ಕೇರಳದಲ್ಲಿ ಅಮಿತ್ ಶಾ ನೇತೃತ್ವದ ‘ಜನರಕ್ಷಾ ಯಾತ್ರೆ’, ಸಮಾವೇಶದ ಹಿಂದಿರುವ ಬಿಜೆಪಿಯ ಲೆಕ್ಕಾಚಾರವೇನು?

ಡಿಜಿಟಲ್ ಕನ್ನಡ ಟೀಮ್:

ದಕ್ಷಿಣ ಭಾರತದಲ್ಲಿ ತನ್ನ ನೆಲೆ ಕಂಡುಕೊಳ್ಳಲು ಸಕಲ ಪ್ರಯತ್ನ ನಡೆಸುತ್ತಿರುವ ಭಾರತೀಯ ಜನತಾ ಪಕ್ಷ ಈಗ ಕೇರಳದ ಮೇಲೂ ತನ್ನ ಕಣ್ಣಿಟ್ಟಿದೆ. ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ನಡೆಯುತ್ತಿರುವ ಹಿಂದೂ ಸಂಘಟನೆ ಕಾರ್ಯಕರ್ತರ ಹತ್ಯೆಯನ್ನು ವಿರೋಧಿಸಿ, ಕೇರಳದಲ್ಲಿ ಆಡಳಿತದಲ್ಲಿರುವ ಎಡಪಂಥಿಯ ಪಕ್ಷಗಳ ವಿರುದ್ಧ ಜನರನ್ನು ಸಂಘಟಿಸುವ ಉದ್ದೇಶದೊಂದಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಈ ‘ಜನ ರಕ್ಷಾ ಯಾತ್ರೆ’ ಎಂಬ ಕಾರ್ಯಕ್ರಮ ಆರಂಭಿಸಿದ್ದಾರೆ.

ನಿನ್ನೆ ಉದ್ಘಾಟನೆಯಾದ ಈ ಪಾದಯಾತ್ರೆಗೆ ಇಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹ ಭಾಗವಹಿಸಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು 15 ದಿನಗಳ ಕಾಲ ಈ ಪಾದಯಾತ್ರೆ ಕಾರ್ಯಕ್ರಮ ನಡೆಸಲಿದ್ದು, ಆ ಮೂಲಕ 154 ಕಿ.ಮೀ ನಷ್ಟು ದೂರದ ಸಾಗಿ ಕೇರಳದ 11 ಜಿಲ್ಲೆಗಳನ್ನು ತಲುಪಲಿದ್ದಾರೆ. ಅದರೊಂದಿಗೆ ಕೇರಳದಲ್ಲಿ ಬಿಜೆಪಿ ಆಯೋಜಿಸುತ್ತಿರುವ ಮೊದಲ ಬೃಹತ್ ಸಾರ್ವಜನಿಕ ಸಮಾವೇಶ ಇದಾಗಿದೆ. ಈ ಯಾತ್ರೆಯ ಮೂಲಕವೇ ಸುಮಾರು ನಾಲ್ಕು ವರ್ಷ ಬಾಕಿ ಇರುವ ಕೇರಳದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲು ತಾಲೀಮು ಆರಂಭಿಸಿದೆ.

ಈ ಸಮಾವೇಶ ಉದ್ಘಾಟಿಸಿ ಮಾತನಾಡಿರುವ ಅಮಿತ್ ಶಾ, ಕೇರಳದಲ್ಲಿ ಅಧಿಕಾರದಲ್ಲಿರುವ ಎಡ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಎಡ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದು ಹೀಗೆ…

‘ಈ ಒಂದು ಸಮಾವೇಶ ರಾಜಕೀಯೇತ್ತರವಾಗಿ ನಡೆಸುತ್ತಿದ್ದೇವೆ. ನಮ್ಮ ಪಕ್ಷದ ಕಾರ್ಯಕರ್ತರ ಹಾಗೂ ಅವರ ಕುಟುಂಬಸ್ಥರ ಪರವಾಗಿ ನಾವು ಧ್ವನಿ ಎತ್ತಲು ಈ ಪಾದಯಾತ್ರೆ ನಡೆಸುತ್ತಿದ್ದು, ಮುಂದೆ ಈ ರಾಜ್ಯದಲ್ಲಿ ಯಾವುದೇ ರಾಜಕೀಯ ಪ್ರೇರಿತ ಹತ್ಯೆ ನಡೆಯಬಾರದು. ಈಗ ಈ ರಾಜಕೀಯ ಪ್ರೇರಿತ ಹತ್ಯೆಗಳ ವಿರುದ್ಧ ಜನರಲ್ಲಿ ಅರಿವು ಮೂಡಿಸದಿದ್ದರೇ ಇದು ಮುಂದುವರಿದುಕೊಂಡು ಹೋಗಿತ್ತದೆ. ಕೇರಳದ ಕಣ್ಣೂರಿನಲ್ಲಿ ಅತಿ ಹೆಚ್ಚು ರಾಜಕೀಯ ಹತ್ಯೆಗಳು ನಡೆದಿರುವ ಹಿನ್ನೆಲೆಯಲ್ಲಿ ನಾವು ಇಲ್ಲಿಂದಲೇ ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ.

