ಮೋದಿಯ ಆರ್ಥಿಕ ಸಲಹಾ ಸಮಿತಿಯಲ್ಲಿದ್ದಾರೆ ಪಂಚ ತಜ್ಞರು, ಇವರ ಬಗ್ಗೆ ನಿಮಗೇಷ್ಟು ಗೊತ್ತು?

ಡಿಜಿಟಲ್ ಕನ್ನಡ ಟೀಮ್:

ಸದ್ಯ ಇಳಿಮುಖವಾಗಿ ಸಾಗುತ್ತಿರುವ ದೇಶದ ಆರ್ಥಿಕತೆಯನ್ನು ಮತ್ತೆ ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ತಮಗೆ ಅನುಕೂಲವಾಗುವಂತೆ ಆರ್ಥಿಕ ತಜ್ಞರ ಸಲಹಾ ಸಮಿತಿಯನ್ನು ರಚಿಸಿದ್ದಾರೆ.

ಈ ಸಮಿತಿಯಲ್ಲಿ ಐವರು ಸದಸ್ಯರಿದ್ದು, ಇವರು ಮುಂದಿನ ದಿನಗಳಲ್ಲಿ ದೇಶದ ಆರ್ಥಿಕತೆಗೆ ಸಂಬಂಧಿಸಿದಂತೆ ಮೋದಿ ಅವರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಈ ಸಮಿತಿಯ ಮುಖ್ಯಸ್ಥರಾಗಿ ವಿವೇಕ್ ದೆಬೊರಾಯ್ ಆಯ್ಕೆಯಾಗಿದ್ದು, ನೀತಿ ಆಯೋಗದ ಪ್ರಧಾನ ಸಲಹೆಗಾರರಾದ ರತನ್ ವಟಲ್, ಆರ್ಥಿಕತಜ್ಞ ಸುರ್ಜಿತ್ ಭಲ್ಲ, ರತಿನ್ ರಾಯ್ ಸದಸ್ಯರಾಗಿದ್ದು, ಅಶಿಮಾ ಗೋಯಲ್ ಅರೆಕಾಲಿಕ ಸದಸ್ಯರಾಗಿದ್ದಾರೆ. ಈ ಸಮಿತಿ ರಚಿಸಲು ಮೂರು ಪ್ರಮುಖ ಅಂಶಗಳಿದ್ದು, ಅವುಗಳು ಹೀಗಿವೆ…

 1. ಆರ್ಥಿಕತೆಗೆ ಸಂಬಂಧಿಸಿದ ಯಾವುದೇ ವಿಷಯವಾದರೂ ಅವುಗಳನ್ನು ಪರಾಮರ್ಶಿಸಿ ಪ್ರಧಾನಮಂತ್ರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದು.
 2. ಸಮಗ್ರಆರ್ಥಿಕತೆಯ ಪ್ರಾಮುಖ್ಯತೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವುದು ಹಾಗೂ ಅವುಗಳನ್ನು ಪ್ರಧಾನಮಂತ್ರಿಗಳಿಗೆ ತಿಳಿಸುವುದು.
 3. ಆರ್ಥಿಕತೆಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿಗಳು ನೀಡುವ ಯಾವುದೇ ಕೆಲಸವನ್ನಾದರೂ ಪೂರ್ಣಗೊಳಿಸುವುದು.

ಇನ್ನು ಮುಂದೆ ಮೋದಿ ಅವರಿಗೆ ಆರ್ಥಿಕತೆಗೆ ಸಂಬಂಧಿಸಿದಂತೆ ಸಲಹೆ ನೀಡಲಿರುವ ಈ ಐವರು ತಜ್ಞರು ಯಾರು? ಅವರ ಹಿನ್ನೆಲೆ ಏನು? ನೋಡೋಣ ಬನ್ನಿ…

 • ವಿವೇಕ್ ದೆಬೊರಾಯ್:
  ಇವರು ಆರ್ಥಿಕ ತಜ್ಞರಾಗಿದ್ದು, ಲೇಖಕರು ಹಾಗೂ ನೀತಿ ಆಯೋಗದ ಸದಸ್ಯರೂ ಆಗಿದ್ದಾರೆ. ಕೊಲ್ಕತ್ತಾದ ಪ್ರೆಸಿಡೆಂನ್ಸಿ ಕಾಲೇಜು, ಗೋಖಲೆ ಇನ್ಸ್ ಟಿಟ್ಯೂಟ್ ಆಫ್ ಪಾಲಿಟಿಕ್ಸ್ ಅಂಡ್ ಎಕನಾಮಿಕ್ಸ್, ಇಂಡಿಯನ್ ಇಂನ್ಸ್ ಟಿಟ್ಯೂಟ್ ಆಫ್ ಫಾರಿನ್ ಟ್ರೇಡ್, ನ್ಯಾಷನಲ್ ಕೌನ್ಸಿಲ್ ಆಱ್ ಅಪ್ಲೈಡ್ ಎಕನಾಮಿಕ್ಸ್ ರಿಸರ್ಚ್ ಗಳಲ್ಲಿ ಆರ್ಥಿಕತೆಯ ಬೋದನೆ ಮಾಡಿದ್ದಾರೆ. ಭಾರತೀಯ ರೈಲ್ವೇಯ ಪುನರ್ ವಿನ್ಯಾಸ ಸಮಿತಿಯ ಮುಖ್ಯಸ್ಥರೂ ಆಗಿದ್ದಾರೆ.
 • ಸುರ್ಜಿತ್ ಭಲ್ಲ:
  ಇವರು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಬೋದಕರಾಗಿದ್ದು, ರಾಂಡ್ ಕಾರ್ಪೊರೇಷನ್, ಬ್ರೂಕಿಂಗ್ ಇನ್ಸ್ ಟಿಟ್ಯೂಷನ್, ವಿಶ್ವಬ್ಯಾಂಕ್, ಗೋಲ್ಡ್ ಮ್ಯಾನ್ ಸ್ಯಾಚ್ಸ್ ಮತ್ತು ಡಾಶೆ ಬ್ಯಾಂಕಿನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಇವರು ದೆಹಲಿ ಮೂಲಕ ಆರ್ಥಿಕ ಸಂಶೋಧನಾ ಸಂಸ್ಥೆಯಾಗಿರುವ ಆಕ್ಸಸ್ ಇನ್ವೆಸ್ಟ್ ಮೆಂಟಿನ ಮುಖ್ಯಸ್ಥರೂ ಆಗಿದ್ದಾರೆ. ಪಠ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ಬರಿದಿದ್ದು, ಜಾಗತೀಕರಣ ಹಾಗೂ ವಿಶ್ವ ಆರ್ಥಿಕತೆಯ ಮೇಲೆ ಅದರ ಪರಿಣಾಮಗಳ ಕುರಿತಾಗಿ ಮೂರು ಪುಸ್ತಕಗಳನ್ನು ರಚಿಸಿದ್ದಾರೆ. ಆರ್ಬಿಐ, ಸೆಬಿ ಮತ್ತು ಭಾರತ ರಾಷ್ಟ್ರೀಯ ಅಂಕಿ ಅಂಶ ಸಮಿತಿಯ ಸದಸ್ಯರೂ ಆಗಿದ್ದಾರೆ.
 • ರತಿನ್ ರಾಯ್:
  ಇವರು ದೆಹಲಿ ಮೂಲಕ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಅಂಡ್ ಪಾಲಿಸಿಯ ನಿರ್ದೇಶಕರಾಗಿದ್ದು, ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಭಾಗವಾಗಿ ಆರ್ಥಿಕ ರಾಯಭಾರಿ ಮತ್ತು ನೀತಿ ಸಲಹೆಗಾರರಾಗಿಯೂ ಕೆಲಸ ಮಾಡಿದ್ದಾರೆ. ಆರ್ಥಿಕ ತಜ್ಞರಾಗಿ ಕಾರ್ಯನಿರ್ವಹಿಸುವುದರ ಜತೆಗೆ ಫಿಸ್ಕಲ್ ಸ್ಪೇಸ್, ಫಿಸ್ಕಲ್ ಡಿಸೆಂಟ್ರಲೈಸೇಷನ್, ಮ್ಯಾಕ್ರೊ ಫಿಸ್ಕಲ್ ಪಾಲಿಸಿ ಕುರಿತಾಗಿ ಸಂಶೋಧನೆಗಳನ್ನು ನಡೆಸಿದ್ದಾರೆ.
 • ಅಶಿಮಾ ಗೋಯಲ್:
  ಇವರು ಆರ್ಬಿಐನ ತಾಂತ್ರಿಕ ಸಲಹಾ ಸಮಿತಿ ಸೇರಿದಂತೆ ಸರ್ಕಾರದ ಶಿಕ್ಷಣ ಹಾಗೂ ಆರ್ಥಿಕತೆಗೆ ಸಂಬಂಧಿಸಿದ ವಿವಿಧ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇಂದಿರಾ ಗಾಂಧಿ ಇಂನ್ಸ್ ಟಿಟ್ಯೂಟ್ ಆಫ್ ಡೆವಲಪ್ ಮೆಂಟ್ ರಿಸರ್ಚ್ ನಲ್ಲಿ ಪ್ರೋಫೆಸರ್ ಆಗಿದ್ದು, ಯಾಲೆ ವಿಶ್ವವಿದ್ಯಾನಿಲಯದ ಎಕನಾಮಿಕ್ ಗ್ರೋತ್ ಸೆಂಟರ್ ನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದಾರೆ. ಇವರು ಸಮಗ್ರ ಅರ್ಥಶಾಸ್ತ್ರ ಮತ್ತು ಮಾರುಕಟ್ಟೆ, ಆರ್ಥಿಕತೆಯ ಪ್ರಗತಿ ಹಾಗೂ ಅಭಿವೃದ್ಧಿ, 21ನೇ ಶತಮಾನದಲ್ಲಿ ಭಾರತದ ಆರ್ಥಿಕತೆಗೆ ಸಂಬಂಧಿಸಿದ ಕಿರು ಪುಸ್ತಕವನ್ನು ರಚಿಸಿದ್ದಾರೆ.
 • ರತನ್ ವಟಲ್:
  ಇವರು ನೀತಿ ಆಯೋಗದ ಪ್ರಧಾನ ಸಲಹೆಗಾರರಾಗಿದ್ದು, ಈ ಹಿಂದೆ ಪ್ರಧಾನಮಂತ್ರಿಯವರ ಕಚೇರಿ, ಐಎಂಎಫ್ ಹಾಗೂ ಆಂಧ್ರ ಪ್ರದೇಶ ಸರ್ಕಾರದ ಜತೆಗೆ ಕೆಲಸ ಮಾಡಿದ್ದರು. ನೀತಿ ಆಯೋಗದ ಸಲಹೆಗಾರರಾಗುವ ಮುನ್ನ ಹಣಕಾಸು ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದರು. ಇವರು ಡಿಜಿಟಲ್ ಪೇಮೆಂಟ್ ಗೆ ಸಂಬಂಧಿಸಿದಂತೆ ರೂಪುರೇಷೆ ರಚಿಸುವ ಸಮಿತಿಯ ಮುಖ್ಯಸ್ಥರಾಗಿದ್ದರು. ಇವರ ವರದಿ ಕಳೆದ ವರ್ಷ ಡಿಸೆಂಬರ್ ನಲ್ಲಿ ಸಲ್ಲಿಕೆಯಾಗಿದ್ದು, ಇವರ ಶಿಫಾರಸ್ಸುಗಳು ಜಾರಿ ಹಂತದಲ್ಲಿದೆ ಎಂದು ನೀತಿ ಆಯೋಗದ ವೆಬ್ ಸೈಟಿನಲ್ಲಿ ತಿಳಿಸಲಾಗಿದೆ.

Leave a Reply