ಟೀಂ ಇಂಡಿಯಾದ ದಾಖಲೆಯ ಜಯಕ್ಕೆ ಅಡ್ಡಿಯಾಗುವುದೇ ಮಳೆ?

ಡಿಜಿಟಲ್ ಕನ್ನಡ ಟೀಮ್:

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಏಕದಿನ ಪಂದ್ಯ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ನಗರದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಇಂದಿನ ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚಾಗಿದೆ.

ಸದ್ಯ ಟೀಂ ಇಂಡಿಯಾ ಸತತವಾಗಿ 9 ಏಕದಿನ ಪಂದ್ಯಗಳಲ್ಲಿ ಜಯ ಹಾಗೂ ಮೂರು ಮಾದರಿಯ ಕ್ರಿಕೆಟ್ ನಲ್ಲಿ ಸತತ 12 ಜಯ ಸಂಪಾದಿಸಿ ಗೆಲುವಿನ ನಾಗಾಲೋಟದಲ್ಲಿದೆ. ಅಲ್ಲದೆ ಕಳೆದ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಈ ಸರಣಿಯನ್ನು ಗೆಲ್ಲುವುದರೊಂದಿಗೆ ಟೀಂ ಇಂಡಿಯಾ ಸತತ 6ನೇ ಉಭಯ ದೇಶಗಳ ಸರಣಿಯನ್ನು ಗೆದ್ದು ಬೀಗಿದೆ.

ತಂಡದಲ್ಲಿ ಸ್ಥಾನ ಪಡೆಯಲು ಆಟಗಾರರ ನಡುವಣ ಪೈಪೋಟಿ ಟೀಂ ಇಂಡಿಯಾ ಪ್ರದರ್ಶನದ ಗುಣಮಟ್ಟ ದಿನೇ ದಿನೇ ಏರಿಕೆಯಾಗುತ್ತಿದೆ. ಅತ್ತ ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧದ ಮೂರು ಪಂದ್ಯಗಳು ಸೇರಿದಂತೆ ವಿದೇಶಿ ಪಿಚ್ ಗಳಲ್ಲಿ ಸತತ 10 ಪಂದ್ಯಗಳನ್ನು ಸೋತು ತೀವ್ರ ಒತ್ತಡಕ್ಕೆ ಸಿಲುಕಿದೆ.

ಸರಣಿಯನ್ನು ಗೆದ್ದುಕೊಂಡಿರುವ ಭಾರತ ಈಗ ಮತ್ತೊಂದು ಕ್ಲೀನ್ ಸ್ವೀಪ್ ಗೆಲುವಿನತ್ತ ಕಣ್ಣಿಟ್ಟಿದೆ. ಆದರೆ ಆಸೀಸ್ ಪಡೆ ಉಲಿದೆರಡು ಪಂದ್ಯಗಳನ್ನಾದರು ಗೆದ್ದು ಸೋಲಿನ ಸರಪಳಿಯಿಂದ ಕಳಚಿಕೊಂಡು ಮಾನ ಉಳಿಸಿಕೊಳ್ಳಲು ಹವಣಿಸುತ್ತಿದೆ.

ಅಂದಹಾಗೆ ಭಾರತ ಈ ಪಂದ್ಯವನ್ನು ಗೆದ್ದುಕೊಂಡರೆ ಟೀಂ ಇಂಡಿಯಾ ಸತತವಾಗಿ 10 ಪಂದ್ಯಗಳನ್ನು ಗೆದ್ದ ಸಾಧನೆ ಮಾಡಲಿದೆ. ಏಕದಿನ ಮಾದರಿಯಲ್ಲಿ ಭಾರತ ಇದೇ ಮೊದಲ ಬಾರಿಗೆ ಈ ಸಾಧನೆ ಮಾಡಿದಂತಾಗಲಿದೆ. ಭಾರತದ ಈ ಸಾಧನೆಗೆ ಸದ್ಯಕ್ಕೆ ಆತಂಕವಿರುವುದು ಮಳೆಯಿಂದಾಗಿ. ಆದರೆ ಬೆಂಗಳೂರಿ ಪಿಚ್ ನಲ್ಲಿ ಕಳೆದ ವರ್ಷವಷ್ಟೇ ಮಳೆ ನೀರು ಇಂಗುವ ಅತ್ಯುನ್ನತ ವ್ಯವಸ್ಥೆಯನ್ನು ಕಲ್ಪಿಸಿ ಪಿಚ್ ಗುಣಮಟ್ಟನ್ನು ಉತ್ತಮ ದರ್ಜೆಗೆ ಏರಿಸಲಾಗಿದೆ. ಹೀಗಾಗಿ ಅಲ್ಪ ಸ್ವಲ್ಪ ಮಳೆ ಬಂದರೂ ಶೀಘ್ರದಲ್ಲೇ ಪಂದ್ಯ ಆರಂಭ ಮಾಡಬಹುದಾಗಿದೆ.

ಸದ್ಯ ಬೆಂಗಳೂರು ಪಿಚ್ ಗೆ ಅಳವಡಿಸಲಾಗಿರುವ ಹೊಸ ತಂತ್ರಜ್ಞಾನದಿಂದ ಮೈದಾನದಲ್ಲಿ ಮಳೆ ನೀರನ್ನು ಸಾಮಾನ್ಯ ಪ್ರಮಾಣಕ್ಕಿಂತ 36 ಪಟ್ಟು ವೇಗವಾಗಿ ನೀರನ್ನು ಹೀರಿಕೊಳ್ಳಲಾಗುತ್ತದೆ. ಹೀಗಾಗಿ ಅತಿಯಾದ ಮಳೆ ಬಿದ್ದರಷ್ಟೇ ಪಂದ್ಯಕ್ಕೆ ತೊಂದರೆಯಾಗಲಿದೆ. ಇಲ್ಲವಾದರೆ ಕಡಿಮೆ ಓವರ್ ಪಂದ್ಯ ನಡೆಯುವ ಅವಕಾಶ ಹೆಚ್ಚಿದೆ.

Leave a Reply