ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಬಣ್ಣ ಬಯಲು ಮಾಡಿದ ಭಾರತದ ತ್ರಿಶಕ್ತಿಗಳು..!

ಡಿಜಿಟಲ್ ಕನ್ನಡ ಟೀಮ್:

ಸದ್ಯ ವಿಶ್ವಸಂಸ್ಥೆ ವಾರ್ಷಿಕ ಮಹಾಸಭೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ವಾಕ್ಸಮರ ದೇನೇ ದಿನೇ ಕಾವು ಪಡೆದುಕೊಳ್ಳುತ್ತಿದೆ. ಪಾಕಿಸ್ತಾನ ಭಾರತದ ಮಾನ ಕಳೆಯಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದರೂ ಅದನ್ನು ಸಮರ್ಥವಾಗಿ ಮೆಟ್ಟಿನಿಲ್ಲುವಲ್ಲಿ ಸುಷ್ಮಾ ಸ್ವರಾಜ್, ಪೌಲೊಮಿ ತ್ರಿಪಾಟಿ ಹಾಗೂ ಈನಮ್ ಗಂಭೀರ್ ಯಶಸ್ವಿಯಾಗಿದ್ದಾರೆ.

ದೇಶದಲ್ಲಿ ಮಹಿಳೆಯರಿಗೆ ರಕ್ಷಣೆಯ ಕುರಿತಾದ ಕೂಗು ಕೇಳಿಬರುತ್ತಿರುವ ಹೊತ್ತಲ್ಲೇ ಭಾರತದ ಮಹಿಳೆಯರ ತಮ್ಮ ದೇಶದ ಘನತೆಯನ್ನು ವಿಶ್ವಮಟ್ಟದಲ್ಲಿ ಕಾಪಾಡುತ್ತಿರುವುದು ನಿಜಕ್ಕೂ ಹೆಮ್ಮೆ ತರುತ್ತಿದೆ. ಈ ಮೂವರು ಪಾಕಿಸ್ತಾನದ ಪ್ರಯತ್ನವನ್ನು ವಿಫಲಗೊಳಿಸುವುದರ ಜತೆಗೆ ಅದರ ಬಣ್ಣವನ್ನು ಬಯಲು ಮಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಮಾನವನ್ನು ಹರಾಜುಹಾಕುತ್ತಿದ್ದಾರೆ. ಇದರೊಂದಿಗೆ ಈ ಮೂವರು ಮಹಿಳೆಯರು ಪಾಕಿಸ್ತಾನದ ಪಾಲಿಗೆ ದುರ್ಗೆಯರಂತೆ ಪರಿಣಮಿಸಿದ್ದಾರೆ.

ಸುಷ್ಮಾ, ಈನಮ್ ಹಾಗೂ ಪೌಲೊಮಿ ವಿಶ್ವದ ಅತ್ಯುನ್ನತ ವೇದಿಕೆಯಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿಯುತ್ತಿರುವುದು ಹೇಗೆ ಎಂಬುದನ್ನು ನೋಡೋಣ ಬನ್ನಿ…

  • ಸೆ.21- ಪಾಕಿಸ್ತಾನ ಪ್ರಧಾನಿ ಭಾರತದ ವಿರುದ್ಧ ನೀಡಿದ ಹೇಳಿಕೆ

ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ್ದ ಪಾಕ್ ಪ್ರಧಾನಿ ಶಾಹಿದ್ ಅಬ್ಬಾಸಿ, ಭಾರತವೇ ಪಾಕಿಸ್ತಾನದ ವಿರುದ್ಧ ಉಗ್ರಕೃತ್ಯಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದ್ದರು. ಅಲ್ಲದೆ ‘ಕಾಶ್ಮೀರ ವಿಷಯವನ್ನು ಶಾಂತಿಯುತವಾಗಿ, ನ್ಯಾಯಯುತವಾಗಿ ಬಗೆಹಿರಿಸಕೊಳ್ಳಬೇಕು. ಆದರೆ ಭಾರತ ಈ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳು ಸಿದ್ಧವಿಲ್ಲ. ಕಾಶ್ಮೀರದ ಜನರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಈ ವರ್ಷ ಜನವರಿಯಿಂದ ಇಲ್ಲಿಯವರೆಗೂ ಭಾರತ 600ಕ್ಕೂ ಹೆಚ್ಚು ಬಾರಿ ಕದನವಿರಾಮ ಉಲ್ಲಂಘಿಸಿದ್ದು, ಪಾಕಿಸ್ತಾನ ತಕ್ಕ ಉತ್ತರ ನೀಡಿದೆ. ಭಾರತ ಇದೇ ರೀತಿ ಪಾಕಿಸ್ತಾನವನ್ನು ಕೆಣಕುತ್ತಿದ್ದರೆ, ತಕ್ಕ ಉತ್ತರ ನೀಡಬೇಕಾಗುತ್ತದೆ. ಹೀಗಾಗಿ ವಿಶ್ವಸಂಸ್ಥೆ ಭದ್ರತಾ ಸಮಿತಿಗೆ ಮನವಿ ಮಾಡುತ್ತಾ, ಕಾಶ್ಮೀರದ ವಿಚಾರವಾಗಿ ವಿಶ್ವಸಂಸ್ಥೆಯ ನಿರ್ಣಯಗಳನ್ನು ಜಾರಿಗೊಳಿಸಬೇಕು.’ ಎಂದು ಆಗ್ರಹಿಸಿದ್ದರು.

