ಬಿಎಸ್‌ವೈ ಕ್ಷೇತ್ರ ಬದಲು ಒತ್ತಡದ ಹಿಂದಿನ ಮರ್ಮವೇನು?!

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಕ್ಷೇತ್ರ ಬದಲಾವಣೆ ಹಿಂದಿರುವ ಮರ್ಮವಾದರೂ ಏನು? ಈ ಮರ್ಮದ ಹಿಂದೆ ಯಾರಿದ್ದಾರೆ? ಅವರೊಬ್ಬರ ಕ್ಷೇತ್ರ ಮಾತ್ರ ಬದಲಾವಣೆ ಮಾಡುತ್ತಾರಾ? ಇಲ್ಲ, ಈಗಾಗಲೇ ಓಡಾಡುತ್ತಿರುವ ಮಾಹಿತಿಯಂತೆ 25 ಕ್ಕೂ ಹೆಚ್ಚು ಮುಖಂಡರ ಕ್ಷೇತ್ರಗಳನ್ನು ಬದಲು ಮಾಡುತ್ತಾರಾ? ನಗಣ್ಯ ಪ್ರದೇಶಗಳಲ್ಲಿ ಬಿಜೆಪಿ ಪ್ರಬಲ ಮಾಡುವ ತಂತ್ರಗಾರಿಕೆ ಇದರ ಹಿಂದಿದೆಯೇ? ಅಥವಾ ಕ್ಷೇತ್ರ ಬದಲಾವಣೆಗೆ ಯಡಿಯೂರಪ್ಪನವರ ಮನಸ್ಸು ಹದಗೊಳಿಸಲು ಅನ್ಯ ನಾಯಕರ ಹೆಸರನ್ನು ಸುಖಾಸುಮ್ಮನೆ ಹರಿಯಬಿಡಲಾಗಿದೆಯೇ? ಎಲ್ಲಕ್ಕಿಂತ ಮಿಗಿಲಾಗಿ ಯಡಿಯೂರಪ್ಪನವರನ್ನು ಹಣಿಯುವ ಉದ್ದೇಶವೇನಾದರೂ ಇದರ ಹಿಂದಿದೆಯೇ?

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಬಿಜೆಪಿ ರಣತಂತ್ರದ ಭಾಗವಾಗಿ ನಡೆಯುತ್ತಿರುವ ನಾನಾ ಬೆಳವಣಿಗೆಗಳು ಅದೇ ಕಾಲಕ್ಕೆ ನಾನಾ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಉತ್ತರ ಬಹಳ ಕ್ಲಿಷ್ಟವಾಗಿದೆ. ನಾನಾ ರಾಜಕೀಯ ಪಕ್ಷಗಳು ಅವುಗಳದೇ ಆದ ತಂತ್ರ ಹೆಣೆಯುತ್ತಿವೆ. ಅವುಗಳ ಪೈಕಿ ಮುನ್ನಲೆಗೆ ಬಂದಿರುವುದು ನಾಯಕರ ಕ್ಷೇತ್ರ ಬದಲಾವಣೆ ವಿಚಾರ. ಅದೂ ಉತ್ತರ ಕರ್ನಾಟಕ ಭಾಗದ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸುವುದು. ಈಗಾಗಲೇ ಆ ಭಾಗದ ಹತ್ತು ಹಲವು ಮುಖಂಡರು ತಮ್ಮ-ತಮ್ಮ ಪಕ್ಷದ ಉನ್ನತಸ್ತರದ ನಾಯಕರಿಗೆ ಕ್ಷೇತ್ರ ಬಿಟ್ಟುಕೊಡಲು ತಾಮುಂದು, ನಾಮುಂದು ಎಂದು ದಮ್ಮಯ್ಯ-ದತ್ತಯ್ಯ ಗುಡ್ಡೆ ಹಾಕಿ ಅವರ ಮನಗೆಲ್ಲಲು ಶಕ್ತಿ ಮೀರಿ ಪ್ರಯತ್ನ ಮಾಡಿದ್ದಾರೆ. ಆದರೆ ಇದ್ಯಾವುದಕ್ಕೂ ಬಗ್ಗದ  ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಆರಂಭದಲ್ಲಿ ಆಸ್ಥೆ ತೋರಿದರೂ, ಅಂತಿಮವಾಗಿ ಈ ಪ್ರಸ್ತಾಪವನ್ನೇ ತಳ್ಳಿ ಬಿಸಾಡಿದ್ದಾರೆ. ಅದೇ ರೀತಿ ಯಡಿಯೂರಪ್ಪನವರು ಕೂಡ. ಪಕ್ಷದ ರಾಷ್ಟ್ರೀಯ ನಾಯಕರಾದ ಅಮಿತ್ ಶಾ ಅವರು ಉತ್ತರ ಕರ್ನಾಟಕದ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸುವಂತೆ ಕೊಟ್ಟ ಸಲಹೆಯನ್ನು ಒಲ್ಲದ ಮನಸ್ಸಿನಿಂದಲೇ ಅಪ್ಪಿಕೊಂಡಿದ್ದ ಯಡಿಯೂರಪ್ಪನವರು ಇದೀಗ ತಮ್ಮ ಮೂಗಿಗೆ ಬೇರಾವುದೋ ಕೆಟ್ಟ ವಾಸನೆ ಅಡರಿದ ಪರಿಣಾಮ ಹಿಂದೇಟು ಹಾಕುತ್ತಿದ್ದಾರೆ. ಬೇರೆಲ್ಲರ ಹೆಸರು ತೋರಿಸಿ ತಮ್ಮೊಬ್ಬರನ್ನೇ ಮಾತ್ರ ಕ್ಷೇತ್ರ ಬದಲಾವಣೆ ಖೆಡ್ಡಾಕ್ಕೆ ಕೆಡವುವ ಹುನ್ನಾರ ಬಲವಾಗಿ ಕಾಡಿರುವ ಕಾರಣ ಸ್ವಂತ ಕ್ಷೇತ್ರ ಶಿಕಾರಿಪುರದಿಂದಲೇ ಸ್ಪರ್ಧಿಸಲು ಒಲವು ತೋರಿದ್ದಾರೆ.

