ಯಡಿಯೂರಪ್ಪನವರ ‘ಮೀಟರ್’ ಏನು ಎಂದು ಸುರೇಶ್ ಕುಮಾರ್ ವಿವರಣೆ, ಈಶ್ವರಪ್ಪ-ಸಿದ್ದು ನಡುವೆ ವಾಕ್ಸಮರ

ಡಿಜಿಟಲ್ ಕನ್ನಡ ಟೀಮ್:

ಮಾಜಿ ಮುಂಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಮೀಟರ್ ಇಲ್ಲ ಎಂದು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿ ನಾಯಕರಾದ ಸುರೇಶ್ ಕುಮಾರ್ ಹಾಗೂ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿಗಳ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿರುವ ಸುರೇಶ್ ಕುಮಾರ್ ಹೇಳಿದಿಷ್ಟು…

ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳು ಬಿಎಸ್ ವೈಗೆ  ಮೀಟರ್ ಇಲ್ಲ ಎಂಬ ಹೇಳಿಕೆ ನೀಡಿದ್ದಾರೆ. ರಾಜ್ಯದ ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಸಿದ್ದರಾಮಯ್ಯನವರು ಈ ಪದ ಉಪಯೋಗಿಸಬಾರದಾಗಿತ್ತು. ಈ ಪದ ಬಳಸುವ ಮೂಲಕ ಸಿದ್ದರಾಮಯ್ಯನವರು ಎದುರಿಗಿದ್ದ ಜನರ ಚಪ್ಪಾಳೆ ಗಿಟ್ಟಿಸಿಕೊಂಡರೂ ಸಣ್ಣವರಾಗಿಬಿಟ್ಟರು.‌

ಈ ಮೀಟರ್ ಎಂಬುದು ಭೂಗತ ಜಗತ್ತಿನಲ್ಲಿ, ರೌಡಿಗಳ ಸಾಮ್ರಾಜ್ಯದಲ್ಲಿ  ಪ್ರಚಲಿತವಾಗಿರುವ ಪದ.‌ ಇದು ಓರ್ವ ಗೌರವಾನ್ವಿತ ಮುಖ್ಯಮಂತ್ರಿಗಳು ಬಳಸಬಹುದಾದ ಪದವಲ್ಲ. ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯೆ ಕೊಡಬೇಕಾದ ಅನಿವಾರ್ಯತೆಯಿಂದ ನಾನು ಈಗ ಆ ಪದ ಬಳಸಬೇಕಾಗಿದೆ. ಕ್ಷಮಿಸಿ.‌

ಯಡಿಯೂರಪ್ಪನವರಿಗೆ ಮೀಟರ್ ಇಲ್ಲ ಎಂದು ನಡತೆಯ ಪ್ರಮಾಣ ಪತ್ರ ಕೊಟ್ಟೇಬಿಟ್ಟಿರುವ ಸಿದ್ದರಾಮಯ್ಯನವರಿಗೆ ಅದು ಇದೆಯೇ? ಓರ್ವ ಮುಖ್ಯಮಂತ್ರಿಯಾಗಿ ಅವರು ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರನ್ನು ಸಲೀಸಾಗಿ ಭೇಟಿಯಾಗಲು ಅಪಾಯಿಂಟ್ಮೆಂಟ್ ತೆಗೆದುಕೊಳ್ಳುವಷ್ಟೂ ಮೀಟರ್ ಇದೆ ಎಂಬುದನ್ನು ಸಿದ್ದರಾಮಯ್ಯನವರು ಈವರೆಗೂ ರುಜುವಾತು ಮಾಡಿಲ್ಲ. ಅದಕ್ಕಾಗಿ ಸಚಿವ ಸಂಪುಟ ವಿಸ್ತರಣೆ ಎಷ್ಟು ಕಾಲ ಮುಂದೆ ಹೋಯಿತೆಂದು ಇಡೀ ರಾಜ್ಯದ ಜನತೆಗೆ ಗೊತ್ತಿದೆ.

