ಅಪಘಾತದಿಂದ ಗಾಲಿಕುರ್ಚಿ ಅವಲಂಬಿಸಿದರೂ ತನ್ನ ಗುರಿ ಬಿಡದ ಸಾಧಕಿ ಈ ರಾಜಲಕ್ಷ್ಮಿ..!

ಡಿಜಿಟಲ್ ಕನ್ನಡ ಟೀಮ್:

‘ನಾವು ಅಂದುಕೊಳ್ಳುವುದೇ ಒಂದು ಆಗುವುದು ಮತ್ತೊಂದು…’ ಎಂಬ ನಿರಾಸೆಯ ಮಾತನ್ನು ಬಹುತೇಕರು ತಮ್ಮ ಜೀವನದ ಒಂದಲ್ಲ ಒಂದು ಸಂದರ್ಭದಲ್ಲಿ ಆಡುವುದು ಸಹಜ. ಆದರೆ ಏನೇ ಆದರೂ ಸರಿ ನಾನು ಅಂದುಕೊಂಡಿದ್ದನ್ನು ಮಾಡಿಯೇ ತೀರುತ್ತೇನೆ ಎಂದು ನಿರ್ಧರಿಸಿದವರು ಮಾತ್ರ ಸಾಧನೆಯ ಶಿಖರ ಏರಲು ಸಾಧ್ಯ. ಅಂತಹ ಸಾಧಕರ ಪೈಕಿ ಈ ರಾಜಲಕ್ಷ್ಮಿ ಸಹ ಒಬ್ಬರು. ಈಕೆಯ ಜೀವನದ ಹಾದಿ ಹಾಗೂ ಸಾಧನೆಯ ಕಥೆ ನಿಮ್ಮ ವಾರಾಂತ್ಯದ ಸ್ಫೂರ್ತಿದಾಯಕ ಓದಿಗಾಗಿ.

ಡಾ.ರಾಜಲಕ್ಷ್ಮಿ… ಬಹುಮುಖ ಪ್ರತಿಭೆಯುಳ್ಳ ಯುವತಿ. ವೃತ್ತಿಯಲ್ಲಿ ದಂತ ವೈದ್ಯೆಯಾಗಿದ್ದರೂ ಸಾಹಸ ಕ್ರೀಡೆ ಹಾಗೂ ಇತರೆ ಆಸಕ್ತಿ ಹೊಂದಿರುವವರು. ಬೇರೆಯವರಿಗೆ ಸಹಾಯ ಮಾಡಲು ಮುಂದೆ ನಿಲ್ಲುವುದು ಈಕೆಯ ಗುಣ. ಅಷ್ಟೇ ಅಲ್ಲದೆ ಈಕೆ 2014ರ ಮಿಸ್ ವೀಲ್ ಚೇರ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದವರು. ಈಗ ಮುಂದಿನ ತಿಂಗಳು ಪೊಲೆಂಡ್ ನಲ್ಲಿ ನಡೆಯಲಿರುವ ವಿಸ್ ವೀಲ್ ಚೇರ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾಗವಹಿಸಿ ಭಾರತವನ್ನು ಪ್ರತಿನಿಧಿಸುತ್ತಿರುವ ಸಾಧಕಿ.

ಹೀಗೆ ಅನೇಕ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ರಾಜಲಕ್ಷ್ಮಿಯವರು ಈವರೆಗೂ ಸಾಗಿ ಬಂದಿರುವ ಹಾದಿ ಸುಗಮವಾಗಿಲ್ಲ. ತನ್ನ 21ನೇ ವಯಸ್ಸಿನವರೆಗೂ ಇತರರಂತೆ ಓಡಾಡಿಕೊಂಡು ತನ್ನ ಆಸಕ್ತಿ ವಿಷಯಗಳಲ್ಲಿ ತೊಡಗಿಸಿಕೊಂಡು ಸಾಕಷ್ಟು ಸಂತೋಷದಿಂದ ಜೀವನ ಸಾಗಿಸುತ್ತಿದ್ದರು. ಆದರೆ ತನ್ನ 21ನೇ ವಯಸ್ಸಿನಲ್ಲಿ ಸಂಭವಿಸಿದ ರಸ್ತೆ ಅಪಘಾತ ಈಕೆಯ ಬಾಳಿಗೆ ದೊಡ್ಡ ತಿರುವು ನೀಡಿತು. ಈ ಅಪಘಾತದಲ್ಲಿ ಬೆನ್ನು ಮೂಳೆಗೆ ತೀವ್ರ ಪೆಟ್ಟು ಬಿದ್ದಿತು. ಅದನ್ನು ಸರಿಪಡಿಸಲು ವೈದ್ಯರು ಹಲವು ಬಾರಿ ಶಸ್ತ್ರಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ಪರಿಣಾಮ ರಾಜಲಕ್ಷ್ಮಿಗೆ ಗಾಲಿ ಕುರ್ಚಿಯೇ ಆಧಾರವಾಯಿತು.