  • ಸೆ.21- ಪಾಕ್ ಪ್ರಧಾನಿಗೆ ಟಾಂಗ್ ಕೊಟ್ಟ ಈನಮ್

ಪಾಕಿಸ್ತಾನ ಪ್ರಧಾನಿಯ ಸುಳ್ಳು ಆರೋಪಗಳಿಗೆ ಉತ್ತರಿಸಿದ ವಿಶ್ವಸಂಸ್ಥೆ ಶಾಶ್ವತ ಯೋಜನೆಯ ಮೊದಲ ಕಾರ್ಯದರ್ಶಿ ಈನಮ್ ಗಂಭೀರ್, ‘ಪಾಕಿಸ್ತಾನ ಈಗ ಟೆರರಿಸ್ತಾನವಾಗಿದೆ. ಒಸಾಮ ಬಿನ್ ಲಾಡೆನ್ ನಂತಹ ಉಗ್ರನಿಗೆ ಆಶ್ರಯಕೊಟ್ಟ ಪಾಕಿಸ್ತಾನ ಇಂದು ಭಾರತದ ವಿರುದ್ಧ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಪಾಕಿಸ್ತಾನ ತನ್ನ ಕೆಲವೇ ವರ್ಷಗಳ ಇತಿಹಾಸದಲ್ಲಿ ಬೌಗೋಳಿಕವಾಗಿ ಉಗ್ರರ ಆಶ್ರಯತಾಣವಾಗಿ ಬಿಂಬಿತವಾಗಿದೆ. ಇದೊಂದು ಉಗ್ರರನ್ನು ಹುಟ್ಟುಹಾಕುವ ನೆಲವಾಗಿ ಪರಿವರ್ತನೆಗೊಂಡಿದೆ. ಜಾಗತಿಕ ಭಯೋತ್ಪಾದನೆಗೆ ಉಗ್ರರನ್ನು ಒದಗಿಸುತ್ತಿರುವ ಕೈಗಾರಿಕೆಯಾಗಿದೆ ಪಾಕಿಸ್ತಾನ. ವಿಶ್ವಸಂಸ್ಥೆಯೇ ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿರುವ ಲಷ್ಕರ್ ನ ನಾಯಕ ಮೊಹಮದ್ ಸಯೀದ್ ಇಂದು ಪಾಕಿಸ್ತಾನದಲ್ಲಿ ರಾಜಕೀಯ ನಾಯಕನಾಗಿ ಹೊರಹೊಮ್ಮಲು ಸಿದ್ಧತೆ ನಡೆಸುತ್ತಿದ್ದಾನೆ. ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದನ್ನು ಪಾಕಿಸ್ತಾನ ಅರ್ಥಮಾಡಿಕೊಳ್ಳಬೇಕು’ ಎಂದು ಪಾಕಿಸ್ತಾನ ಪ್ರಧಾನಿಗೆ ಮಂಗಳಾರತಿ ಮಾಡಿದ್ದರು.

