ನವೆಂಬರ್ ನಲ್ಲಿ ಚಳಿಗಾಲದ ಅಧಿವೇಶನ, ಆರ್ಥಿಕ ದುರ್ಬಲರಿಗಾಗಿ 1 ಲಕ್ಷ ಮನೆ ನಿರ್ಮಾಣ, ಜ್ಯೋತಿಷ್ಯ- ವಾಸ್ತುವಿಗೆ ಅಡ್ಡಿಯಿಲ್ಲ, ರಾಜ್ಯ ಸಚಿವ ಸಂಪುಟದ ನಿರ್ಧಾರಗಳು

Chief Minister Siddaramaiah addressing the Media after the Cabinet Meeting at Vidhana Soudha in Bengaluru on Tuesday. Home Minister Dr.G.Parameshwar, Minister M.B.Patil, and others were present on the occasion.

ಡಿಜಿಟಲ್ ಕನ್ನಡ ಟೀಮ್:

ಚಳಿಗಾಲದ ಅಧಿವೇಶನ, ಮೌಢ್ಯ ನಿಷೇಧ ಕಾಯ್ದೆ ಹಾಗೂ ಆರ್ಥಿಕ ದುರ್ಬಲರಿಗಾಗಿ ₹ 1 ಲಕ್ಷ ಮನೆ ನಿರ್ಮಾಣ ಸೇರಿದಂತೆ ಇತರೆ ಪ್ರಮುಖ ವಿಷಯಗಳ ಕುರಿತಾಗಿ ಇಂದು ನಡೆದ ರಾಜ್ಯ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ತೆಗೆದುಕೊಳ್ಳಲಾದ ಪ್ರಮುಖ ನಿರ್ಣಯಗಳು ಹೀಗಿವೆ…