ಇಂತಹ ಕಠಿಣ ಪರಿಸ್ಥಿತಿಯಲ್ಲಿ ಯಾರೇ ಆದರೂ ಮಾನಸಿಕವಾಗಿ ಕುಗ್ಗಿಹೋಗುತ್ತಾರೆ. ಆದರೆ ರಾಜಲಕ್ಷ್ಮಿ ಮಾತ್ರ ಇದನ್ನು ಸಮಸ್ಯೆ ಎಂದು ಪರಿಗಣಿಸಲೇ ಇಲ್ಲ. ಬದಲಾಗಿ ಒಂದೇ ಜನ್ಮದಲ್ಲಿ ಎರಡು ರೀತಿ ಬದುಕುವ ಅವಕಾಶ ಸಿಕ್ಕಿದೆ ಎಂದು ಸಕಾರಾತ್ಮಕವಾಗಿ ಯೋಚಿಸಿದರು. ಈ ವಿಕಲತೆ ತನ್ನ ಕನಸು ನನಸಾಗಿಸುವ ಪ್ರಯತ್ನಕ್ಕೆ ಅಡ್ಡಿ ಎಂದು ಭಾವಿಸಲೇ ಇಲ್ಲ.

ಗಾಲಿಕುರ್ಚಿಯ ಮೇಲೆ ಕೂರಬೇಕಲ್ಲ ಎಂದು ಚಿಂತಿಸದೇ ತನ್ನ ವಿದ್ಯಾಭ್ಯಾಸದತ್ತ ಗಮನ ಹರಿಸಿದ ರಾಜಲಕ್ಷ್ಮಿ, ದಂತ ಚಿಕಿತ್ಸೆಯಲ್ಲಿ ಪದವಿ ಪಡೆದರು. ಅದರ ಜತೆಗೆ ಮನಶಾಸ್ತ್ರವನ್ನು ಓದಿಕೊಂಡರು. ಫ್ಯಾಶನ್ ಡಿಸೈನ್ ಹಾಗೂ ವೇದಿಕ್ ಯೋಗದತ್ತ ಆಸಕ್ತಿ ಹೆಚ್ಚಿಸಿಕೊಂಡರು. ಅಲ್ಲದೆ ವೀರ್ ಚೇರ್ ಮೇಲೆ ಕೂತೂ ಸೌಂದರ್ಯ ಸ್ಪರ್ಧೆಯಲ್ಲೂ ಭಾಗವಹಿಸಿದರು.

ಪದವಿಯ ನಂತರ ದಂತ ಚಿಕಿತ್ಸೆಯಲ್ಲೇ ಸ್ನಾತಕೋತ್ತರ ಪದವಿ ಮಾಡಿದ ರಾಜಲಕ್ಷ್ಮಿ, ತನ್ನ ಪರಿಶ್ರಮಕ್ಕೆ ಫಲವಾಗಿ ಚಿನ್ನದ ಪದಕ ಪಡೆದುಕೊಂಡರು. ಹೀಗೆ ವಿದ್ಯಾಭ್ಯಾಸದಲ್ಲಿ ಚಿನ್ನದ ಪದಕ ಪಡೆದರೂ ಈಕೆಗೆ ಕೆಲಸ ನೀಡಲು ಯಾರೋಬ್ಬರೂ ಮುಂದಾಗಲಿಲ್ಲ. ಸಾಕಷ್ಟು ಪ್ರಯತ್ನಗಳ ನಂತರ ಈಕೆ ದಂತ ವೈದ್ಯ ಕಾಲೇಜಿನಲ್ಲಿ ಸಹಾಯಕ ಬೋದಕಿಯಾಗಿ ಕೆಲಸ ಆರಂಭಿಸಿದರು. ಕೆಲ ದಿನಗಳ ನಂತರ ಇವರೇ ತಮ್ಮದೇ ಆದ ದಂತ ಚಿಕಿತ್ಸಾ ಕ್ಲಿನಿಕ್ ಅನ್ನು ಆರಂಭಿಸಿದರು. ತಳಿ ವಿಜ್ಞಾನಕ್ಕೆ ಸಂಬಂಧಿಸಿದಂತೆ ಸಂಶೋಧನೆಯನ್ನು ನಡೆಸುತ್ತಿರುವ ಇವರು ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಸಂಶೋಧನಾ ಪತ್ರವನ್ನು ಮಂಡಿಸಿದ್ದಾರೆ.

