‘ಮುಂದಿನ ಸಿಎಂ’ ಸೃಷ್ಟಿಸಿರುವ ಕನಸಿನ ಸಾಮ್ರಾಜ್ಯ!

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೂ ಏಳೆಂಟು ತಿಂಗಳು ಬಾಕಿ ಇದೆ. ಮುಂದಿನ ಬಾರಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೋ, ಅದ್ಯಾವ ಸರಕಾರ ಆಳ್ವಿಕೆ ನಡೆಸುತ್ತದೋ ಗೊತ್ತಿಲ್ಲ. ಆದರೆ ಮುಖ್ಯಮಂತ್ರಿ ಪದವಿಗೇರಲು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಪೈಪೋಟಿಗೆ ಬಿದ್ದಿದ್ದಾರೆ. ಮೊದಲೆರಡು ಪಕ್ಷಗಳಲ್ಲಿ ಸಿಎಂ ಪದವಿ ತಮ್ಮದೇ ಅಂತ ಈಗಾಗಲೇ ಷರಾ ಬರೆದಿಟ್ಟಾಗಿದೆ. ಹಾಗೆ ಷರಾ ಬರೆದಿಟ್ಟವರ ಸಂಖ್ಯೆ ಆಡಳಿತರೂಢ ಕಾಂಗ್ರೆಸ್‌ನಲ್ಲಿ ಹೆಚ್ಚು. ಆದರೆ ತಮ್ಮನ್ನು ಬಿಟ್ಟು ಅದ್ಯಾರು ತಾನೇ ಸರಕಾರ ರಚನೆ ಮಾಡಲು ಸಾಧ್ಯ, ಮುಖ್ಯಮಂತ್ರಿ ಆಗಲು ಸಾಧ್ಯ ಎಂದು ಜೆಡಿಎಸ್ ಕೂಡ ಟವೆಲ್ಲು ಬೀಸೊಗೆದಿದೆ.

ಒಂದು ರಾಜ್ಯಕ್ಕೆ ಇರೋದು ಒಂದೇ ಮುಖ್ಯಮಂತ್ರಿ ಪದವಿ. ಆದರೆ ಮೂರು ಪಕ್ಷದವರೂ ಆ ಪಟ್ಟ ತಮ್ಮದೇ ಅಂತ ಕಡ್ಡಿ ತುಂಡು ಮಾಡಿದಂತೆ ಹೇಳಿಕೊಳ್ಳುತ್ತಿದ್ದಾರೆ. ಒಂದೇ ಕಾಲಕ್ಕೆ ಮೂರು ಮಂದಿ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ ಅನ್ನೋದು ಬೇರೆ ಮಾತು. ಆದರೂ ಅವರವರ ವಿಶ್ವಾಸ ಅವರವರದು. ಅದಕ್ಕೇನು ಕಾಸು ಕೊಡಬೇಕಿಲ್ಲ, ಕರಿಮಣಿ ಕೊಡಬೇಕಿಲ್ಲ. ಯಾರು ಬೇಕಾದರೂ ಹೇಳಿಕೊಳ್ಳಬಹುದು. ಆದರೆ ಹಾಗೆ ಹೇಳಿಕೊಳ್ಳುತ್ತಿರುವವರಲ್ಲಿ ಈ ಅತೀವ ಅತ್ಮವಿಶ್ವಾಸ ತುಂಬಿ ತುಳುಕಾಡುತ್ತಿರುವ ಬಗೆ ಹೇಗೆ? ಹಾಗೆ ತುಂಬಿ ತುಳುಕಾಡಲು ಕಾರಣಗಳಾದರೂ ಏನು? ಅವರು ಹಾಗೆ ಘೋಷಿಸಿಕೊಳ್ಳುತ್ತಿರುವುದರಿಂದ ಪಕ್ಷದೊಳಗೆ ಗುಪ್ತಗಾಮಿನಿಯಿಂತೆ ಹರಿದಾಡುತ್ತಿರುವ ಬೆಳವಣಿಗೆಗಳಾದರೂ ಏನು? ಯಾರ್ಯಾರ ವಿರುದ್ಧ ಯಾರ್ಯಾರು ಕತ್ತಿ ಮಸೆಯುತ್ತಿದ್ದಾರೆ? ಯಾರು, ಯಾರನ್ನು ಎತ್ತಿ ಕಟ್ಟುತ್ತಿದ್ದಾರೆ? ಎಂಬ ವಿಚಾರಗಳು ರಾಜಕೀಯ ವಲಯದಲ್ಲಿ ಒಂದಷ್ಟು ಕುತೂಹಲಗಳನ್ನು ಕೆರಳಿಸಿಟ್ಟಿವೆ.
