ಕೈಯಲ್ಲೇ ಇದ್ದ ಗೀತಾವಿಷ್ಣು ಹಿಡಿದಿಟ್ಟುಕೊಳ್ಳದವರು ಕಣ್ಣಿಗೆ ಕಾಣದ ಗೌರಿ ಹಂತಕರನ್ನು ಬಂಧಿಸುವರೇ?!

ಡಿಜಿಟಲ್ ಕನ್ನಡ ಟೀಮ್:

ಇದೊಳ್ಳೆ ತಮಾಷೆಯಾಗಿದೆ!

ಕೈಯಲ್ಲಿದ್ದ ಆರೋಪಿ ಗೀತಾವಿಷ್ಣುವನ್ನು ಹಿಡಿದಿಟ್ಟುಕೊಳ್ಳಲಾಗದ ಕರ್ನಾಟಕ ಪೊಲೀಸರಿಗೆ ಇನ್ನು ಕಣ್ಣಿಗೆ ಕಾಣದ ಪತ್ರಕರ್ತೆ ಗೌರಿ ಲಂಕೇಶ್ ಹಂತಕ(ರ)ನನ್ನು ಸೆರೆ ಹಿಡಿಯಲಾದೀತೇ?

ಮೊನ್ನೆ ಗಾಂಜಾ ಇದ್ದ ಬೆಂಜ್ ಕಾರಲ್ಲಿ ಅಪಘಾತ ನಡೆಸಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಮಲ್ಯ ಆಸ್ಪತ್ರೆಯಿಂದ ಎಸ್ಕೇಪ್ ಆಗಿರುವ ಉದ್ಯಮಿ ದಿ.ಅದಿಕೇಶವಲು ಮೊಮ್ಮಗ ಗೀತಾವಿಷ್ಣು ಬಂಧನಕ್ಕೆ ಇದೀಗ ಲುಕ್ ಔಟ್ ನೋಟಿಸ್ ಹೊರಡಿಸಿರುವ ಪೊಲೀಸರ ಸ್ಥಿತಿ ಇಂಥದ್ದೊಂದು ಪ್ರಶ್ನೆ ಹುಟ್ಟು ಹಾಕಿದೆ.

ಅಪಘಾತ ನಡೆಸಿದ ತಕ್ಷಣ ನಾಗರೀಕರೆ ಗೀತಾವಿಷ್ಟುವಿನನ್ನು ಹಿಡಿದು, ಚಚ್ಚಿ ಪೊಲೀಸರ ಕೈಗೊಪ್ಪಿಸಿದ್ದಾರೆ. ಪಾಪ, ಪೊಲೀಸರು ಬೆನ್ನಟ್ಟುವ ಶ್ರಮವನ್ನೂ ಜನ ತಪ್ಪಿಸಿದ್ದಾರೆ. ಇಷ್ಟಾಗಿಯೂ ಪೊಲೀಸರ ಕಣ್ಗಾವಲಿನಲ್ಲಿಯೇ ಮಲ್ಯ ಆಸ್ಪತ್ರೆಯಿಂದ ಆರೋಪಿ ಪಾರಾಗುತ್ತಾನೆಂದರೆ ಪೊಲೀಸ್ ವ್ಯವಸ್ಥೆ ಬಗ್ಗೆ ಜನರಿಗೆ ನಂಬಿಕೆ ಬರುವುದಾದರೂ ಹೇಗೆ? ಆತ ಪರಾರಿಯಾಗಲು ಅವಕಾಶ ಮಾಡಿಕೊಟ್ಟ ಪೊಲೀಸರ ಬಗ್ಗೆ ಜನ ಆಡಿಕೊಳ್ಳದೆ ಮತ್ತೇನೂ ಮಾಡಿಯಾರು?

ಹಾಗೆ ನೋಡಿದರೆ ಹಿಂದೊಮ್ಮೆ ಮಾದಕ ವಸ್ತು ಪೂರೈಕೆ ಆರೋಪದ ಮೇಲೆ ಬೆಂಗಳೂರು ಪೊಲೀಸರಿಗೇ ಸೆರೆಸಿಕ್ಕಿದ್ದ ನೈಜೀರಿಯಾ ಮೂಲದವರು ಗೀತಾವಿಷ್ಟು ಹೆಸರೇಳಿದ್ದರೂ ಆತನ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಪ್ರಭಾವಿಯಾಗಿರುವ ಆದಿಕೇಶವಲು ಕುಟುಂಬದ ‘ವಿಶಾಲ ಬಾಹು’ಗಳು ತನಿಖೆಯ ಹಾದಿಯನ್ನೇ ದಿಕ್ಕು ತಪ್ಪಿಸಿದ್ದವು. ಅವತ್ತೇ ಕ್ರಮ ತೆಗೆದುಕೊಂಡಿದ್ದರೆ ಇವತ್ತಿನ ರಾದ್ಧಾಂತಗಳನ್ನೆಲ್ಲ ತಪ್ಪಿಸಬಹುದಿತ್ತೇನೋ? ಈಗ ಪ್ರಕರಣವನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರ ಕೈಗೊಪ್ಪಿಸಲಾಗಿದೆ. ಆರೋಪಿ ವಿದೇಶಕ್ಕೆ ಪರಾರಿಯಾಗಲು ಅವಕಾಶವಾಗಬಾರದೆಂದು ಲುಕ್ ಔಟ್ ನೋಟಿಸ್ ಹೊರಡಿಸಲಾಗಿದೆ.

ಈ ಮಧ್ಯೆ ರಾಜ್ಯದ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಗೌರಿ ಲಂಕೇಶ್ ಹತ್ಯೆ ಆದಾಗಿನಿಂದಲೂ ಹಂತಕರ ಬಗ್ಗೆ ಸುಳಿವು ಸಿಕ್ಕಿದೆ. ಸದ್ಯದಲ್ಲೇ ಅವರನ್ನು ಅರೆಸ್ಟ್ ಮಾಡುತ್ತೇವೆ ಎಂದು ಹಲವಾರು ಬಾರಿ ಹೇಳಿದ್ದಾರೆ. ಆದರೆ ಈವರೆಗೂ ಅವರ ಬಂಧನವಾಗಿಲ್ಲ. ಹೇಳಿ, ಹೇಳಿ ಅವರಿಗೆ ಬೇಜಾರಾಗಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಕೇಳಿ-ಕೇಳಿ ಜನರ ಕಿವಿಯಂತೂ ಕೆಪ್ಪಗಟ್ಟಿ ಹೋಗಿದೆ. ಕೈಯಲ್ಲೇ ಇದ್ದ ಗೀತಾವಿಷ್ಟುವನ್ನು ಸರಳುಗಳ ಹಿಂದೆ ತಳ್ಳಲಾಗದವರು, ಕಣ್ಣೀಗೆ ಕಾಣದ ಗೌರಿ ಹಂತಕರನ್ನು ಬಂಧಿಸುತ್ತಾರೆಯೇ ಎಂದು ಜನ ಅಪಹಾಸ್ಯ ಮಾಡುತ್ತಿದ್ದಾರೆ.

Leave a Reply