‘ಶಿಕಾರಿಪುರದಿಂದಲೇ ಸ್ಪರ್ಧಿಸುವೆ…’ ನಿರ್ಧಾರ ಬದಲಿಸಿದ ಬಿಎಸ್ ವೈ

ಡಿಜಿಟಲ್ ಕನ್ನಡ ಟೀಮ್:

ಹಲವು ದಿನಗಳಿಂದ ರಾಜ್ಯ ರಾಜಕೀಯ ವಲಯದಲ್ಲಿ ಯಡಿಯೂರಪ್ಪನವರು ಮುಂದಿನ ಚುನಾವಣೆಯಲ್ಲಿ ಶಿಕಾರಿಪುರ ಬಿಟ್ಟು, ಉತ್ತರ ಕರ್ನಾಟಕದ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರ ಚರ್ಚೆಯಾಗುತ್ತಿದೆ. ಬುಧವಾರ ಈ ಬಗ್ಗೆ ಮಾಧ್ಯಮದವರ ಜತೆ ಮಾತನಾಡಿದ ಯಡಿಯೂರಪ್ಪನವರು, ‘ನಾನು ಶಿಕಾರಿಪುರದಿಂದಲೇ ಸ್ಪರ್ಧಿಸುತ್ತೇನೆ’ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಕಾರಣ, ನಿನ್ನೆಯಷ್ಟೇ ಬಿಎಸ್ ವೈ ಅವರು ತೆರದಾಳ ಕ್ಷೇತ್ರದಲ್ಲಿ ಹಾಲಿ ಸಚಿವೆ ಉಮಾಶ್ರೀ ವಿರುದ್ಧ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಆದರೆ ಇಂದು ಯಡಿಯೂರಪ್ಪನವರ ಹೇಳಿಕೆ ಅದಕ್ಕೆ ಭಿನ್ನವಾಗಿದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಯಡಿಯೂರಪ್ಪನವರು, ‘ಶಿಕಾರಿಪುರದಿಂದಲೇ ಸ್ಪರ್ಧಿಸಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಇಲ್ಲಿಂದಲೇ ಸ್ಪರ್ಧಿಸಲು ನನಗೆ ಒಲವಿದೆ. ಈ ಕುರಿತಾಗಿ ಪಕ್ಷದ ಮುಖಂಡರ ಮನವೊಸಿಲು ಯತ್ನಿಸುತ್ತೇನೆ. ಅವರ ಒಪ್ಪಿಗೆ ಪಡೆದು ಶಿಕಾರಿಪುರದಿಂದಲೇ ಸ್ಪರ್ಧಿಸುತ್ತೇನೆ’ ಎಂದು ಬಿಎಸ್ ವೈ ವಿಶ್ವಾಸ ವ್ಯಕ್ತಪಡಿಸಿದರು. ಯಡಿಯೂರಪ್ಪನವರಿಗೆ ತೆರದಾಳ ಕ್ಷೇತ್ರದಿಂದ ಸ್ಪರ್ಧಿಸುವ ಮನಸ್ಸಿಲ್ಲವೆಂಬುದು ಈ ಹೇಳಿಕೆಯಿಂದ ಸ್ಪಷ್ಟವಾಗುತ್ತಿದೆ.

ಮುಂದಿನ ಚುನಾವಣೆಯಲ್ಲಿ ಬಿಎಸ್ ವೈ ಅವರ ಕ್ಷೇತ್ರ ಬದಲಿಸುವುದರ ಹಿಂದೆ ಅವರನ್ನು ರಾಜಕೀಯವಾಗಿ ಮಟ್ಟಹಾಕುವ ಷಡ್ಯಂತ್ರ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಕುರಿತಾಗಿ ಡಿಜಿಟಲ್ ಕನ್ನಡದ ಒಳಸುಳಿ ಅಂಕಣದಲ್ಲಿಯೂ ವಿವರಿಸಲಾಗಿತ್ತು.

ಯಡಿಯೂರಪ್ಪನವರ ಆಪ್ತರಲ್ಲಿ ಒಬ್ಬರಾಗಿರುವ ಶೋಭಾ ಕರಂದ್ಲಾಜೆ ಅವರು ಯಡಿಯೂರಪ್ಪನವರು ಶಿಕಾರಿಪುರದಿದಲೇ ಸ್ಪರ್ಧಿಸಲಿದ್ದು, ಬೇರೆ ಕಡೆಯಿಂದ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿಕೆ ನೀಡಿದ್ದರೂ ಬಿಎಸ್ ವೈ ಅವರ ಕ್ಷೇತ್ರ ಬದಲಾವಣೆಗೆ ಪಕ್ಷದಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿದೆ. ಉತ್ತರ ಕರ್ನಾಟಕದಲ್ಲಿ ಪ್ರಾಬಲ್ಯ ಹೊಂದಿರುವ ಲಿಂಗಾಯತರ ಸಮುದಾಯದ ಬೆಂಬಲ ಪಡೆಯಲು ಯಡಿಯೂರಪ್ಪನವರನ್ನು ಈ ಪ್ರದೇಶದಿಂದ ಚನಾವಣೆಗೆ ಇಲಿಸಲಾಗುವುದು ಎಂಬ ಕಾರಣಗಳು ಕೇಳಿಬಂದಿದ್ದವು. ಆದರೆ, ಪ್ರತ್ಯೇಕ ಧರ್ಮದ ವಿಚಾರದಲ್ಲಿ ವೀರಶೈವ ಹಾಗೂ ಲಿಂಗಾಯತ ಬಣಗಳ ನಡುವಣ ಭಿನ್ನಾಭಿಪ್ರಾಯದ ಸಂದರ್ಭದಲ್ಲಿ ಲಿಂಗಾಯತರ ಭಾಗದಲ್ಲೇ ಬಿಎಸ್ ವೈ ಅವರನ್ನು ನಿಲ್ಲಿಸಿ ಅವರನ್ನು ರಾಜಕೀಯವಾಗಿ ಹಣಿಯುವ ಪ್ರಯತ್ನಗಳು ನಡೆಯುತ್ತಿರುವ ಬಗ್ಗೆ ಚರ್ಚೆಯಾಗುತ್ತಿತ್ತು.

ಈ ಎಲ್ಲದರ ಹಿನ್ನೆಲೆಯಲ್ಲಿ ಆರಂಭದಲ್ಲಿ ಕ್ಷೇತ್ರ ಬದಲಾವಣೆಗೆ ಒಪ್ಪಿದ್ದ ಯಡಿಯೂರಪ್ಪನವರು ಈಗ ತಮ್ಮ ನಿರ್ಧಾರದಲ್ಲಿ ಬದಲಾವಣೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಇದೇ ವೇಳೆ ತಮಗೂ ಹಾಗೂ ಬಿ.ಎಲ್ ಸಂತೋಷ್ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇಬ್ಬರೂ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದೇವೆ. ಪಕ್ಷವನ್ನು ಸಂಘಟಿಸುತ್ತಿದ್ದೇವೆ ಎಂದು ಬಿಎಸ್ ವೈ ಸ್ಪಷ್ಟನೆ ನೀಡಿದ್ದಾರೆ.

Leave a Reply