ಕಾಂಗರೂ ವಿರುದ್ಧ ಏಕದಿನ ಸರಣಿ ಗೆದ್ದ ಟೀಂ ಇಂಡಿಯಾಗೆ ನಂಬರ್ ಒನ್ ಪಟ್ಟ

ಡಿಜಿಟಲ್ ಕನ್ನಡ ಟೀಮ್:

ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದ ಟೀಂ ಇಂಡಿಯಾ ಈಗ ಏಕದಿನ ಮಾದರಿಯಲ್ಲೂ ನಂಬರ್ ಒನ್ ಸ್ಥಾನಕ್ಕೆ ಏರಿದೆ. ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 5 ವಿಕೆಟ್ ಗಳ ಅಂತರದಲ್ಲಿ ಜಯಿಸಿದ ಭಾರತ ತಂಡ, ಐದು ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಗೆದ್ದುಕೊಂಡಿದೆ. ಈ ಸರಣಿ ಗೆಲ್ಲುತ್ತಿದ್ದಂತೆ ಭಾರತ ತಂಡ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಹೊರಹೊಮ್ಮಿದೆ.

ನಿನ್ನೆ ಇಂದೋರಿನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಎರಾನ್ ಫಿಂಚ್ (124) ಅವರ ಆಕರ್ಷಕ ಶತಕದ ನೆರವಿನೊಂದಿಗೆ ಆಸ್ಟ್ರೇಲಿಯಾ ತಂಡ 50 ಓವರ್ ಗಳಲ್ಲಿ 6 ವಿಕೆಟ್ ಪಡೆದುಕೊಂಡು 293 ರನ್ ದಾಖಲಿಸಿತು. ಈ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಭಾರತ ತಂಡ ರೋಹಿತ್ ಶರ್ಮಾ (71), ರಹಾನೆ (70) ಹಾಗೂ ಪಾಂಡ್ಯ (78) ಅವರ ಆಕರ್ಷಕ ಆಟದ ನೆರವಿನಿಂದ 47.5 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 294 ರನ್ ಗಳಿಸಿ ಜಯಿಸಿತು.

ಈ ಸರಣಿ ಜಯದೊಂದಿಗೆ ಭಾರತ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ 120 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೇರಿತು. ಇನ್ನು 119 ಅಂಕಗಳನ್ನು ಹೊಂದಿರುವ ದಕ್ಷಿಣ ಆಫ್ರಿಕಾ ತಂಡ ದ್ವಿತೀಯ ಸ್ಥಾನಕ್ಕೆ ಕುಸಿದರೆ, ಆಸ್ಟ್ರೇಲಿಯಾ ತಂಡ 114 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಇನ್ನು ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಭಾರತದ ಮೂವರು ಆಟಗಾರರು ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ವಿರಾಟ್ ಕೊಹ್ಲಿ 887 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, 764 ಅಂಕಗಳನ್ನು ಪಡೆದ ರೋಹಿತ್ ಶರ್ಮಾ ಹಾಗೂ 749 ಅಂಕ ಪಡೆದಿರುವ ಮಹೇಂದ್ರ ಸಿಂಗ್ ಧೋನಿ ಕ್ರಮವಾಗಿ ಒಂಬತ್ತು ಹಾಗೂ ಹತ್ತನೇ ಸ್ಥಾನದಲ್ಲಿದ್ದಾರೆ.

ಬೌಲಿಂಗ್ ವಿಭಾಗದಲ್ಲೂ ಭಾರತದ ಇಬ್ಬರು ಆಟಗಾರರು ಅಗ್ರಹತ್ತರಲ್ಲಿ ಕಾಣಿಸಿಕೊಂಡಿದ್ದು, ಜಸ್ಪ್ರೀತ್ ಬುಮ್ರಾ 687 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ, 645 ಅಂಕ ಪಡೆದಿರುವ ಅಕ್ಷರ್ ಪಟೇಲ್ ಹತ್ತನೇ ಸ್ಥಾನದಲ್ಲಿದ್ದಾರೆ. ಈ ವಿಭಾಗದಲ್ಲಿ ಆಸ್ಟ್ರೇಲಿಯಾದ ಜೋಷ್ ಹಾಜೆಲ್ ವುಡ್ 732 ಅಂಕಗಳೊಂದಿಗೆ ಮೊದಲಿಗರಾಗಿದ್ದಾರೆ.

ಆಲ್ರೌಂಡರ್ ಪಟ್ಟಿಯಲ್ಲಿ ಭಾರತದ ಯಾವುದೇ ಆಟಗಾರರು ಅಗ್ರ ಹತ್ತರಲ್ಲಿ ಕಾಣಿಸಿಕೊಂಡಿಲ್ಲ. ಆದರೆ, ಈ ಸರಣಿಯಲ್ಲಿ ಪ್ರಮುಖ ಹೈಲೈಟ್ ಆಗಿರುವ ಹಾರ್ದಿಕ್ ಪಾಂಡ್ಯ ಹಾಗೂ ಇತ್ತೀಚೆಗೆ ಆಕರ್ಷಕ ಬ್ಯಾಟಿಂಗ್ ಮಾಡುತ್ತಿರುವ ಭುವನೇಶ್ವರ್ ಕುಮಾರ್ ಸದ್ಯದಲ್ಲೇ ಟಾಪ್ ಹತ್ತರಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ.

Leave a Reply