  • ಸೆ.23 ಪಾಕಿಸ್ತಾನ ಹಾಗೂ ಭಾರತದ ನಡುವಿನ ವ್ಯತ್ಯಾಸ ತಿಳಿಸಿದ ಸುಷ್ಮಾ ಸ್ವರಾಜ್

ವಿಶ್ವಸಂಸ್ಥೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸುಷ್ಮಾ ಸ್ವರಾಜ್ ಪಾಕಿಸ್ತಾನದ ಎಲ್ಲ ಆರೋಪಗಳನ್ನು ನಿರಾಕರಿಸಿ, ಉಗ್ರರ ವಿಚಾರದಲ್ಲಿ ಭಾರತ ಹೇಗೆ ಪಾಕಿಸ್ತಾನಕ್ಕಿಂತ ಭಿನ್ನ ಎಂಬುದನ್ನು ಎಳೆ ಎಳೆಯಾಗಿ ವಿವರಿಸಿದರು.

‘ಭಾರತೀಯರಾದ ನಾವು ಬಡತನದ ವಿರುದ್ಧ ಹೋರಾಡುತ್ತಿದ್ದರೆ, ನೆರೆರಾಷ್ಟ್ರ ಪಾಕಿಸ್ತಾನ ನಮ್ಮ ವಿರುದ್ಧ ಹೋರಾಟ ನಡೆಸುತ್ತಿದೆ. ಪಾಕಿಸ್ತಾನ ಉಗ್ರರನ್ನು ತಯಾರಿಸುವ ರಾಷ್ಟ್ರ. ಭಾರತ ಐಐಟಿ, ಐಐಎಂ, ಎಐಐಎಂಎಸ್ ಮತ್ತು ಇಸ್ರೋ ಸ್ಥಾಪನೆಯಿಂದ ವಿಶ್ವಕ್ಕೆ ಇಂಜಿನಿಯರ್, ಡಾಕ್ಟರ್ ಹಾಗೂ ವಿಜ್ಞಾನಿಗಳನ್ನು ಕೊಡುಗೆಯಾಗಿ ನೀಡುತ್ತಿದ್ದರೆ, ಪಾಕಿಸ್ತಾನ ಲಷ್ಕರ್ ಇ ತೈಬಾ, ಜೈಶ್ ಇ ಮೊಹಮದ್, ಹಕ್ಕಾನಿ ಸಂಪರ್ಕ, ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಗಳನ್ನು ಸ್ಥಾಪಿಸಿ ಜಾಗತಿಕ ಭಯೋತ್ಪಾದನೆಗೆ ಉಗ್ರರನ್ನು ಕೊಡುಗೆಯಾಗಿ ನೀಡುತ್ತಿದೆ. ಪಾಕಿಸ್ತಾನ ಉಗ್ರರಿಗೆ ಬಂಬಲ ನೀಡದೇ ತನ್ನ ದೇಶದ ಅಭಿವೃದ್ಧಿಯತ್ತ ಗಮನ ಹರಿಸಿದ್ದರೆ, ಇಂದು ಉಭಯ ದೇಶಗಳು ನೆಮ್ಮದಿಯಿಂದ ಇರಬಹುದಿತ್ತು’ ಎಂದು ಪಾಕಿಸ್ತಾನದ ಮಾನ ಹರಾಜು ಹಾಕಿದರು.

  • ಸೆ.23- ಕಾಶ್ಮೀರ ವಿಷಯವಾಗಿ ಪಾಕ್ ಅಧಿಕಾರಿಯ ಸುಳ್ಳು ಆರೋಪ

ಸುಷ್ಮಾ ಸ್ವರಾಜ್ ಅವರ ಹೇಳಿಕೆಗೆ ಪ್ರತ್ಯುತ್ತರವಾಗಿ ಪಾಕಿಸ್ತಾನ ತನ್ನ ಅತ್ಯಂತ ಹಿರಿಯ ರಾಯಭಾರಿ ಅಧಿಕಾರಿಯನ್ನು ವಿಶ್ವಸಂಸ್ಥೆಯಲ್ಲಿ ಕಣಕ್ಕಿಳಿಸಿತು. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಶಾಶ್ವತ ಪ್ರತಿನಿಧಿಯಾಗಿರುವ ಮಲೀಹಾ ಲೊಧಿ ಭಾರತದ ವಿರುದ್ಧ ಆರೋಪಗಳನ್ನು ಮಾಡಿದರು. ಭಾರತ ಜಮ್ಮುಕಾಶ್ಮೀರದಲ್ಲಿ ನಾಗರೀಕರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಹೇಳಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಚಿತ್ರವೊಂದನ್ನು ವಿಶ್ವಸಂಸ್ಥೆಯ ಸಭೆಯಲ್ಲಿ ಎಲ್ಲರಿಗೂ ತೋರಿಸಿದರು. ಆ ಮೂಲಕ ಇದು ಜಮ್ಮು ಕಾಶ್ಮೀರದಲ್ಲಿ ಭಾರತದ ಅಮಾನವೀಯ ಕೃತ್ಯ ಎಂದು ಟೀಕಿಸಿದರು.