ನಿಜ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಹಳ ದಿನಗಳಿಂದಲೂ ಮುಂದಿನ ಬಾರಿಯೂ ತಾವೇ ಸಿಎಂ ಎಂದು ಹೇಳಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ನಂಜನಗೂಡು ಮತ್ತು ಗುಂಡ್ಲುಪೇಟೆ ಮರುಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ನಂತರ. ಅವರು ಹಾಗೆ ಹೇಳಿಕೊಂಡದ್ದು ಹೈಕಮಾಂಡಿಗೆ ದೂರು ಸ್ವರೂಪದಲ್ಲಿ ಹೋಗಿದ್ದರಿಂದ ಒಂದಷ್ಟು ದಿನ ಸುಮ್ಮನಿದ್ದ ಸಿದ್ದರಾಮಯ್ಯನವರು ಮತ್ತೆ ಇದೀಗ ಅದನ್ನೇ ಶುರುವಿಟ್ಟುಕೊಂಡಿದ್ದಾರೆ. ಮೊನ್ನೆ ಮೈಸೂರಿನಲ್ಲಿ ದಸರಾ ಹಬ್ಬಕ್ಕೆ ಚಾಲನೆ ಕೊಟ್ಟ ಸಂದರ್ಭದಲ್ಲಿ ಮುಂದಿನ ಬಾರಿಯೂ ತಾವೇ ಚಾಮುಂಡೇಶ್ವರಿ ಸಮ್ಮುಖದಲ್ಲಿ ನಾಡಹಬ್ಬಕ್ಕೆ ಚಾಲನೆ ನೀಡುವುದಾಗಿ ಹೇಳಿಕೊಂಡಿದ್ದರು. ಆ ಮೂಲಕ ಮುಂದಿನ ಬಾರಿಯೂ ತಾವೇ ಸಿಎಂ ಎಂಬುದನ್ನು ಪರೋಕ್ಷವಾಗಿ ಬಿಂಬಿಸಿಕೊಂಡಿದ್ದರು. ಅವರು ಹಾಗೇ ಹೇಳಿದ್ದೇ ಕಾಂಗ್ರೆಸ್ಸಿನಲ್ಲಿ ಒಂದಷ್ಟು ಮಂದಿಯ ಕಣ್ಣು ಕೆಂಪಗಾಗಿಸಿದ್ದು ಮಾತ್ರವಲ್ಲ, ಒಂದಷ್ಟು ಬೆಳವಣಿಗೆಗಳಿಗೂ ಸಾಕ್ಷಿಯಾದವು.
ಸಿದ್ದರಾಮಯ್ಯನವರು ಹಾಗೆ ಹೇಳುತ್ತಿದ್ದಂತೆ ಮಂಗಳೂರಿನಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ, ಕೇಂದ್ರದ ಮಾಜಿ ಸಚಿವ ಜನಾರ್ಧನ ಪೂಜಾರಿ ಅವರು ಟಾಂಗ್ ಕೊಟ್ಟಿದ್ದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರು ಮುಂದಿನ ಮುಖ್ಯಮಂತ್ರಿ ಆಗಲಿದ್ದಾಾರೆ. ಆ ಮೂಲಕ ದಲಿತ ಸಿಎಂ ಕೂಗಿಗೆ ಕರ್ನಾಟಕ ಸಾಕ್ಷಿಯಾಗಲಿದೆ ಎಂದು ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಚುಚ್ಚಿದ್ದರು. ಸಿದ್ದರಾಮಯ್ಯನವರ ಸರಕಾರ ಬಂದಾಗಿನಿಂದಲೂ ಅವರ ಕಡುವೈರಿ ಆಗಿ ಪರಿವರ್ತಿತರಾಗಿರುವ ಜನಾರ್ದನ ಪೂಜಾರಿ ಅವರು ಅವಕಾಶ ಸಿಕ್ಕಾಾಗಲೆಲ್ಲ ಸಿದ್ದರಾಮಯ್ಯನವರನ್ನು ಟೀಕಿಸುವುದನ್ನೇ ಒಂದು ಖಯಾಲಿ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದ ನಂತರ ತಮ್ಮಂಥ ಮೂಲ ಕಾಂಗ್ರೆಸ್ಸಿಗರಿಗೆ ಸರಿಯಾದ ಗೌರವ ಸಿಕ್ಕಿಲ್ಲ ಎಂಬುದು ಅವರ ಟೀಕಾಸ್ತ್ರಗಳ ಹಿಂದಿರುವ ನೋವು. ಅದರ ಮುಂದುವರಿದ ಭಾಗವಾಗಿ ಪೂಜಾರಿ ಅವರು ಸಿಎಂ ಹೇಳಿಕೆಗಳಿಗೆ ತಮ್ಮ ಪ್ರತಿರೋಧವನ್ನು ಆಗಾಗ್ಗೆ ದಾಖಲಿಸುತ್ತಾ ಬಂದಿದ್ದಾರೆ. ತಮ್ಮ ಅಸ್ತಿತ್ವ ಸಾರಿಕೊಳ್ಳುವುದರ ಜತೆಜತೆಗೆ.
ಇದೇ ರೀತಿ, ಕೆಪಿಸಿಸಿ ಮಾಹಿತಿ ಮತ್ತು ತಂತ್ರಜ್ಞಾನ (ಐಟಿ) ಘಟಕದ ಮೂಲಕ ನಡೆಯುತ್ತಿರುವ ‘ಮತ್ತೊಮ್ಮೆ ಸಿದ್ದರಾಮಯ್ಯ’ ಪ್ರಚಾರಾಂದೋಲನಕ್ಕೆ ಪರಮೇಶ್ವರ ಆಕ್ಷೇಪ ವ್ಯಕ್ತಪಡಿಸಿದ್ದಾಾರೆ. ‘ಮತ್ತೊಮ್ಮೆ ಸಿದ್ದರಾಮಯ್ಯ’ ಆಂದೋಲನದ ಉದ್ದೇಶ ಮತ್ತೆ ಅವರೇ ಸಿಎಂ ಆಗಬೇಕು, ಆಗುತ್ತಾರೆ ಎಂದು ಬಿಂಬಿಸುವುದು. ಆದರೆ ಈ ಹುದ್ದೆ ಮೇಲೆ ಮೊದಲಿಂದಲೂ ಕಣ್ಣಿಟ್ಟಿರುವ ಪರಮೇಶ್ವರ ಅವರು ಇದನ್ನು ಹೇಗೆ ತಾನೇ ಸಹಿಸಿಕೊಂಡಾರು? ಹೀಗಾಗಿ ಕಾಂಗ್ರೆೆಸ್ಸಿನಲ್ಲಿ ಚುನಾವಣೆಗೆ ಮೊದಲೇ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದಾಗಲಿ, ಮುಂದಿನ ಮುಖ್ಯಮಂತ್ರಿ ಯಾರು ಅಂತಾಗಲಿ ಬಿಂಬಿಸೋ ಸಂಪ್ರದಾಯವಿಲ್ಲ. ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು, ಅದನ್ನು ಅಧಿಕಾರಕ್ಕೆ ತರುವುದು ನಮ್ಮೆಲ್ಲರ ಸಂಕಲ್ಪವಾಗಬೇಕು. ಪಕ್ಷ ಅಧಿಕಾರಕ್ಕೆ ಬಂದ ನಂತರ ಶಾಸಕಾಂಗ ಸಭೆ ಸಿಎಂ ಯಾರೆಂಬುದನ್ನು ಆಯ್ಕೆ ಮಾಡುತ್ತದೆ. ಹೀಗಾಗಿ ‘ಮತ್ತೊಮ್ಮೆ ಸಿದ್ದರಾಮಯ್ಯ’ ಘೋಷಣೆಗೆ ಪಕ್ಷದ ವೇದಿಕೆ ಬಳಕೆ ಮಾಡಿಕೊಳ್ಳುವುದಾಗಲಿ, ಹಾಗೆ ಪ್ರಚಾರ ಮಾಡುವುದಾಗಲಿ ಸರಿಯಲ್ಲ. ಅದು ತಕ್ಷಣ ನಿಲ್ಲಬೇಕು ಎಂದು ಎಚ್ಚರಿಕೆ ಜತೆಗೆ ಆದೇಶ ನೀಡಿದ್ದಾಾರೆ. ತಾವು ಕೆಪಿಸಿಸಿ ಅಧ್ಯಕ್ಷರಾಗಿರುವಾಗ, ಅದರಲ್ಲೂ ತಮ್ಮ ಸುಪರ್ಧಿಯಲ್ಲೇ ಇರುವ ಐಟಿ ಘಟಕದಲ್ಲಿ ತಮ್ಮ ಎದುರಾಳಿ ಸಿದ್ದರಾಮಯ್ಯ ಪರ ಪ್ರಚಾರ ನಡೆಯುವುದನ್ನು ಪರಮೇಶ್ವರ ಹೇಗೆ ತಾನೆ ಸಹಿಸಿಯಾರು? ಅದೂ ಆ ಹುದ್ದೆಗೆ ತಾವೂ ಒಬ್ಬರು ಪ್ರಬಲ ಆಕಾಂಕ್ಷಿ ಆಗಿರುವಾಗ. ಉಹುಂ, ಬಿಲ್‌ಕುಲ್ ಇಲ್ಲ. ಹೀಗಾಗಿ ಅವರ ಅಸಮಾಧಾನ ದಾಖಲಾಗಿ ಹೋಗಿದೆ.
ಇನ್ನು ದಸರಾ ಉತ್ಸವಕ್ಕೆ ಚಾಲನೆ ಸಂದರ್ಭದಲ್ಲಿ ಸಿದ್ದರಾಮಯ್ಯನವರು ‘ನಾನೇ ಮುಂದಿನ ಸಿಎಂ’ ಎಂದು ಘೋಷಿಸುತ್ತಿದ್ದಂತೆ ಅವರ ಕಡುವಿರೋಧಿ ಹಾಗೂ ಪರಮೇಶ್ವರರ ಪರಮಭಕ್ತ ಶಾಸಕ ಕೆ.ಎನ್. ರಾಜಣ್ಣ  ಪ್ರತಿಹೇಳಿಕೆ ಕೊಟ್ಟರು. ‘ಕಾಂಗ್ರೆಸ್ಸಿನಲ್ಲಿ ಚುನಾವಣೆಗೆ ಮೊದಲೇ ಸಿಎಂ ಯಾರು ಎಂಬುದನ್ನು ಹೇಳುವ ಪ್ರತೀತಿ ಇಲ್ಲ. ಅದೇನಿದ್ದರೂ ಚುನಾವಣೆ ನಂತರ, ಅದರಲ್ಲೂ ಪಕ್ಷದ ಅಧಿಕಾರಕ್ಕೆ ಬಂದ ನಂತರ. ಶಾಸಕಾಂಗ ಪಕ್ಷ ಸಭೆ ಸೇರಿ ನಾಯಕನನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಅಲ್ಲಿಯವರೆಗೂ ಯಾರು ಬೇಕಾದರೂ ನಾನೇ ಸಿಎಂ ಅಂತ ಹೇಳಿಕೊಳ್ಳಬಹುದು. ನಾನೂ ಕೂಡ ಮುಂದಿನ ಸಿಎಂ ಆಗಬಹುದು’ ಎಂದು ಸಿದ್ದರಾಮಯ್ಯ ಅವರನ್ನು ಚುಚ್ಚಿದರು. ಅವರು ಹಾಗೆ ತಿರುಗೇಟು ಕೊಟ್ಟರು ಎನ್ನುವುದಕ್ಕಿಂತ ಪರಮೇಶ್ವರರ ಮಾತು ರಾಜಣ್ಣನವರ ಬಾಯಲ್ಲಿ ಹೊರಬಿತ್ತು ಎಂದು ಧಾರಾಳವಾಗಿ ಹೇಳಬಹುದು. ಇನ್ನು ನಿಖರವಾಗಿ ಹೇಳಬೇಕೆಂದರೆ ರಾಜಣ್ಣ ಅವರಿಂದ ಈ ಹೇಳಿಕೆ ಕೊಡಿಸಿದ್ದೇ ಪರಮೇಶ್ವರ!
