‘ಲಿಂಗಾಯತ ಎಂಬುದು ಒಂದು ರೈಲಾದರೆ ವೀರಶೈವ ಅದರ ಒಂದು ಬೋಗಿ ಅಷ್ಟೇ’- ಸಚಿವ ಎಂಬಿ ಪಾಟೀಲ್

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಲಿಂಗಾಯತ ಮತ್ತು ವೀರಶೈವ ನಡುವಣ ಸಮರ ಮುಂದುವರಿದಿದೆ. ಪ್ರತ್ಯೇಕ ಧರ್ಮದ ಸ್ಥಾನ ಆಗ್ರಹಿಸಿ ಕಲುಬುರಗಿಯಲ್ಲಿ ಇಂದು ರಾಷ್ಟ್ರೀಯ ಲಿಂಗಾಯತರ ಸಮಾವೇಶ ನಡೆದಿದ್ದು, ಈ ಸಮಾವೇಶದಲ್ಲಿ ಭಾಗವಹಿಸಿದ ಸಚಿವ ಎಂಬಿ ಪಾಟೀಲ್, ‘ಲಿಂಗಾಯತ ಸಮುದಾಯ ಒಂದು ರೈಲಾದರೆ, ವೀರಶೈವ ಎಂಬುದು ಕೇವಲ ಒಂದು ಬೋಗಿಯಷ್ಟೇ…’ ಎಂದು ಹೇಳಿದ್ದಾರೆ.

ಈ ಸಮಾವೇಶದಲ್ಲಿ ವೀರಶೈವರಿಗೆ ಸೆಡ್ಡು ಹೊಡೆಯುವ ಸಲುವಾಗಿ ರಾಷ್ಟ್ರೀಯ ಬಸವ ಸೇನೆಯನ್ನು ಸ್ಥಾಪಿಸಲಾಗಿದ್ದು, ಇದಕ್ಕೆ ಸಚಿವ ವಿನಯ್ ಕುಲಕರ್ಣಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಸಮಾರಂಭದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಆಗ್ರಹಿಸಿ ಮಾತನಾಡಿದ ಸಚಿವ ಎಂ.ಬಿ ಪಾಟೀಲ್ ಹೇಳಿದಿಷ್ಟು…

‘ಲಿಂಗಾಯತರ ಪರವಾಗಿ ಇಂದಿನಿಂದ ಹೊಸ ಹೋರಾಟ ಆರಂಭವಾಗಿದೆ. ಬಸವ ಸೇನೆಗೆ ಪ್ರತಿ ಗ್ರಾಮದಿಂದ 100 ಕಾರ್ಯಕರ್ತರ ಸೇರ್ಪಡೆ ಮಾಡಿಕೊಳ್ಳಲಾಗುವುದು. ಲಿಂಗಾಯತ ಸಮುದಾಯ 65 ಬೋಗಿಗಳಿರುವ ಒಂದು ರೈಲಾದರೆ, ವೀರಶೈವ ಅದರ ಒಂದು ಬೋಗಿಯಷ್ಟೇ. ಈ ವಿಚಾರದಲ್ಲಿ ವೀರಶೈವರ ಮನವೊಲಿಸುವ ಪ್ರಯತ್ನ ನಡೆಸಲಾಗುತ್ತಿದೆ. ಪ್ರತ್ಯೇಕ ಧರ್ಮ ಸ್ಥಾನಮಾನ ಬೇಕಿದ್ದರೆ ವೀರಶೈವರು ನಮ್ಮ ಜತೆ ಕೈಜೋಡಿಸಬೇಕು. ಇಲ್ಲವಾದರೆ ಅವರಪಾಡಿಗೆ ಅವರಿರಲಿ. ನಮ್ಮನ್ನು ನಮ್ಮ ಪಾಡಿಗೆ ಬಿಡಲಿ. ಲಿಂಗಾಯತರ ಜತೆ ವೀರಶೈವ ಹೆಸರು ಜೋಡಣೆ ಬೇಡ. ವೀರಶೈವ-ಲಿಂಗಾಯತ ಎಂದು ಹೇಳುತ್ತಿದ್ದರೆ ಪ್ರತ್ಯೇಕ ಧರ್ಮ ಸ್ಥಾನ ಸಿಗುವುದು ಕಷ್ಟವಾಗಲಿದೆ. ಹೀಗಾಗಿ ಈ ರೀತಿ ಹೆಸರು ಜೋಡಿಸುವುದು ಬೇಡ.’

ಬಸವ ಸೇನೆ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದ ಸಚಿವ ವಿನಯ್ ಕುಲಕರ್ಣಿ, ‘ಅನೇಕ ವರ್ಷಗಳಿಂದಲೂ ಲಿಂಗಾಯತರಿಗೆ ಅನ್ಯಾಯವಾಗಿದೆ. ಇನ್ನು ಮುಂದೆ ಈ ಅನ್ಯಾಯ ಸಹಿಸಲು ಸಾಧ್ಯವಿಲ್ಲ. ಯಾವುದೇ ಲಿಂಗಾಯತರಿಗೆ ಅನ್ಯಾಯವಾದರೂ ಬಸವ ಸೇನೆ ಅವರ ರಕ್ಷಣೆಗೆ ಬರಲಿದೆ. ಲಿಂಗಾಯತರ ಧರ್ಮದ ಬಗ್ಗೆ ಯಾರಿಗೂ ಅನುಮಾನ ಬೇಡ’ ಎಂದಿದ್ದಾರೆ.

ಇನ್ನು ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಮೌನವಹಿಸಿದ್ದ ಶರಣಬಸವೇಶ್ವರ ಸಂಸ್ಥಾನ ಪೀಠಾಧಿಪತಿ ಶರಣಬಸಪ್ಪ ಅಪ್ಪಾ ಅವರು ಈ ಸಮಾವೇಶದಲ್ಲಿ ಭಾಗವಹಿಸಿ ಅಚ್ಚರಿ ಮೂಡಿಸಿದ್ದರು. ಈ ಸಮಾವೇಶದಲ್ಲಿ ಮಾತನಾಡಿದ ಅವರು ವೀರಶೈರ ಪರವಾಗಿ ಮಾತುಗಳನ್ನಾಡಿದರು. ‘ವೀರಶೈವರಿಗೆ ರುದ್ರಾಕ್ಷಿ, ಲಿಂಗ, ಭಸ್ಮ ಧಾರಣೆ ಅತಿ ಮುಖ್ಯ’ ಎಂದರು. ಈ ವೇಳೆ ಆಕ್ರೋಶಗೊಂಡ ಬಸವ ಅಭಿಮಾನಿಗಳು ಜೈ ಲಿಂಗಾಯಿತ ಎಂದು ಕೂಗು ಹಾಕಿದರು. ಈ ವೇಳೆ ಅಪ್ಪಾ ಅವರು ಸಹ ಲಿಂಗಾಯತರಿಗೆ ಜೈ ಎಂದು ಕೂಗಿ ತಮ್ಮ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದರು.

Leave a Reply