‘ಅವರು ಹೆಚ್ಚು ದಿನ ಉಳಿಯೋಲ್ಲ…’ ಉತ್ತರ ಕೊರಿಯಾಗೆ ಟ್ರಂಪ್ ಎಚ್ಚರಿಕೆ, ಅತ್ತ ಅಮೆರಿಕ ಬಾಂಬರ್ ವಿಮಾನಗಳ ಹಾರಾಟ ಆರಂಭ

ಡಿಜಿಟಲ್ ಕನ್ನಡ ಟೀಮ್:

ವಿನಾಶ ಕಾಲೇ ವಿಪರೀತ ಬುದ್ಧಿ ಎಂಬ ಮಾತಿನ ಹಾಗೆ, ಸದ್ಯ ಉತ್ತರ ಕೊರಿಯಾ ತನ್ನ ಅಹಂಕಾರದಿಂದ ಅಮೆರಿಕ ಸೇರಿದಂತೆ ಇತರೆ ದೇಶಗಳ ವಿರುದ್ಧ ತೊಡೆ ತಟ್ಟಿ ನಿಲ್ಲುತ್ತಿದೆ. ಹೀಗೆ ದರ್ಪದಿಂದ ಮೆರೆಯುತ್ತಿರುವ ಉತ್ತರ ಕೊರಿಯಾ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂದೇಶ ರವಾನಿಸಿದ್ದಾರೆ.

ಇದೇ ಸಭೆಯಲ್ಲಿ ಮಾತನಾಡಿದ್ದ ಉತ್ತರ ಕೊರಿಯಾ ವಿದೇಶಾಂಗ ಸಚಿವ ರಿ ಯಾಂಗ್ ಹೊ, ಅಮೆರಿಕ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು. ಅಲ್ಲದೆ ಡೊನಾಲ್ಡ್ ಟ್ರಂಪ್ ಅವರನ್ನು ಮಾನಸಿಕ ಅಸ್ವಸ್ಥ ಎಂದು ಕೂಡ ಕರೆದಿದ್ದರಲ್ಲದೇ, ಅಣ್ವಸ್ತ್ರವನ್ನು ಹಿಡಿದು ನಿಂತಿರುವ ಅಮೆರಿಕದ ಅಧ್ಯಕ್ಷ ವಿಶ್ವದ ಶಾಂತಿಗೆ ಮಾರಕ ಎಂದೂ ಟೀಕಿಸಿದ್ದರು. ಇದಕ್ಕೂ ಮುನ್ನ ಡೊನಾಲ್ಡ್ ಟ್ರಂಪ್ ಉತ್ತರ ಕೊರಿಯಾದ ಅಧ್ಯಕ್ಷ ಕಿಂಮ್ ಜೊಂಗ್ ಉನ್ ಅವರನ್ನು ರಾಕೆಟ್ ಮನುಷ್ಯ ಎಂದು ವ್ಯಂಗ್ಯ ಮಾಡಿದ್ದರು. ಉತ್ತರ ಕೊರಿಯಾದ ನಾಯಕನ ಟೀಕೆಗೆ ಟ್ವಿಟರ್ ನಲ್ಲಿ ಉತ್ತರಿಸಿದ್ದು, ಅದು ಹಿಗಿದೆ… ‘ಈಗಷ್ಟೇ ವಿಶ್ವಸಂಸ್ಥೆಯಲ್ಲಿ ಉತ್ತರ ಕೊರಿಯಾ ವಿದೇಶಾಂಗ ಸಚಿವರ ಮಾತನ್ನು ಕೇಳಿದೆ. ಅವರು ಹೀಗೆ ರಾಕೆಟ್ ಮನುಷ್ಯನ ಮಾತನ್ನು ಕೇಳುತ್ತಾ ಸಾಗಿದರೆ, ಹೆಚ್ಚು ದಿನ ಉಳಿಯುವುದಿಲ್ಲ.’

ಹೀಗೆ ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಅಮೆರಿಕದ ಬಾಂಬರ್ ವಿಮಾನಗಳು ಉತ್ತರ ಕೊರಿಯಾ ಸಮೀಪ ಹಾರಾಟ ನಡೆಸುತ್ತಿದ್ದು, ತನ್ನ ಬಳಿ ಇರುವ ಮಿಲಿಟರಿ ದಾಳಿಯ ಆಯ್ಕೆಯನ್ನು ಉತ್ತರ ಕೊರಿಯಾಗೆ ಮನವರಿಕೆ ಮಾಡುವ ಪ್ರಯತ್ನ ನಡೆಸಿದೆ. ಶನಿವಾರ ಅಮೆರಿಕದ ಬಿ-1ಬಿ ಲ್ಯಾನ್ಸರ್ ಹಾಗೂ ಜಪಾನಿನ ಎಫ್-15 ಫೈಟರ್ ಜೆಟ್ ಗಳು ಜಂಟಿಯಾಗಿ ಹಾರಾಟ ನಡೆಸಿವೆ. ಬಾಂಬರ್ ಯುದ್ಧ ವಿಮಾನಗಳು ಉತ್ತರ ಕೊರಿಯಾದ ಕರಾವಳಿ ಪ್ರದೇಶಗಳ ಬಳಿ ಹಾರಾಟ ನಡೆಸುವ ಮೂಲಕ ಕಿಮ್ ಜೊಂಗ್ ಗೆ ಎಚ್ಚರಿಕೆ ರವಾನಿಸಲಾಗಿದೆ.

ಈ ಬೆಳವಣಿಗೆಯನ್ನು ಖಂಡಿಸಿರುವ ಉತ್ತರ ಕೊರಿಯಾದ ವಕ್ತಾರ ಡಾನಾ ವೈಟ್, ಇದು ಮಿಲಿಟರಿಯೇತ್ತರ ಪ್ರದೇಶವಾಗಿದ್ದು, ಉತ್ತರ ಕೊರಿಯಾದ ಕರಾವಳಿ ಪ್ರದೇಶದಲ್ಲಿ ಅಮೆರಿಕದ ಯುದ್ಧ ವಿಮಾನಗಳಾಗಲಿ ಫೈಟರ್ ಜೆಟ್ ಗಳಾಗಲಿ ಹಾರಾಟ ನಡೆಸಿದರೆ, ಅದರ ಪರಿಣಾಮ ಬೇರೆಯದೇ ಆಗಲಿದೆ ಎಂದಿದ್ದಾರೆ.

Leave a Reply