ಇಷ್ಟೆಲ್ಲ ಆದ ಮೇಲೆ ಸಿದ್ದರಾಮಯ್ಯ ಸುಮ್ಮನಿದ್ದಾರೆಯೇ? ಒಂದು ಸಾರಿ ನೋಡಿದರು, ಎರಡು ಸಾರಿ ನೋಡಿದರು. ಎದುರಾಳಿಗಳ ಆಟ ಜಾಸ್ತಿಯಾಗುತ್ತಿದ್ದಂತೆ ತಮ್ಮ ಕಡುಬೆಂಬಲಿಗ ಸಂಸದ ಧ್ರುವನಾರಾಯಣ್ ಅವರನ್ನು ಅಖಾಡಕ್ಕೆ ಇಳಿಸಿದರು. ಪತ್ರಿಕಾಗೋಷ್ಠಿ ಮಾಡಿದ ಧ್ರುವನಾರಾಯಣ್, ‘ಮುಂದಿನ ಚುನಾವಣೆ ಸಿದ್ದರಾಮಯ್ಯನವರ ನೇತೃತ್ವದಲ್ಲೇ ನಡೆಯುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ಸೇ ಅಧಿಕಾರಕ್ಕೆ ಬರುತ್ತದೆ. ಸಿದ್ದರಾಮಯ್ಯನವರೇ ಮುಂದಿನ ಬಾರಿಯೂ ಮುಖ್ಯಮಂತ್ರಿ ಆಗುತ್ತಾರೆ. ರಾಜ್ಯದ ಜನ ಅವರಲ್ಲಿ ವಿಶ್ವಾಸ ಇಟ್ಟಿದ್ದಾರೆ’ ಎಂದು ಪೂಜಾರಿ, ಪರಮೇಶ್ವರ ಹಾಗೂ ರಾಜಣ್ಣ ಅವರ ಆಕ್ಷೇಪಗಳಿಗೆ ಉತ್ತರ ಕೊಟ್ಟರು. ಈ ಬಾರಿ ಅವರ ಬಾಯಲ್ಲಿ ಸಿದ್ದರಾಮಯ್ಯನವರ ಮಾತು ಉಲಿದಿತ್ತು!
ಇಷ್ಟೆಲ್ಲ ನಡೆದದ್ದು ದಸರಾ ಅವಧಿಯಲ್ಲೇ. ಧ್ರುವನಾರಾಯಣ್ ಹೇಳಿಕೆ ಹೊರಬಿದ್ದ ನಂತರ ವಿಜಯ ದಶಮಿಯಂದು ಬನ್ನಿಮಂಟಪದ ಪೂಜೆ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಮತ್ತೊಂದು ಹೇಳಿಕೆ ಕೊಟ್ಟರು. ‘ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ, ಬನ್ನಿಪೂಜೆಯೂ ನಮ್ಮಿಂದಲೇ ನೆರವೇರುತ್ತದೆ’ ಎಂದು. ಅವರು ಒಂದು ಬದಲಾವಣೆ ಮಾಡಿಕೊಂಡಿದ್ದರು. ‘ನಾನು’ ಎನ್ನುವ ಜಾಗದಲ್ಲಿ ‘ನಾವು’ ಎಂಬುದನ್ನು ಸೇರಿಸಿದ್ದರು. ಆದರೆ ಅರ್ಥ ಮಾತ್ರ ಒಂದೇ. ಮುಂದಿನ ಬಾರಿಯೂ ತಾವೇ ಸಿಎಂ ಎಂಬುದು.