ಈವರೆಗೂ ಲಿಂಗಾಯತ ಸಮುದಾಯ ಒಗ್ಗಟ್ಟಿನ ಪ್ರತಿರೂಪವಾಗಿತ್ತು. ಯಾರೂ ಕೂಡ ಅದನ್ನು ಅಲ್ಲಾಡಿಸಲು ಆಗಿರಲಿಲ್ಲ. ನೂರಾರು ಮಠಗಳು ಇದ್ದರೂ ಸಾಮಾಜಿಕ, ಧಾರ್ಮಿಕ, ರಾಜಕೀಯ ಮತ್ತಿತರ ವಿಚಾರಗಳು ಬಂದಾಗ ಒಂದೇ ಸ್ವರ ಧ್ವನಿಸುತ್ತಿತ್ತು. ಅಭಿಪ್ರಾಯ ಬೇಧ ಇದ್ದರೂ ಒಗ್ಗಟ್ಟಿನಲ್ಲಿ ಕಂಪನವಿರಲಿಲ್ಲ. ಆದರೆ ಇತ್ತೀಚೆಗೆ ಲಿಂಗಾಯತ ಮತ್ತು ವೀರಶೈವ ಬಣದ ಸಮಾನಾಂತರ ವಿಭಜನೆ ಸಮುದಾಯದಲ್ಲಿ ವೈರುಧ್ಯಗಳನ್ನು ಹುಟ್ಟುಹಾಕಿದೆ. ಹತ್ತು-ಹಲವು ಉಪಪಂಗಡಗಳು ಸೇರಿ, ಬಸವಣ್ಣನವರ ತತ್ವದ ಆಧಾರದ ಮೇಲೆ ರೂಪಿತವಾಗಿರುವ ಲಿಂಗಾಯತ ಸಮುದಾಯವನ್ನು ತಾವು ಈಗಾಗಲೇ ಬೆಂಬಲ ಕ್ರೋಢೀಕರಿಸಿರುವ ‘ಅಹಿಂದ’ದ ವಿಸ್ತೃತ ಸ್ವರೂಪದಲ್ಲಿ ಮತಬ್ಯಾಂಕ್ ಆಗಿ ಪರಿವರ್ತಿಸಿಕೊಳ್ಳುವುದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ದೂರಗಾಮಿ ಚಿಂತನೆ. ಲಿಂಗಾಯತ ಸ್ವತಂತ್ರ್ಯ ಧರ್ಮ ಹೋರಾಟಕ್ಕೆ ಸರಕಾರದ ಪರೋಕ್ಷ ಬೆಂಬಲ ನೀಡುವ ಮೂಲಕ ಈ ಸಮುದಾಯವನ್ನು ರಾಜಕೀಯವಾಗಿ ಪಲ್ಲಟಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಸವ ತತ್ವದಲ್ಲಿ ನಂಬಿಕೆ ಇಟ್ಟಿರುವವರನ್ನು ಕಾಂಗ್ರೆಸ್‌ನತ್ತ ಸೆಳೆವುದು ಮೂಲಮಂತ್ರ.

