ಮೋದಿ ವಿರುದ್ಧದ ಟೀಕೆ- ಪ್ರಕಾಶ್ ರೈ ವಿರುದ್ಧ ಬಿಜೆಪಿ ನಾಯಕರ ಕಿಡಿ

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ನನಗಿಂತಲೂ ದೊಡ್ಡ ನಟ ಎಂದು ಹೇಳಿಕೆ ನೀಡಿದ್ದ ಚಿತ್ರನಟ ಪ್ರಕಾಶ್ ರೈ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ. ಪ್ರಕಾಶ್ ರೈ ಅವರ ಈ ಹೇಳಿಕೆಗೆ ಬಿಜೆಪಿ ಪಾಳಯದಿಂದ ಟೀಕೆಗಳ ಸುರಿಮಳೆ ಹರಿದಿದ್ದು, ಅನೇಕ ನಾಯಕರು ಪ್ರಕಾಶ್ ರೈ ಅವರನ್ನು ಪ್ರಶ್ನಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸಂಸದೆ ಶೋಭಾ ಕರಂದ್ಲಾಜೆ ಮತ್ತಿತರರು ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಈ ನಾಯಕರ ಒಟ್ಟಾರೆ ಅಸಮಾಧಾನ ಹೀಗಿತ್ತು…

”ಪ್ರಚಾರಕ್ಕಾಗಿ ಇಂತಹ ಕೀಳು ಮಟ್ಟದ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು. ಪ್ರಧಾನಿ ಹುದ್ದೆಗೆ ಅಗೌರವ ತೋರಿಸುವುದು ನಿಮ್ಮ ಘನತೆಗೆ ತಕ್ಕದ್ದಲ್ಲ. ಪ್ರಧಾನಿ ಮೋದಿಯನ್ನು ಟೀಕೆ ಮಾಡಿದರೆ ನಾವು ರಾತ್ರೋರಾತ್ರಿ ದೊಡ್ಡ ವ್ಯಕ್ತಿಗಳಾಗಿ ರಾಷ್ಟ್ರ ಮಟ್ಟದಲ್ಲಿ ಪ್ರಚಾರ ಸಿಗುತ್ತದೆ ಎಂಬ ಭ್ರಮೆಯಲ್ಲಿದ್ದಾರೆ.

ಪ್ರಕಾಶ್ ರೈ ಓರ್ವ ಪ್ರಬುದ್ಧ ನಟ. ಅವರಿಂದ ನಾನು ಇಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಅವರ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ. ಈ ಹಿಂದೆಯೂ ಪ್ರಕಾಶ್ ರೈ ಇದೇ ರೀತಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧವೂ ಟೀಕಿಸಿದ್ದರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಟೀಕೆ ಮಾಡಲು ಎಲ್ಲರಿಗೂ ಅವಕಾಶವಿದೆ. ಆದರೆ, ಪ್ರಚಾರಕ್ಕಾಗಿ ಟೀಕೆ ಮಾಡುವುದು ಸರಿಯಲ್ಲ. ನರೇಂದ್ರ ಮೋದಿಯವರನ್ನು ಟೀಕಿಸುವುದರಿಂದ ನಿಮ್ಮ ವ್ಯಕ್ತಿತ್ವಕ್ಕೆ ನೀವೇ ಮಸಿ ಬಳಿದುಕೊಳ್ಳುತ್ತೀರಿ.

ಕಳೆದ ಮೂರೂವರೆ ವರ್ಷಗಳ ಅವಧಿಯಲ್ಲಿ ಮೋದಿಯವರು ಒಂದೇ ಒಂದು ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಯಶಸ್ವಿಯಾಗಿ ಆಡಳಿತ ನಡೆಸುತ್ತಿದ್ದಾರೆ. ಯುಪಿಎ ಅವಧಿಯಲ್ಲಿ ಭ್ರಷ್ಟಾಚಾರದಿಂದ ಭಾರತ ಎಂದರೆ ತಲೆ ಎತ್ತಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂದು ನಮ್ಮ ದೇಶವನ್ನು ಪ್ರಪಂಚವೇ ತಲೆ ಎತ್ತಿ ನೋಡುವಂತೆ ಮಾಡಿರುವ ಕೀರ್ತಿ ಮೋದಿಗೆ ಸಲ್ಲುತ್ತದೆ. ಯಾರೋ ಒಬ್ಬರು ಮೋದಿಯನ್ನು ಟೀಕೆ ಮಾಡಿದರೆ ಅವರೇನು ಕುಗ್ಗಿ ಹೋಗುವುದಿಲ್ಲ. ಈಗಲೂ ದೇಶದ ಹಿತದೃಷ್ಟಿಯಿಂದ ಅವರು ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಅನೇಕ ತಜ್ಞರ ಸಲಹೆ ಪಡೆದು ಯಶಸ್ವಿಯಾಗಿ ಆಡಳಿತ ನಡೆಸುತ್ತಿರುವಾಗ ಪ್ರಕಾಶ್ ರೈ ಅವರು ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ. ರೈ ಒಬ್ಬ ಅತ್ಯುತ್ತಮ ನಟ. ಸಿನಿಮಾದಲ್ಲಿ ಪ್ರೇಕ್ಷಕರನ್ನು ಮೋಡಿ ಮಾಡಿದಂತೆ ಡಿವೈಎಫ್‍ಐ ಕಾರ್ಯಕ್ರಮದಲ್ಲಿ ಅವರು ಮಾತನಾಡಿರುವುದರಲ್ಲಿ ವಿಶೇಷತೆ ಏನೂ ಇಲ್ಲ.’

Leave a Reply