ನಿವೃತ್ತಿಗೆ ಮೂರು ದಿನ ಬಾಕಿ ಇರುವಾಗ ಸಿಕ್ಕಿಬಿದ್ದ ಆಂಧ್ರ ಸರ್ಕಾರಿ ಅಧಿಕಾರಿ, ಲೆಕ್ಕಕ್ಕೆ ಸಿಗದ ಈತನ ಸಂಪತ್ತಿನ ಮೌಲ್ಯ ₹500 ಕೋಟಿ!

ಡಿಜಿಟಲ್ ಕನ್ನಡ ಟೀಮ್:

ಸರ್ಕಾರಿ ಕೆಲಸ ಸಿಕ್ಕರೆ ಸಾಕು, ದುಡ್ಡು ಮಾಡುವುದೇ ವೃತ್ತಿ ಎಂದು ಭಾವಿಸಿರುವವರ ಸಂಖ್ಯೆ ಕಡಿಮೆ ಏನಿಲ್ಲ. ಸರ್ಕಾರಿ ಕೆಲಸದಲ್ಲಿದ್ದುಕೊಂಡು ಕೋಟಿಗಟ್ಟಲೆ ಹಣ ಹೊಡೆದು ಸಿಕ್ಕಿ ಬಿದ್ದಿರುವ ಅನೇಕ ಪ್ರಕರಣಗಳನ್ನು ನಾವು ನೋಡಿದ್ದೇವೆ. ಈಗ ಆಂಧ್ರ ಪ್ರದೇಶದ ನಗರ ಪಾಲಿಕೆ ಅಧಿಕಾರಿಯೊಬ್ಬ ಈ ಸಾಲಿಗೆ ಸೇರಿದ್ದಾನೆ.

ಪಾಲಿಕೆ ಆಡಳಿತ ಇಲಾಖೆಯಲ್ಲಿ ನಗರ ಯೋಜನೆಯ ನಿರ್ದೇಶಕರಾಗಿರುವ ಗೊಲ್ಲಾ ವೆಂಕಟ ರಘುರಾಮಿ ರೆಡ್ಡಿ, ಅಕ್ರಮ ಆಸ್ತಿ ಸಂಪಾದನೆಯ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಬುಧವಾರವಷ್ಟೇ ಈತ ತನ್ನ ಸೇವೆಯಿಂದ ನಿವೃತ್ತಿಯಾಗುತ್ತಿದ್ದ. ಈ ವೇಳೆ ಎಸಿಬಿ ಅಧಿಕಾರಿಗಳ ದಾಳಿಗೆ ಸಿಕ್ಕಿ ಬಿದ್ದಿರುವುದು ಕುತೂಹಲ ಮೂಡಿಸಿದೆ.

ನಿನ್ನೆ ರಾತ್ರಿ ರೆಡ್ಡಿ ಮನೆ ಸೇರಿದಂತೆ ವಿಶಾಖಪಟ್ಟಣ, ವಿಜಯವಾಡ, ತಿರುಪತಿ ಹಾಗೂ ಮಹಾರಾಷ್ಟ್ರದ ಶಿರಡಿ ಸೇರಿದಂತೆ ಒಟ್ಟು 15 ಕಡೆಗಳಲ್ಲಿ ಎಸಿಬಿ ಅದಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿ ವೇಳೆ ಆಸ್ತಿಪಾಸ್ತಿಗಳ ಪರಿಶೀಲನೆ ನಡೆಸಿದ್ದು, ಈ ಅಧಿಕಾರಿಯ ಬಳಿ ಒಟ್ಟು ₹ 500 ಕೋಟಿಯಷ್ಟು ಮೌಲ್ಯದ ಆಸ್ತಿಗೆ ಲೆಕ್ಕ ಸಿಕ್ಕಿಲ್ಲ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.