ಒಂದು ಕಾಲದಲ್ಲಿ ಶಾಂತಿಯ ಭೂಮಿಯಾಗಿದ್ದ ಕೇರಳ ಇಂದು ರಾಜಕೀಯ ಹತ್ಯೆಗಳಿಂದಾಗಿ ರಕ್ತಪಾತ ಹರಿಯುವಂತಾಗಿದೆ. ಎಡಪಕ್ಷಗಳು ಕೇರಳ ಅಧಿಕಾರಕ್ಕೆ ಬರುತ್ತಿದ್ದಂತೆ ಇಲ್ಲಿ ರಾಜಕೀಯ ಪ್ರೇರಿತ ಹತ್ಯೆಗಳು ಹೆಚ್ಚಾಗಿವೆ. ಮಾನವ ಹಕ್ಕುಗಳ ಕುರಿತಾಗಿ ದೊಡ್ಡ ಭಾಷಣ ಬಿಗಿಯುವವರು ಕೇರಳದ ವಿಷಯದಲ್ಲಿ ಜಾಣ ಕುರುಡರಾಗಿದ್ದಾರೆ.’ ಎಂದು ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.

ಅಮಿತ್ ಶಾ ಅವರು ಈ ಪಾದಯಾತ್ರೆ ರಾಜಕೀಯ ಸಮಾವೇಶ ಅಲ್ಲ ಎಂದು ಹೇಳಿದ್ದರೂ ಸಹ, ಇದರ ಹಿಂದೆ ಬಿಜೆಪಿಯ ರಾಜಕೀಯ ಲೆಕ್ಕಾಚಾರ ಇರುವುದನ್ನು ತಳ್ಳಿಹಾಕಲು ಸಾಧ್ಯವೇ ಇಲ್ಲ. ಮುಂದಿನ ವರ್ಷ ಕರ್ನಾಟಕದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಗೆದ್ದು ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮೂಲಕ ದಕ್ಷಿಣ ಭಾರತದಲ್ಲೂ ತಮ್ಮ ಅಧಿಕಾರ ವಿಸ್ತರಿಸಿಕೊಳ್ಳುವ ಇರಾದೆ ಹೊಂದಿರುವ ಪಕ್ಷದ ರಾಷ್ಟ್ರೀಯ ನಾಯಕರು, ಅತ್ತ ತಮಿಳುನಾಡಿನಲ್ಲೂ ಎಐಎಡಿಎಂಕೆ ಪಕ್ಷದ ಮೂಲಕ ಪರೋಕ್ಷವಾಗಿ ನಿಯಂತ್ರಣ ಸಾಧಿಸುವ ಪ್ರಯತ್ನ ನಡೆಸಿದ್ದಾರೆ. ಈಗ ಕೇರಳ ರಾಜ್ಯದ ಮೇಲೆ ಇವರ ಗಮನ ಹರಿದಿದ್ದು, ಇಲ್ಲಿನ ಪಕ್ಷದ ಅಭಿಯಾನ ಆರಂಭಿಸಲು ಈ ಸಮಾವೇಶವನ್ನು ವೇದಿಕೆಯಾಗಿ ಬಳಸಿಕೊಳ್ಳಲಾಗುತ್ತಿದೆ.

ಕೇರಳದಲ್ಲಿ ಕಳೆದ ಕೆಲವು ತಿಂಗಳಲ್ಲಿ 84ಕ್ಕೂ ಹೆಚ್ಚು ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯಾಗಿದೆ. ಇವೆಲ್ಲವೂ ರಾಜಕೀಯ ಪ್ರೇರಿತ ಹತ್ಯೆಯಾಗಿದೆ ಎಂಬುದು ಬಿಜೆಪಿ ಆರೋಪ. ಇದನ್ನೇ ಮುಂದಿಟ್ಟುಕೊಂಡು ಎಡಪಂಥಿಯ ಪಕ್ಷಗಳ ವಿರುದ್ಧ ಸಮರ ಸಾರಲು ಬಿಜೆಪಿ ಈ ಪಾದಯಾತ್ರೆಯನ್ನು ಆರಂಭಿಸಿದೆ.