ವಿಕಲತೆಯನ್ನು ಮೆಟ್ಟಿನಿಂತು ಸ್ವಾಭಿಮಾನಿಯಾಗಿ ಬದುಕುತ್ತಿರುವ ರಾಜಲಕ್ಷ್ಮಿ ಬೇರೆಯವರಿಗೂ ಸಹಾಯ ಮಾಡುವತ್ತ ಗಮನ ಹರಿಸುತ್ತಾರೆ. ಶಾಲೆಗಳಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ನಡೆಸುವುದು, ಗಾಲಿ ಕುರ್ಚಿಯನ್ನು ಅವಲಂಬಿಸುವವರಿಗೆ ತರಬೇತಿ ನೀಡುವುದು ಈಕೆಯ ಸಮಾಜ ಸೇವೆ. ಹೀಗೆ ತಮ್ಮ ಕೆಲಸಗಳ ಮಧ್ಯೆಯೂ ವೀಲ್ ಚೇರ್ ಬಾಸ್ಕೆಟ್ ಬಾಲ್ ಪಂದ್ಯಗಳಲ್ಲಿ, ವೀಲ್ ಚೇರ್ ಡ್ಯಾನ್ಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ರಾಜಲಕ್ಷ್ಮಿ ಅನೇಕರಿಗೆ ಸ್ಫೂರ್ತಿಯಾಗಿ ನಿಂತಿದ್ದಾರೆ.

ಈಕೆಯ ಈ ಸಾಧನೆಗೆ ‘ಎ ಬೋಲ್ಡ್ ವುಮನ್ ಇನ್ ಇಂಡಿಯಾ’, ‘ಎ ಪಾಸಿಟಿವ್ ಹೀರೋ’ ಎಂಬ ಗೌರವಗಳು ಸಿಕ್ಕಿವೆ.

ಭಾರತದಲ್ಲಿ ಈ ರೀತಿಯಾದ ವಿಕಲಚೇತನರು ಎದುರಿಸುವ ಸಮಸ್ಯೆಗಳ ಕುರಿತು ಮಾತನಾಡಿರುವ ರಾಜಲಕ್ಷ್ಮಿ ಹೇಳುವುದಿಷ್ಟು… ‘ನಮ್ಮ ದೇಶದಲ್ಲಿ ವಿಕಲಚೇತನರಿಗಾಗಿ ಮೂಲ ಸೌಕರ್ಯಗಳ ಕೊರತೆ ದೊಡ್ಡ ಸವಾಲಾಗಿದೆ. ಇನ್ನು ನಮ್ಮ ಸಮಾಜದ ಅನೇಕ ಮಂದಿ ವಿಕಲಚೇತನರನ್ನು ಭಿನ್ನವಾಗಿ ನೋಡುವ ಮನೋಭಾವ ಹೊಂದಿದ್ದಾರೆ. ವಿಕಲಚೇತನ ಎಂಬುದು ಒಬ್ಬ ವ್ಯಕ್ತಿಯ ಪರಿಸ್ಥಿತಿಯನ್ನು ಗುರುತಿಸಲು ಇರುವ ಕೇವಲ ಒಂದು ಪದವಷ್ಟೆ. ಈ ವಿಕಲಚೇತನವೆಂಬುದು ಕೇವಲ ದೈಹಿಕವಾಗಿ ಮಾತ್ರವಲ್ಲ, ಮಾನಸಿಕ ಹಾಗೂ ಭಾವನಾತ್ಮಕ ವಿಷಯಗಳಿಗೂ ಸಂಬಂಧಿಸುತ್ತದೆ. ಆದರೆ ದೈಹಿಕ ವಿಕಲಚೇತನ ಮಾತ್ರ ಎಲ್ಲರ ಕಣ್ಣಿಗೆ ಕಾಣುತ್ತದೆ.’

ಹೀಗೆ ತನ್ನ ಜೀವನದಲ್ಲಿ ಎದುರಾದ ಪ್ರತಿಯೊಂದು ಸವಾಲನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಅವನ್ನು ಗೆದ್ದು ಮುನ್ನುಗ್ಗುತ್ತಿರುವ ರಾಜಲಕ್ಷ್ಮಿ ನಿಜಕ್ಕೂ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಈಗ ಅಂತಾರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದು, ಇಲ್ಲೂ ಈಕೆ ಜಯಶಾಲಿಯಾಗಲಿ ಎಂದು ನಾವೆಲ್ಲರೂ ಹಾರೈಸೋಣ.

Leave a Reply