ಆದರೆ ಈ ಬಾರಿ ಸಿದ್ದರಾಮಯ್ಯನವರ ಹೇಳಿಕೆ ವಿರುದ್ಧ ಹಿರಿಯರು ಅಖಾಡಕ್ಕೆ ಇಳಿದರು. ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ, ಸಿಎಂ ಆಗುವ ಕನಸಿನಲ್ಲೇ ರಾಜಕೀಯ ಬದುಕು ಸವೆಸುತ್ತಾ ಬಂದಿರುವ, ದಲಿತ ಸಿಎಂ ಕೂಗಿಗೆ ಪರಮೇಶ್ವರ ಅವರಲ್ಲದೇ ಮತ್ತೊಂದು ಧ್ವನಿಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದರು. ವಿಧಾನಸಭೆ ಚುನಾವಣೆಗೆ ಪೂರ್ವದಲ್ಲಿಯೇ ಮುಖ್ಯಮಂತ್ರಿ ಹೆಸರು ಘೋಷಣೆ ಕಾಂಗ್ರೆಸ್ ಸಿದ್ಧಾಂತವಲ್ಲ. ಚುನಾವಣೆ ನಂತರ, ಪಕ್ಷ ಅಧಿಕಾರಕ್ಕೆ ಬಂದ ನಂತರ ಹೈಕಮಾಂಡ್ ಎಲ್ಲರ ಒಪ್ಪಿಗೆ ಪಡೆದು ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ. ಅಲ್ಲಿಯವರೆಗೂ ಯಾರು ಏನೇ ಹೇಳಿಕೊಂಡರೂ ಅದಕ್ಕೆ ಕಿಮ್ಮತ್ತಿಲ್ಲ. ತಾವೇ ಮುಂದಿನ ಸಿಎಂ ಎಂದು ಹೇಳಿಕೊಳ್ಳುವವರು ಇದನ್ನು ಗಮನಿಸಬೇಕು ಎಂದು ಸಿದ್ದರಾಮಯ್ಯನವರಿಗೆ ಟಾಂಗ್ ಕೊಟ್ಟರು. ಅಂದರೆ ಸಿದ್ದರಾಮಯ್ಯನವರು ಪದೇ ಪದೇ ತಾವೇ ಮುಂದಿನ ಸಿಎಂ ಎಂದು ಹೇಳಿಕೊಳ್ಳುತ್ತಿರುವುದಕ್ಕೆ ಪಕ್ಷದೊಳಗೆ ಎಲ್ಲರ ಸಹಮತ ಇಲ್ಲ. ಅವರನ್ನು ಚಾಂಪಿಯನ್ ಎಂದು ಒಪ್ಪಿಕೊಳ್ಳಲು ಎಲ್ಲರೂ ಸಿದ್ಧರಿದ್ದಾಾರೆ. ಆದರೆ ಮುಂದಿನ ಸಿಎಂ ಎಂದು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂಬುದರ ಸೂಚನೆ ಇದು.
ನಿಜ, ಬಿಜೆಪಿ ಸರಕಾರದ ಬಗೆಗಿನ ಆಡಳಿತವಿರೋಧಿ ಅಲೆ, ಜೆಡಿಎಸ್ಸಿನಲ್ಲಿ ಅವರಿಗಾಗಿದ್ದ ಅನ್ಯಾಯ, ಎಲ್ಲಕ್ಕಿಂತ ಮಿಗಿಲಾಗಿ ಅಹಿಂದ ಮತಗಳ ಕ್ರೋಡೀಕರಣ ಸಿದ್ದರಾಮಯ್ಯ ಅವರನ್ನು ಕಳೆದ ಚುನಾವಣೆಯಲ್ಲಿ ಸಿಎಂ ಗಾದಿಗೆ ತಂದು ಕೂರಿಸಿತು ಎಂಬುದು ಸುಳ್ಳಲ್ಲ. ಅವರು ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ ಜೋಡಿಯನ್ನು ಮುಂದಿಟ್ಟುಕೊಂಡೇ ಕಾಂಗ್ರೆಸ್ ಕಳೆದ ಬಾರಿ ಚುನಾವಣೆಗೆ ಹೋಗಿತ್ತಾದರೂ ಪಕ್ಷ ಅಧಿಕಾರಕ್ಕೆ ಬಂದಿದ್ದರಲ್ಲಿ ಸಿದ್ದರಾಮಯ್ಯನವರ ಪಾಲೇ ಹೆಚ್ಚೆಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಪರಮೇಶ್ವರ ಚುನಾವಣೆಯಲ್ಲಿ ಸೋತು ಚುನಾವಣೆಯಲ್ಲಿ ತಮ್ಮ ಶ್ರಮದ ಮೇಲೆ ಹಕ್ಕು ಪ್ರತಿಪಾದನೆ ಅವಕಾಶವನ್ನೇ ಕಳೆದುಕೊಂಡರು. ಚುನಾವಣೆಯಲ್ಲಿ ತಾವೇ ಗೆಲ್ಲಲಾಗದವರು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರ ಪಾಲು ಕೇಳುವುದು ಎಷ್ಟು ಸರಿ ಎಂಬ ಮಾತು ಸಹಜ ನ್ಯಾಾಯದ್ದೇ. ಹೀಗಾಗಿ ಕಾಂಗ್ರೆಸ್ಸನ್ನೂ ಅಧಿಕಾರಕ್ಕೆೆ ತಂದಿದ್ದಷ್ಟೇ ಅಲ್ಲ, ಇದೀಗ ಸರಕಾರದ ಸರ್ವಬಣ್ಣವೂ ಸಿದ್ದರಾಮಯ್ಯನವರೇ ಆಗಿದ್ದಾರೆ. ಸರಕಾರದ ಒಳಿತು-ಕೆಡಕುಗಳ ವಾರಸುದಾರರು ಅವರೇ. ಅದರ ಮಧ್ಯೆ ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ ಗುಡಿಸಿ ಗುಂಡಾಂತರವಾಗಿ ಹೋದ ಕಾಂಗ್ರೆಸ್ಸಿನ ಅಷ್ಟೋ ಇಷ್ಟೋ ಮರ್ಯಾದೆ ಉಳಿಸಿದ ಹೆಗ್ಗಳಿಕೆಯೂ ಅವರದೇ. ಬೇರೆ-ಬೇರೆ ರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ ಹವಾ ಎಬ್ಬಿಸಿದ ಮೋದಿ ಅಲೆ ಕರ್ನಾಟಕದ ನಾನಾ ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಮರುಚುನಾವಣೆಗಳಲ್ಲೂ ಅಷ್ಟಾಗಿ ಪರಿಣಾಮ ಬೀರದೆ ಹೋಗಿದ್ದರ ಹೆಗ್ಗಳಿಕೆಯೂ ಅವರದೇ. ಇದು ಸಿದ್ದರಾಮಯ್ಯನವರಲ್ಲಿ ಅತೀವ ಆತ್ಮವಿಶ್ವಾಸ ತಂದಿದ್ದು, ಮುಂದಿನ ಬಾರಿಯೂ ಸಿಎಂ ಆಗುವ ಕನಸು ಬಿತ್ತಿದೆ.
ದಸರಾ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಮೇಲಿಂದ ಮೇಲೆ ಮುಂದಿನ ಸಿಎಂ ತಾವೇ ಎಂಬರ್ಥದ ಹೇಳಿಕೆ ನೀಡಿದ್ದು ಬರೀ ಕಾಂಗ್ರೆಸ್ ನಾಯಕರನ್ನು ಮಾತ್ರವಷ್ಟೇ ಅಲ್ಲ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಪ್ರತಿಕ್ರಿಯೆಗಳನ್ನೂ ಆಹ್ವಾನಿಸಿಕೊಂಡಿದೆ. ಮಾಜಿ ಪ್ರಧಾನಿ ದೇವೇಗೌಡರಂತೂ, ‘ತಾವೇ ಸಿಎಂ ಎಂದು ಕೆಲವರು ಭ್ರಮೆಯಲ್ಲಿದ್ದಾರೆ. ಮುಂದಿನ ಸರಕಾರ ಯಾರದು ಅನ್ನೋದು ಜನರ ಕೈಯಲ್ಲಿದೆಯೇ ಹೊರತು ಮುಂದಿನ ಬಾರಿ ತಾವೇ ಸಿಎಂ ಎಂದು ಹೇಳಿಕೊಳ್ಳುವವರ ಕೈಯಲ್ಲಿ ಅಲ್ಲ. ಮುಂದಿನ ಬಾರಿ ದಲಿತರನ್ನೇ ಸಿಎಂ ಮಾಡಬೇಕು, ಮಲ್ಲಿಕಾರ್ಜುನ ಖರ್ಗೆ ಅವರನ್ನು ಆ ಪಟ್ಟಕ್ಕೆ ತರಬೇಕು ಎನ್ನುವ ಚಿಂತನೆ ಕಾಂಗ್ರೆಸ್ ಪಡಸಾಲೆಯಲ್ಲಿದೆ’ ಎಂದು ಹೇಳುವ ಮೂಲಕ ಒಬ್ಬರ ಮೇಲೊಬ್ಬರನ್ನು ಎತ್ತಿಕಟ್ಟುವ ರಾಜಕಾರಣ ಮಾಡಿದ್ದಾರಲ್ಲದೆ, ಅಪ್ಪಿತಪ್ಪಿ ರಾಜ್ಯದಲ್ಲೇನಾದರೂ ಜೆಡಿಎಸ್ ಬೆಂಬಲಿತ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದರೆ ತಮ್ಮ ಆದ್ಯತೆ ಏನಿರಬಹುದು ಎಂಬುದರ ಪರೋಕ್ಷ ಚಿತ್ರಣ ಕೊಟ್ಟಿದ್ದಾಾರೆ. ಈ ನಡುವೆ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರು ಮುಂದಿನ ಬಾರಿ ಅಧಿಕಾರಕ್ಕೆ ಬರುವುದು ಬಿಜೆಪಿ, ಸಿಎಂ ಆಗುವುದು ಯಡಿಯೂರಪ್ಪವರೇ ಎಂದು ಸಾರಿದ್ದಾರೆ.