ಯಡಿಯೂರಪ್ಪನವರು ಶಾಸಕರಾಗುವ ಮುನ್ನ ಶಿಕಾರಿಪುರದಲ್ಲಿ ಜೀತದಾಳುಗಳ ಸಮಸ್ಯೆ ವಿರುದ್ಧ ಪರಿಣಾಮಕಾರಿ ಹೋರಾಟ ಮಾಡಿದ್ದರು. ಆಗ ಶಾಸಕರ ಬೆಂಬಲಿಗರು ತನ್ನ ತಲೆ ಒಡೆದರೂ ಆ ಹೋರಾಟ ಕೈಬಿಡದೆ ತನಗೆ ಮೀಟರ್ ಇದೆಯೆಂದು ಆಗಲೇ ರುಜುವಾತು ಮಾಡಿದ್ದರು ಯಡಿಯೂರಪ್ಪನವರು. ಇಂತಹ ಯಾವುದಾದರೂ ಒಂದು ದಿಟ್ಟ ಹೋರಾಟವನ್ನು ಮೀಟರ್ ಪ್ರತಿಪಾದಕ  ಸಿದ್ದರಾಮಯ್ಯನವರು ಕೈಗೆತ್ತಿಗೊಂಡು ಯಶಸ್ವಿಯಾಗಿದ್ದಾರಾ?

ಸಿದ್ದರಾಮಯ್ಯನವರು ಸದ್ಯದಲ್ಲಿರುವ ಕಾಂಗ್ರೆಸ್ ಪಕ್ಷದ ಮಾಜಿ ಅಧಿನಾಯಕಿ ತುರ್ತು ಪರಿಸ್ಥಿತಿ ಘೋಷಿಸಿದ್ದಾಗ ಬಂಧಿತರಾಗಿದ್ದ ಬಿಎಸ್ ವೈ ಜೈಲಿನಲ್ಲಿ ಕೈದಿಗಳಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ಹೋರಾಟ ಮಾಡಿ ಜೈಲಿನಲ್ಲಿಯೇ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದರು. ಇದನ್ನು ಮೀಟರ್ ಇದ್ದವರು ಮಾತ್ರ ಮಾಡಲು ಸಾಧ್ಯ ಸಿದ್ದರಾಮಯ್ಯನವರೇ.

ನಮ್ಮ ಪಕ್ಷಕ್ಕೆ ಶಕ್ತಿಯೇ ಇಲ್ಲದ 80 ರ ದಶಕದ ಆ ದಿನಗಳಲ್ಲಿ ರೈತರ, ಕೃಷಿ ಕಾರ್ಮಿಕರ ಸಮಸ್ಯೆಯನ್ನು ನಿವಾರಿಸಲು ಅದೆಷ್ಟು ಹೋರಾಟಗಳನ್ನು ಮಾಡುವ ಮೂಲಕ ಪಕ್ಷವನ್ನು ಕಟ್ಟಿದರು ಮೀಟರ್ ಇರುವ ಯಡಿಯೂರಪ್ಪನವರು ಗೊತ್ತೇ ಸ್ವಾಮಿ.

ಯಡಿಯೂರಪ್ಪನವರು 1985-89ರ ಅವಧಿಯಲ್ಲಿ ಬಿಜೆಪಿಯ ಒಬ್ಬರೇ ಶಾಸಕರಾಗಿದ್ದಾಗ, ಅಂದಿನ ಅರಣ್ಯ ಸಚಿವ ದಿ.ರಾಚಯ್ಯನವರು ಒಂದು ವಿಧೇಯಕ ತಂದಾಗ ಅದರಿಂದಾಗುವ ದೂರಗಾಮಿ ಪರಿಣಾಮಗಳನ್ನು ವಿವರಿಸಿ ಮೌನವಾಗಿ ಪ್ರತಿಭಟನೆ ನಡೆಸಿ ಆ ವಿಧೇಯಕವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಮಾಡಿದ್ದರಲ್ಲ, ಅದು ಸ್ವಾಮಿ ಯಡಿಯೂರಪ್ಪನವರ ಮೀಟರ್.