ಕಳೆದ ವರ್ಷ ಕೇರಳದಲ್ಲಿ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಗೆದ್ದಿದ್ದು ಕೇವಲ 1 ಕ್ಷೇತ್ರ ಮಾತ್ರ. ಅದರೊಂದಿಗೆ ಕೇರಳ ರಾಜಕೀಯದಲ್ಲಿ ಮೂರನೇ ಶಕ್ತಿಯಾಗಿ ಹೊರಹೊಮ್ಮಲೂ ಬಿಜೆಪಿ ಪರದಾಟ ನಡೆಸುತ್ತಿದೆ. ಹೀಗಾಗಿ ಕೇರಳದಲ್ಲಿ ರಾಜಕೀಯವಾಗಿ ಬೆಳೆಯಬೇಕಾದರೆ ಬಿಜೆಪಿ ತನ್ನ ಬೇರನ್ನು ಗಟ್ಟಿ ಮಾಡಿಕೊಳ್ಳಬೇಕಿದೆ. ಕೇರಳದಲ್ಲಿ ಬಿಜೆಪಿ ಭದ್ರ ಅಡಿಪಾಯ ಹಾಕಿಕೊಳ್ಳಬೇಕಾದರೆ ಇಲ್ಲಿನ ಹಿಂದೂಗಳನ್ನು ಒಗ್ಗೂಡಿಸುವತ್ತ ಮೊದಲು ಗಮನ ಹರಿಸಬೇಕಿದೆ. ಇದೇ ಕಾರಣಕ್ಕಾಗಿ 15 ದಿನಗಳ ಕಾಲ ನಡೆಯಲಿರುವ ಪಾದಯಾತ್ರೆಯ ನೇತೃತ್ವವನ್ನು ಅಮಿತ್ ಶಾ ಅವರೇ ವಹಿಸಿಕೊಂಡಿದ್ದು, ಯಾತ್ರೆ ಮುಗಿಯುವವರೆಗೂ ಕೇರಳದಲ್ಲೇ ಉಳಿಯಲಿದ್ದಾರೆ.

ಕೇರಳದಲ್ಲಿರುವ ಹಿಂದೂಗಳು ಬಿಜೆಪಿಯ ಜತೆ ಗುರುತಿಸಿಕೊಂಡಿರುವುದು ತೀರಾ ಕಡಿಮೆ. ಗೋವು, ಹಿಂದಿ, ಗುಜರಾತ್, ಹಿಂದೂ ರಾಷ್ಟ್ರ, ಕಾಂಗ್ರೆಸ್ ಹಾಗೂ ಸಿಪಿಎಂ ಪಕ್ಷಗಳನ್ನು ಅಧಿಕಾರದಿಂದ ಕಿತ್ತು ಹಾಕುವಂತಹ ಬಿಜೆಪಿಯ ರಾಜಕೀಯ ಸಿದ್ಧಾಂತಗಳಿಗೆ ಕೇರಳದ ಹಿಂದೂಗಳು ಅಪ್ಪಿಕೊಂಡಿಲ್ಲ. ಇದು ಬಿಜೆಪಿಯ ಮುಂದೆ ಇರುವ ದೊಡ್ಡ ಸವಾಲು. ತನ್ನ ಪಕ್ಷದ ಸಿದ್ಧಾಂತ ಹಾಗೂ ಕೇರಳದ ಹಿಂದೂಗಳ ನಡುವೆ ಇರುವ ಅಂತರವನ್ನು ಕಡಿಮೆ ಮಾಡಿಕೊಳ್ಳಬೇಕು, ಕೇರಳದ ಹಿಂದೂ ಕಾರ್ಯಕರ್ತರನ್ನು ಒಗ್ಗೂಡಿಸಬೇಕು, ಆ ಮೂಲಕ ಅಲ್ಲಿ ಬಿಜೆಪಿ ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆಯಬೇಕು ಎಂಬುದು ರಾಷ್ಟ್ರೀಯ ನಾಯಕರ ಉದ್ದೇಶವಾಗಿದೆ. ತಮ್ಮ ಈ ಪ್ರಯತ್ನಕ್ಕೆ ಬಿಜೆಪಿ ನಾಯಕರು ಜನ ರಕ್ಷಾ ಯಾತ್ರೆಯನ್ನು ಒಂದು ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ.

ಮುಂಬರುವ ಚುನಾವಣೆಗೆ ಸಾಕಷ್ಟು ಸಮಯವಿದ್ದು, ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಾರದೇ ಇದ್ದರೂ ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆಯಬೇಕು ಎಂಬುದು ಬಿಜೆಪಿ ನಾಯಕರ ಸದ್ಯದ ಗುರಿ. ಈ ನಿಟ್ಟಿನಲ್ಲಿ ಈ ಪಾದಯಾತ್ರೆಯ ನಂತರ ಮುಂದಿನ ದಿನಗಳಲ್ಲಿ ಕೇರಳದಲ್ಲಿ ಮತ್ತಷ್ಟು ಬಿಜೆಪಿ ಸಮಾವೇಶಗಳು ನಡೆದರೆ ಯಾವುದೇ ಅಚ್ಚರಿ ಇಲ್ಲ.

Leave a Reply