ಯಡಿಯೂರಪ್ಪನವರು ಈವರೆಗೂ ವೀರಶೈವ ಮತ್ತು ಲಿಂಗಾಯತ ಎರಡೂ ಗುಂಪುಗಳ ಅನಭಿಷಕ್ತ ನಾಯಕರಾಗಿ ಬಿಂಬಿತರಾಗಿದ್ದರು. ಆದರೆ ಈಗ ಅಲ್ಲೊಂದು ಚೂರು ಅಂತರ ಏರ್ಪಟ್ಟಿದೆ. ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರು ತುಮಕೂರು ಸಿದ್ಧಗಂಗಾ ಮಠದ ಶ್ರೀಗಳ ಬೆಂಬಲ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಇದೆ ಎಂದು ಘೋಷಣೆ ಮಾಡಿದ ನಂತರ ಮಠಕ್ಕೆ ತರಾತುರಿಯಲ್ಲಿ ಭೇಟಿಯಿತ್ತ ಯಡಿಯೂರಪ್ಪನವರು ಅದಕ್ಕೆ ವ್ಯತಿರಿಕ್ತ ಹೇಳಿಕೆ ಹೊರಬೀಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಸಮುದಾಯದಲ್ಲಿ ಪಲ್ಲಟ, ರಾಜಕೀಯ ಗುಂಪುಗಾರಿಕೆ ಉಚ್ಛ್ರಾಯ ಸ್ಥಿತಿ ತಲುಪಿದ್ದೇ ಇಲ್ಲಿಂದ. ಯಡಿಯೂರಪ್ಪನವರು ಲಿಂಗಾಯತ ಸ್ವತಂತ್ರ ಧರ್ಮ ಆಗುವುದರ ವಿರುದ್ಧವಿದ್ದಾರೆ, ಅದೇ ಕಾಲಕ್ಕೆ ಅವರು ವೀರಶೈವ ಸಮುದಾಯದ ಪ್ರತಿಪಾದಕರು ಎಂಬ ಚಿತ್ರಣ ಅಲ್ಲಿಂದಾಚೆಗೆ ರವಾನೆ ಆಗಿದೆ. ಬೀದರ್, ಬೆಳಗಾವಿ, ಕಲ್ಬುರ್ಗಿ, ಹುಬ್ಬಳ್ಳಿ-ಧಾರವಾಡ, ರಾಯಚೂರು, ಬಾಗಲಕೋಟ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯ ಹಾಗೂ ಸ್ವತಂತ್ರ ಧರ್ಮ ಪ್ರತಿಪಾದನೆ ಕೂಗು ಪ್ರಬಲವಾಗಿದೆ. ಅದೇ ರೀತಿ ಪಂಚಪೀಠಗಳ ಪೈಕಿ ಬಳ್ಳಾಾರಿಯ ಉಜ್ಜಯನಿ, ಚಿಕ್ಕಮಗಳೂರಿನ ಬಾಳೆಹೊನ್ನೂರು ಸೇರಿದಂತೆ ವೀರಶೈವ ಸಮುದಾಯ ದಕ್ಷಿಣ ಕರ್ನಾಟಕದಲ್ಲಿ ಹರಡಿಕೊಂಡಿದೆ. ಆದರೆ ವೀರಶೈವರಿಗೆ ಹೋಲಿಸಿದಾಗ ಲಿಂಗಾಯತ ಬಣ ಸಂಖ್ಯೆಯಲ್ಲಿ ಹೆಚ್ಚಿದೆ. ಈ ಎಲ್ಲವನ್ನೂ ಆಧರಿಸಿಯೇ ಯಡಿಯೂರಪ್ಪ ವಿರುದ್ಧ ರಣತಂತ್ರವೊಂದನ್ನು ಬಿಜೆಪಿ ಒಳಗೇ ಹೆಣೆಯಲಾಗಿದೆ.

ಈಗಾಗಲೇ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಘೋಷಿಸಿದ ಯುಗಾದಿ ಹಬ್ಬದ ದಿನವೇ ಬಿಂಬಿಸಲಾಗಿದೆ. ಶಿಕಾರಿಪುರದಲ್ಲಿ ಸ್ಪರ್ಧಿಸಿದರೆ ಯಡಿಯೂರಪ್ಪನವರ ಗೆಲವು ಕೇಕ್‌ವಾಕ್. ಅವರು ಹೆಚ್ಚಿಗೆ ತಲೆ ಕೆಡಿಸಿಕೊಳ್ಳುವಂತೆಯೇ ಇಲ್ಲ. ಈಶ್ವರಪ್ಪ ಮತ್ತು ಅವರ ನಡುವೆ ಏನೇ ವೈಮನಸ್ಯ ಇದ್ದರೂ ಶಿಕಾರಿಪುರದಲ್ಲಿ ಅವರ ಗೆಲುವನ್ನು ಅಷ್ಟು ಸುಲಭವಾಗಿ ತಳ್ಳಿಹಾಕಲಾಗುವುದಿಲ್ಲ. ಇಂಥ ಆರಾಮ ಸ್ಥಳ ಬಿಟ್ಟು ಲಿಂಗಾಯತ ಸ್ವತಂತ್ರ ಧರ್ಮದ ಪ್ರಬಲ ಪ್ರತಿಪಾದನೆ ಇರುವ ಉತ್ತರ ಕರ್ನಾಟಕದಲ್ಲಿ ಅವರನ್ನು ಅಭ್ಯರ್ಥಿಯನ್ನಾಗಿ ಏಕೆ ಮಾಡಬೇಕು? ವೀರಶೈವ ಬಣದ ಕಡು ಪ್ರತಿಪಾದಕರಾದ ಅವರನ್ನು ರಾಜಕೀಯವಾಗಿ ಗಂಟುಮೂಟೆ ಕಟ್ಟಿಸಲೆಂದೇ?! ಹೆಸರಿಗೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವುದು, ಲಿಂಗಾಯತ ಸ್ವತಂತ್ರ ಧರ್ಮದ ಸುಳಿಯಿರುವ ಉತ್ತರ ಕರ್ನಾಟಕದಲ್ಲಿ ನಿಲ್ಲುವಂತೆ ಮಾಡಿ ಅವರನ್ನು ಮಗುಚಿ ಹಾಕುವುದು, ಹೀಗೆ ಮಗುಚಿ ಬಿದ್ದವರು ಮುಖ್ಯಮಂತ್ರಿ ಆಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕ್ಷೇತ್ರಪಲ್ಲಟದ ಹಿಂದಿರುವ ಮೂಲ ತಂತ್ರ ಮತ್ತು ಮಂತ್ರ!