  • ಸೆ.26- ಪಾಕಿಸ್ತಾನದ ಸುಳ್ಳುವಾದ ಬಯಲು ಮಾಡಿದ ಪೌಲೊಮಿ

ಪಾಕ್ ಅಧಿಕಾರಿ ಭಾರತದ ವಿರುದ್ಧ ಮಾಡಿದ ಆರೋಪವನ್ನು ಭಾರತದ ರಾಯಭಾರಿ ಅಧಿಕಾರಿ ಪೌಲೊಮಿ ತ್ರಿಪಾಠಿ ಸುಳ್ಳು ಎಂದು ಸಾಬೀತು ಮಾಡಿದರು. ಆ ಮೂಲಕ ವಿಶ್ವಸಂಸ್ಥೆಯಲ್ಲಿ ಎಲ್ಲ ರಾಷ್ಟ್ರಗಳ ಮುಂದೆ ಪಾಕಿಸ್ತಾನದ ಬಣ್ಣವನ್ನು ಬಯಲು ಮಾಡಿದರು.

ಮಲೀಹಾ ಲೋಧ ಅವರ ತೋರಿಸಿದ ಚಿತ್ರ ನಕಲಿಯಾಗಿದ್ದು, ಅದು ಪ್ಯಾಲೆಸ್ತಿನಿನ ಯುವತಿಯ ಚಿತ್ರ. ಆ ಚಿತ್ರದಲ್ಲಿರುವುದು 17 ವರ್ಷದ ಪ್ಯಾಲೆಸ್ತೀನ್ ಯುವತಿ ರಾವ್ಯಾ ಅಬು ಜೊಮಾ. 2014ರಲ್ಲಿ ಗಾಜಾದಲ್ಲಿ ನಡೆದ ಇಸ್ರೇಲ್ ದಾಳಿಯ ವೇಳೆ ಖ್ಯಾತ ಫೊಟೋಗ್ರಾಫರ್ ಹೈಡಿ ಲೆವಿನ್ ಅವರು ಕ್ಲಿಕ್ಕಿಸಿದ್ದು, ಈ ಚಿತ್ರ ನ್ಯೂಯಾರ್ಕ್ ಟೈಮ್ಸ್ ನಲ್ಲೂ ಪ್ರಕಟವಾಗಿದೆ. ಹೀಗೆ ನಕಲಿ ಚಿತ್ರವನ್ನು ತೊರಿಸುವ ಮೂಲಕ ಮಲೀಹಾ ಲೋಧಿ ಅವರು ಸಭೆಗೆ ತಪ್ಪು ಮಾಹಿತಿ ನೀಡಿದ್ದಾರೆ. ಇದು ಪಾಕಿಸ್ತಾನದ ನಿಜವಾದ ಬಣ್ಣವನ್ನು ತಿಳಿಸುತ್ತದೆ’ ಎಂದು ಸಭೆಯಲ್ಲಿ ತಿಳಿಸಿದರು. ನಂತರ ಜಮ್ಮು ಕಾಶ್ಮೀರದಲ್ಲಿ ಬರ್ಬರವಾಗಿ ಹತ್ಯೆಯಾದ ಲೆಫ್ಟಿನೆಂಟ್ ಉಮರ್ ಫಯಾಜ್ ಅವರ ಚಿತ್ರವನ್ನು ತೋರಿದ ಪೌಲೊಮಿ, ‘ಇದು ನಿಜವಾದ ಚಿತ್ರವಾಗಿದ್ದು, ಪಾಕಿಸ್ತಾನ ಹೇಗೆ ಭಯೋತ್ಪಾದನೆಯ ಮೂಲಕ ಭಾರತದ ಮೇಲೆ ದಾಳಿ ಮಾಡುತ್ತಿದೆ ಎಂಬುದಕ್ಕೆ ಸಾಕ್ಷಿ’ ಎಂದು ವಿಶ್ವಸಂಸ್ಥೆಯಲ್ಲಿ ಸಾರಿ ಹೇಳಿದರು.

Leave a Reply