ಈ ಮಧ್ಯೆ, ಅಲ್ಲಿ-ಇಲ್ಲಿ ನಡೆದ ಸಮೀಕ್ಷೆಗಳಲ್ಲೂ ಕಾಂಗ್ರೆಸ್ಸೇ ಅಧಿಕಾರಕ್ಕೆ ಬರುತ್ತದೆ ಎಂಬ ಚಿತ್ರಣ ಕೂಡ ಅವರ ಮತ್ತೊಮ್ಮೆ ಸಿಎಂ ಕನಸನ್ನು ಇಮ್ಮಡಿಗೊಳಿಸಿರಬೇಕು. ಆದರೆ ಈ ಸಮೀಕ್ಷೆಗಳೆಲ್ಲ ಪಕ್ಷಾಧಾರಿತ ಎಂಬ ಲೇಪ ಅಂಟಿಕೊಂಡಿದೆ. ಬಿಜೆಪಿ ನಡೆಸಿದ ಸಮೀಕ್ಷೆಯಲ್ಲಿ ಅ ಪಕ್ಷಕ್ಕೆ ಹೆಚ್ಚು ಸೀಟುಗಳು. ಜೆಡಿಎಸ್ ನಡೆಸಿದ ಸಮೀಕ್ಷೆಯಲ್ಲಿ ಆ ಪಕ್ಷಕ್ಕೆ ಅಧಿಕಾರ, ಕುಮಾರಸ್ವಾಮಿಯೇ ಮುಖ್ಯಮಂತ್ರಿ. ಹೀಗಾಗಿ ಸಮೀಕ್ಷೆಗಳನ್ನು ನಂಬಿಕೊಳ್ಳಲು ಆಗದಿದ್ದರೂ ಆಯಾ ಪಕ್ಷದ ನಾಯಕರ ನಂಬಿಕೆಗಳನ್ನು ಅಲ್ಲಾಡಿಸಲು ಯಾರಿಗೂ ಸಾಧ್ಯವಿಲ್ಲವಲ್ಲ. ತಮಗನುಕೂಲವಾದ ವ್ಯಾಖ್ಯಾನ, ವಿಶ್ಲೇಷಣೆ ಮಾಡಿಕೊಳ್ಳಲು ಅವರು ಸ್ವತಂತ್ರರಿರುವುದರಿಂದ ಚುನಾವಣೆ ಫಲಿತಾಂಶ ಬರುವವರೆಗೂ ಯಾರ ನಂಬಿಕೆ ಸತ್ಯ, ಯಾರದು ಭ್ರಮೆ ಎಂದು ಹೇಳಲು ಬರುವುದಿಲ್ಲ. ಅವರವರ ಕನಸಿನ ಸಾಮ್ರಾಜ್ಯದಲ್ಲಿ ವಿಹರಿಸಲು ಯಾರ ಅಡೆಯೂ ಇಲ್ಲ, ತಡೆಯೂ ಇಲ್ಲ!
ಲಗೋರಿ : ಕಂಡಿದ್ದೆಲ್ಲ ನಿಜವಾದರೆ ಕನಸಿಗೂ ಬೆಲೆ ಇರದು!
(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply