ಇಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಭೆ, ಉದ್ಯೋಗ ಹಾಗೂ ಆರ್ಥಿಕತೆಯ ಚರ್ಚೆ ಸಾಧ್ಯತೆ

ಡಿಜಿಟಲ್ ಕನ್ನಡ ಟೀಮ್:

ಉದ್ಯೋಗ ಸೃಷ್ಟಿ, ಆರ್ಥಿಕ ಪ್ರಗತಿಯಲ್ಲಿ ಕುಸಿತ, ಚುನಾವಣ ತಂತ್ರಗಾರಿಕೆ ಸೇರಿದಂತೆ ಪ್ರಮುಖ ವಿಚಾರಗಳು ಇಂದು ನವದೆಹಲಿಯಲ್ಲಿ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಗುವ ಸಾಧ್ಯತೆಗಳಿವೆ.

ದೆಹಲಿಯ ತಲ್ಕಟೋರಾ ಕ್ರೀಡಾಂಗಣದಲ್ಲಿ ನಡೆಯಲಿರುವ ಸಭೆಯಲ್ಲಿ 13 ರಾಜ್ಯಗಳ ಮುಖ್ಯಮಂತ್ರಿಗಳು, 1400 ಶಾಸಕರು ಹಾಗೂ 280 ಸಂಸದರು ಸೇರಿದಂತೆ ಆಡಳಿತ ಪಕ್ಷದಿಂದ 2500 ಸದಸ್ಯರು ಭಾಗವಹಿಸಲಿದ್ದಾರೆ. ಈ ಸಭೆಯ ಕುರಿತಾದ ಪ್ರಮುಖ ಅಂಶಗಳು ಹೀಗಿವೆ…

  • ಸಾಮಾನ್ಯವಾಗಿ ಬಿಜೆಪಿ ಕಾರ್ಯಕಾರಿ ಸಮಿತಿಯು ನಾಲ್ಕು ಗೋಡೆಗಳ ಮಧ್ಯೆ ನಡೆಯಲಿರುವ ಸಭೆಯಾಗಿತ್ತು. ಪಕ್ಷದ ಪ್ರಮುಖ 120 ನಾಯಕರು ಈ ಸಭೆಯಲ್ಲಿ ಭಾಗವಹಿಸುತ್ತಿದ್ದರು. ಆದರೆ ಇಂದು ವಿಸ್ತಾರವಾದ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಎಂದು ಕರೆಯಲಾಗಿದ್ದು, ಪಕ್ಷದ ಸಂಸ್ಥಾಪಕರಾದ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನವನ್ನು ಆಚರಿಸಲಾಗುವುದು.
  • ಈ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಧ್ಯಕ್ಷತೆ ವಹಿಸಲಿದ್ದು, ನಿನ್ನೆಯಷ್ಟೇ ಇವರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಇಂದಿನ ಸಭೆಯ ಪ್ರಮುಖ ಅಜೆಂಡಾ ಕುರಿತು ಚರ್ಚಿಸಿದ್ದಾರೆ.
  • ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅರು ಭಾಗವಹಿಸುತ್ತಿದ್ದು, ತಮ್ಮ ಸರ್ಕಾರದ ಸಾಧನೆ ಹಾಗೂ ಸರ್ಕಾರ ಯಾವ ವಿಷಯದಲ್ಲಿ ಹಿಂದುಳಿದಿದೆ ಎಂಬುದರ ಕುರಿತು ಪರಾಮರ್ಶೆ ನಡೆಸುವ ನಿರೀಕ್ಷೆ ಇದೆ. ಅದರಲ್ಲೂ ಉದ್ಯೋಗ ಸೃಷ್ಟಿ ಹಾಗೂ ಕುಸಿಯುತ್ತಿರುವ ಆರ್ಥಿಕ ಪ್ರಗತಿಯನ್ನು ನಿಭಾಯಿಸುವ ಬಗ್ಗೆ ಚರ್ಚೆಯಾಗಲಿದೆ. ಹೀಗಾಗಿ ಈ ಸಭೆ ಮಹತ್ವ ಪಡೆದುಕೊಂಡಿದೆ. ಇನ್ನು ಮೋದಿ ಅವರು ಈ ಸಭೆಯಲ್ಲಿ ಕಳೆದ ವರ್ಷ ತಮ್ಮ ಸರ್ಕಾರದ ನೋಟು ಅಮಾನ್ಯ ನಿರ್ಧಾರ ಹಾಗೂ ಇತ್ತಿಚೆಗೆ ಜಾರಿಯಾದ ಜಿಎಸ್ಟಿ ಮಸೂದೆಯನ್ನು ಟೀಕಿಸುತ್ತಿರುವ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಳ್ಳುವ ನಿರೀಕ್ಷೆ ಇದೆ.
  • ಪ್ರಧಾನಿಯವರ ಪ್ರಮುಖ ಅಜೆಂಡಾವಾಗಿರುವ ಅಭಿವೃದ್ಧಿಯ ವಿಷಯ ಪ್ರಮುಖವಾಗಿ ಚರ್ಚೆಯಾಗಲಿದ್ದು, ಇದರ ಜತೆಗೆ ಜನಸಾಮಾನ್ಯರೊಂದಿಗೆ ಬಿಜೆಪಿ ಪಕ್ಷ ಹೇಗೆ ಸಂಪರ್ಕ ಬೆಳೆಸಿಕೊಳ್ಳಬೇಕು ಎಂಬುದರ ಕುರಿತು ಚರ್ಚಿಸಲಾಗುವುದು.
  • ಇವುಗಳ ಜತೆಗೆ ಈ ವರ್ಷ ನಡೆಯಲಿರುವ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆ, ಮುಂದಿನ ವರ್ಷ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಹಾಗೂ 2019ರ ಲೋಕಸಭೆ ಚುನಾವಣೆಗೂ ಕಾರ್ಯತಂತ್ರ ರೂಪಿಸುವ ಕುರಿತಾಗಿ ಚರ್ಚೆ ನಡೆಯುವುದು ಬಹುತೇಕ ಖಚಿತವಾಗಿದೆ.
  • ‘ಕೇಂದ್ರದಲ್ಲಿ ಬಿಜೆಪಿ ಸರ್ಕಾರವು 3.5 ವರ್ಷಗಳನ್ನು ಪೂರೈಸಿದೆ. ಈ ಅವಧಿಯಲ್ಲಿ ಸರ್ಕಾರ ಏನೆಲ್ಲಾ ಸಾಧನೆ ಮಾಡಿದೆ ಹಾಗೂ ಮುಂದಿನ ದಿನಗಳಲ್ಲಿ ಹೇಗೆಲ್ಲಾ ಕಾರ್ಯನಿರ್ವಹಿಸಬೇಕು ಎಂಬುದರ ಬಗ್ಗೆ ಈ ಸಭೆಯಲ್ಲಿ ಚರ್ತಿಸಲಾಗುವುದು’ ಎಂದು ಈ ಸಭೆಯ ಆಯೋಜನೆ ಜವಾಬ್ದಾರಿ ಹೊತ್ತಿರುವ ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ತಿಳಿಸಿದ್ದಾರೆ.

Leave a Reply