ನಿಜಕ್ಕೂ ಕ್ಷೇತ್ರ ಬದಲಾವಣೆ ಎಂಬುದು ಯಡಿಯೂರಪ್ಪನವರಿಗೆ ಅಗ್ನಿಪರೀಕ್ಷೆ. ಲಿಂಗಾಯತ ಮತಗಳನ್ನು ಸಾರಾಸಗಟಾಗಿ ಸೆಳೆಯಲು ಅವರಿಗೆ ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸಲು ಸೂಚಿಸಲಾಗಿದೆ ಎಂಬುದು ಕೇಳಲು ಬಹಳ ಇಂಪಾಗಿದೆ. ಆದರೆ ವಾಸ್ತವದಲ್ಲಿ ಅಷ್ಟು ಸುಲಭವಲ್ಲ. ಹೊಸ ಕ್ಷೇತ್ರದಲ್ಲಿ ಗೆಲ್ಲಲು ಅವರು ಎಬಿಸಿಡಿಯಿಂದ ಆರಂಭಿಸಬೇಕು. ಅವರ ಗಮನವೆಲ್ಲ ಸೀಟು ಗೆಲ್ಲುವುದರ ಕಡೆಗೇ ಕೇಂದ್ರೀಕೃತವಾಗಿರುತ್ತದೆ. ಆಗ ಉಳಿದ ಭಾಗಗಳಿಗೆ ತಮ್ಮ ಶಕ್ತಿ, ಗಮನ ಹಂಚುವುದು ಅಸಾಧ್ಯ. ಅಗ್ನಿಪರೀಕ್ಷೆಯಲ್ಲಿ ಗೆದ್ದು ಬಂದರೆ ಅವರ ಅದೃಷ್ಟ. ಆಗೇನಾದರೂ ಒಂದೊಮ್ಮೆ ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿದರೆ ಅದನ್ನು ಪಕ್ಷಕ್ಕೆ ಮತ್ತು ರಾಷ್ಟ್ರೀಯ ನಾಯಕತ್ವಕ್ಕೆ ಸಮರ್ಪಿಸಿಕೊಳ್ಳುವುದು. ಯಡಿಯೂರಪ್ಪನವರ ಗೆಲವು ಸಮೇತ. ಅಪ್ಪಿತಪ್ಪಿ ಯಡಿಯೂರಪ್ಪ ಸೋತು ಹೋದರೆ ಅವರನ್ನು ಮುಖ್ಯಮಂತ್ರಿ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ‘ಶಾಸಕರಾಗಲು ಆಗಲಿಲ್ಲ, ನಿಮ್ಮನ್ನು ಸಿಎಂ ಮಾಡುವುದು ಹೇಗೆ’ ಎಂದು ಕೈ ತೊಳೆದುಕೊಳ್ಳಬಹುದು. ಕಳೆದ ಚುನಾವಣೆಯಲ್ಲಿ ಸೋತ ಡಾ.ಜಿ.ಪರಮೇಶ್ವರ ಅವರನ್ನು ಕಾಂಗ್ರೆಸ್ಸಿನಲ್ಲಿ ಮೂಲೆಗುಂಪು ಮಾಡಿದಂತೆ. ಯಡಿಯೂರಪ್ಪನವರಿಗೆ ಈಗ 76 ವರ್ಷವಾಗುತ್ತಾ ಬಂದಿದೆ. ವಯಸ್ಸು ಮತ್ತು ಆರೋಗ್ಯ ಹಳೇ ಹುಮ್ಮಸ್ಸನ್ನು ನುಂಗಿದೆ. ಹೀಗಾಗಿ ಅವರಿಗೆ ಎಲ್ಲ ಪ್ರಾಮುಖ್ಯತೆ ಕೊಟ್ಟಂತೆ ತೋರಿಸಿ, ಪಕ್ಷದಲ್ಲಿ ಬಲಹೀನರನ್ನಾಗಿ ಮಾಡುವುದು ಒರಿಜಿನಲ್ ಯೋಜನೆ. ಈ ಯೋಜನೆಯ ರುವಾರಿ ಯಡಿಯೂರಪ್ಪನವರ ಒಳವಿರೋಧಿ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್!

