ ದ್ವಿಗುಣ ಮಾಡುವುದರ ಜತೆಗೆ ದೇಶದ ಪ್ರತಿಯೊಬ್ಬರು ಸ್ವಂತ ಸೂರು ಹೊಂದುವಂತೆ ಮಾಡುತ್ತೇವೆ. ದೇಶದ ಹಣವನ್ನು ಭ್ರಷ್ಟರು ದೋಚುವುದರ ವಿರುದ್ಧ ಹೋರಾಡಲು ನಮ್ಮ ಸರ್ಕಾರ ಯುದ್ಧವನ್ನೇ ಸಾರಿದೆ.

ಸಾಮಾನ್ಯವಾಗಿ ರಾಜಕೀಯದಲ್ಲಿ ಮತಗಳನ್ನು ಸೆಳೆಯಲು ತಂತ್ರಗಾರಿಕೆಯನ್ನು ರೂಪಿಸುತ್ತಾರೆ. ಆದರೆ ನಮ್ಮ ಸಂಸ್ಕೃತಿ ಬೇರೆ. ನಾವು ಉತ್ತಮ ಆಡಳಿತ ನೀಡಲು ರಾಜಕೀಯ ಮಾಡುತ್ತೇವೆ ಹೊರತು, ಮತಗಳನ್ನು ಸೆಳೆಯಲು ಅಲ್ಲ. ನಮಗೆ ಮತಗಳಿಗಿಂತ ದೇಶವೇ ಪ್ರಮುಖವಾಗಿ ನಿಲ್ಲುತ್ತದೆ. ಇದಕ್ಕೆ ಸಾಕ್ಷಿ ಈ ಪಶು ಆರೋಗ್ಯ ಮೇಳ. ಈ ಪ್ರಾಣಿಗಳು ಮತ ಚಲಾಯಿಸುವುದಿಲ್ಲ. ಅವರು ಯಾರಿಗೂ ಮತದಾನರಲ್ಲ. ಈ ಪಶುಗಳ ಆರೋಗ್ಯ ವೃದ್ಧಿಯಿಂದ ಪಶುಸಂಗೋಪನೆ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾಧ್ಯವಾಗುತ್ತದೆ. ಭಾರತ ಹಾಲು ಉತ್ಪಾದನೆಯಲ್ಲಿ ಇತರೆ ರಾಷ್ಟ್ರಗಳಿಗಿಂತ ಹಿಂದೆ ಉಳಿದಿದ್ದು, ಪಶುಗಳ ಆರೋಗ್ಯ ಸುಧಾರಿಸಿದರೆ, ದೇಶದಲ್ಲಿ ಹಾಲು ಉತ್ಪಾದನೆಯ ಪ್ರಮಾಣ ಹೆಚ್ಚಲಿದೆ.

ರೈತರು ಪಶುಸಂಗೋಪನೆ ಹಾಗೂ ಪ್ರಾಣಿ ಸಾಕಾಣೆಯನ್ನು ಆದಾಯದ ಮೂಲವನ್ನಾಗಿ ಅಳವಡಿಸಿಕೊಳ್ಳುವಂತೆ ಮಾಡಿದರೆ ದೇಶದ ಪ್ರಗತಿಗೆ ಹೊಸ ಆಯಾಮ ದೊರೆಯಲಿದೆ. ದೇಶದಲ್ಲಿ ಕೋಟ್ಯಂತರ ಜನ ಸ್ವಂತ ಸೂರನ್ನು ಹೊಂದಿಲ್ಲ. 2022ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರ್ಣಗೊಳ್ಳಲಿದೆ. ಈ ಸಂದರ್ಭದಲ್ಲಿ ದೇಶದ ಜನರು ಸ್ವಂತ ಸೂರನ್ನು ಹೊಂದುವಂತೆ ಮಾಡುತ್ತೇನೆ. ಇವರಿಗೆಲ್ಲ ಕೋಟ್ಯಂತರ ಮನೆಗಳನ್ನು ನಿರ್ಮಿಸಲು ಇಟ್ಟಿಗೆ, ಸಿಮೆಂಟ್, ಮರ ಹಾಗೂ ಕಬ್ಬಿಣದ ಅಗತ್ಯವಿದೆ. ಇದರಿಂದ ಸಾವಿರಾರು ಮಂದಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಇಂತಹ ಮಹತ್ವದ ಯೋಜನೆಯನ್ನು ಮೋದಿ ತೆಗೆದುಕೊಳ್ಳದೆ ಮತ್ಯಾರು ತೆಗೆುಕೊಳ್ಳಲು ಸಾಧ್ಯ.

ಉತ್ತರ ಪ್ರದೇಶದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಸರ್ಕಾರ ಮನೆ ಇಲ್ಲದವರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸೂಕ್ತ ಮಾಹಿತಿಯನ್ನೇ ನೀಡಿರಲಿಲ್ಲ. ಆ ಸರ್ಕಾರಕ್ಕೆ ಬಡವರಿಗೆ ಮನೆ ಕಲ್ಪಿಸಿಕೊಡುವ ಯಾವುದೇ ಆಸಕ್ತಿ ಇರಲಿಲ್ಲ. ನಂತರ ಒತ್ತಡಕ್ಕೆ ಮಣಿದು ಕೇವಲ 10 ಸಾವಿರ ಜನರ ಪಟ್ಟಿಯನ್ನು ನೀಡಿತ್ತು. ಆದರೆ ಯೋಗಿ ಆದಿತ್ಯನಾಥರ ಸರ್ಕಾರ ಕೇಂದ್ರಕ್ಕೆ ಲಕ್ಷಾಂತರ ಮಂದಿಯ ಪಟ್ಟಿಯನ್ನು ನೀಡಿದ್ದು, ಇವರಿಗೆಲ್ಲಾ ಮನೆ ನೀಡಬೇಕು ಎಂದು ಪ್ರಸ್ತಾವನೆ ಸಲ್ಲಿಸಿದೆ.

ದೇಶದಲ್ಲಿ ಭ್ರಷ್ಟರು ಹಣವನ್ನು ಲೂಟಿ ಮಾಡುತ್ತಿದ್ದರೆ ಅದರಿಂದ ತೊಂದರೆ ಅನುಭವಿಸುವವರು ಬಡವರು. ಪ್ರಾಮಾಣಿಕತೆಯ ಕುರಿತಾದ ಆಂಧೋಲನವನ್ನು ಹಬ್ಬದಂತೆ ಪಸರಿಸಬೇಕು. ನಮ್ಮ ವ್ಯಾಪಾರಿಗಳು ಜಿಎಸ್ಟಿ ಹಾಗೂ ಆಧಾರ್ ಬಳಕೆಯಿಂದ ದೇಶದ ಜನರ ಒಂದೊಂದು ಪೈಸೆಯನ್ನು ಅವರ ಒಳಿತೆಗೆ ಬಳಸಿಕೊಳ್ಳುವಂತಾಗಿದೆ. ಈ ಮೂಲಕ ನಾವು ಪ್ರಗತಿಯತ್ತ ದಾಪುಗಾಲು ಹಾಕುತ್ತಿದ್ದೇವೆ.’

Leave a Reply