  • ಮಡೆ ಸ್ನಾನ, ನರಬಲಿ, ಮಂತ್ರ-ತಂತ್ರ, ವಾಮಾಚಾರ, ಮೈಚುಚ್ಚುವುದು, ಬೆತ್ತಲೆ ಸೇವೆಯಂತಹ ವಾಮಾಚಾರಗಳನ್ನು ನಿಷೇಧಿಸಿರುವ ರಾಜ್ಯ ಸರ್ಕಾರ ಜ್ಯೋತಿಷ್ಯ, ವಾಸ್ತು, ಕುರಿಬಲಿಯಂತಹ ಆಚರಣೆಗಳನ್ನು ಮುಂದುವರೆಸಲು ಅವಕಾಶ ಮಾಡಿಕೊಟ್ಟಿದೆ. ಹದಿನಾಲ್ಕು ತಿಂಗಳಿಂದ ತೀವ್ರ ಚರ್ಚೆಗೆ ಕಾರಣವಾಗಿರುವ ಮೌಢ್ಯ ನಿಷೇಧ ಮಸೂದೆಗೆ ಇಂದಿಲ್ಲಿ ಅಂಗಿಕಾರ ನೀಡಿರುವ ರಾಜ್ಯ ಸಚಿವ ಸಂಪುಟ ಜ್ಯೋತಿಷ್ಯ ವಾಸ್ತು ಜೊತೆಗೆ ಸಂಖ್ಯಾಶಾಸ್ತ್ರ, ವಶೀಕರಣ, ಜಾತಕಫಲ ಹಸ್ತ ಸಾಮುದ್ರಿಕ ಶಾಸ್ತ್ರ ನಡೆಸಲು ಯಾವುದೇ ಅಡ್ಡಿ ಇಲ್ಲ ಎಂದು ತೀರ್ಮಾನಿಸಿದೆ.
  • ಮೌಢ್ಯ ನಿಷೇಧ ಕಾಯ್ದೆ ಸೇರಿದಂತೆ ಕೆಲವು ಪ್ರಮುಖ ಕಾಯ್ದೆಗಳಿಗೆ ಒಪ್ಪಿಗೆ ಪಡೆಯುವ ಉದ್ದೇಶದಿಂದ ನವೆಂಬರ್ ತಿಂಗಳಲ್ಲಿ ಚಳಿಗಾಲದ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಇಂದಿಲ್ಲಿ ಸಮ್ಮತಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ. ಜಯಚಂದ್ರ, ‘ಸದನವನ್ನು ಯಾವ ದಿನಾಂಕದಂದು ಕರೆಯಬೇಕು ಮತ್ತು ಎಷ್ಟು ದಿನ ನಡೆಸಬೇಕು ಎಂಬ ತೀರ್ಮಾನವನ್ನು ಮುಖ್ಯಮಂತ್ರಿಯವರೇ ನಿರ್ಧರಿಸಲು ಅವರಿಗೆ, ಸಂಪುಟ ಅಧಿಕಾರ ನೀಡಿದೆ.
  • ಆರ್ಥಿಕ ದುರ್ಬಲರಿಗೆ 6000 ಕೋಟಿ ರೂ ವೆಚ್ಚದಲ್ಲಿ ಒಂದು ಲಕ್ಷ ಮನೆಗಳನ್ನು ನಿರ್ಮಿಸಿಕೊಡಲು ಸಂಪುಟ ನಿರ್ಧರಿಸಿದ್ದು, ಇದಕ್ಕಾಗಿ 468 ಎಕರೆ ಭೂಮಿಯನ್ನು ಗುರುತಿಸಲಾಗಿದೆ ಎಂದು ಸಚಿವರು ತಿಳಿಸಿದರು. ಈ ಯೋಜನೆಯಡಿ ಫಲಾನುಭವಿಗಳು ತಲಾ ₹ 1 ಲಕ್ಷ ಪಾವತಿಸಿದರೆ ಸಾಕು. ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ನಿರ್ಮಿಸಲಾಗುವ ಈ ಮನೆಗಳ ನಿರ್ಮಾಣಕ್ಕೆ ಹುಡ್ಕೋದಂತಹ ಸಂಸ್ಥೆಗಳ ವತಿಯಿಂದ ₹ 500 ಕೋಟಿ, ಕೇಂದ್ರ ಸರ್ಕಾರದಿಂದ ₹ 1300 ಕೋಟಿ ಪಡೆಯಲಾಗುವುದು.
  • ಕಾವೇರಿ ನಿರ್ವಹಣಾ ಮಂಡಳಿಗೆ ವಿರೋಧ ವ್ಯಕ್ತಪಡಿಸಿ, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‍ಗೆ ತನ್ನ ಲಿಖಿತ ಅಭಿಪ್ರಾಯ ನೀಡಲು ನಿರ್ಧರಿಸಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ಜಲವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವಿಚಾರಣೆ ಪೂರ್ಣಗೊಳಿಸಿ, ಎರಡು ವಾರಗಳಲ್ಲಿ ನಿಮ್ಮ ಅಂತಿಮ ಅಭಿಪ್ರಾಯಗಳನ್ನು ಲಿಖಿತ ಮೂಲಕ ನೀಡಿ ಎಂದು ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಕಾನೂನು ಮತ್ತು ನೀರಾವರಿ ತಜ್ಞರೊಟ್ಟಿಗೆ ಸುದೀರ್ಘ ಚರ್ಚೆ ನಡೆಸಿ, ಒಂಭತ್ತು ಅಂಶಗಳನ್ನು ಮುಂದಿಟ್ಟುಕೊಂಡು ಅವುಗಳ ಬಗ್ಗೆ ವಾಸ್ತವ ಸ್ಥಿತಿ, ಅಂಕಿ ಅಂಶ, ನೀರಿನ ಲಭ್ಯತೆ ಇತರೆ ವಿಚಾರಗಳಿಗೆ ಸಂಬಂಧಿಸಿದಂತೆ ಪೂರ್ಣ ವರದಿಯನ್ನು ಸಿದ್ದಪಡಿಸಿ, ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದರು.
  • ಪಶುಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರ ನಿರ್ಧರಿಸಿದ್ದು 2017-18 ರ ಸಾಲಿನಲ್ಲಿ ₹ 36.72 ಕೋಟಿ ವೆಚ್ಚದಲ್ಲಿ ಮುನ್ನೂರಾ ಆರು ಪಶುಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುವುದು.ಅಲ್ಲಿ ಹೆಚ್ಚುವರಿ ಅನುಕೂಲಗಳನ್ನು ಒದಗಿಸಲು ನಿರ್ಧಾರ. ಹಾಲಿ ಇರುವ 1512 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು ಹಂತ ಹಂತವಾಗಿ ₹ 182.72 ಕೋಟಿ ವೆಚ್ಚದಲ್ಲಿ ಪಶು ಚಿಕಿತ್ಸಾಲಯವನ್ನಾಗಿ ಮೇಲ್ದರ್ಜೆಗೇರಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ.

Leave a Reply