ಅಧಿಕಾರದಿಂದ ಇಳಿಯುತ್ತಿದ್ದಂತೆ ಸಿದ್ದರಾಮಯ್ಯ ಚರಿತ್ರೆಯಿಂದಲೇ ಕಣ್ಮರೆಯಾಗ್ತಾರೆ- ಸಿಎಂಗೆ ಸದಾನಂದಗೌಡ ಟಾಂಗ್

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವಣ ವಾಕ್ಸಮರ ಜೋರಾಗಿಯೇ ಸಾಗುತ್ತಿದೆ. ‘ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಬಿಜೆಪಿ ನಾಯಕರಿಗೆ ಮೀಟರ್ ಇಲ್ಲ’ ಎಂದು ಮುಖ್ಯಮಂತ್ರಿಗಳು ಟೀಕೆ ಮಾಡಿರುವುದಕ್ಕೆ ಪ್ರತಿಯಾಗಿ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಸಿದ್ದರಾಮಯ್ಯನವರಿಗೆ ಟಾಂಗ್ ಕೊಟ್ಟಿದ್ದಾರೆ.

ಮುಖ್ಯಮಂತ್ರಿಗಳ ಮಾತಿನ ಏಟಿಗೆ ಪ್ರತಿಏಟು ನೀಡಿರುವ ಸದಾನಂದ ಗೌಡ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿರುವುದು ಹೀಗೆ… ‘ಸಿದ್ದರಾಮಯ್ಯ ಅಧಿಕಾರದಿಂದ ಇಳಿಯುತ್ತಿದ್ದಂತೆ ಚರಿತ್ರೆಯಿಂದ ಕಣ್ಮರೆಯಾಗಲಿದ್ದಾರೆ. ತಾನು ಏನು ಮಾಡುತ್ತಿದ್ದೇನೆ ಎಂಬುದರ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲ. ಅಧಿಕಾರ ಕಳೆದುಕೊಳ್ಳುವುದು ನೂರಕ್ಕೆ ನೂರು ಎಂಬುದು ಸಿದ್ರಾಮಯ್ಯನವರಿಗೆ ಮನವರಿಕೆಯಾಗಿದೆ.

ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಪಕ್ಷದ ನಾಯಕರು ಮಾಡುತ್ತಿರುವ ಆರೋಪಗಳನ್ನೇ ತಡೆದುಕೊಳ್ಳಲು ಆಗ್ತಿಲ್ಲ. ಇದರಿಂದಾಗಿ ಸಿದ್ದರಾಮಯ್ಯರ ಮನಸು ವಿಚಲಿತವಾಗಿದೆ. ನೀವು ಕೂಡ ಅವರ ಹೇಳಿಕೆಗಳ ಬಗ್ಗೆ ಚರ್ಚೆ ಮಾಡಬೇಡಿ. ದೇಶದ ರಾಜಕಾರಣದಲ್ಲಿ ಬಹಳ ಸಿಎಂಗಳನ್ನು ನಾನು ನೋಡಿದ್ದೇನೆ. ಈ ರೀತಿ ಬಾಲೀಶ ಹೇಳಿಕೆ ಕೊಡುವವರನ್ನು ನಾನು ನೋಡಿಲ್ಲ. ಈಗ ಅಧಿಕಾರದಲ್ಲಿದ್ದಾರೆ ಅಂತಾ ಜನರು ಸಿದ್ದರಾಮಯ್ಯ ಸಿಎಂ ಅಂತಿದ್ದಾರೆ. ಅವರು ಅಧಿಕಾರದಿಂದ ಇಳಿದ ತಕ್ಷಣ ಸಿದ್ದರಾಮಯ್ಯ ಹೆಸರೇ ಚರಿತ್ರೆಯಿಂದ ಕಣ್ಮರೆ ಆಗುತ್ತೆ.’

ಇನ್ನು ರಾಜ್ಯ ರಾಜಕಾರಣಕ್ಕೆ ಮರಳಿರುವ ಸದಾನಂದ ಗೌಡರು, ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಸಾಂಪ್ರದಾಯಕ ಪ್ರಚಾರ ತಂಡದ ನೇತೃತ್ವ ವಹಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಅದು ಹೀಗಿದೆ… ‘ಪಕ್ಷ ಚುನಾವಣೆಗೆ ತಯಾರಿಯಾಗುತ್ತಿದೆ. ರಾಜಕೀಯ ಪಕ್ಷಗಳಲ್ಲಿ ಸಣ್ಣಪುಟ್ಟ ಕೋಪ-ತಾಪ ಸಹಜ. ಎಲ್ಲವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸವನ್ನು ಕೇಂದ್ರ ಬಿಜೆಪಿ ಸಮರ್ಥವಾಗಿ ನಿರ್ವಹಿಸುತ್ತಿದೆ. ಇನ್ನು ಕೇಂದ್ರದ ನಾಯಕರಿಗೆಗ ನನಗೆ ಅಧಿಕೃತವಾಗಿ ಯಾವುದೇ ಸೂಚನೆಗಳು ಬಂದಿಲ್ಲ. ಪಕ್ಷ ಕೊಡುವ ಯಾವುದೇ ಜವಾಬ್ದಾರಿಯನ್ನು ಜವಾಬ್ದಾರಿ ವಹಿಸಿಕೊಳ್ಳುತ್ತೇನೆ. ನಾವೆಲ್ಲ ಸೇರಿದ್ರೆ 150+ ಅಲ್ಲ 170+ ಸೀಟ್ ಸಿಗುವುದು ಖಚಿತ. ನಾನು ನಾಲ್ಕುವರೆ ವರ್ಷ ಪಕ್ಷದ ಅಧ್ಯಕ್ಷನಾಗಿದ್ದೆ. ನಾನು ಅಧ್ಯಕ್ಷನಾಗಿದ್ದ ಕಾಲದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಎಲ್ಲ ಕಾರ್ಯಕರ್ತರು ಒಟ್ಟಾಗಿ ಶ್ರಮಿಸಿದ್ದರು. ಅಧ್ಯಕ್ಷ ಅಥವಾ ಮೇಲಿನ ಹುದ್ದೆಯಲ್ಲಿ ಕುಳಿತವರು ಎಲ್ಲರೂ ಒಂದೇ ಎಂಬ ಭಾವನೆ ಬರುವಂತೆ ನೋಡಿಕೊಳ್ಳಬೇಕು. ಮೊನ್ನೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಂದುಹೋದ ಮೇಲೆ ಪಕ್ಷದಲ್ಲಿನ ಸಮಸ್ಯೆ ಬಗೆಹರಿದು ಎಲ್ಲವೂ ಸಸೂತ್ರವಾಗಿವೆ. ಇನ್ನಿರುವ ಅಲ್ಪ ವ್ಯತ್ಯಾಸವನ್ನು ನಾವೇ ಸರಿ ಮಾಡಿಕೊಳ್ಳುತ್ತೇವೆ. ‘

Leave a Reply