ಧೋನಿ ಸಾಲಲ್ಲಿ ಸಿಂಧು, ಪದ್ಮಭೂಷಣ ಪ್ರಶಸ್ತಿಗೆ ಶಿಫಾರಸ್ಸು

ಡಿಜಿಟಲ್ ಕನ್ನಡ ಟೀಮ್:

ಇತ್ತೀಚೆಗಷ್ಟೇ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಹೆಸರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದನ್ನು ಕ್ರೀಡಾಭಿಮಾನಿಗಳು ಸಂಭ್ರಮದಿಂದ ಸ್ವಾಗತಿಸಿದ್ದರು. ಈಗ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧು ಅವರ ಹೆಸರನ್ನು ಈ ಪ್ರಶಸ್ತಿಗೆ ಶಿಫಾರಸ್ಸು ಮಾಡಿದೆ.

2015ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದ ಪಿ.ವಿ ಸಿಂಧು, ಈ ಗೌರವ ಪಡೆದ ಅತಿ ಕಿರಿಯ ಪುರಸ್ಕೃತೆ ಎಂಬ ಖ್ಯಾತಿಗೂ ಪಾತ್ರರಾಗಿದ್ದರು. ಇನ್ನು ಕಳೆದ ವರ್ಷ ಬ್ರೆಜಿಲ್ ನ ರಿಯೋದಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಬೆಳ್ಳಿ ತಂದುಕೊಟ್ಟ ಸಾಧನೆ ಮಾಡಿದ್ದ ಪಿ.ವಿ ಸಿಂಧು ದೇಶಕ್ಕೆ ಕೀರ್ತಿ ತಂದಿದ್ದರು. ಈ ಅತ್ಯದ್ಭುತ ಪ್ರದರ್ಶನವನ್ನು ಈ ವರ್ಷವೂ ಮುಂದುವರಿಸಿರುವ ಸಿಂಧು ಆಗಸ್ಟ್ ನಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ರನ್ನರ್ ಅಪ್ ಆಗಿ ಬೆಳ್ಳಿ ಪದಕ ಪಡೆದರೆ, ಇದೇ ತಿಂಗಳು ನಡೆದ ಕೊರಿಯಾ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಆ ಮೂಲಕ ಈ ಪ್ರಶಸ್ತಿ ಗೆದ್ದ ಭಾರತದ ಮೊದಲ ಶಟ್ಲರ್ ಎಂಬ ಖ್ಯಾತಿ ಪಡೆದಿದ್ದರು.

ಹೀಗೆ ನಿರಂತರವಾಗಿ ತಮ್ಮ ಅಮೋಘ ಪ್ರದರ್ಶನದ ಮೂಲಕ ದೇಶದ ಕೀರ್ತಿಯನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತಿರುವ ಪಿ.ವಿ ಸಿಂಧು ಸಹಜವಾಗಿಯೇ ದೇಶದ ಮೂರನೇ ಅತ್ಯುನ್ನತ ನಾಗರೀಕ ಗೌರವಕ್ಕೆ ಅರ್ಹರಾಗಿದ್ದಾರೆ.

Leave a Reply