ಅದು ಸರಿ, ನೀವು ಯಾವಾಗಲೂ ಯಾರೋ ಕಟ್ಟಿ ಶಕ್ತಿಶಾಲಿಯನ್ನಾಗಿ ಮಾಡಿಬಿಟ್ಟಿರುವ ಪಕ್ಷಕ್ಕೇ ಬಂದು ಸೇರಿದವರಲ್ಲವೇ? ಬಳ್ಳಾರಿಗೆ ಮಾಡಿದ ವೈಭವದಿಂದ ಕೂಡಿದ ಪಾದಯಾತ್ರೆ ಬಿಟ್ಟರೆ ಯಾವುದೇ ಪಕ್ಷ ಕಟ್ಟುವಲ್ಲಿ ನಿಮ್ಮ ಪಾತ್ರವೇನಿದೆ ಸ್ವಾಮಿ? ಓರ್ವ ಮುಖ್ಯಮಂತ್ರಿಯಾಗಿ ಗೌರವದಿಂದ ಕೂಡಿದ ಪದಗಳು ನಿಮ್ಮ ಬಾಯಿಂದ ಹೊರಬಂದರೆ (ಇನ್ನೊಬ್ಬರ ಕುರಿತು ಟೀಕೆ ಮಾಡುವಾಗಲೂ) ನಾಡಿನ ಜನತೆಗೆ ನೀವೊಬ್ಬ ಉತ್ತಮ ಉದಾಹರಣೆಯಾಗುತ್ತೀರಿ.‌

ಇದೇ ರೀತಿ ಭೂಗತಲೋಕದ ಸ್ವತ್ತಾಗಿರುವ ಭಾಷೆಯನ್ನು ನಿಮ್ಮದಾಗಿಸಿಕೊಂಡರೆ, ನೀವೊಬ್ಬ ಸಮಾಜದ ದೃಷ್ಟಿಯಿಂದ ಕೆಟ್ಟ ಉದಾಹರಣೆಯಾಗುತ್ತೀರಿ.‌ ಈ ಕುರಿತ ಆಯ್ಕೆ ನಿಮ್ಮದು. ಯಾವುದೇ ರಾಜಕೀಯ ನಾಯಕ ರೌಡಿ ಜಗತ್ತಿನ ಭಾಷೆಯ  ” ಒತ್ತುವರಿ” ಮಾಡಬಾರದು.

ಈ ಮಧ್ಯೆ ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪನವರು ಮುಖ್ಯಮಂತ್ರಿಗಳ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಸಿದ್ದರಾಮಯ್ಯ ಬೀದಿ ದಾಸಯ್ಯ ಇದ್ದಂತೆ ಎಂದು ಟೀಕೆ ಮಾಡಿದ್ದಾರೆ. ಈಶ್ವರಪ್ಪನವರ ಈ ಟೀಕೆಗೆ ಪ್ರತ್ಯುತ್ತರ ನೀಡಿರುವ ಸಿದ್ದರಾಮಯ್ಯ, ‘ಮತ ಭಿಕ್ಷೆಗೆ ಜನರ ಮುಂದೆ ಹೋಗುವ ನಾವು ದಾಸಯ್ಯಗಳೇ ಈಶ್ವರಪ್ಪ ಅವರಿಗೆ ಮೆದುಳು ಇಲ್ಲ. ಬುದ್ದಿ ಸಹ ಕಡಿಮೆ ಎಂದು ವ್ಯಂಗ್ಯವಾಡಿದರು. ದಾಸಯ್ಯ ಎಂದರೆ ಯಾರು? ಭಿಕ್ಷೆ ಬೇಡುವವರು. ಪ್ರಜಾಪ್ರಭುತ್ವದಲ್ಲಿ ಜನರೇ ನಮ್ಮ ಮಾಲೀಕರು. ಅವರ ಬಳಿ ಮತ ಭಿಕ್ಷೆ ಬೇಡುವ ಎಲ್ಲರೂ ದಾಸಯ್ಯಗಳೇ’ ಎಂದರು.

Leave a Reply