ಈ ಹಿಂದೆ ಪುನಾರಚನೆಯಾದ ಕೋರ್ ಕಮಿಟಿಯಲ್ಲಿ 13 ಸದಸ್ಯರ ಪೈಕಿ ಮೂವರು (ಸಿ.ಎಂ. ಉದಾಸಿ, ಜಿ.ಎಂ. ಸಿದ್ದೇಶ್ವರ, ಗೋವಿಂದ ಕಾರಜೋಳ) ಮಾತ್ರ ಯಡಿಯೂರಪ್ಪನವರ ಕಟ್ಟಾ ಬೆಂಬಲಿಗರು. ಅರವಿಂದ ಲಿಂಬಾವಳಿ ತಟಸ್ಥರು. ಉಳಿದವರೆಲ್ಲರೂ ಯಡಿಯೂರಪ್ಪನವರ ವಿರೋಧಿಗಳೇ. ಆ ವಿಷಯ ಪಕ್ಕಕ್ಕಿರಲಿ, ಇತ್ತೀಚೆಗೆ ರಚನೆಯಾದ ಬಿಜೆಪಿ ಬೂತ್ ಕಮಿಟಿ ಉಸ್ತುವಾರಿ ಪ್ರಮುಖರ ತಂಡದಲ್ಲಿ ಸಂತೋಷ್ ಬೆಂಬಲಿಗರಿಗೇ ಹೆಚ್ಚಿನ ಪ್ರಾತಿನಿಧ್ಯ. ಭಾನುಪ್ರಕಾಶ್, ಕೇಶವಪ್ರಸಾದ್, ಡಾ. ಶಿವಯೋಗಿಸ್ವಾಮಿ, ಎಂ.ಬಿ. ನಂದೀಶ್, ತುಳಸಿ ಮುನಿರಾಜುಗೌಡ, ಭಾರತಿ ಮುಗ್ಧುಂ, ಜಯತೀರ್ಥ ಕಟ್ಟಿ, ಎನ್.ವಿ. ಫಣೀಶ್, ಅಶೋಕ್ ಗಸ್ತಿ, ಗಿರೀಶ್ ಪಟೇಲ್, ಎಸ್.ವಿ. ರಾಘವೇಂದ್ರ, ಯತೀಶ್ ಆರ್ವಾರ್, ನಿರ್ಮಲ್‌ಕುಮಾರ್ ಸುರಾನಾ, ಗಣೇಶ ರಾವ್, ಸಚ್ಚಿದಾನಂದಮೂರ್ತಿ,ದತ್ತಾಾತ್ರೇಯ ತುಗಾಂವಕರ್, ಕಾಂತರಾಜು ಸೇರಿದಂತೆ ಸಂತೋಷ್ ಬೆಂಬಲಿಗರೇ ತುಂಬಿ ತುಳುಕಾಡುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಸಂತೋಷ್ ಸದ್ದಿಲ್ಲದೆ ತಮ್ಮ ಸಾಮ್ರಾಜ್ಯ ಕಟ್ಟಲು ಹೊರಟಿದ್ದಾರೆ ಎಂಬ ವಾಸನೆ ಯಡಿಯೂರಪ್ಪನವರಿಗೆ ಬಡಿದಿದೆ. ಹೆಸರು ತಮ್ಮದು, ಆದರೆ ಬುನಾದಿ ಸಂತೋಷ್ ಅವರದು. ತಮ್ಮ ಹೆಸರು ಮುಂದಿಟ್ಟೇ ಒಳಗೊಳಗೆ ತಿರುಮಂತ್ರ ಹಾಕಲಾಗುತ್ತಿದೆ ಎಂದು ಅರಿವಾಗಿ ಯಡಿಯೂರಪ್ಪನವರು ಕೆಂಡಮಂಡಲರಾಗಿದ್ದಾರೆ. ಶನಿವಾರ ನಡೆದ ಬೂತ್ ಕಮಿಟಿ ಮೊದಲ ಸಭೆಗೆ ಹಾಜರಾಗುವ ಅವಶ್ಯಕತೆಯಿಲ್ಲ ಎಂದು ಸಂತೋಷ್ ಅವರ ಕೆಲ ಬೆಂಬಲಿಗರಿಗೆ ಯಡಿಯೂರಪ್ಪನವರ ಕಡೆಯವರೆಂದು ಹೇಳಿಕೊಂಡವರಿಂದ ದೂರವಾಣಿ ಕರೆ ಕೂಡ ಹೋಗಿದೆ. ಹೀಗೆ ಸಭೆಗೆ ಬರಬಾರದೆಂದು ಸೂಚಿತರಾದವರೆಲ್ಲರೂ ಸಂತೋಷ್ ಬೆಂಬಲಿಗರೂ ಹೌದು, ಅದೇ ಕಾಲಕ್ಕೆ ಈಶ್ವರಪ್ಪನವರ ಗುಂಪೂ ಹೌದು!

