ಮೋದಿಯ ‘ಸೌಭಾಗ್ಯ’ ಏನು-ಎತ್ತ? ನೀವು ತಿಳಿಯಬೇಕಿರುವ ಪ್ರಮುಖ ಮಾಹಿತಿಗಳಿವು

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಭಾಗವಹಿಸಿ ದೇಶದ ಜನತೆಗೆ ಹೊಸ ಯೋಜನೆಯನ್ನು ನೀಡಿದ್ದಾರೆ. ಅದುವೇ ‘ಸೌಭಾಗ್ಯ’ ಯೋಜನೆ (ಪ್ರಧಾನಮಂತ್ರಿ ಸಹಜ್ ಬಿಜಲಿ ಹರ್ ಘರ್ ಯೋಜನೆ). ಒಟ್ಟು ₹ 16,320 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಪ್ರಕಟಿಸಲಾಗಿದ್ದು, ಈ ಯೋಜನೆ ಕುರಿತಾದ ಪ್ರಮುಖ ಮಾಹಿತಿಗಳು ಹೀಗಿವೆ…

  • ಗ್ರಾಮಿಣ ಪ್ರದೇಶಗಳಲ್ಲಿನ 4 ಕೋಟಿ ಕುಟುಂಬಗಳಿಗೆ 2018ರ ಡಿಸೆಂಬರ್ ವೇಳೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಈ ಯೋಜನೆಯ ಗುರಿಯಾಗಿದೆ. ಪ್ರತಿಯೊಬ್ಬರಿಗೂ ವಿದ್ಯುತ್ ಎಂಬ ಘೋಷಣೆಯೊಂದಿಗೆ ಈ ಯೋಜನೆ ಬರುತ್ತಿದೆ.
  • ದೇಶದ ಪ್ರತಿಯೊಂದು ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಪೂರೈಸಬೇಕು ಎಂಬ ಕಾರಣಕ್ಕೆ ಮೋದಿ ಸರ್ಕಾರ 2015ರ ಜುಲೈನಲ್ಲಿ ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯನ್ನು ಆರಂಭಿಸಲಾಯಿತು. ಇದರಡಿಯಲ್ಲಿ ಶೇ.78ರಷ್ಟು ಅಂದರೆ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ವಿಸ್ತರಿಸಿ ಈ ಯೋಜನೆಯನ್ನು ಯಶಸ್ವಿಗೊಳಿಸಲಾಯಿತು. ಆದರೆ ವಿದ್ಯುತ್ ಸಂಪರ್ಕ ಸಿಕ್ಕರೂ ಸರಿಯಾಗಿ ವಿದ್ಯುತ್ ಪೂರೈಕೆಯಾಗದಿರುವ ಸಮಸ್ಯೆ ಸರ್ಕಾರಕ್ಕೆ ದೊಡ್ಡ ಸವಾಲಾಗಿ ನಿಂತಿದೆ. ಅನೇಕ ಜಿಲ್ಲೆಗಳಲ್ಲಿ ಸಾರ್ವಜನಿಕ ಸ್ಥಳಗಾಳಾದ ಶಾಲೆ, ಗ್ರಾಮಪಂಚಾಯ್ತಿ, ಆರೋಗ್ಯ ಕೇಂದ್ರಗಳ ಜತೆಗೆ ಕೇವಲ ಶೇ.10 ರಷ್ಟು ಮನೆಗಳಿಗೆ ಮಾತ್ರ ವಿದ್ಯುತ್ ಪೂರೈಕೆಯಾಗುತ್ತಿತ್ತು. ಹೀಗಾಗಿ ಪ್ರತಿಯೊಂದು ಮನೆಗೂ ವಿದ್ಯುತ್ ಪೂರೈಕೆಯಾಗಬೇಕು ಎಂಬ ಉದ್ದೇಶದೊಂದಿಗೆ ಕೇಂದ್ರ ಈ ಹೊಸ ಯೋಜನೆಯನ್ನು ಪ್ರಕಟಿಸಿದೆ.
  • ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ವ್ಯವಸ್ಥೆ ಕಲ್ಪಿಸಿದರೂ ವಿದ್ಯುತ್ ವಿತರಣ ಕಂಪನಿಗಳು ಸರಿಯಾಗಿ ವಿದ್ಯುತ್ ಪೂರೈಕೆ ಮಾಡುತ್ತಿರಲಿಲ್ಲ. ಈಗ ಪ್ರತಿಯೊಂದು ಮನೆಗೂ ಸ್ಮಾರ್ಟ್ ಮೀಟರ್ ಗಳ ಅಳವಡಿಸಿ, ಪ್ರೀಪೇಡ್ ಮೂಲಕ ವಿದ್ಯುತ್ ನೀಡುವುದರಿಂದ ಈ ಕಂಪನಿಗಳಿಗೆ ವಿದ್ಯುತ್ ಬೇಡಿಕೆ ಹೆಚ್ಚಲಿದ್ದು, ಇವುಗಳನ್ನು ಸಮರ್ಪಕವಾಗಿ ಪೂರೈಸಲು ನೆರವಾಗುತ್ತದೆ.
  • ಇನ್ನು ಈ ಯೋಜನೆಗಳಿಂದ ಆಗುವ ಇತರೆ ಪ್ರಯೋಜನಗಳೆಂದರೆ, ಈ ಯೋಜನೆಯಿಂದಾಗಿ ವಿಶ್ವ ಮಟ್ಟದಲ್ಲಿ ಭಾರತವು ಅಮೆರಿಕ ಹಾಗೂ ಚೀನಾ ದೇಶದ ಜತೆಗೆ ಅತಿ ಹೆಚ್ಚು ವಿದ್ಯುತ್ ಬಳಸುವ ದೇಶವಾಗಲಿದೆ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಸೀಮೆಎಣ್ಣೆ ಹಾಗೂ ಇತರೆ ದೀಪಗಳಿಗೆ ವಿದ್ಯುತ್ ಪರ್ಯಾಯವಾಗಲಿದೆ.
  • ಇನ್ನು ಈ ಯೋಜನೆ ಅನುಷ್ಠಾನ ಹೇಗೆ ಎಂಬುದನ್ನು ನೋಡುವುದಾದರೆ, ಈ ಯೋಜನೆಯನ್ನು ತಕ್ಷಣವೇ ಪಡೆಯಲು ಮೊಬೈಲ್ ಅಪ್ಲಿಕೇಶನ್ ಬಳಸಬೇಕಾಗಿದೆ. ಬಡತನರೇಖೆಗಿಂತ ಕೆಳಗಿರುವ ಮನೆಗೆ ಉಚಿತ ವಿದ್ಯುತ್ ಸಂಪರ್ಕ ವ್ಯವಸ್ಥೆ ನೀಡಲಾಗುವುದು. ಇತರರಿಗೆ ₹ 500 ಶುಲ್ಕದಲ್ಲಿ ವಿದ್ಯುತ್ ಸಂಪರ್ಕ ನೀಡಲಾಗುವುದು. ಇದನ್ನು ಪ್ರತಿ ತಿಂಗಳು ವಿದ್ಯುತ್ ಬಿಲ್ ನಲ್ಲೇ ₹ 50 ಎಂಬಂತೆ ಕಟ್ಟಬಹುದಾಗಿದೆ.
  • ಇನ್ನು ಪ್ರತಿತಿಂಗಳ ವಿದ್ಯುತ್ ಪಾವತಿಯಲ್ಲಿ ಯಾವುದೇ ಸಬ್ಸಿಡಿ ನೀಡಲಾಗಿಲ್ಲವಾದ್ದರಿಂದ, ಈ ವಿದ್ಯುತ್ ಶುಲ್ಕವನ್ನು ಗ್ರಾಮ ಪಂಚಾಯ್ತಿ ಹಾಗೂ ಸರ್ಕಾರಿ ಸಂಸ್ಥೆಗಳ ಮೂಲಕ ಕಲೆಹಾಕಲಾಗುವುದು. ಇದು ಸಹಜವಾಗಿಯೇ ವಿದ್ಯುತ್ ವಿತರಣ ಕಂಪನಿಗಳಿಗೆ ದೊಡ್ಡ ಹೊಡೆತ ನೀಡಲಿದೆ. ಯಾವ ಪ್ರದೇಶಗಳಲ್ಲಿ ರಾಷ್ಟ್ರೀಯ ವಿದ್ಯುತ್ ಗ್ರೀಡ್ ಸಂಪರ್ಕ ಇರುವುದಿಲ್ಲವೋ ಆ ಪ್ರದೇಶಗಳಲ್ಲಿ ಸೋಲಾರ್ ಪವರ್ ಪ್ಯಾಕ್ ಮತ್ತಪ ಬ್ಯಾಟರಿ ಬ್ಯಾಂಕ್ ಮೂಲಕ ವಿದ್ಯುತ್ ಒದಗಿಸಲಾಗುವುದು.
  • ಎಲ್ಲಕ್ಕಿಂತ ಮುಖ್ಯವಾಗಿ ಈ ಯೋಜನೆಯ ಫಲಾನುಭವಿಗಳನ್ನು ಗುರುತಿಸುವುದು ಹೇಗೆ ಎಂಬುದು. ಈ ಪ್ರಶ್ನೆಗೆ ಉತ್ತರ ಹೀಗಿದೆ. ಸರ್ಕಾರವು 2011ರ ಸಾಮಾಜಿಕ, ಆರ್ಥಿಕ ಹಾಗೂ ಜಾತಿ ಜನಗಣತಿಯ ಆಧಾರದ ಮೇಲೆ ಈ ಯೋಜನೆಯ ಫಲಾನುಭವಿಗಳನ್ನು ಗುರುತಿಸಲಾಗುವುದು.

Leave a Reply