ತನ್ನ ನಿವೃತ್ತಿಯ ಸಂತೋಷದ ಹಿನ್ನೆಲೆಯಲ್ಲಿ ರೆಡ್ಡಿ ತನ್ನ ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ನೇಹಿತರಿಗೆ ವಿದೇಶದ ರೆಸಾರ್ಟ್ ಒಂದರಲ್ಲಿ ಅದ್ಧೂರಿ ಪಾರ್ಟಿ ಆಯೋಜಿಸಿದ್ದ. ಅಲ್ಲದೆ ಅವರೆಲ್ಲರಿಗೂ ವಿಮಾನ ಟಿಕೆಟ್ ಸಹ ಬುಕ್ ಮಾಡಿದ್ದ. ಈಗ ಎಸಿಬಿ ಅಧಿಕಾರಿಗಳು ಕೊಟ್ಟಿರುವ ಶಾಕ್ ಈತನ ಪತರುಗುಟ್ಟುವಂತೆ ಮಾಡಿದೆ.

ಈ ದಾಳಿಯ ವೇಳೆ ರೆಡ್ಡಿಯ ಬಳಿ ಸಿಕ್ಕ ಆಸ್ತಿಯ ವಿವರಗಳು ಹೀಗಿವೆ…

  • 10 ಕೆ.ಜಿಗೂ ಹೆಚ್ಚು ಚಿನ್ನ ಹಾಗೂ ವಜ್ರದ ಆಭರಣಗಳು. ಅದರಲ್ಲಿ ₹ 4 ಕೋಟಿ ಬೆಲೆಬಾಳುವ ಚಿನ್ನಾಭರಣ, ₹ 5 ಲಕ್ಷ ಮೌಲ್ಯದ 25 ಕೆ.ಜಿ ಬೆಳ್ಳಿ ವಸ್ತುಗಳು ಹಾಗೂ ₹ 43 ಲಕ್ಷ ನಗದು.
  • ವಿಜಯವಾಡ ಸಮೀಪದ ಗನ್ನಾವರಮ್ ಬಳಿ 10,335 ಚದರ ಅಡಿಯ ಫ್ಲಾಟ್.
  • ವೆಲ್ಪೂರಿನಲ್ಲಿ 2 ಎಕರೆ ಭೂಮಿ.
  • ಶಿವಪ್ರಸಾದ್ ಹಾಗೂ ಪತ್ನಿ ಗಾಯತ್ರಿ ಅವರ ಹೆಸರಿನಲ್ಲಿ ಬೇನಾಮಿ ಆಸ್ತಿ.
  • ಕೃಷ್ಣಾ ಜಿಲ್ಲೆಯಲ್ಲಿ 11 ಎಕರೆ ಮಾವಿನ ತೋಟ.
  • ವಿಜಯವಾಡದಲ್ಲಿ ಮೂರು ಮಹಡಿಯ ಎರಡು ಮನೆ ಹಾಗೂ ಎರಡು ಮಹಡಿಯ ಒಂದು ಮನೆ.
  • ಗುಂಟೂರಿನಲ್ಲಿ 5.15 ಎಕರೆ ಭೂಮಿ.
  • ಸಾಯಿ ಸಾಧನ ಇನ್ಫಾ ಪ್ರಾಜೆಕ್ಟ್ಸ್, ಸಾಯಿ ಶ್ರದ್ಧಾ ಅವೆನ್ಯೂಸ್, ಮಾತಾ ಇನ್ ಫ್ರಾಸ್ಟ್ರಕ್ಚರ್ಸ್, ನಲ್ಲುರಿವಾರಿ ಚಾರಿಟಬಲ್ ಟ್ರಸ್ಟ್.
  • ಶಿರಡಿಯಲ್ಲಿ ಸಾಯಿ ಸೂರಜ್ ಕುಂಜ್ ಹೆಸರಿನ ಹೊಟೇಲ್, ಗನ್ನಾವರಮ್ ನಲ್ಲಿ ಬೆಲೆಬಾಳುವ 300 ಎಕರೆ ಭೂಮಿ.

ಇದಷ್ಟೇ ಅಲ್ಲದೇ ಎಸಿಬಿ ಅಧಿಕಾರಿಗಳು ರೆಡ್ಡಿಯ ಬ್ಯಾಂಕ್ ಲಾಕರ್ ಗಳನ್ನು ಇನ್ನಷ್ಟೇ ಪರಿಶೀಲನೆ ನಡೆಸಬೇಕಿದ್ದು, ಈತನ ಭಂಡಾರದಲ್ಲಿ ಇನ್ನೆಷ್ಟು ಕಳ್ಳ ಸಂಪತ್ತು ಇದೆ ಎಂಬ ಕುತೂಹಲ ಹೆಚ್ಚಿದೆ.

Leave a Reply