ಯಡಿಯೂರಪ್ಪನವರಿಗೆ ಈಗಲೇ ಅಲ್ಲ, ಮಂಗಳೂರು ಚಲೋ ಬೈಕ್ ರ್ಯಾಲಿ ಸಂದರ್ಭದಲ್ಲೇ ಏನೋ ಸರಿ ಇಲ್ಲ ಎಂಬ ಭಾವನೆ ಮೂಡಿತ್ತು. ಆಗ ಮಂಗಳೂರು ಚಲೋ ರ್ಯಾಲಿ ಉಸ್ತುವಾರಿಯನ್ನು ಸಂತೋಷ್ ಅವರಿಗೇ ವಹಿಸಲಾಗಿತ್ತು. ಇದರಿಂದ ವ್ಯಗ್ರರಾಗಿದ್ದ ಯಡಿಯೂರಪ್ಪ ನೆತ್ತಿಗೇರುತ್ತಿದ್ದ ಸಿಟ್ಟನ್ನು ಮೂಗಿನ ಮಟ್ಟದಲ್ಲೇ ಕಟ್ಟಿಹಾಕಿದ್ದರು. ತಮ್ಮನ್ನು ಗೃಹಬಂಧನದಲ್ಲೇ ಇರಿಸಿಕೊಳ್ಳಲು ಪ್ರಯತ್ನಿಸಿದ್ದರೂ, ಇದು ಬೇರೆ ತಿರುವು ಪಡೆಯಬಹುದು ಎಂಬ ಕಾರಣಕ್ಕೆ ತಡವಾಗಿ ಮಂಗಳೂರಿಗೆ ಹೋಗಿದ್ದರು. ತಡವಾಗಿ ಹೋಗಿದ್ದಕ್ಕೂ ಅಸಮಾಧಾನದ ಮಾತುಗಳನ್ನು ಕೇಳಬೇಕಾಗಿ ಬಂತು. ಕೇಳಿ ಕುದಿಮೌನಕ್ಕೆ ಶರಣಾಗಿದ್ದರು.

ಈಗ ಅದರ ಮುಂದುವರಿದ ಭಾಗವಾಗಿ ಬೂತ್ ಕಮಿಟಿ ಉಸ್ತುವಾರಿ ಸಮಿತಿ ರಚನೆಯಲ್ಲಿ ಸಂತೋಷ್ ಟೀಮಿನದೇ ಪಾರುಪತ್ಯವಾಗಿದ್ದು, ಯಡಿಯೂರಪ್ಪನವರಿಗೆ ತಮ್ಮ ಬೆನ್ನ ಹಿಂದೆ ಬೇರೇನೋ ನಡೆಯುತ್ತಿದೆ ಎಂಬುದು ಮನವರಿಕೆಯಾಗಿದೆ. ಹೀಗಾಗಿಯೇ ಸಂತೋಷ್ ಬೆಂಬಲಿಗರಿಗೆ ಬೂತ್ ಕಮಿಟಿ ಸಭೆಗೆ ಬರದಂತೆ ದೂರವಾಣಿ ಕರೆಗಳು ಹೋಗಿವೆ. ಈ ಮಧ್ಯೆ, ಗಮನಿಸಬೇಕಾದ ಮತ್ತೊಂದು ಬೆಳವಣಿಗೆಯೆಂದರೆ ಮೊದಮೊದಲು ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಲು ಸಿದ್ಧ ಎನ್ನುತ್ತಿದ್ದ ಯಡಿಯೂರಪ್ಪನವರು ಇದೀಗ ಶಿಕಾರಿಪುರದಲ್ಲೇ ನಿಲ್ಲುತ್ತೇನೆ ಎಂಬ ಸಂದೇಶ ರವಾನೆ ಮಾಡಿದ್ದಾರೆ. ಇದನ್ನು ಅವರ ಆಪ್ತರಾದ ಶೋಭಾ ಕರಂದ್ಲಾಜೆ ಅವರು ಬಹಿರಂಗವಾಗಿಯೇ ಹೇಳಿದ್ದಾರೆ. ಆದರೆ ಇದು ಇಷ್ಟಕ್ಕೆ ನಿಂತಿಲ್ಲ. ಈಶ್ವರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಯಡಿಯೂರಪ್ಪನವರನ್ನು ಉತ್ತರ ಕರ್ನಾಟಕಕ್ಕೆ ತಳ್ಳಿ ಆಳ ನೋಡಬೇಕೆಂದಿರುವವರು ಮಾತ್ರ, ‘ಕ್ಷೇತ್ರ ಬದಲಾವಣೆ ಏನಿದ್ದರೂ ಯಡಿಯೂರಪ್ಪನವರದು ಮಾತ್ರ, ಉಳಿದ ಯಾರದೂ ಇಲ್ಲ’ ಎನ್ನುತ್ತಿದ್ದಾರೆ. ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆವ ತಂತ್ರ. ಒಂದು, ಕ್ಷೇತ್ರ ಬದಲಾವಣೆ ಸಂಕಷ್ಟದಿಂದ ತಮ್ಮನ್ನು ಪಾರು ಮಾಡಿಕೊಳ್ಳುವುದು, ಮತ್ತೊಂದು ಯಡಿಯೂರಪ್ಪನವರನ್ನು ಸಂಕಷ್ಟಕ್ಕೆ ಸಿಕ್ಕಿಸಿ ತಮಾಷೆ ನೋಡುವುದು!

ವರಿಷ್ಠರಿಗೂ ಗೊತ್ತು. ಒಮ್ಮೆ ಯಡಿಯೂರಪ್ಪನವರ ಕೈಗೆ ಅಧಿಕಾರ ಸಿಕ್ಕರೆ ಅವರು ಯಾರ ಮಾತೂ ಕೇಳುವುದಿಲ್ಲ. ವರಿಷ್ಠರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು. ಇತ್ತೀಚೆಗೆ ಕೇಂದ್ರ ಸಂಪುಟ ವಿಸ್ತರಣೆಯಲ್ಲಿ ಯಡಿಯೂರಪ್ಪ ಬೆಂಬಲಿಗರಿಗೆ ಯಾರಿಗೂ ಅವಕಾಶ ನೀಡದೆ ಅನಂತಕುಮಾರ್ ಹೆಗಡೆಯವರನ್ನು ಅನಿರೀಕ್ಷಿತವಾಗಿ ಮಂತ್ರಿ ಮಾಡಿದ್ದರ ಹಿಂದೆಯೂ ಅವರನ್ನು ಕಟ್ಟಿಹಾಕುವ ತಂತ್ರವಿದೆ.

ಇದೆಲ್ಲ ಯಾಕಾಗಿ ನಡೆಯುತ್ತಿದೆ? ಹೀಗೆಲ್ಲ ಆದರೆ ಚುನಾವಣೆಯಲ್ಲಿ ಪಕ್ಷಕ್ಕೆ ಯಡವಟ್ಟಾಗುತ್ತದೆ ಎಂಬ ಅರಿವು ರಾಷ್ಟ್ರೀಯ ನಾಯಕರಿಗೆ ಇರುವುದಿಲ್ಲವೇ? ಇದ್ದರೂ ಹೀಗೇಕೆ ಮಾಡುತ್ತಾರೆ ಎಂಬ ಪ್ರಶ್ನೆಗಳಿಗೂ ಉತ್ತರವಿದೆ. ರಾಜ್ಯದಲ್ಲಿ ಸರಕಾರದ ವಿರುದ್ಧ ಒಂದಷ್ಟು ಸಹಜ ಆಡಳಿತವಿರೋಧಿ ಅಲೆ ಇದೆ. ಯಾವುದೇ ಪಕ್ಷ ಅಧಿಕಾರದಲ್ಲಿ ಇದ್ದಾಗಲೂ ಇರುವಂಥದ್ದು. ಇಂಥ ಸ್ಥಿತಿಯಲ್ಲಿ ಯಾರನ್ನು ಬೇಕಾದರೂ ಮುಂದಿಟ್ಟುಕೊಂಡು ಚುನಾವಣೆ ಗೆಲ್ಲುತ್ತೇವೆ ಎಂಬುದನ್ನು ನಿರೂಪಿಸುವುದು ಮತ್ತು ಅಂಥದ್ದೊಂದು ಸಂದೇಶ ರವಾನೆ ಮಾಡುವುದು ರಾಷ್ಟ್ರೀಯ ನಾಯಕರ ಇಂಗಿತ. ಆಗಸ್ಟ್‌ 12 ರಂದು ಬೆಂಗಳೂರಿಗೆ ಬಂದಿದ್ದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬಹಳ ಸ್ಪಷ್ಟವಾಗಿ ಒಂದು ಮಾತು ಹೇಳಿದ್ದರು. ‘ಚುನಾವಣೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ರಾಜ್ಯದ ನಾಯಕರಾರೂ ತಲೆ ಕೆಡಿಸಿಕೊಳ್ಳುವುದು ಬೇಕಿಲ್ಲ. ಅದೇ ರೀತಿ ಯಾರಿಗೂ ಟಿಕೆಟ್ ಆಶ್ವಾಸನೆಯನ್ನೂ ಕೊಡಬೇಕಿಲ್ಲ. ಅದೆಲ್ಲವನ್ನು ನಾವೇ ನೋಡಿಕೊಳ್ಳುತ್ತೇವೆ’ ಎಂದು ಹೇಳಿದ್ದರಲ್ಲೇ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಇತಿಮಿತಿ ನಿಗದಿ ಮಾಡುವ ಚಾತುರ್ಯ ಪ್ರದರ್ಶನವಾಗಿತ್ತು. ಆ ಮೂಲಕ ಯಡಿಯೂರಪ್ಪನವರನ್ನು ಏಕ್‌ದಂ ಎರಡು ಮೆಟ್ಟಿಲು ಕೆಳಗಿಳಿಸಲಾಗಿತ್ತು. ಈಗ ಸಂತೋಷ್ ಎಂಬ ಹಗ್ಗದಲ್ಲಿ ಅವರನ್ನು ಕಟ್ಟಿಹಾಕುವ ಪ್ರಯತ್ನಗಳು ನಡೆದಿವೆ.

ಹಾಗೆ ನೋಡಿದರೆ ಯಡಿಯೂರಪ್ಪನವರನ್ನು ರಾಜ್ಯಾಧ್ಯಕ್ಷರನ್ನಾಗಿ ಘೋಷಿಸಿದ ಸಂದರ್ಭದಲ್ಲಿ ಇನ್ನೊಂದಷ್ಟು ಗೌರವದಿಂದ ನಡೆಸಿಕೊಳ್ಳಬಹುದಿತ್ತು. ಆ ಸಂದರ್ಭದಲ್ಲಿ ಯಡಿಯೂರಪ್ಪ, ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಮೂವರೂ ದಿಲ್ಲಿಯಲ್ಲೇ ಇದ್ದರು. ಆದರೂ ಯಡಿಯೂರಪ್ಪನವರ ಭೇಟಿಗೆ ಅವಕಾಶ ಕೊಡದೇ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮೂಲಕ  ಅವರ ಆಯ್ಕೆಯನ್ನು ಘೋಷಿಸಿದರು. ದಿಲ್ಲಿಯಿಂದ ಬೆಂಗಳೂರಿಗೆ ಬಂದ ಯಡಿಯೂರಪ್ಪನವರನ್ನು ಬರಮಾಡಿಕೊಂಡದ್ದು ಇಲ್ಲಿನ ನೂರು ಪಾಲಿಕೆ ಸದಸ್ಯರು, ಹದಿನಾಲ್ಕು ಶಾಸಕರ ಪೈಕಿ ತಲಾ ಮೂವರು ಮಾತ್ರ. ಬಿಜೆಪಿ ಕಚೇರಿ ಇರುವ ಕ್ಷೇತ್ರದ ಶಾಸಕ ಡಾ. ಅಶ್ವತ್ಥ ನಾರಾಯಣ್ ಕೂಡ ಬಂದಿರಲಿಲ್ಲ. ಲಿಂಗಾಯತ ಸಮುದಾಯದ ಮುನಿಸು ಕಟ್ಟಿಕೊಳ್ಳಬಾರದು ಎಂಬ ಕಾರಣಕ್ಕೆ ಯಡಿಯೂರಪ್ಪನವರಿಗೆ ರಾಜ್ಯಾಧ್ಯಕ್ಷ ಪಟ್ಟವನ್ನು ಮುಳ್ಳಿನ ಹರಿವಾಣದಲ್ಲಿಟ್ಟು ಕೊಡಲಾಗಿತ್ತು. ಇದೀಗ ಅವರನ್ನು ಲಿಂಗಾಯತ ಬಣದ ಮುಳ್ಳಿನ ಬಣವೆ ಮೇಲೆ ಮಲಗಿಸುವ ಯತ್ನ ನಡೆದಿದೆ. ಉತ್ತರ ಪ್ರದೇಶ ಸೇರಿ ದೇಶದ ಉಳಿದ ರಾಜ್ಯಗಳ ರಾಜಕೀಯಕ್ಕೂ ಕರ್ನಾಟಕ ರಾಜಕೀಯಕ್ಕೂ ಬಹಳ ವ್ಯತ್ಯಾಸವಿದೆ ಎಂದು ಬಿಜೆಪಿ ಮುಖಂಡರಿಗೆ ಅರಿವಾಗುವಷ್ಟರ ಹೊತ್ತಿಗೆ ಏನೇನು ನಡೆದು ಹೋಗಿರುತ್ತದೋ..?!

ಲಗೋರಿ: ಯಾವುದೇ ರಣತಂತ್ರ ಅಧಿಕಾರದ ಕಾಲು ಮುರಿಯಬಾರದು!

(ವಿಶ್ವವಾಣಿಯಲ್ಲಿ ಪ್ರಕಟಿತ)

2 COMMENTS

  1. ಯಡಿಯೂರಪ್ಪನವರಗೆ ಯಾನದರೂ ಐದು ವರ್ಷಗಳ ತನಕ ಸಿ ಎಂ ಪಟ್ಟ ಕಟ್ಟಿದ ಅದ್ದಲಿ ಅವರ ಪಕ್ಷಕ್ಕೆ ಏಳು ನೀರು ಬೀಡುತಿಯಿ ಬರೆದು ಕೋಳಿ

  2. […] ಮುಂದಿನ ಚುನಾವಣೆಯಲ್ಲಿ ಬಿಎಸ್ ವೈ ಅವರ ಕ್ಷೇತ್ರ ಬದಲಿಸುವುದರ ಹಿಂದೆ ಅವರನ್ನು ರಾಜಕೀಯವಾಗಿ ಮಟ್ಟಹಾಕುವ ಷಡ್ಯಂತ್ರ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಕುರಿತಾಗಿ ಡಿಜಿಟಲ್ ಕನ್ನಡದ ಒಳಸುಳಿ ಅಂಕಣದಲ್ಲಿಯೂ ವಿ… […]

Leave a Reply